ಕಂಪೆನಿಯ ಟೀ-ಶರ್ಟ್ ಸುಟ್ಟು ಚೀನಾ ವಿರುದ್ಧ ಪ್ರತಿಭಟಿಸಿದ ಝೊಮ್ಯಾಟೊ ಉದ್ಯೋಗಿಗಳು
ಕೋಲ್ಕತಾ, ಜೂ.28: ಕಳೆದ ವಾರ ಲಡಾಖ್‌ನಲ್ಲಿ ಚೀನಾದ ಸೈನಿಕರು ಭಾರತದ 20 ಯೋಧರನ್ನು ಹತ್ಯೆಗೈದಿರುವುದನ್ನು ಪ್ರತಿಭಟಿಸಿ ನಗರದ ಝೊಮ್ಯಾಟೊ ಆಹಾರ ವಿತರಣ ಕಂಪನಿಯ ಉದ್ಯೋಗಿಗಳು ತಾವು ಧರಿಸುತ್ತಿರುವ ಕಂಪೆನಿಯ ಟೀ-ಶರ್ಟ್ ಗಳನ್ನು ಹರಿದು,ಸುಟ್ಟು ಹಾಕಿದ್ದಾರೆ.
ಬೆಹಾಲದಲ್ಲಿ ನಡೆದಿರುವ ಪ್ರತಿಭಟನೆಯ ವೇಳೆ ಕೆಲವರು ಚೀನಾದ ಹೂಡಿಕೆ ಇರುವ ಝೊಮ್ಯಾಟೊ ಕಂಪೆನಿಯ ಉದ್ಯೋಗವನ್ನು ತ್ಯಜಿಸುವುದಾಗಿ ಹೇಳಿದ್ದಾರೆ. ಈ ಕಂಪೆನಿಯ ಮೂಲಕ ಆಹಾರವನ್ನು ಪಡೆಯಬಾರದು ಎಂದು ನಗರದ ಜನತೆಯಲ್ಲಿ ವಿನಂತಿಸಿದ್ದಾರೆ.
2018ರಲ್ಲಿ ಚೀನಾದ ಪ್ರಮುಖ ಕಂಪೆನಿಯು ಝೊಮ್ಯಾಟೊ ಮೇಲೆ 210 ಮಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಿದ್ದು,ಶೇ.14.7ರಷ್ಟು ಪಾಲುದಾರಿಕೆ ಹೊಂದಿದೆ.
ಚೀನಾದ ಕಂಪೆನಿಗಳು ಭಾರತದಲ್ಲಿ ಲಾಭ ಮಾಡಿಕೊಳ್ಳುತ್ತವೆ. ಮತ್ತೊಂದೆಡೆ ನಮ್ಮ ದೇಶದ ಸೈನಿಕರ ಮೇಲೆ ಚೀನದ ಸೇನೆ ದಾಳಿ ನಡೆಸುತ್ತದೆ. ಚೀನೀಯರು ನಮ್ಮ ನೆಲವನ್ನು ಕಬಳಿಸಲು ನೋಡುತ್ತಿದ್ದಾರೆ. ಅದಕ್ಕೆ ಯಾರೂ ಅವಕಾಶ ಕೊಡಬಾರದು ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.