ದೆಹಲಿ : ಕೋವಿಡ್-19 ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ವೈದ್ಯ ನಿಧನ

Update: 2020-06-29 06:32 GMT

ಹೊಸದಿಲ್ಲಿ, ಜೂ.29: ದೆಹಲಿಯ ಕೋವಿಡ್-19 ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ವೈದ್ಯರೊಬ್ಬರು ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.

ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲ್ಪಟ್ಟಿದ್ದ ಲೋಕ ನಾಯಕ ಜೈ ಪ್ರಕಾಶ್ ಆಸ್ಪತ್ರೆಯಲ್ಲಿ ಅನಸ್ತೇಸಿಯ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಆಶೀಮ್ ಗುಪ್ತಾ ಮೃತಪಟ್ಟವರು.

ಗುಪ್ತಾ ಅವರು ಜೂನ್ 6ರಂದು ನಡೆಸಿದ್ದ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿತ್ತು ಎಂದು ಆಸ್ಪತ್ರೆ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಪ್ರಮುಖ ಅನಸ್ತೇಸಿಯ ಸ್ಪೆಷಲಿಸ್ಟ್ ಆಗಿದ್ದ ಗುಪ್ತಾ ಕರ್ತವ್ಯದಲ್ಲಿದ್ದಾಗಲೇ ಕೋವಿಡ್-19 ಸೋಂಕಿಗೆ ಒಳಗಾಗಿದ್ದರು. ಜೂನ್ 6ರಂದು ನಡೆಸಿದ್ದ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿತ್ತು. ಅವರಲ್ಲಿ ಮೃದು ಲಕ್ಷಣಗಳು ಕಂಡುಬಂದಿತ್ತು. ಅವರನ್ನು ಕ್ವಾರಂಟೈನ್ ವ್ಯವಸ್ಥೆಗೆ ವರ್ಗಾಯಿಸಲಾಗಿತ್ತು.

ಜೂನ್ 7ರಂದು ಅವರ ಪರಿಸ್ಥಿತಿ ಬಿಗಡಾಯಿಸಿದ ಪರಿಣಾಮ ಅವರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಯ ಐಸಿಯು ಘಟಕಕ್ಕೆ ದಾಖಲಿಸಲಾಗಿತ್ತು. ಜೂ.8ರಂದು ಗುಪ್ತಾ ಅವರ ಕೋರಿಕೆಯ ಮೇರೆಗೆ ದಕ್ಷಿಣ ದಿಲ್ಲಿಯಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಶನಿವಾರ ರಾತ್ರಿ ಅವರ ಆರೋಗ್ಯ ಹದಗೆಟ್ಟಿತ್ತು. ಕೆಲವೇ ಗಂಟೆಗಳ ಬಳಿಕ ಅವರು ಕೊನೆಯುಸಿರೆಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಾ.ಗುಪ್ತಾ ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಗುಪ್ತಾ ಅವರ ಪತ್ನಿಗೂ ಕೂಡ ಕೋವಿಡ್-19 ಸೋಂಕು ತಗಲಿತ್ತು. ಆದರೆ ಅವರು ಕೆಲವೇ ದಿನಗಳಲ್ಲಿ ಗುಣಮುಖರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News