"100 ತಪ್ಪು ಮಾಡು ಅಂದ್ರು ಸಚಿವರು, ನಾವು 2 ಗೋರಿಗಳನ್ನು ಕಾರ್ಯಕರ್ತರಿಂದ ಒಡೆಸಿದೆವು"
►ಹಳೇ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಎಸ್ಪಿಗೆ ದೂರು
ಚಿಕ್ಕಮಗಳೂರು, ಜೂ.30: 2017ರಲ್ಲಿ ಜಿಲ್ಲೆಯ ಬಾಬಾಬುಡನ್ ಗಿರಿಯಲ್ಲಿ ದತ್ತ ಜಯಂತಿಯ ವೇಳೆ ನಡೆದ ಗೋರಿಗಳ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿಂತೆ ಬಜರಂಗದಳದ ಮಾಜಿ ಮುಖಂಡನೊಬ್ಬ ಫೇಸ್‌ಬುಕ್‌ನಲ್ಲಿ ಹಾಕಿರುವ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿಕ್ಕಮಗಳೂರಿನ ಬಜರಂಗದಳದ ಮಾಜಿ ಮುಖಂಡ ತುಡುಕೂರು ಮಂಜು ಎಂಬವರ ಫೇಸ್‌ಬುಕ್ ಖಾತೆಯಿಂದ ಈ ಕಮೆಂಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
'2017ರ ದತ್ತಜಯಂತಿ ಸಂದರ್ಭ ದತ್ತಪೀಠದಲ್ಲಿ 1 ತಪ್ಪಲ್ಲ, 100 ತಪ್ಪು ಮಾಡು, ನಾನು ತಲೆ ಕೊಡುತ್ತೀನಿ ಎಂದು ಇದೇ ಮಾನ್ಯ ಸಚಿವರು ಅಂದ್ರು, ನಾವು ಅಣ್ಣ ಹೇಳಿದ್ರಲ್ಲ ಅಂತ 2 ಗೋರಿಯನ್ನು ನಮ್ಮ ಕಾರ್ಯಕರ್ತರ ಕೈಯಿಂದ ಒಡೆಸಿದೆವು. ಪರಿಣಾಮ ಮಧ್ಯರಾತ್ರಿ 2 ಗಂಟೆಗೆ ಸುಮಾರು 20 ಪೊಲೀಸರು ನನ್ನ ಮನೆ ಸುತ್ತ ಸುತ್ತುವರೆದು ನನ್ನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಿಸಿದ್ರು. ತಲೆ ಕೊಡುತ್ತೇನೆ ಎಂದು ಹೇಳಿದವರು ಮೂರು ವರ್ಷ ಕಳೆದರೂ ಇವತ್ತಿಗೂ ಅದರ ಬಗ್ಗೆ ಮಾತನಾಡಿಲ್ಲ. ನಾನು 2 ದಿನ ಜೈಲುವಾಸ ಅನುಭವಿಸಿ ಬೇಲ್ ಪಡೆದು ಹೊರಬಂದೆ' ಎಂದು ಮಂಜು ಫೇಸ್ಬುಕ್ ಖಾತೆಯಲ್ಲಿ ಕಾಮೆಂಟ್ ಮಾಡಿದ್ದಾರೆ ಎನ್ನಲಾಗಿದೆ.
ಮಂಜು ಅವರು ಮಾಡಿರುವ ಕಾಮೆಂಟ್‌ನ ಸ್ಕ್ರೀನ್ ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಂತೆಯೇ ಸಂವಿಧಾನ ಉಳಿವಿಗಾಗಿ ಹೋರಾಟ ಸಮಿತಿ ಮುಖಂಡ ಗೌಸ್ ಮೊಹಿದ್ದೀನ್ ಸಹಿತ ಹಲವು ಸಂಘ ಸಂಸ್ಥೆಗಳ ಮುಖಂಡರು, ತುಡುಕೂರು ಮಂಜು ಅವರ ಫೇಸ್‌ಬುಕ್ ಕಾಮೆಂಟ್‌ಗಳ ಆಧಾರದ ಮೇಲೆ 2017ರ ಪ್ರಕರಣವನ್ನು ಮರು ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಮಂಜು ಹೇಳಿರುವಂತೆ ಪ್ರಕರಣದಲ್ಲಿ ಶಾಮೀಲಾಗಿರುವ ಸಚಿವರು ಯಾರು, ಅವರ ಪಾತ್ರ ಏನು ಎಂಬುದನ್ನು ಬಯಲಿಗೆಳೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಂಗಳವಾರ ದೂರು ಸಲ್ಲಿಸಿದ್ದಾರೆ.