ಪುಲ್ವಾಮಾದಲ್ಲಿ ಎನ್‍ಕೌಂಟರ್ ಗೆ ಉಗ್ರ ಬಲಿ; ಸೈನಿಕ ಹುತಾತ್ಮ
ಪುಲ್ವಾಮಾ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಮಂಗಳವಾರ ನಸುಕಿನಲ್ಲಿ ಉಗ್ರರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೈನಿಕರೊಬ್ಬರು ಹುತಾತ್ಮರಾಗಿದ್ದಾರೆ. ಭದ್ರತಾ ಪಡೆಯ ಇಬ್ಬರು ಯೋಧರು ಗಾಯಗೊಂಡಿದ್ದು, ಮನೆಯೊಂದರಲ್ಲಿ ಅವಿತಿದ್ದ ಇಬ್ಬರು ಉಗ್ರರ ಪೈಕಿ ಒಬ್ಬ ಹತನಾಗಿದ್ದಾನೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್)ಯ 183ನೇ ಬೆಟಾಲಿಯನ್, ಸೇನೆಯ ರಾಷ್ಟ್ರೀಯ ರೈಫಲ್ ಘಟಕ ಮತ್ತು ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ಮುಂಜಾನೆ 5.30ಕ್ಕೆ ಆರಂಭವಾಗಿದ್ದು, ಸೈನಿಕ ಹಾಗೂ ಪೊಲೀಸ್ ಪೇದೆಯೊಬ್ಬರಿಗೆ ಗುಂಡೇಟು ತಗಲಿದೆ.
ಪುಲ್ವಾಮಾದ ಗೂಸು ಪ್ರದೇಶದಲ್ಲಿ ಎನ್‍ಕೌಂಟರ್ ಆರಂಭವಾಗಿದ್ದು, ಪೊಲೀಸರು ಹಾಗೂ ಭದ್ರತಾ ಪಡೆಯವರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇನ್ನಷ್ಟು ವಿವರಗಳು ಲಭ್ಯವಾಗಬೇಕು ಎಂದು ಕಾಶ್ಮೀರ ವಲಯ ಪೊಲೀಸ್ ಇಲಾಖೆ ಮುಂಜಾನೆ 6ಕ್ಕೆ ಟ್ವೀಟ್ ಮಾಡಿದೆ.
ಕಾರ್ಯಾಚರಣೆ ಮುಂದುವರಿದಿದ್ದು, ಗುರುತು ಪತ್ತೆಯಾಗದ ಉಗ್ರನೊಬ್ಬ ಹತನಾಗಿದ್ದಾನೆ ಎಂದು ಮತ್ತೊಂದು ಟ್ವೀಟ್ ನಲ್ಲಿ ವಿವರಿಸಿದೆ.