ದೆಹಲಿ ಸರ್ಕಾರದಿಂದ ಹಣ ಬಿಡುಗಡೆಯಾಗದೆ ವೈದ್ಯರ ವೇತನ ವಿಳಂಬ: ಎಂಸಿಡಿ
ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ದೆಹಲಿ ಸರ್ಕಾರ ಬಿಡುಗಡೆ ಮಾಡಬೇಕಾದ ಹಣವನ್ನು ಬಿಡುಗಡೆ ಮಾಡದ ಕಾರಣ ನಿವಾಸಿ ವೈದ್ಯರು ಸೇರಿದಂತೆ ಉದ್ಯೋಗಿಗಳಿಗೆ ವೇತನ ಪಾವತಿಸಲು ಸಾಧ್ಯವಾಗಿಲ್ಲ ಎಂದು ಉತ್ತರ ದೆಹಲಿ ಮಹಾನಗರ ಪಾಲಿಕೆ ದೆಹಲಿ ಹೈಕೋರ್ಟ್ ಗೆ ತಿಳಿಸಿದೆ.
2020-21ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ 162 ಕೋಟಿ ರೂಪಾಯಿಯನ್ನು ಸರ್ಕಾರ ಪಾವತಿಸಬೇಕಿದ್ದು, 27 ಕೋಟಿ ರೂಪಾಯಿ ಮಾತ್ರ ಮಂಜೂರಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಸ್ಪಷ್ಟಪಡಿಸಿದೆ.
ದೆಹಲಿ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಇದನ್ನು ಅಲ್ಲಗಳೆದರು. ಜುಲೈ 7ರಂದು ಸಲ್ಲಿಸಿರುವ ವರದಿಯಲ್ಲಿ ವಿವಿಧ ಇಲಾಖೆಗಳಿಂದ ಪಾಲಿಕೆಗೆ ಬಿಡುಗಡೆ ಮಾಡಿರುವ ವಿವರಗಳಿವೆ ಎಂದು ಹೇಳಿದರು. ದೆಹಲಿ ಸರ್ಕಾರದಿಂದ ಇರುವ ಬಾಕಿಯನ್ನು ತೀರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೋವಿಡ್-19 ಸಾಂಕ್ರಾಮಿಕದ ಅವಧಿಗೆ ಹಣ ನೀಡಬೇಕು ಎಂದು ವಕೀಲರು ಆಗ್ರಹಿಸಿ ವಕೀಲರು ಕೋರ್ಟ್ ಕಟ್ಟೆ ಏರುತ್ತಿದ್ದಾರೆ; ಕೊರೋನ ಯೋಧರಾದ ವೈದ್ಯರಿಗೂ ಅವರ ವೇತನ ಪಾವತಿಸಬೇಕು ಎಂದು ನ್ಯಾಯಾಲಯ ಹೇಳಿತು. ದೆಹಲಿ ಮಹಾನಗರ ಪಾಲಿಕೆಯ ಆಸ್ಪತ್ರೆಗಳ ನಿವಾಸಿ ವೈದ್ಯರ ವೇತನ ಬಾಕಿಯ ವಿಚಾರವನ್ನಷ್ಟೇ ಪೀಠ ಪರಿಗಣಿಸುತ್ತಿದೆ. ಇತರ ವೈದ್ಯರ ಹಾಗೂ ಉದ್ಯೋಗಿಗಳ ವೇತನದ ವಿಚಾರವನ್ನಲ್ಲ ಎಂದು ಪೀಠ ಹೇಳಿದೆ.
ಕಸ್ತೂರ್ಬಾ ಗಾಂಧಿ ಆಸ್ಪತ್ರೆಯ ವೈದ್ಯರಿಗೆ ವೇತನ ಪಾವತಿಯಾಗದಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ ಎಂಬ ಪತ್ರಿಕಾ ವರದಿಗಳನ್ನಾಧರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಕೋರ್ಟ್ ಆರಂಭಿಸಿತ್ತು.