ಇದೂ ಕೂಡ ದೇಶಕ್ಕೆ ಮಾಡುವ ದ್ರೋಹ

Update: 2020-07-12 19:30 GMT

ಕೋಟ್ಯಂತರ ಭಾರತೀಯರು ಬೆವರು ಮತ್ತು ರಕ್ತ ಬಸಿದು ಕಟ್ಟಿದ ರೈಲ್ವೆಯಂತಹ ಜನರ ಒಡೆತನದಲ್ಲಿ ಇರಬೇಕಾದ ಸಂಸ್ಥೆಗಳನ್ನು ಕಬಳಿಸಲು ದೇಶ, ವಿದೇಶಗಳ ಕಾರ್ಪೊರೇಟ್ ಕಂಪೆನಿಗಳು ಬಾಯಿ ತೆರೆದು ನಿಂತಿವೆ. ಭಾರತೀಯ ರೈಲ್ವೆಯನ್ನು ಇಂತಹ ಹದ್ದುಗಳ ಬಾಯಿಯಿಂದ ಉಳಿಸಿಕೊಳ್ಳುವುದು ಕಾರ್ಮಿಕರ ಕರ್ತವ್ಯ ಮಾತ್ರವಲ್ಲ, ಎಲ್ಲ ದೇಶ ಪ್ರೇಮಿ ನಾಗರಿಕರ ಜವಾಬ್ದಾರಿ. ಹೀಗೇ ಬಿಟ್ಟರೆ ಈ ದೇಶವನ್ನೇ ಮಾರಾಟ ಮಾಡುತ್ತಾರೆ.


ಈ ಭಾರತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.ಅನೇಕ ಬಾರಿ ಬಾಹ್ಯ ಆಕ್ರಮಣಗಳಿಗೆ ತುತ್ತಾಗಿ ಇದು ಉಳಿದುಕೊಂಡು ಬಂದಿದೆ. ಆದರೆ ಒಳಗಿನ ಸಂಚಿನಿಂದಾಗಿ ಇದು ವಿದೇಶಿ ದಾಳಿಗೆ ಗುರಿಯಾಗುತ್ತ ಬಂದಿದೆ. ಹೀಗೆ ಸಂಕಟದ ಸರಮಾಲೆಯನ್ನು ಸುತ್ತಿ ಕೊಂಡು ಬಂದ ದೇಶ 1947ರಲ್ಲಿ ಸ್ವತಂತ್ರವಾಯಿತು.ಸ್ವಾತಂತ್ರ್ಯದೊಂದಿಗೆ ಜಾತಿ, ಮತವನ್ನು ಮೀರಿದ ಸಕಲರಿಗೂ ಸಮಾನಾವಕಾಶವಿರುವ ಸಂವಿಧಾನವನ್ನು ಅಂಗೀಕರಿಸಿತು. ಯಾವುದೇ ದೇಶ ಬರೀ ಸ್ವಾತಂತ್ರ್ಯ ಪಡೆದುಕೊಂಡರೆ ಸಾಲದು, ಅದು ಸಶಕ್ತವಾಗಿ ತಲೆ ಎತ್ತಿ ನಿಲ್ಲಬೇಕಾದರೆ ಸ್ವಾವಲಂಬಿಯಾಗಿರಬೇಕು. ಸ್ವಾವಲಂಬನೆಯ ಮಹತ್ವವನ್ನು ಅರಿತ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಸಾರ್ವಜನಿಕ ಉದ್ಯಮ ರಂಗಕ್ಕೆ ಅಡಿಪಾಯ ಹಾಕಿದರು. ಭಾರತದಲ್ಲಿ ಬೃಹತ್ ಉದ್ಯಮಗಳು ಸಾರ್ವಜನಿಕ ವಲಯದಲ್ಲಿ ತಲೆಯೆತ್ತಲು ಅಂದಿನ ಸಮಾಜವಾದಿ ಸೋವಿಯತ್ ರಶ್ಯ ನೆರವಾಯಿತು. ಅಂತಲೇ ಭಾರತದ ಮಾತಿಗೆ ಜಗತ್ತಿನಲ್ಲಿ ಬೆಲೆ ಇತ್ತು.

ಆದರೆ ಈಗ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಾಯಕರು, ಆನಂತರ ಎರಡು ದಶಕಗಳ ಕಾಲ ಈ ದೇಶವನ್ನಾಳಿದವರು ಅತ್ಯಂತ ದೂರ ದೃಷ್ಟಿಯಿಂದ ಕಟ್ಟಿದ ಸಾರ್ವಜನಿಕ ಉದ್ಯಮ ರಂಗವನ್ನು ಇಂದಿನ ಸರಕಾರ ಮಾರಾಟಕ್ಕಿಟ್ಟಿದೆ. ಇವರಿಗೆ ಈ ರೀತಿ ದೇಶದ ಸಂಪತ್ತನ್ನು ಅಗ್ಗದ ಬೆಲೆಗೆ ಮಾರಾಟ ಮಾಡಲು ಕೊರೋನ ಒಂದು ವರವಾಗಿ ಬಂದಿದೆ. ಅದನ್ನೇ ಬಳಸಿಕೊಂಡು ದೇಶದ ಸಂಪತ್ತನ್ನು ಕಾರ್ಪೊರೇಟ್ ಹದ್ದುಗಳಿಗೆ ಮಾರಾಟ ಮಾಡುತ್ತ ಬಾಯಲ್ಲಿ ರಾಷ್ಟ್ರ ಭಕ್ತಿಯ ಮಾತುಗಳನ್ನಾಡುತ್ತಿರುವ ಇಂದಿನ ಆಳುವ ವರ್ಗ ಸಾರ್ವಜನಿಕ ರಂಗದ ಬ್ಯಾಂಕುಗಳನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದೆ. ಲಾಭದಾಯಕವಾಗಿದ್ದ ವಿಮಾ ವಲಯವನ್ನು ಬಹುರಾಷ್ಟ್ರೀಯ ಕಂಪೆನಿಗಳ ಮಡಿಲಿಗೆ ಹಾಕಲು ಹೊರಟಿದೆ. ಇದೇ ಬಿಜೆಪಿಯ ವಾಜಪೇಯಿ ಪ್ರಧಾನಿಯಾಗಿದ್ದಾಗ ಸರಕಾರಿ ಒಡೆತನದ ಅಶೋಕ ಸೇರಿದಂತೆ ಹಲವು ಪಂಚತಾರಾ ಹೊಟೇಲುಗಳನ್ನು ಖಾಸಗೀಕರಣಗೊಳಿಸಿತ್ತು.

ಗುಜರಾತನ್ನು ಉದ್ಧಾರ ಮಾಡಿ ದಿಲ್ಲಿಯ ಸಿಂಹಾಸನವನ್ನು ಈಗ ಅಲಂಕರಿಸಿದ ವಿಶ್ವಗುರುವಿನ ಕಾಲದಲ್ಲಿ ಒಂದೇ ಒಂದು ಸಾರ್ವಜನಿಕ ಉದ್ಯಮ ಸುರಕ್ಷಿತವಾಗಿ ಉಳಿಯುವ ಸಾಧ್ಯತೆಯಿಲ್ಲ. ಮುಂಚೆ ನಷ್ಟದಲ್ಲಿರುವ ಸರಕಾರಿ ಉದ್ಯಮಗಳನ್ನು ಖಾಸಗಿಯವರಿಗೆ ಮಾರುವುದಾಗಿ ಹೇಳುತ್ತಿದ್ದರು. ಈಗ ಲಾಭದಲ್ಲಿ ಇರುವ ಸಾರ್ವಜನಿಕ ರಂಗದ ಉದ್ಯಮಗಳನ್ನು ನಷ್ಟದ ಕೂಪಕ್ಕೆ ತಳ್ಳಿ ಅವುಗಳನ್ನು ಹಾಳು ಮಾಡಿ ಕಾರ್ಪೊರೇಟ್ ಖದೀಮರ ಮಡಿಲಿಗೆ ಹಾಕಲು ಈ ಸರಕಾರ ಹೊರಟಿದೆ.ಇದಕ್ಕೆ ಇತ್ತೀಚಿನ ಉದಾಹರಣೆ ಬಿ.ಎಸ್.ಎನ್.ಎಲ್.ಇದನ್ನು ಸರಕಾರವೇ ಕುತ್ತಿಗೆ ಹಿಸುಕಿತು. ರಿಲೆಯನ್ಸ್ ಕಂಪೆನಿಯ ಒಡೆತನದ ಜಿಯೋವನ್ನು ಬೆಳೆಸಲು ಬಿ.ಎಸ್. ಎನ್. ಎಲ್. ಎಂಬ ಬೃಹತ್ ಸರಕಾರಿ ದೂರ ಸಂಪರ್ಕ ಸಂಸ್ಥೆ ಬೆಲೆ ತೆರಬೇಕಾಯಿತು. ದೇಶದಲ್ಲಿ ಬಿ. ಎಸ್.ಎನ್.ಎಲ್.ನ ಲಕ್ಷಾಂತರ ಕೋಟಿ ರೂಪಾಯಿ ಆಸ್ತಿ ಇದೆ, ಭೂಮಿ ಇದೆ. ಅವೆಲ್ಲ ಈಗ ಉಳ್ಳವರ ಪಾಲಾಗಲಿದೆ.

ಇದಕ್ಕಿಂತ ದೊಡ್ಡ ಅನಾಹುತವೆಂದರೆ ನೂರೈವತ್ತು ವರ್ಷಗಳ ಇತಿಹಾಸವಿರುವ ಭಾರತೀಯ ರೈಲು ಸಂಪರ್ಕ ವ್ಯವಸ್ಥೆಯನ್ನೇ ಖಾಸಗೀಕರಣ ಮಾಡುವ ದ್ರೋಹದ ಕೆಲಸಕ್ಕೆ ಈ ಸರಕಾರ ಕೈ ಹಾಕಿದೆ. ಹದಿನೆಂಟನೇ ಶತಮಾನದಲ್ಲಿ ಬ್ರಿಟಿಷ್ ಆಡಳಿತವಿದ್ದಾಗ ಆರಂಭವಾದ ಈ ರೈಲು ಸಂಪರ್ಕ ಜಾಲ ಒಂದು ವಿಧದಲ್ಲಿ ಭಾರತವನ್ನು ನಿಜವಾದ ಅರ್ಥದಲ್ಲಿ ಒಂದು ಮಾಡಿತು. ಅದಕ್ಕಿಂತ ಮೊದಲು ಕಾಶಿ, ರಾಮೇಶ್ವರದಂತಹ ಯಾತ್ರಾಸ್ಥಳಗಳಿಗೆ ಎತ್ತಿನ ಗಾಡಿ ಕಟ್ಟಿಕೊಂಡು ಇಲ್ಲವೇ ವರ್ಷಗಟ್ಟಲೆ ನಡೆಯುತ್ತ ಹೋಗುತ್ತಿದ್ದ ಜನರಿಗೆ ಒಂದೇ ವಾರದಲ್ಲಿ ಹೋಗಿ ಬರುವ ಅವಕಾಶ ದೊರಕಿದ್ದು ರೈಲು ಸಂಪರ್ಕ ಆರಂಭವಾದ ನಂತರ. ಅಷ್ಟೇ ಅಲ್ಲ ಜನಸಾಮಾನ್ಯ ಭಾರತೀಯರು ಊರಿಂದ ಊರಿಗೆ ಸುಲಭವಾಗಿ ಓಡಾಡಲು ಆರಂಭಿಸಿದ್ದು, ಸಂಬಂಧಿಕರ ಮದುವೆ ಮುಂತಾದ ಕಾರ್ಯಗಳಿಗೆ ಹೋಗುತ್ತಿದ್ದುದು ರೈಲಿನಲ್ಲಿ.ಮಹಾತ್ಮಾ ಗಾಂಧೀಜಿ ಆಫ್ರಿಕಾದಿಂದ ಸ್ವದೇಶಕ್ಕೆ ವಾಪಸಾದ ನಂತರ ರೈಲಿನ ಮೂರನೆಯ ದರ್ಜೆಯಲ್ಲಿ ಕುಳಿತು ಭಾರತ ದರ್ಶನ ಮಾಡಿ ನಂತರ ಸ್ವಾತಂತ್ರ್ಯ ಚಳವಳಿಯನ್ನು ರೂಪಿಸಿದರು. ಶಿಶುನಾಳ ಶರೀಫರ ಕೊನೆಯ ದಿನಗಳಲ್ಲಿ ರೈಲು ಬಂದಿತ್ತೆಂದು ಅದರಲ್ಲಿ ಅವರು ಕುಂದಗೋಳದಿಂದ ಹುಬ್ಬಳ್ಳಿಗೆ ಸಿದ್ದಾರೂಢರ ಭೇಟಿಗೆ ಬರುತ್ತಿದ್ದರಂತೆ. ಹೀಗೆ ಭಾರತೀಯ ರೈಲು ಜನಸಾಮಾನ್ಯರ ಸಂಪರ್ಕ ಸೇತುವಾಗಿ ಬೆಳೆದು ಬಂತು.

ಭಾರತದ ರೈಲು ಜಗತ್ತಿನಲ್ಲೇ ಅತ್ಯಂತ ದೊಡ್ಡ ಸಂಪರ್ಕ ಜಾಲವನ್ನು ಹೊಂದಿದೆ. ದೇಶವ್ಯಾಪಿ ಎಂಟು ಸಾವಿರಕ್ಕೂ ಹೆಚ್ಚು ನಿಲ್ದಾಣಗಳನ್ನು ಇದು ಹೊಂದಿದೆ. ಭಾರತೀಯ ರೈಲ್ವೆಗೆ 4,61,487 ಹೆಕ್ಟೇರ್ ಭೂಮಿಯಿದೆ. ಸುಮಾರು ಹತ್ತೊಂಬತ್ತು ಲಕ್ಷ ನೌಕರರು ಇದರಲ್ಲಿ ಕೆಲಸ ಮಾಡುತ್ತಾರೆ. ದೇಶವ್ಯಾಪಿಯಾಗಿ ಒಂದೂವರೆ ಲಕ್ಷ ಕಿ.ಮೀ. ಸಂಪರ್ಕ ಜಾಲವಿದೆ. ಸುಮಾರು ಹದಿನೈದು ಸಾವಿರ ರೈಲುಗಳು ನಿತ್ಯ ಸಂಚರಿಸುತ್ತವೆ. ಭಾರತದ ಕೋಟ್ಯಂತರ ಜನಸಾಮಾನ್ಯರು ಊರಿಂದ ಊರಿಗೆ ಹೋಗಲು ರೈಲನ್ನೇ ಅವಲಂಬಿಸಿದ್ದಾರೆ.

ಭಾರತೀಯ ರೈಲು ಇಲಾಖೆಯ ಒಡೆತನದಲ್ಲಿ ಲಕ್ಷಾಂತರ ಏಕರೆ ಭೂಮಿ ಇದೆ. ಇದು ಅತ್ಯಂತ ಲಾಭದಾಯಕವಾಗಿ ನಡೆದುಕೊಂಡು ಬಂದಿದೆ. ದೇಶದಲ್ಲಿ ನವ ಉದಾರೀಕರಣದ ಕರಾಳ ದಿನಗಳು ಆರಂಭವಾದ ನಂತರ ಲಾಭದಾಯಕವಾದ ರೈಲು ಜಾಲವನ್ನು ಕಾರ್ಪೊರೇಟ್ ಹದ್ದುಗಳಿಗೆ ಹಾಕುವ ಹುನ್ನಾರ ನಡೆಯುತ್ತಲೇ ಬಂದಿದೆ. ನಾಗಪುರ ನಿಯಂತ್ರಿತ ಮೋದಿ ಸರಕಾರ ಕೇಂದ್ರದಲ್ಲಿ ಬಂದ ನಂತರ ಭಾರತೀಯ ರೈಲ್ವೆಯ ಕತ್ತು ಹಿಸುಕುವ ಕಾರ್ಯ ತೀವ್ರ ಗೊಂಡಿತು. ಮುಂಚೆ ಪ್ರತ್ಯೇಕವಾಗಿದ್ದ ರೈಲ್ವೆ ಮುಂಗಡ ಪತ್ರವನ್ನು ದೇಶದ ವಾರ್ಷಿಕ ಮುಂಗಡ ಪತ್ರದಲ್ಲಿ ಸೇರ್ಪಡೆಗೊಳಿಸಿದ ಈ ಸರಕಾರ ರೈಲ್ವೆಯ ಪ್ರಾಮುಖ್ಯತೆಯನ್ನು ಗೌಣಗೊಳಿಸಿ ಖಾಸಗಿ ಬಂಡವಾಳ ಹೂಡಿಕೆಗೆ ತೆರೆಮರೆಯ ಮಸಲತ್ತು ಮಾಡುತ್ತ ಬಂತು.

ದೇಶದಲ್ಲಿ ಜಾಗತೀಕರಣದ ಕರಾಳ ಶಕೆ ಆರಂಭವಾದ ನಂತರ ರೈಲ್ವೆ ನಷ್ಟದಲ್ಲಿದೆ ಎಂದು ಹುಯಿಲೆಬ್ಬಿಸಿ ಇದನ್ನು ಖಾಸಗಿ ರಣ ಹದ್ದುಗಳ ಒಡಲಿಗೆ ಹಾಕುವ ಹುನ್ನಾರ ನಡೆಯುತ್ತಲೇ ಬಂತು. ಯುಪಿಎ ಸರಕಾರವಿದ್ದಾಗಲೂ ಇಂತಹ ಯತ್ನ ನಡೆಯಿತು. ಆಗ ಸರಕಾರಕ್ಕೆ ಬೆಂಬಲವಾಗಿ ನಿಂತಿದ್ದ ಎಡಪಂಥೀಯ ಪಕ್ಷಗಳು ಇದಕ್ಕೆ ಅವಕಾಶ ನೀಡಲಿಲ್ಲ. ಜೊತೆಗೆ ಆಗ ರೈಲ್ವೆ ಮಂತ್ರಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ಖಾಸಗೀಕರಣಕ್ಕೆ ಅವಕಾಶ ನೀಡಲಿಲ್ಲ. ಅವರ ಕಾಲದಲ್ಲಿ ಭಾರತೀಯ ರೈಲ್ವೆ ಅತ್ಯಂತ ಲಾಭದಲ್ಲಿತ್ತು. ಅದು ಆಗ ಹಲವಾರು ಬೆಳವಣಿಗೆಗಳನ್ನು ಕಂಡಿತು. ಇದಕ್ಕಾಗಿ ಸಾಂಪತ್ತಿಕ ಶಾಸ್ತ್ರಜ್ಞರಿಂದ ಮೆಚ್ಚುಗೆ ಗಳಿಸಿದ ಲಾಲೂ ಪ್ರಸಾದ್ ಯಾದವ್‌ರನ್ನು ಈ ದೇಶ ಎಂದೂ ಮರೆಯುವುದಿಲ್ಲ. ಸಾರ್ವಜನಿಕ ರಂಗದ ರೈಲ್ವೆಯನ್ನು ಲಾಭದಲ್ಲಿ ತಂದ ಲಾಲೂ ಪ್ರಸಾದ್ ಯಾದವ್‌ರನ್ನು ಬಿಝಿನೆಸ್ ಮ್ಯಾನೇಜ್ಮೆಂಟ್ ಕಾಲೇಜುಗಳಿಗೆ ಕರೆಯಿಸಿ ಅವರಿಂದ ಆಗ ಉಪನ್ಯಾಸ ಏರ್ಪಡಿಸಲಾಗುತ್ತಿತ್ತು.

2015 ರಲ್ಲಿ ರೈಲ್ವೆಯ ಹದಿನೇಳು ವಿಭಾಗಗಳನ್ನು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಮುಕ್ತ ಗೊಳಿಸಲಾಯಿತು.ಅವುಗಳಲ್ಲಿ ಸಬರ್ಬನ್, ಮೆಟ್ರೊ, ಲೋಕೊಮೋಟಿವ್, ವಿದ್ಯುದೀಕರಣ, ಸಿಗ್ನಲಿಂಗ್ ಮುಂತಾದವು ಸೇರಿವೆ.ಈಗಂತೂ 150 ರೈಲು ಮಾರ್ಗಗಳನ್ನು ಖಾಸಗಿ ಉದ್ಯಮಿಗಳಿಗೆ ಬಿಟ್ಟು ಕೊಡಲಾಗಿದೆ. ಇದರ ಜೊತೆಗೆ ಸಾವಿರಾರು ಕೋಟಿ ರೂಪಾಯಿ ಮೊತ್ತದ ರೈಲು ಇಲಾಖೆಯ ಭೂಮಿ ಕಾರ್ಪೊರೇಟ್ ಕಂಪೆನಿಗಳ ಪಾಲಾಗಲಿದೆ.

ಭಾರತೀಯ ರೈಲ್ವೆಯಾಗಲಿ, ಸಾರ್ವಜನಿಕ ಬಸ್ ಸಾರಿಗೆ ವ್ಯವಸ್ಥೆಯಾಗಲಿ ಲಾಭಗಳಿಕೆ ಅವುಗಳ ಗುರಿಯಲ್ಲ. ಸಾರ್ವಜನಿಕ ಸೇವೆ ಅವುಗಳ ಮೊದಲ ಆದ್ಯತೆ, ಹಾಗೆಂದು ನಷ್ಟದಲ್ಲಿ ನಡೆಯಬೇಕೆಂದಲ್ಲ. ಲಾಭ, ನಷ್ಟವಿಲ್ಲದೆ ದಕ್ಷವಾಗಿ ಅವುಗಳನ್ನು ನಡೆಸಿಕೊಂಡು ಹೋಗಬೇಕಾಗುತ್ತದೆ. ಅಂಬಾನಿ, ಅದಾನಿಗಳ ಸೇವೆ ಮಾಡಲು ಬಂದವರಿಗೆ ಇದು ಅರ್ಥವಾಗುವುದಿಲ್ಲ.

ಹೀಗಾಗಿ ಕೋಟ್ಯಂತರ ಭಾರತೀಯರು ಬೆವರು ಮತ್ತು ರಕ್ತ ಬಸಿದು ಕಟ್ಟಿದ ರೈಲ್ವೆಯಂತಹ ಜನರ ಒಡೆತನದಲ್ಲಿ ಇರಬೇಕಾದ ಸಂಸ್ಥೆಗಳನ್ನು ಕಬಳಿಸಲು ದೇಶ, ವಿದೇಶಗಳ ಕಾರ್ಪೊರೇಟ್ ಕಂಪೆನಿಗಳು ಬಾಯಿ ತೆರೆದು ನಿಂತಿವೆ. ಭಾರತೀಯ ರೈಲ್ವೆಯನ್ನು ಇಂತಹ ಹದ್ದುಗಳ ಬಾಯಿಯಿಂದ ಉಳಿಸಿಕೊಳ್ಳುವುದು ಕಾರ್ಮಿಕರ ಕರ್ತವ್ಯ ಮಾತ್ರವಲ್ಲ, ಎಲ್ಲ ದೇಶ ಪ್ರೇಮಿ ನಾಗರಿಕರ ಜವಾಬ್ದಾರಿ. ಹೀಗೇ ಬಿಟ್ಟರೆ ಈ ದೇಶವನ್ನೇ ಮಾರಾಟ ಮಾಡುತ್ತಾರೆ.ಎಚ್ಚರವಾಗಿರಿ.

ಒಂದೂವರೆ ಶತಮಾನದ ಇತಿಹಾಸವಿರುವ ಭಾರತೀಯ ರೈಲ್ವೆಯನ್ನು ಕಾರ್ಪೊರೇಟ್ ಕಂಪೆನಿಗಳ ಮಡಿಲಿಗೆ ಹಾಕಲು ಈ ಸರಕಾರ ಹುನ್ನಾರ ನಡೆಸಿ ಯಶಸ್ವಿಯಾಗುತ್ತಿರುವಾಗ ಅಲ್ಲಿ ಕೆಲಸ ಮಾಡುವ ಕಾರ್ಮಿಕ, ನೌಕರರ ಸಂಘಟನೆಗಳಿಂದ ಯಾಕೆ ಒಂದು ಸಣ್ಣ ಪ್ರತಿರೋಧವೂ ಬರುತ್ತಿಲ್ಲ? ಇದಕ್ಕೆ ಉತ್ತರ ಹುಡುಕಲು ಹೊರಟರೆ ನಮ್ಮ ಸಂಘಟಿತ ವಲಯದ ಕಾರ್ಮಿಕ ಚಳವಳಿಯ ದುರಂತ ಕಣ್ಣ ಮುಂದೆ ಬಂದು ನಿಲ್ಲುತ್ತದೆ.ಎಪ್ಪತ್ತರ ದಶಕದಲ್ಲಿ ಜಾರ್ಜ್‌ಫೆರ್ನಾಂಡಿಸ್ ರೈಲ್ವೆ ಕಾರ್ಮಿಕ ನಾಯಕರಾಗಿದ್ದಾಗ ನಡೆದ ಸುಮಾರು ಒಂದು ತಿಂಗಳ ಕಾಲದ ಐತಿಹಾಸಿಕ ಮುಷ್ಕರವೇ ಕೊನೆ. ಮತ್ತೆ ಅಂತಹ ಹೋರಾಟಗಳು ನಡೆಯಲಿಲ್ಲ. ರೈಲ್ವೆ ಕಾರ್ಮಿಕ, ನೌಕರರ ಸಂಘಟನೆ ಹೆಸರಿಗೆ ಮಾತ್ರವಿದೆ. ಅದೂ ಕೋಟ್ಯಂತರ ರೂಪಾಯಿ ವರ್ಗಣಿ ರೂಪದಲ್ಲಿ ಸಂಗ್ರಹವಾಗುವ ವ್ಯವಸ್ಥೆಯಾಗಿದೆ.

ಅದು ಕುಟುಂಬದ ಆಸ್ತಿಯಾಗಿದೆ. ಕಾರ್ಮಿಕ ನಾಯಕರಿಗೆ ಈಗ ಹೋರಾಟ ಬೇಕಾಗಿಲ್ಲ. ಹಿಂದೆಲ್ಲಾ ಸಣ್ಣಪುಟ್ಟ ಬೇಡಿಕೆಗಳನ್ನು ಇಟ್ಟು ಪರಸ್ಪರ ಮಾತುಕತೆ, ಚೌಕಾಸಿಗಳ ಮೂಲಕ ಯೂನಿಯನ್‌ಗಳನ್ನು ನಡೆಸಿಕೊಂಡು ಬಂದವರಿಗೆ ತಮ್ಮ ಅಡಿಪಾಯಕ್ಕೆ ಬಂದ ಅಪಾಯವನ್ನು ಎದುರಿಸುವ ಸಾಮರ್ಥ್ಯ ಉಳಿದಂತೆ ಕಾಣುವುದಿಲ್ಲ. ಈ ದೇಶದ ಬಹುತೇಕ ಕಾರ್ಮಿಕ ಹೋರಾಟಗಳು ಬರೀ ಸಾಂಕೇತಿಕ ಪ್ರತಿಭಟನಾ ಪ್ರದರ್ಶನಗಳಿಗೆ ಸೀಮಿತವಾಗಿವೆ. ಇದೊಂದು ಭಾರೀ ತ್ಯಾಗ, ಸಂಕಷ್ಟಮಯ ಹೋರಾಟಗಳನ್ನು ಬೇಡುವ ಕಾಲಘಟ್ಟ. ಆದರೆ ಈ ಸವಾಲು ಎದುರಿಸುವ ಸ್ಥಿತಿಯಲ್ಲಿ ಕಾರ್ಮಿಕರಾಗಲಿ, ಕಾರ್ಮಿಕ ಸಂಘಟನೆಗಳಾಗಲಿ ಇಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News