ವಿಕಾಸ್ ದುಬೆ ಸಹವರ್ತಿಯ ಬಂಧನ

Update: 2020-07-14 15:11 GMT

 ಲಕ್ನೋ, ಜು. 14: ಭೂಗತ ಪಾತಕಿ ವಿಕಾಸ್ ದುಬೆಯ ಓರ್ವ ಸಹವರ್ತಿಯನ್ನು ಬಂಧಿಸಲಾಗಿದೆ ಹಾಗೂ ಈ ತಿಂಗಳ ಆರಂಭದಲ್ಲಿ ನಡೆಸಿದ ಹೊಂಚು ದಾಳಿಯ ಸಂದರ್ಭ ಉತ್ತರಪ್ರದೇಶ ಪೊಲೀಸರಿಂದ ಲೂಟಿಗೈಯಲಾದ ಎರಡು ರೈಫಲ್ ಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.

ದುಬೆ ಸಹವರ್ತಿ ಶಶಿಕಾಂತ್ ತಲೆಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಮಂಗಳವಾರ ತಿಳಿಸಿದ್ದಾರೆ.

 ಕಾನ್ಪುರದಲ್ಲಿ ನಡೆದ ಹೊಂಚು ದಾಳಿಯ ಸಂದರ್ಭ 8 ಮಂದಿ ಪೊಲೀಸರನ್ನು ಹತ್ಯೆಗೈದ ಪ್ರಕರಣದಲ್ಲಿ ಶಶಿಕಾಂತ್ ಆರೋಪಿ. ಆತನನ್ನು ಮುಂಜಾನೆ 2.50ಕ್ಕೆ ಬಂಧಿಸಲಾಗಿದೆ ಎಂದು ಅವರು ಹೇಳಿದರು.

 ವಿಚಾರಣೆ ವೇಳೆ ಕಾನ್ಪುರದ ಬಿಕ್ರುವಿನಲ್ಲಿ ನಡೆದ ಎನ್ಕೌಂಟರ್ ಸಂದರ್ಭ ಇದ್ದ ಬಗ್ಗೆ ಹಾಗೂ ಉತ್ತರಪ್ರದೇಶದ ಪೊಲೀಸರಿಂದ ಲೂಟಿಗೈದ ಎರಡು ರೈಫಲ್ ಗಳನ್ನು ದುಬೆ ನಿವಾಸದಲ್ಲಿ ಬಚ್ಚಿಟ್ಟಿರುವುದನ್ನು ಶಶಿಕಾಂತ್ ಬಹಿರಂಗಪಡಿಸಿದ್ದಾನೆ ಎಂದು ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News