ಕೊರೋನ ಪರೀಕ್ಷೆಗೆ ಲ್ಯಾಬ್ ಇಲ್ಲ, ರ‍್ಯಾಪಿಡ್ ಟೆಸ್ಟ್ ಗೆ ಕಿಟ್‍ಗಳು ಖಾಲಿ ಇಲ್ಲ
ಚಿಕ್ಕಮಗಳೂರು, ಜು.24: ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಒಂದೆಡೆಯಾದರೆ ಸೋಂಕಿತರ ಪೈಕಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು ಕೊರೋನ ಸೋಂಕು ಪರೀಕ್ಷೆ ವಿಳಂಬವಾಗುತ್ತಿರುವುದೇ ಕಾರಣ ಎಂದು ಜಿಲ್ಲಾದ್ಯಂತ ಜನರು ಆರೋಪಿಸುತ್ತಿದ್ದು, ಜಿಲ್ಲಾ ಉಸ್ತುವಾರ ಸಚಿವ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಕಾರ್ಯವೈಖರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಕೆಲ ಪಟ್ಟಣಗಳಲ್ಲಿ ಈ ಸಂಬಂಧ ಬಹಿರಂಗ ಹೋರಾಟಕ್ಕೂ ಇಳಿದಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಮೇ ತಿಂಗಳಲ್ಲಿ ಮೊದಲ ಬಾರಿಗೆ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ನಂತರದ ಒಂದು ತಿಂಗಳು ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆರಂಭದಲ್ಲಿ ಪತ್ತೆಯಾಗಿದ್ದ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರಿಂದ ಜಿಲ್ಲೆ ಮತ್ತೆ ಹಸಿರು ವಲಯದಲ್ಲಿ ಗುರುತಿಸಿಕೊಂಡಿತ್ತು. ಆದರೆ ರಾಜ್ಯ ಸರಕಾರ ಹೊರ ಜಿಲ್ಲೆ, ಹೊರ ರಾಜ್ಯಗಳ ಪ್ರಯಾಣಿಕರ ಆಗಮನಕ್ಕೆ ಗ್ರೀನ್ ಸಿಗ್ನಲ್ ನೀಡಿದ ಪರಿಣಾಮ ಜಿಲ್ಲೆಗೆ ಹೊರಗಿನಿಂದ ಬಂದವರಲ್ಲಿ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದ್ದವು. ಇದೀಗ ಜಿಲ್ಲೆಯಲ್ಲಿ ಕೊರೋನ ಸೋಂಕು ನಿಯಂತ್ರಣ ಕಷ್ಟಸಾಧ್ಯ ಎಂಬಂತಾಗಿದ್ದು, ಇದುವರೆಗೆ 546 ಸೋಂಕಿತರು ಪತ್ತೆಯಾಗಿದ್ದು, ಈ ಪೈಕಿ 14 ಮಂದಿ ಮೃತಪಟ್ಟಿರುವುದು ಜನರ ಭೀತಿ ಹೆಚ್ಚುತ್ತಿದೆ.
ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಪಾಸಿಟಿವ್ ಪ್ರಕರಣಗಳು ಒಂದೊಂದಾಗಿ ಹೊರಬೀಳುತ್ತಿದ್ದಂತೆ ಜಿಲ್ಲೆಗೊಂದು ಕೊರೋನ ಸೋಂಕು ಪರೀಕ್ಷೆ ಕೇಂದ್ರ ಬೇಕೆಂಬ ಕೂಗು ಸಾರ್ವಜನಿಕರು, ಸಂಘ ಸಂಸ್ಥೆಗಳೂ ಸೇರಿದಂತೆ ವಿವಿಧ ಪಕ್ಷಗಳು ಧ್ವನಿ ಎತ್ತಿದ್ದರು. ಆಗ ಜಿಲ್ಲಾ ಉಸ್ತುವಾರಿ ಸಚಿವ ಸಿಟ.ರವಿ, ಲ್ಯಾಬ್ ನಿರ್ಮಾಣದ ಭರವಸೆ ನೀಡಿದ್ದಲ್ಲದೇ ಸರಕಾರದಿಂದ ಲ್ಯಾಬ್ ನಿರ್ಮಾಣಕ್ಕೆ ಅನುದಾನವನ್ನೂ ಬಿಡುಗಡೆ ಮಾಡಿಸಿದ್ದರು. ಅಲ್ಲದೇ ಜೂನ್ ಮೊದಲವಾರದಲ್ಲೇ ಲ್ಯಾಬ್ ಕಾರ್ಯಾರಂಭ ಮಾಡಲಿದೆ ಎಂಬ ಭರವಸೆಯನ್ನೂ ನೀಡಿದ್ದರು. ಬಳಿಕ ನಗರದ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಲ್ಯಾಬ್ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಲಾಯಿತಾದರೂ ನಿರ್ಮಾಣ ಕೆಲಸ ಆಮೆಗತಿಯಲ್ಲಿ ನಡೆಯುತ್ತಿದೆ. ಲ್ಯಾಬ್ ಆಗತ್ಯವಾಗಿರುವ ಉಪಕರಣಗಳನ್ನು ಜಿಲ್ಲಾಡಳಿತ ಇನ್ನೂ ತರಿಸಿಕೊಂಡಿಲ್ಲ. ಪರಿಣಾಮ ಜುಲೈ ತಿಂಗಳು ಮುಗಿದರೂ ಕೊರೋನ ಸೋಂಕು ಪರೀಕ್ಷಾ ಘಟಕ ಜಿಲ್ಲೆಯ ಜನರ ಪಾಲಿಗೆ ಇನ್ನೂ ಮರಿಚೀಕೆಯಾದಂತಾಗಿದೆ.
ಸದ್ಯ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದಕ್ಕೆ ಶಂಕಿತರ ಸ್ವಾಬ್ ಪರೀಕ್ಷೆ ಸಕಾಲದಲ್ಲಿ ಆಗದಿರುವುದೇ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಸೋಂಕಿನ ಲಕ್ಷಣಗಳಿದ್ದವರಿಂದ ಸಂಗ್ರಹಿಸುವ ಸ್ವಾಬ್‍ಗಳನ್ನು ಪರೀಕ್ಷೆಗಾಗಿ ಶಿವಮೊಗ್ಗ, ಹಾಸನ, ಮೈಸೂರು ಇಲ್ಲವೇ ಬೆಂಗಳೂರಿಗೆ ಕಳುಹಿಸಬೇಕಿದ್ದು, ಆ ಜಿಲ್ಲೆಗಳಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ ಇಲ್ಲಿಗಿಂತಲೂ ಹೆಚ್ಚಿರುವುದರಿಂದ ಆಯಾ ಜಿಲ್ಲೆಗಳ ಸ್ವಾಬ್‍ಗಳೊಂದಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಸಾವಿರಾರು ಮಂದಿಯ ಸ್ವಾಬ್ ಅನ್ನೂ ಪರೀಕ್ಷೆ ಮಾಡಬೇಕಿದೆ. ಈ ಒತ್ತಡದಿಂದಾಗಿ ಜಿಲ್ಲೆಯ ಜನರ ಸ್ವಾಬ್ ಪರೀಕ್ಷೆಯ ವರದಿಗಳು ಜಿಲ್ಲಾಡಳಿತಕ್ಕೆ ಸಕಾಲದಲ್ಲಿ ಸಿಗುತ್ತಿಲ್ಲ. ಅಲ್ಲದೇ ಅಲ್ಲಿನ ಲ್ಯಾಬ್ ಸಿಬ್ಬಂದಿ ಮೇಲೆ ಪರೀಕ್ಷೆಯ ಒತ್ತಡ ಇರುವುದರಿಂದ ಪರೀಕ್ಷೆಯ ವರದಿಗಳು ತಪ್ಪು ತಪ್ಪಾಗಿ ಬರುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಜನರ ವರದಿಗಳು ಫಾಲ್ಸ್ ಪಾಸಿಟಿವ್, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರ ವರದಿಯೇ ಒಮ್ಮೆ ನೆಗೆಟಿವ್ ಬಂದಿದ್ದರೆ, ಮತ್ತೊಮ್ಮೆ ಪಾಸಿಟಿವ್ ಬಂದಿರುವುದು ಇಂತಹ ಯಡವಟ್ಟುಗಳಿಗೆ ಸಾಕ್ಷಿಯಾಗಿದೆ.
ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹಳ್ಳಿ ಹಳ್ಳಿಗೂ ವ್ಯಾಪಿಸುತ್ತಿರುವು ಚಿಂತೆ ಜನರನ್ನೂ ಹೈರಾಣಾಗಿಸಿದ್ದು, ಜಿಲ್ಲೆಯಲ್ಲಿ ಸಕಾಲದಲ್ಲಿ ಸ್ವಾಬ್ ಪರೀಕ್ಷೆ ಆಗದಿರುವುದು ಮತ್ತು ವರದಿಗಳು ವಿಳಂಬವಾಗಿ ಬರುತ್ತಿರುವುದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹೆಪ್ಪುಗಟ್ಟುವಂತೆ ಮಾಡಿದೆ. ದೇಶದ, ರಾಜ್ಯದ ಯಾವುದೋ ಮೂಲೆಯಲ್ಲಿ ವರದಿಯಾಗುತ್ತಿದ್ದ ಕೊರೋನ ಸೋಂಕು ಇದೀಗ ತಮ್ಮ ಮನೆ ಬಾಗಿಲ ಬಳಿ ಬಂದಿದ್ದರೂ ಜಿಲ್ಲೆಯಲ್ಲೊಂದು ಕೊರೋನ ಸೋಂಕು ಪರೀಕ್ಷಾ ಪ್ರಯೋಗಾಲಯ ನಿರ್ಮಾಣಕ್ಕೆ ಮೀನಮೇಷ ಎಣಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಜಿಲ್ಲಾಡಳಿತ ವಿರುದ್ಧ ಸಾರ್ವಜನಿಕರು ವ್ಯಾಪಕ ಆಕ್ರೋಶ ತೋಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ವಿರುದ್ಧ ಹೋರಾಟದ ಅಭಿಯಾನವನ್ನೂ ಆರಂಭಿಸಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿನ ಕೆಲ ಸಂಘ ಸಂಸ್ಥೆಗಳ ಮುಖಂಡರು, ನಾಗರಿಕರು ಫೇಸ್‍ಬುಕ್, ವಾಟ್‍ಆಪ್‍ಗಳಲ್ಲಿ ಸಿ.ಟಿ.ರವಿ, ಸಂಸದೇ ಶೋಭಾ ಕರಂದ್ಲಾಜೆ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಕಾರ್ಯವೈಖರಿ, ಲ್ಯಾಬ್ ನಿರ್ಮಾಣ ಕೆಲಸ ವಿಳಂಬ, ತಡವಾಗಿ ಬರುತ್ತಿರುವ ಶಂಕಿತರ ವರದಿಗಳ ಬಗ್ಗೆ ನಾನಾ ರೀತಿಯಲ್ಲಿ ಪೋಸ್ಟ್ ಗಳನ್ನು ಹಾಕುತ್ತಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳ ಕಾರ್ಯವೈಖರಿಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಉಸ್ತುವಾರಿ ಸಚಿವ ಸಿ.ಟಿ.ರವಿ, ಸಂಸದೆ ಶೋಭಾ ವಿರುದ್ಧ ಸ್ವತಃ ಸಂಘಪರಿವಾರದ ಸದಸ್ಯರೂ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಸಾರ್ವಜನಿಕರು ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ.
ಜಿಲ್ಲೆಯಲ್ಲಿ ಕೊರೋನ ಸೋಂಕು ಪರೀಕ್ಷೆ ಪ್ರಯೋಗಾಲಯ ನಿರ್ಮಾಣ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇತ್ತೀಚೆಗೆ ಜಿಲ್ಲೆಗೆ 2 ಸಾವಿರ ರ‍್ಯಾಪಿಡ್ ಆಂಟಿಜೆಜ್ ಟೆಸ್ಟಿಂಗ್ ಕಿಟ್‍ಗಳನ್ನು ಸರಬರಾಜು ಮಾಡಿದೆ. ಈ ಪೈಕಿ ಆರೋಗ್ಯ ಇಲಾಖೆ ಎಲ್ಲ ತಾಲೂಕುಗಳ ಸರಕಾರಿ ಆಸ್ಪತ್ರೆಗಳಿಗೆ ಕಿಟ್‍ಗಳನ್ನು ಹಂಚಿಕೆ ಮಾಡಿದ್ದು, ಜಿಲ್ಲೆಯಲ್ಲಿ ಶಂಕಿತರು ಭಾರೀ ಸಂಖ್ಯೆಯಲ್ಲಿ ಪರೀಕ್ಷೆಗೊಳಗಾಗಿತ್ತಿರುವುದರಿಂದ ಈ ಕಿಟ್‍ಗಳು ಸದ್ಯ ಖಾಲಿಯಾಗಿವೆ ಎಂದು ಆರೋಗ್ಯ ಇಲಾಖಾಧಿಕಾರಿಗಳು ಹೇಳುತ್ತಿದ್ದಾರೆ. ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಸಂದರ್ಭ ರ‍್ಯಾಪಿಡ್ ಟೆಸ್ಟ್‍ಗಳೂ ಇಲ್ಲ, ಲ್ಯಾಬ್ ಕೂಡ ಇಲ್ಲ ಎಂಬಂತಹ ಸ್ಥಿತಿ ಜಿಲ್ಲೆಗೆ ಬಂದೊದಗಿದೆ. ಪರಿಣಾಮ ಸ್ವಾಬ್ ಪರೀಕ್ಷೆಗಳು ಮತ್ತಷ್ಟು ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಸೋಂಕಿನ ಲಕ್ಷಣಗಳಿದ್ದ 4 ಮಂದಿ ಮೃತಪಟ್ಟಿದ್ದು, ಈ ವ್ಯಕ್ತಿಗಳು ಮೃತಪಟ್ಟು ಕೆಲದಿನಗಳ ಬಳಿಕ ವರದಿಗಳು ಬಂದಿರುವಂತಹ ಘಟನೆಗಳೂ ಜಿಲ್ಲೆಯಲ್ಲಿ ದಾಖಲಾಗಿವೆ.