ಹೋರಾಟದ ಮುಂದಿನ ದಾರಿ ಯಾವುದು?

Update: 2020-07-26 19:30 GMT

ನಾನು ರಾಜ್ಯದ ಕಾರ್ಮಿಕ ಚಳವಳಿಯನ್ನು ಹತ್ತಿರದಿಂದ ನೋಡಿದವನು. ಮಾತ್ರವಲ್ಲದೆ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವನು. ನನ್ನ ಅನುಭವದ ಆಧಾರದಲ್ಲಿ ಹೇಳುವುದಾದರೆ ಹೋರಾಟಗಳ ಸ್ವರೂಪ ಈಗ ಬದಲಾಗಬೇಕಾಗಿದೆ. ಮನವಿ ಕೊಡುವ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮಾಡುವ ಸಾಂಕೇತಿಕ ಪ್ರತಿಭಟನೆಗಳ ಕಾಲ ಹೋಯಿತು. ಹೋರಾಟದ ಹೊಸ ದಾರಿಯನ್ನು ಈ ದೇಶವನ್ನು ಕಟ್ಟಿದ ರೈತ ಕಾರ್ಮಿಕ ವರ್ಗ ಕಂಡುಕೊಳ್ಳಬೇಕಾಗಿದೆ. ಆರ್ಥಿಕ ಹೋರಾಟದ ಜೊತೆ ಜೊತೆಗೆ ತಳ ಸಮುದಾಯಗಳ ಸಾಮಾಜಿಕ ಹೋರಾಟಗಳು ಬೆಸೆದುಕೊಳ್ಳಬೇಕಾಗಿದೆ. ಹೊಸ ಪೀಳಿಗೆ ಹೋರಾಟದ ಹೊಸ ದಾರಿಯನ್ನು ಕಂಡುಕೊಳ್ಳಬೇಕಾಗಿದೆ.


ಕೊರೋನ ಹೊಡೆತದಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಜಾಗತಿಕ ಆರ್ಥಿಕತೆ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ.ನಮ್ಮ ದೇಶವೂ ಭಿನ್ನವಾಗಿಲ್ಲ.ಕೋವಿಡ್ ಬರುವ ಮುಂಚೆಯೇ ನಮ್ಮ ಆರ್ಥಿಕತೆ ಹಳ್ಳ ಹಿಡಿದಿತ್ತು.ಲಾಕ್‌ಡೌನ್ ನಂತರ ಪಾತಾಳಕ್ಕೆ ಕುಸಿದಿದೆ. ಇದು ಲಕ್ಷಾಂತರ ಜನತೆಗೆ ಭೀತಿಯನ್ನುಂಟು ಮಾಡಿದ್ದರೆ, ನಮ್ಮ ದೇಶದ ಕಾರ್ಪೊರೇಟ್ ಕಮ್ಯೂನಲ್ ಮೈತ್ರಿ ಕೂಟಕ್ಕೆ ವರದಾನವಾಗಿ ಬಂದಿದೆ. ನರೇಂದ್ರ ಮೋದಿ ನೇತೃತ್ವದ ನಾಗಪುರ ನಿಯಂತ್ರಿತ ಬಿಜೆಪಿ ಸರಕಾರ ಇದನ್ನೇ ಬಳಸಿಕೊಂಡು ಒಂದಾದರೊಂದರಂತೆ ತನ್ನ ಅಜೆಂಡಾಗಳನ್ನು ಜಾರಿಗೆ ತರುತ್ತಲೇ ಇದೆ.

ಕೊರೋನ ಬರುವ ಮುಂಚೆ ಜನವಿರೋಧಿ ಪ್ರಭುತ್ವದ ವಿರುದ್ಧ ಹೋರಾಟಗಳ ಮಹಾ ಅಲೆಯೇ ಬಂದಿತ್ತು. ಕರಾಳ ಪೌರತ್ವ ಕಾಯ್ದೆ ವಿರುದ್ಧ ದೇಶ ವ್ಯಾಪಿ ಜನ ಬೀದಿಗಿಳಿದಿದ್ದರು. ಫ್ಯಾಸಿಸ್ಟ್ ಸರ್ವಾಧಿಕಾರಿ ಧೋರಣೆಯ ವಿರುದ್ಧ ವಿದ್ಯಾರ್ಥಿ, ಯುವಜನರು ಸಿಡಿದೆದ್ದಿದ್ದರು. ಕನ್ಹಯ್ಯಾ ಕುಮಾರ್ ದೇಶದ ಯಾವುದೇ ಮೂಲೆಯಲ್ಲಿ ಭಾಷಣ ಮಾಡಲಿ ಜನ ಸಾಗರ ಹರಿದು ಬರುತ್ತಿತ್ತು. ಈ ಜನಾಕ್ರೋಶದ ಎದುರು ಮೋದಿ ಸರಕಾರ ತತ್ತರಿಸುತ್ತಿರುವಾಗ ಅದಕ್ಕೆ ಹುಲ್ಲುಕಡ್ಡಿಯಾಗಿ ಬಂದಿದ್ದು ಕೊರೋನ. ಈ ವೈರಾಣುವಿನ ಕಾರಣಕ್ಕಾಗಿ ಜನ ಅಂತರ ಕಾಯ್ದು ಕೊಳ್ಳುವುದು ಅನಿವಾರ್ಯವಾಯಿತು. ಪ್ರತಿಭಟನೆಗಳ ಸ್ವರೂಪ ಬದಲಾಗುತ್ತ ಬಂತು. ಪ್ರಧಾನಿ ಮನವಿ ಮಾಡಿಕೊಂಡಾಗ ಜನ ಸ್ಪಂದಿಸಿ ಸಹಕರಿಸಿದರು. ಹೋರಾಟಗಳು ವಿಶ್ರಾಂತಿ ಪಡೆದವು.ಆದರೆ ಸರಕಾರ ಮತ್ತು ಅದನ್ನು ನಿಯಂತ್ರಣ ಮಾಡುವ ಪರಿವಾರದ ಅಜೆಂಡಾಗೆ ತಡೆಯಿಲ್ಲದಾಯಿತು. ಅದು ಬೇರೆ ಬೇರೆ ರೂಪದಲ್ಲಿ ಜಾರಿಗೆ ಬರುತ್ತಲೇ ಇದೆ. ಮಧ್ಯಪ್ರದೇಶ ಸರಕಾರ ಉರುಳಿಸಲು ಕೊರೋನ ಅಡ್ಡಿಯಾಗಲಿಲ್ಲ. ಪಠ್ಯಪುಸ್ತಕ ಪರಿಷ್ಕಾರಕ್ಕೆ ಅದು ತೊಡಕಾಗಲಿಲ್ಲ, ಅದೇ ರೀತಿ ಬ್ಯಾಂಕುಗಳ ಖಾಸಗೀಕರಣ, ರೈಲು ಸಂಪರ್ಕ ಖಾಸಗೀಕರಣ, ಜೀವ ವಿಮೆ ಖಾಸಗೀಕರಣ ಎಲ್ಲವೂ ನಿರಾತಂಕವಾಗಿ ನಡೆಯುತ್ತಿವೆ. ಆದರೆ ಹೋರಾಟಗಳು ಮಾತ್ರ ಸ್ತಬ್ದವಾಗಿವೆ.

ಕೊರೋನ ನಂತರದ ಐದು ತಿಂಗಳಲ್ಲಿ ದೇಶದ ಚಿತ್ರಣವೇ ಬದಲಾಗಿದೆ. ಇದೇ ಸಂದರ್ಭವನ್ನು ಬಳಸಿಕೊಂಡು ದೇಶದ ಜನರಿಗೆ ಸೇರಿದ ಸಾರ್ವಜನಿಕ ರಂಗದ ಉದ್ಯಮಗಳನ್ನು ಖಾಸಗಿ ರಣಹದ್ದುಗಳ ಮಡಿಲಿಗೆ ಹಾಕಲಾಗುತ್ತಿದೆ. ಐವತ್ತೊಂದು ವರ್ಷಗಳ ಹಿಂದೆ ದೇಶದ 14 ಪ್ರಮುಖ ಬ್ಯಾಂಕುಗಳನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ರಾಷ್ಟ್ರೀಕರಣಗೊಳಿಸಿದ್ದರು. ಆ ವರೆಗೆ ಉಳ್ಳವರ ಸೊತ್ತಾಗಿದ್ದ ಬ್ಯಾಂಕುಗಳು ಬಡವರ ಮನೆ ಬಾಗಿಲಿಗೆ ಬಂದವು. ಜನಸಾಮಾನ್ಯರು ತಮ್ಮ ಸಣ್ಣ ಪುಟ್ಟ ವ್ಯಾಪಾರ, ವ್ಯವಹಾರಗಳಿಗಾಗಿ ಬ್ಯಾಂಕುಗಳಿಂದ ಸಾಲ ಪಡೆಯುವ ಅವಕಾಶ ದೊರಕಿತು.ಹಳ್ಳಿ, ಹಳ್ಳಿಗಳಲ್ಲಿ ಬ್ಯಾಂಕುಗಳ ಶಾಖೆಗಳು ಆರಂಭವಾದವು. ಬ್ಯಾಂಕ್ ನೌಕರಿಯಲ್ಲಿ ಮೀಸಲು ವ್ಯವಸ್ಥೆ ಜಾರಿಗೆ ಬಂದು ತಳ ಸಮುದಾಯದ ಬಡವರ ವಿದ್ಯಾವಂತ ಮಕ್ಕಳು ಬ್ಯಾಂಕ್ ನೌಕರಿ ಪಡೆಯುವಂತಾಯಿತು.

ಬ್ಯಾಂಕುಗಳಿಂದ ಸಾಲ ಪಡೆದ ಬಡವರಾರೂ ಮೋಸ ಮಾಡಲಿಲ್ಲ.ಸಕಾಲಕ್ಕೆ ಸಾಲದ ಕಂತು ಕಟ್ಟಿದರು. ಆದರೆ ಭಾರೀ ಬಂಡವಾಳದಾರರು, ಉದ್ಯಮಪತಿಗಳು ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ತಿರುಪತಿ ನಾಮ ಹಾಕಿದರು(ಇಂತಹ ಕಾರ್ಪೊರೇಟ್ ಬಾಕಿದಾರರ ಪಟ್ಟಿಯನ್ನು ಬ್ಯಾಂಕ್ ನೌಕರರ ಸಂಘ ಇತ್ತೀಚೆಗೆ ಬಿಡುಗಡೆ ಮಾಡಿದೆ.) ಅಂತಹವರ ಲಕ್ಷಾಂತರ ಕೋಟಿ ರೂ. ಸಾಲವನ್ನು ಮೋದಿ ಸರಕಾರ ಮನ್ನಾ ಮಾಡಿದೆ. ಹೀಗಾಗಿ ನಷ್ಟದ ಸುಳಿಗೆ ಸಿಲುಕಿದ ಬ್ಯಾಂಕುಗಳನ್ನು ಈ ಸರಕಾರ ಖಾಸಗೀಕರಣ ಮಾಡಲು ಹೊರಟಿದೆ.

ಇನ್ನು ಜೀವವಿಮೆಗೆ ಸರಕಾರ ಮಾಡಿದ ದ್ರೋಹ ಘನ ಘೋರವಾದುದು. ಕೇವಲ ಐದು ಲಕ್ಷ ರೂಪಾಯಿ ಬಂಡವಾಳದಿಂದ ಆರಂಭವಾದ ಎಲ್.ಐ.ಸಿ. ಈಗ ಮೂವತ್ತೆರಡು ಲಕ್ಷ ಕೋಟಿ ರೂಪಾಯಿ ವಹಿವಾಟು ಹೊಂದಿದೆ. ನಮ್ಮ ಮಹಾನಗರಗಳ ನೀರು ಪೂರೈಕೆ ಯೋಜನೆಗಳಿಗೆ ಜೀವ ವಿಮಾ ಸಂಸ್ಥೆ ನೆರವು ನೀಡುತ್ತಾ ಬಂದಿದೆ. ಇಂತಹ ಲಾಭದಾಯಕ ಸಂಸ್ಥೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಸರಕಾರ ಅವಕಾಶ ನೀಡಿದೆ.ಅದನ್ನು ಮುಗಿಸಲು ಸುಪಾರಿ ನೀಡಿದೆ.

ಇನ್ನು ರೈಲ್ವೆ ಕತೆ ಇನ್ನೂ ಭಯಾನಕವಾದುದು.ಲಾಭದಲ್ಲಿದ್ದ ಅದನ್ನು ಖಾಸಗಿ ತಿಮಿಂಗಿಲಗಳ ಒಡಲಿಗೆ ಹಾಕಲು ಮೋದಿ ಸರಕಾರ ಮುಂದಾಗಿದೆ. ಹೀಗೆ ದೇಶದ ಸಂಪತ್ತನ್ನು ಮಾರಾಟ ಮಾಡಲು ಕೊರೋನ ಸಂದರ್ಭವನ್ನು ಈ ಸರಕಾರ ಅತ್ಯಂತ ನಾಜೂಕಾಗಿ ಬಳಸಿಕೊಳ್ಳುತ್ತಿದೆ.

ಇನ್ನು ಕರ್ನಾಟಕದ ರಸ್ತೆ ಸಾರಿಗೆ ಸಂಸ್ಥೆಯ ಪರಿಸ್ಥಿತಿ ವಿಭಿನ್ನವಾಗಿದೆ. ಮಾರ್ಚ್ 22ರಿಂದ ಸಂಚಾರ ಸ್ಥಗಿತಗೊಳಿಸಿದ್ದ ಬಸ್‌ಗಳು ಈಗ ಓಡಾಡುತ್ತಿವೆ. ಆದರೆ ಕೊರೋನಕ್ಕೆ ಹೆದರಿ ಜನರೇ ಬರುತ್ತಿಲ್ಲ. ಏತನ್ಮಧ್ಯೆ ಸಾರಿಗೆ ನೌಕರರನ್ನು ಒಂದು ವರ್ಷ ಕಾಲ ಸಂಬಳ ರಹಿತ ರಜೆಯ ಮೇಲೆ ಕಳಿಸುವ ದುರಾಲೋಚನೆ ಸಾರಿಗೆ ನಿಗಮದಲ್ಲಿ ಭೀತಿಯನ್ನು ಉಂಟು ಮಾಡಿದೆ. ಹಾಗೆ ಯೋಚಿಸಿಲ್ಲ ಎಂದು ಹೇಳಲಾಗುತ್ತಿದ್ದರೂ ನೌಕರರಲ್ಲಿ ಭೀತಿ ಉಂಟಾಗಿರುವುದು ನಿಜ.

 ಈ ನಡುವೆ ನಾಡಿನ ಕೆಲ ಮಠಾಧೀಶರು ಹಾಗೂ ಸಾಹಿತಿಗಳಿಗೆ ಕೆ.ಎಸ್.ಆರ್.ಟಿ.ಸಿ. ನೌಕರರ ಬಗ್ಗೆ ವಿಶೇಷ ಅನುಕಂಪ ಮೂಡಿದೆ. ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಇವರು ಧ್ವನಿಯೆತ್ತಿದ್ದಾರೆ. ನೌಕರರಲ್ಲೂ ಅನೇಕರಲ್ಲಿ, ಸಂಸ್ಥೆ ಹಾಳಾಗಿ ಹೋಗಲಿ ತಾವು ಸರಕಾರಿ ನೌಕರರಾದರೆ ಸಾಕು ಯಾವುದೇ ಹೋರಾಟ ಬೇಡ, ವೇತನ ಒಪ್ಪಂದ ಬೇಡ ಎಂಬ ಭಾವನೆ ಮೂಡಿದೆ. ಇದರ ಹಿಂದೆ ಪಟ್ಟ ಭದ್ರ ಹಿತಾಸಕ್ತಿಗಳ ಕೈವಾಡವಿದ್ದಂತೆ ಕಾಣುತ್ತದೆ. ಕೆ.ಎಸ್.ಆರ್. ಟಿ.ಸಿ.ಯಲ್ಲಿ ಮಾನ್ಯತೆ ಪಡೆದ ಎಐಟಿಯುಸಿಯ ನೌಕರರ ಸಂಘ ಇದನ್ನು ಕಾರ್ಮಿಕರ ತೀರ್ಮಾನಕ್ಕೆ ಬಿಟ್ಟಿದೆ.

ವಾಸ್ತವವಾಗಿ ರಾಜ್ಯ ಸಾರಿಗೆ ಸಂಸ್ಥೆ ಒಂದು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಸುರಕ್ಷಿತವಾಗಿದೆ. ಕಾರ್ಮಿಕರು ಪ್ರತಿ ತಿಂಗಳು ಸಂಬಳ ಎಣಿಸುವಂತಾಗಿದೆ. ಆದರೆ ಇದು ಸರಕಾರದ ಮಡಿಲಿಗೆ ಬಿದ್ದರೆ ರೈಲ್ವೆಯಂತೆ ಇದು ಕೂಡ ಖಾಸಗೀಕರಣಗೊಂಡರೆ ಅಚ್ಚರಿ ಪಡಬೇಕಾಗಿಲ್ಲ. ಈ ಸಂಸ್ಥೆ ರಾಜ್ಯದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಸೊತ್ತನ್ನು ಹೊಂದಿದೆ. ಸಾವಿರಾರು ಎಕರೆ ಭೂಮಿ ರಾಜ್ಯದ ವಿವಿಧೆಡೆ ಇದರ ಒಡೆತನದಲ್ಲಿ ಇದೆ. ಇದು ಸರಕಾರದ ಕೈಗೆ ಹೋದರೆ ಸರಕಾರಿ ಸಂಪತ್ತನ್ನು ಮಾರಲು ಕಾಯ್ದುಕೊಂಡಿರುವ ಭ್ರಷ್ಟ ರಾಜಕಾರಣಿಗಳು ಇದನ್ನು ಖಾಸಗಿ ಬಸ್ ಮಾಲಕರ ಮಡಿಲಿಗೆ ಹಾಕುವ ಅಪಾಯವಿದೆ. ಹಾಗಾದರೆ ಈಗ ಪ್ರತಿ ತಿಂಗಳು ಸಂಬಳವನ್ನು ಪಡೆದು ನೆಮ್ಮದಿಯಾಗಿರುವ ಸಾರಿಗೆ ನೌಕರರ ಬದುಕು ಚಿಂದಿ, ಚಿತ್ರಾನ್ನವಾಗಲಿದೆ.

ಈ ನಡುವೆ ಕರ್ನಾಟಕ ಸರಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕೃಷಿ ಯೋಗ್ಯ ಭೂಮಿಯನ್ನು ಕಾರ್ಪೊರೇಟ್ ಕಂಪೆನಿಗಳ ವಶಕ್ಕೆ ನೀಡಲು ಹೊರಟಿದೆ. ‘ಉಳುವವನೇ ಹೊಲದೊಡೆಯ’ಎಂಬ ತತ್ವ ಮರೆಯಾಗಿ ಉಳ್ಳವನೇ ಭೂಮಿಯ ಒಡೆಯನಾಗಬೇಕೆಂದು ಬಿಜೆಪಿ ಸರಕಾರ ಈ ತಿದ್ದುಪಡಿ ತಂದಿದೆ. ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದೆ. ಅದೇ ರೀತಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಮಿಕರ ಹಕ್ಕುಗಳನ್ನು ಕಿತ್ತು ಕೊಳ್ಳಲು ಈ ಸರಕಾರ ಹೊರಟಿದೆ.

ಹೀಗೆ ದೇಶದ ದುಡಿಯುವ ವರ್ಗ ಈಗ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಜೀವನ್ಮರಣದ ಹೋರಾಟದಲ್ಲಿ ಒಂದಾಗಿ ನಿಲ್ಲಬೇಕಾಗಿದ್ದ ಶ್ರಮಿಕ ವರ್ಗ ಜಾತಿ, ಧರ್ಮದ ಹೆಸರಿನಲ್ಲಿ ಒಡೆದು ಹೋಗಿದೆ.ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಅನೇಕ ಉದ್ಯಮಗಳಲ್ಲಿ ಜಾತಿ ಆಧರಿತ, ಧರ್ಮ ಆಧರಿತ ಸಂಘ ಸಂಸ್ಥೆಗಳು ಹುಟ್ಟಿಕೊಂಡಿವೆ. ಈ ಜಾತಿ ಮತ್ತು ಧರ್ಮದ ಐಡೆಂಟಿಟಿ ಕಾರ್ಮಿಕ ವರ್ಗದ ಐಕ್ಯತೆಯನ್ನು ನುಚ್ಚು ನೂರು ಮಾಡಿದೆ. ಕೋವಿಡ್-19ರ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ನಾನು ರಾಜ್ಯದ ಕಾರ್ಮಿಕ ಚಳವಳಿಯನ್ನು ಹತ್ತಿರದಿಂದ ನೋಡಿದವನು. ಮಾತ್ರವಲ್ಲದೆ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವನು. ನನ್ನ ಅನುಭವದ ಆಧಾರದಲ್ಲಿ ಹೇಳುವುದಾದರೆ ಹೋರಾಟಗಳ ಸ್ವರೂಪ ಈಗ ಬದಲಾಗಬೇಕಾಗಿದೆ. ಮನವಿ ಕೊಡುವ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮಾಡುವ ಸಾಂಕೇತಿಕ ಪ್ರತಿಭಟನೆಗಳ ಕಾಲ ಹೋಯಿತು. ಹೋರಾಟದ ಹೊಸ ದಾರಿಯನ್ನು ಈ ದೇಶವನ್ನು ಕಟ್ಟಿದ ರೈತ ಕಾರ್ಮಿಕ ವರ್ಗ ಕಂಡುಕೊಳ್ಳಬೇಕಾಗಿದೆ. ಆರ್ಥಿಕ ಹೋರಾಟದ ಜೊತೆ ಜೊತೆಗೆ ತಳ ಸಮುದಾಯಗಳ ಸಾಮಾಜಿಕ ಹೋರಾಟಗಳು ಬೆಸೆದುಕೊಳ್ಳಬೇಕಾಗಿದೆ. ಹೊಸ ಪೀಳಿಗೆ ಹೋರಾಟದ ಹೊಸ ದಾರಿಯನ್ನು ಕಂಡುಕೊಳ್ಳಬೇಕಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News