ಕಾಂಗ್ರೆಸ್ ಒಳಗಿನ ಸಂಚು, ಒಳಸಂಚುಗಳು

Update: 2020-08-30 19:30 GMT

ಕಾಂಗ್ರೆಸ್ ಮುಕ್ತ ಹೆಸರಿನಲ್ಲಿ ದೇಶದಲ್ಲಿ ಫ್ಯಾಶಿಸ್ಟ್ ಸರ್ವಾಧಿಕಾರವನ್ನು ಹೇರಲು ಮಸಲತ್ತು ನಡೆದಿರುವಾಗ ಕಾಂಗ್ರೆಸ್ ತನ್ನೊಳಗಿನ ಲೋಪಗಳನ್ನು ಸರಿಪಡಿಸಿಕೊಂಡು ಪ್ರಬಲ ಪ್ರತಿಪಕ್ಷವಾಗಿ ಹೊರ ಹೊಮ್ಮಬೇಕಾಗಿದೆ.ಎಡಪಂಥೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಸೆಕ್ಯುಲರ್ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರ ಮಾಡಲು ಹೊರಟವರ ಹುನ್ನಾರವನ್ನು ವಿಫಲಗೊಳಿಸಬೇಕು.


ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಈಗ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ಪಕ್ಷಕ್ಕೆ ಪೂರ್ಣಾವಧಿ ಚುನಾಯಿತ ಅಧ್ಯಕ್ಷರು ಬೇಕೆಂದು ಕೆಲ ಹಿರಿಯ ನಾಯಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಇದು ನೆಪ ಮಾತ್ರದ ಕಾರಣ. ಇವರ ನಿಜವಾದ ಗುರಿ ರಾಹುಲ್ ಗಾಂಧಿ. ನರೇಂದ್ರ ಮೋದಿ ಪ್ರಭಾವಳಿ ಎದುರು ರಾಹುಲ್ ಗಾಂಧಿ ನಾಯಕತ್ವ ಸರಿಸಾಟಿಯಾಗುವುದಿಲ್ಲ ಎಂಬುದು ಇವರ ಅಂಬೋಣ.ಐದು ಪುಟಗಳ ಈ ಪತ್ರ ಮಾಧ್ಯಮಗಳಿಗೆ ಸೋರಿಕೆಯಾಗಿ ಇನ್ನಷ್ಟು ಗೊಂದಲಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರಿ ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ತೀರ್ಮಾನಿಸಿದೆ.
ಈ ಪತ್ರ ಬರೆದವರೆಲ್ಲ ಎಂದೂ ನೇರ ಚುನಾವಣೆಯಲ್ಲಿ ಗೆದ್ದು ಬಂದವರಲ್ಲ. ಸದಾ ರಾಜ್ಯಸಭೆ ಪ್ರವೇಶಿಸಿ ಹಿತ್ತಲ ಬಾಗಿಲು ರಾಜಕಾರಣ ಮಾಡುತ್ತ ಬಂದವರು. ಇಷ್ಟು ವರ್ಷಗಳ ಕಾಲ ಗಾಂಧಿ, ನೆಹರೂ ಕುಟುಂಬದ ಭಜನಾ ಮಂಡಳಿಯ ಸದಸ್ಯರಾಗಿದ್ದವರು. ಇಂಥವರಿಗೆ ಈ ಇಳಿ ವಯಸ್ಸಿನಲ್ಲಿ ಒಮ್ಮೆಲೇ ಜ್ಞಾನೋದಯವಾಗಿ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಚುನಾಯಿತ ಅಧ್ಯಕ್ಷರು ಬೇಕೆಂಬುದು ತಪ್ಪಲ್ಲ. ರಾಹುಲ್ ಗಾಂಧಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಬಾರದೆಂದಲ್ಲ. ಆದರೆ ಇದಕ್ಕೆ ಇವರು ಆಯ್ಕೆ ಮಾಡಿಕೊಂಡ ಸನ್ನಿವೇಶ ನಾನಾ ರೀತಿಯ ಗುಮಾನಿಗಳಿಗೆ ಕಾರಣವಾಗಿದೆ. ನರೇಂದ್ರ ಮೋದಿ ನೇತೃತ್ವದ ನಾಗಪುರ ನಿಯಂತ್ರಿತ ಸರಕಾರ ಎರಡನೇ ಬಾರಿ ಅಸ್ತಿತ್ವಕ್ಕೆ ಬಂದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿದಿದೆ.ಕೊರೋನ ನಂತರವಂತೂ ಬಿಕ್ಕಟ್ಟು ಇನ್ನಷ್ಟು ಉಲ್ಬಣಿಸಿದೆ. ಈ ಸನ್ನಿವೇಶವನ್ನು ಬಳಸಿಕೊಂಡು ಸಂಘಪರಿವಾರ ತನ್ನ ರಹಸ್ಯ ಕಾರ್ಯಸೂಚಿಯ ಒಂದೊಂದೇ ಅಜೆಂಡಾಗಳನ್ನು ಜಾರಿಗೆ ತರುತ್ತಿದೆ. ಇಂತಹ ಸಂದರ್ಭದಲ್ಲಿ ಮುಖ್ಯ ವಿರೋಧ ಪಕ್ಷವಾದ ಕಾಂಗ್ರೆಸ್ ಇತರ ಪ್ರತಿಪಕ್ಷಗಳನ್ನು ಜೊತೆಗೆ ಸೇರಿಸಿಕೊಂಡು ಕೇಂದ್ರ ಸರಕಾರದ ಜನ ವಿರೋಧಿ ಧೋರಣೆಗಳ ವಿರುದ್ಧ ಧ್ವನಿಯೆತ್ತಬೇಕಾದ ಅನಿವಾರ್ಯವಾದ ಅತಿ ಅವಶ್ಯಕ ಕಾಲವಿದು. ಇಂತಹ ಸಂದರ್ಭದಲ್ಲಿ ಯುವ ನಾಯಕ ರಾಹುಲ್ ಗಾಂಧಿ ಮೇಲೆ ಹರಿ ಹಾಯುವುದು ಎಷ್ಟು ಸರಿ ಎಂಬ ಪ್ರಶ್ನೆ ನಮ್ಮ ಮುಂದಿದೆ.
 ದೇಶಕ್ಕೆ ಈಗ ಮೋದಿ ಬಿಟ್ಟರೆ ಇನ್ನೊಬ್ಬ ನಾಯಕನಿಲ್ಲ ಎಂಬ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಆಳುವ ಪಕ್ಷ ಯಶಸ್ವಿಯಾಗುತ್ತಿದೆ. ಇದು ಸಂಘಪರಿವಾರ ಮತ್ತು ಕಾರ್ಪೊರೇಟ್ ಲಾಬಿಯ ಜಂಟಿ ಮಸಲತ್ತು. ಈ ಕುತಂತ್ರದ ಭಾಗವಾಗಿಯೇ ಆರಂಭದಿಂದಲೂ ರಾಹುಲ್ ಗಾಂಧಿ ನಿಷ್ಪ್ರಯೋಜಕ, ಪಪ್ಪುಎಂದೆಲ್ಲ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನಡೆಸಲಾಯಿತು. ರಾಹುಲ್ ಮಾತ್ರವಲ್ಲ ಮೋದಿಯವರ ಕನಸಿನಲ್ಲೂ ಬಂದು ಕಾಡುವ ಕಮ್ಯುನಿಸ್ಟ್ ಯುವಕ ಕನ್ಹಯ್ಯ್ ಕುಮಾರ್ ವಿರುದ್ಧವೂ ಅತ್ಯಂತ ವ್ಯವಸ್ಥಿತ ಪ್ರಚಾರ ನಡೆಯಿತು. ಅವರ ಮೇಲೆ ಯಾವುದೇ ಆರೋಪ ಮಾಡಲಾಗದೇ ‘ದೇಶದ್ರೋಹಿ’ ಎಂದು ಬಿಂಬಿಸುವ ಹುನ್ನಾರ ನಕಲಿ ರಾಷ್ಟ್ರಭಕ್ತರಿಂದ ನಡೆಯಿತು. ಆದರೆ ಕಮ್ಯುನಿಸ್ಟ್ ಪಕ್ಷ ಚಿಕ್ಕದಾಗಿದ್ದರೂ ಕನ್ಹಯ್ಯ್ ಕುಮಾರ್‌ರನ್ನು ಬಿಟ್ಟು ಕೊಡಲಿಲ್ಲ. ಆದರೆ ಕಾಂಗ್ರೆಸ್‌ನ ವಯೋವೃದ್ಧ ನಾಯಕರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅಪಸ್ವರ ತೆಗೆದರು.
ಪಕ್ಷದ ಇಂದಿನ ಸ್ಥಿತಿಗೆ ರಾಹುಲ್ ಕಾರಣ ಎಂದು ಹೇಳಲು ಇವರಿಗೆ ನಾಚಿಕೆಯಾಗಬೇಕಾಗಿತ್ತು. ಇವರೆಲ್ಲ ದಶಕಗಳ ಕಾಲ ಅಧಿಕಾರದ ಸವಿಯುಂಡವರು. ಕಾಂಗ್ರೆಸ್ ಇಲ್ಲವೇ ಯುಪಿಎ ಸರಕಾರವಿದ್ದಾಗ ಮಂತ್ರಿಗಳಾಗಿದ್ದವರು. ಕಾಂಗ್ರೆಸ್ ಪ್ರತಿಪಕ್ಷವಾದಾಗ ರಾಜ್ಯಸಭೆಯ ಕುರ್ಚಿಗಳನ್ನು ಹಿಡಿದು ಕೂತವರು. ಪಕ್ಷದ ವೈಫಲ್ಯಕ್ಕೆ ನಿನ್ನೆ ಮೊನ್ನೆ ಬಂದ ಯುವಕ ರಾಹುಲ್ ಮೇಲೆ ಗೂಬೆಯನ್ನು ಕೂರಿಸುವ ಬದಲು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು.
ರಾಹುಲ್ ಗಾಂಧಿ ವಿರುದ್ಧ ಬರೆದ ಈ ಪತ್ರದಿಂದ ಯಾರಿಗಾದರೂ ಖುಷಿಯಾಗಿದ್ದರೆ ಅದು ಬಿಜೆಪಿಯ ರಾಜಕಾರಣಿಗಳಿಗೆ ಮಾತ್ರ. ಕಾರಣ ಕಾಂಗ್ರೆಸನ್ನು ಮುಗಿಸಬೇಕೆಂದರೆ ರಾಹುಲ್ ಗಾಂಧಿ ಮತ್ತು ಅವರ ಪರಿವಾರವನ್ನು ರಾಜಕೀಯವಾಗಿ ಮುಗಿಸಬೇಕು ಎಂಬುದು ಅವರ ಮಸಲತ್ತು. ಅದನ್ನು ಕಾಂಗ್ರೆಸ್ ಒಳಗಿನವರೇ ಮಾಡುತ್ತಿರುವುದರಿಂದ ಅವರಿಗೆ ಖುಷಿಯಾಗಿದೆ.
ರಾಹುಲ್ ಗಾಂಧಿಯಲ್ಲಿ ಎಷ್ಟೇ ಲೋಪಗಳಿರಬಹುದು. ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ನೇರವಾಗಿ ಮಾತಾಡುತ್ತ ಬಂದ ಕಾಂಗ್ರೆಸ್ ನಾಯಕರಲ್ಲಿ ರಾಹುಲ್ ಮುಂಚೂಣಿಯಲ್ಲಿದ್ದಾರೆ.ರಾಹುಲ್ ಬಿಟ್ಟರೆ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಮಾತ್ರ ಆಗಾಗ ನೇರವಾಗಿ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಮಾತಾಡುತ್ತಾರೆ. ಈಗ ಪತ್ರ ಬರೆದ ಘಟಾನುಘಟಿ ಗಳಾರೂ ಇಂಥ ರಿಸ್ಕನ್ನೂ ಎಂದೂ ತೆಗೆದುಕೊಂಡಿಲ್ಲ. ಇವರಲ್ಲಿ ಅನೇಕರು ಅಂಬಾನಿ ಮತ್ತು ಅದಾನಿಗಳ ಆಪ್ತ ವಲಯದಲ್ಲಿದ್ದಾರೆಂಬ ಶಂಕೆಗೊಳಗಾದವರು.ಮಂತ್ರಿಗಳಾಗಿದ್ದಾಗ ಅಂಬಾನಿಗಳ ಸೇವೆ ಮಾಡಿ ಧನ್ಯರಾದವರು. ಈಗಲೂ ಮೋದಿ ಸರಕಾರದ ಅಂಬಾನಿ, ಅದಾನಿ, ಕಾರ್ಪೊರೇಟ್ ಪರ ನೀತಿಗಳನ್ನು ಇವರೆಂದೂ ವಿರೋಧಿಸುವುದಿಲ್ಲ. ಆದರೆ ರಾಹುಲ್ ಹಾಗಲ್ಲ. ಯಾವುದೇ ಮುಲಾಜಿಗೆ ಒಳಗಾಗದೆ ಪಕ್ಷದ ಮೂಲ ತತ್ವಗಳ ಪರ ಮಾತಾಡುತ್ತ ಬಂದವರು. ಇಂಥವರನ್ನು ಮೂಲೆ ಗುಂಪು ಮಾಡಿ ದೇಶದಲ್ಲಿ ಪ್ರತಿಪಕ್ಷವೇ ಇಲ್ಲದಂತೆ ಮಾಡುವ ಮಸಲತ್ತು ನಡೆದಿರುವಾಗ ಕಾಂಗ್ರೆಸ್ ಹಿರಿಯರು ಬರೆದ ಪತ್ರದ ಹಿಂದೆ ಏನೋ ಒಳಸಂಚಿದೆ ಎಂಬ ಗುಮಾನಿ ಸಹಜವಾಗಿ ಮೂಡುತ್ತದೆ.
ನೆಹರೂ ಗಾಂಧಿ ಪರಿವಾರದ ಬಗ್ಗೆ ಹಗುರವಾಗಿ ಮಾತಾಡುವ ದರ ಹಿಂದೆ ಒಂದು ಹುನ್ನಾರವಿದೆ. ಆ ಕುಟುಂಬದ ತ್ಯಾಗ ಬಲಿದಾನಗಳ ಬಗ್ಗೆ ಕಡೆಗಣಿಸುವುದು ಸರಿಯಲ್ಲ. ದೇಶಕ್ಕಾಗಿ ಹಿಂದಿನ ಪ್ರಧಾನಿ ಇಂದಿರಾ ಗಾಂಧಿ ಗುಂಡಿಗೆ ಬಲಿಯಾದರು. ಸ್ವರ್ಣ ಮಂದಿರದ ಕಾರ್ಯಾಚರಣೆ ಅವರನ್ನು ಬಲಿ ತೆಗೆದುಕೊಂಡಿತು. ಆ ಸಂದರ್ಭದಲ್ಲಿ ಸಿಖ್ ಅಂಗರಕ್ಷಕರನ್ನು ತೆಗೆದು ಹಾಕುವಂತೆ ಪಕ್ಷದ ಕೆಲವರು ಸಲಹೆ ನೀಡಿದರೂ ಇಂದಿರಾ ಸೊಪ್ಪು ಹಾಕಲಿಲ್ಲ. ಈ ರೀತಿ ಜಾತಿ ಮತದ ಆಧಾರದಲ್ಲಿ ಸಂಶಯಿಸುವುದು ಸರಿಯಲ್ಲ ಎಂದು ಹೇಳಿ ಸೆಕ್ಯುಲರ್ ತತ್ವಕ್ಕೆ ತಮ್ಮ ಬದ್ಧತೆಯನ್ನು ತೋರಿಸಿದ್ದರು. ಆದರೆ ದುರಂತವೆಂದರೆ ಅದೇ ಸಿಖ್ ಅಂಗರಕ್ಷಕನ ಗುಂಡಿಗೆ ಅವರು ಬಲಿಯಾದರು.
  ಅತ್ತೆ ಇಂದಿರಾ ಗಾಂಧಿ ಕಣ್ಣೆದುರೇ ಗುಂಡೇಟಿನಿಂದ ನೆಲಕ್ಕುರುಳಿದ್ದನ್ನು ಕಣ್ಣಾರೆ ಕಂಡಿದ್ದ ಸೋನಿಯಾ ಗಾಂಧಿ ಪತಿ ರಾಜೀವ್ ಗಾಂಧಿಯವರ ರಾಜಕೀಯ ಪ್ರವೇಶವನ್ನು ಬಲವಾಗಿ ವಿರೋಧಿಸಿದರು. ನಮ್ಮ ಪಾಡಿಗೆ ನಾವಿದ್ದು ಬಿಡೋಣ ಎಂದು ಪಟ್ಟು ಹಿಡಿದರು. ಅತ್ತೆಯ ಗತಿ ಪತಿಗೂ ಆದರೆ ಗತಿಯೇನು ಎಂದು ಅವರು ಹೆದರಿದ್ದರು. ಅದರೆ ಕಾಂಗ್ರೆಸ್ ಉಳಿಸಲು ನಾಯಕತ್ವ ವಹಿಸಬೇಕೆಂದು ಒತ್ತಡ ಬಂದುದರಿಂದ ರಾಜೀವ್ ಗಾಂಧಿ ಅನಿವಾರ್ಯವಾಗಿ ಪಕ್ಷದ ಸಾರಥ್ಯ ವಹಿಸಿದರು. ಮುಂದೆ ಶ್ರೀ ಪೆರಂಬದೂರ್‌ನಲ್ಲಿ ಅವರ ಹತ್ಯೆಯೂ ನಡೆಯಿತು.ಆಗಲೂ ಸೋನಿಯಾ ಮಕ್ಕಳೊಂದಿಗೆ ಕೌಟುಂಬಿಕ ಜೀವನಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಲು ಬಯಸಿದ್ದರು. ಆಗಲೂ ಕಾಂಗ್ರೆಸ್ ಉಳಿಸಲು ಒತ್ತಡ ಬಂದುದರಿಂದ 1998 ರಲ್ಲಿ ಹೊಣೆ ಹೊತ್ತರು. ಮುಂದೆ 2004ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ನಾಯಕತ್ವದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿತು. ಆಗ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ನಾಯಕ ಹರ್‌ಕಿಷನ್ ಸಿಂಗ್ ಸುರ್ಜಿತ್ ಮತ್ತು ಜ್ಯೋತಿ ಬಸು ಇದ್ದರೂ ಅವರೊಂದಿಗೆ ಸಮಾಲೋಚಿಸಿ ಯುಪಿಎ ಸರಕಾರ ಅಸ್ತಿತ್ವಕ್ಕೆ ಬರಲು ಸೋನಿಯಾ ಪ್ರಮುಖ ಪಾತ್ರ ವಹಿಸಿದರು. ಆಗ ಪ್ರಧಾನಿಯಾಗುವ ಅವಕಾಶ ಬಂದರೂ ಹೆಸರಾಂತ ಅರ್ಥಶಾಸ್ತ್ರಜ್ಞ ಮನಮೋಹನ್‌ಸಿಂಗರನ್ನು ಪ್ರಧಾನಿಯನ್ನಾಗಿ ಮಾಡಿದರು. ಈಗ ಪತ್ರ ಬರೆದವರೆಲ್ಲ ಆಗ ಅಧಿಕಾರದ ರುಚಿಯನ್ನು ಸವಿದವರು.
ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಾಗ ಈ ಹಿರಿ ತಲೆಗಳು ಅವರಿಗೆ ಸಹಕಾರ ನೀಡಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಂಬ ಮಹತ್ವದ ನ್ಯಾಯ ಯೋಜನೆಯನ್ನು ರಾಹುಲ್ ಗಾಂಧಿ ಮುಂದಿಟ್ಟಾಗ, ಇವರು ಅದರ ಬಗ್ಗೆ ಪ್ರಚಾರ ಮಾಡಿ ಜನರ ಬಳಿ ಕೊಂಡೊಯ್ಯಲಿಲ್ಲ. ಯಾಕೆಂದರೆ ಬಡವರ ಪರವಾದ ಈ ಯೋಜನೆ ಬಗ್ಗೆ ಕಾರ್ಪೊರೇಟ್ ಲಾಬಿಗೆ ಒಲುವಿರಲಿಲ್ಲ. ಹೀಗಾಗಿ ಅದನ್ನು ನಿರ್ಲಕ್ಷಿಸಿದರು.
ಇವರಿಗೆ ಪಕ್ಷಕ್ಕಿಂತ ಸಿದ್ದಾಂತ, ಕಾರ್ಯಕ್ರಮಗಳಿಗಿಂತ ಅಧಿಕಾರ ಮುಖ್ಯ. ಸಾಯುವವರೆಗೆ ಒಂದಿಲ್ಲೊಂದು ಅಧಿಕಾರ ಸ್ಥಾನದಲ್ಲಿ ತಾವಿರಬೇಕು ಎಂಬುದು ಇವರ ದುರಾಸೆ. ಅದಕ್ಕಾಗಿ ಗಾಂಧಿ ನೆಹರೂ ಕುಟುಂಬ ಚರಿಷ್ಮಾ ಬೇಕು. ಈಗ ಬಿಜೆಪಿಯ ನಿರಂತರ ಅಪಪ್ರಚಾರದಿಂದ ಸೋನಿಯಾ, ರಾಹುಲ್ ಪ್ರಭಾವ ಕಡಿಮೆಯಾಗಿದೆ ಎಂದು ಭಾವಿಸಿದ ಇವರು ನಾಯಕತ್ವ ಬದಲಾವಣೆ ಧ್ವನಿ ಎತ್ತಿದ್ದಾರೆ.ರಾಹುಲ್ ಗಾಂಧಿಯನ್ನು ರಾಜಕೀಯವಾಗಿ ಮುಗಿಸುವುದು ಪ್ರಧಾನ ಸೇವಕರ ಅವರ ನಾಗಪುರ ಗುರುಗಳ ಹಾಗೂ ಕಾರ್ಪೊರೇಟ್ ಧಣಿಗಳ ಬಹುದಿನದ ಮಸಲತ್ತು. ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಒಳಗೆ ಈ ಬೆಳವಣಿಗೆ ನಡೆದಿದೆ ಎಂದರೆ ಅತಿಶಯೋಕ್ತಿ ಅಲ್ಲ.
 ಕುಟುಂಬ ರಾಜಕಾರಣ ಎಂಬುದು ಬರೀ ಬೊಗಳೆ. ದೇಶಕ್ಕಾಗಿ ಪಕ್ಷಕ್ಕಾಗಿ ಏನನ್ನೂ ಮಾಡದವರು ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ತಮ್ಮ ಮಕ್ಕಳನ್ನು ತಮ್ಮ ರಾಜಕೀಯ ಅಧಿಕಾರದ ಉತ್ತರಾಧಿಕಾರಿಗಳನ್ನಾಗಿ ಮಾಡಲು ನಾನಾ ಕಸರತ್ತು ಮಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ನಮ್ಮ ರಾಜ್ಯದಲ್ಲೇ ಬಿಜೆಪಿಯಲ್ಲಿ ಎಷ್ಟು ಮಂದಿ ಅಪ್ಪ-ಮಕ್ಕಳು ಏಕಕಾಲಕ್ಕೆ ಅಧಿಕಾರದ ಸವಿಯನ್ನು ಸವಿಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂಥವರೆ ನೆಹರೂ ಗಾಂಧಿ ಕುಟುಂಬದ ಮೇಲೆ ವಂಶಾಡಳಿತದ ಆರೋಪ ಹೊರಿಸುತ್ತಾರೆ.

ಕಾಂಗ್ರೆಸ್ ಈ ಬಿಕ್ಕಟ್ಟಿನಿಂದ ಹೊರಗೆ ಬರಬೇಕೆಂದರೆ ಅಧಿಕಾರದ ಕುರ್ಚಿಯ ಮೇಲೆ ಕುಳಿತು ಸುಸ್ತಾದ ವಯೋವೃದ್ಧ ನಾಯಕರಿಗೆ ವಿಶ್ರಾಂತಿ ನೀಡಿ ಯುವಜನರಿಗೆ ಪಕ್ಷದ ನಾಯಕತ್ವ ವಹಿಸುವುದೊಂದೇ ಉಳಿದ ದಾರಿಯಾಗಿದೆ. ಮೋದಿ, ಸಂಘಪರಿವಾರ, ಕಾರ್ಪೊರೇಟ್ ಲಾಬಿ ಎಷ್ಟೇ ಮಸಲತ್ತು ನಡೆಸಲಿ ಕಾಂಗ್ರೆಸ್‌ಗೆ ಹೊಸ ರಕ್ತ ಅವಶ್ಯಕವಾಗಿದೆ.ಜೊತೆಗೆ ತಮ್ಮ ಅನುಭವದ ಮಾರ್ಗದರ್ಶನ ನೀಡಲು ಖರ್ಗೆ, ಸಿದ್ದರಾಮಯ್ಯ, ಸುಶೀಲ್ ಕುಮಾರ್ ಸಿಂಧೆ, ಅವರಂತಹ ನಾಯಕರಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ತನ್ನ ಆರ್ಥಿಕ, ಸಾಮಾಜಿಕ ಧೋರಣೆಗಳಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಕೊರೋನ ನಂತರದ ಈ ದಿನಗಳಲ್ಲಿ ಸಮಾಜವಾದದ ಸಮನ್ವಯ ನೀತಿ ಮಾತ್ರ ಮನುಕುಲಕ್ಕೆ ಉಳಿವಿನ ದಾರಿಯಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಯೋಚಿಸಿ ಹೊಸ ದಾರಿಯನ್ನು ಕಂಡುಕೊಳ್ಳಲಿ.
  ಇಷ್ಟೆಲ್ಲ ಬರೆದ ನಂತರ ರಾಹುಲ್ ಗಾಂಧಿ ತಪ್ಪು ಮಾಡಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಉದ್ಬವಿಸಬಹುದು.ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಬೇಕಾಗಿದೆ ಎಂಬ ಮಾತು ಕೇಳಿ ಬರಬಹುದು. ನಿಜ ಕಾಂಗ್ರೆಸ್ ನಲ್ಲಿ ಸಾಂಸ್ಥಿಕ ಚುನಾವಣೆಗಳು ನಡೆದು ಪದಾಧಿಕಾರಿಗಳ ಆಯ್ಕೆಯಾಗಬೇಕು. ರಾಹುಲ್ ಲೋಪಗಳ ಪರಾಮರ್ಶೆ ನಡೆಯಬೇಕು. ಕಾಂಗ್ರೆಸ್ ನಡೆ ಪ್ರಶ್ನೆ ಮಾಡುವ ಬಿಜೆಪಿಯಲ್ಲಿ ಎಷ್ಟು ಪ್ರಜಾಪ್ರಭುತ್ವ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ನಿಯಂತ್ರಿಸುತ್ತಿರುವ ಬಿಜೆಪಿಯಲ್ಲಿ ಮೋದಿ, ಅಮಿತ್ ಶಾ ಮಾತೇ ಕೊನೆ. ಅಲ್ಲಿ ಪ್ರಶ್ನೆಗಳಿಗೆ ಅವಕಾಶವಿಲ್ಲ. ಕಾಂಗ್ರೆಸ್‌ಗೆ ಬಿಜೆಪಿ ಮಾದರಿಯಾಗಬೇಕಿಲ್ಲ.
ಕಾಂಗ್ರೆಸ್ ಮುಕ್ತ ಹೆಸರಿನಲ್ಲಿ ದೇಶದಲ್ಲಿ ಫ್ಯಾಶಿಸ್ಟ್ ಸರ್ವಾಧಿಕಾರವನ್ನು ಹೇರಲು ಮಸಲತ್ತು ನಡೆದಿರುವಾಗ ಕಾಂಗ್ರೆಸ್ ತನ್ನೊಳಗಿನ ಲೋಪಗಳನ್ನು ಸರಿಪಡಿಸಿಕೊಂಡು ಪ್ರಬಲ ಪ್ರತಿಪಕ್ಷವಾಗಿ ಹೊರ ಹೊಮ್ಮಬೇಕಾಗಿದೆ.ಎಡಪಂಥೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಸೆಕ್ಯುಲರ್ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರ ಮಾಡಲು ಹೊರಟವರ ಹುನ್ನಾರವನ್ನು ವಿಫಲಗೊಳಿಸಬೇಕು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News