ಪ್ರಶ್ನೆಗಳಿಗೆ ಹೆದರಿದ ಪ್ರಭುತ್ವ

Update: 2020-09-07 08:24 GMT

ನಮ್ಮ ಪ್ರಧಾನ ಸೇವಕರು ಪ್ರಶ್ನೆಗಳನ್ನು ಇಷ್ಟಪಡುವುದಿಲ್ಲ. ಅಂತಲೇ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಆರೂವರೆ ವರ್ಷಗಳಲ್ಲಿ ಅವರು ಎಂದೂ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡಲಿಲ್ಲ. ಪತ್ರಕರ್ತರು ಅವರ ಮಾತು ಕೇಳಿ ಸುದ್ದಿ ಮಾಡಿದರೆ ಸಾಕು ಅದನ್ನು ಬಿಟ್ಟು ಪ್ರಶ್ನೆಗಳನ್ನು ಕೇಳುವ ಉಸಾಬರಿಗೆ ಅವರು ಹೋಗಬಾರದು. ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಲೂ ಅವರದು ಇದೇ ವರಸೆ. ಮೋದಿಯವರು ಕಿವಿಗೊಡುವುದು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಮೌಖಿಕ ಆದೇಶಗಳಿಗೆ ಮಾತ್ರ. ಉಳಿದಂತೆ ಸಂಸತ್ ಕಲಾಪಗಳ ಬಗೆಗೂ ಅವರದು ದಿವ್ಯ ನಿರ್ಲಕ್ಷ.


ಭಾರತದ ಪ್ರಜಾಪ್ರಭುತ್ವದಂತೆ ಸಂಸದೀಯ ವ್ಯವಸ್ಥೆಗೂ ಅತ್ಯಂತ ಭವ್ಯವಾದ ಇತಿಹಾಸವಿದೆ.ಕಳೆದ ಶತಮಾನದ ನಾಲ್ಕನೇ ದಶಕದ ಕೊನೆಯಲ್ಲಿ ಜಗತ್ತಿನ ಕೆಲ ದೇಶಗಳಂತೆ ಭಾರತವೂ ವಸಾಹತುಶಾಹಿ ನೊಗವನ್ನು ಕಿತ್ತು ಬಿಸಾಡಿ ಸ್ವತಂತ್ರ ದೇಶವಾಯಿತು. ಅದರ ಜೊತೆಗೆ ಬ್ರಿಟನ್ ಮಾದರಿಯ ವೆಸ್ಟ್ ಮಿನಿಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡಿತು. ಈ ದೇಶದ ಹಿರಿಮೆಯೆಂದರೆ ವಿಶ್ವದ ಉಳಿದ ಸ್ವಾತಂತ್ರ್ಯ ಪಡೆದ ದೇಶಗಳಲ್ಲಿ ಪ್ರಜಾಪ್ರಭುತ್ವ ವಿಫಲಗೊಂಡು ಸರ್ವಾಧಿಕಾರ ವ್ಯವಸ್ಥೆ ತಲೆ ಎತ್ತಿ ಆ ದೇಶಗಳೇ ಹಾಳಾಗಿ ಹೋಗಿವೆ. ಆದರೆ ಭಾರತದ ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆ ಅಬಾಧಿತವಾಗಿ ಉಳಿದುಕೊಂಡಿದೆ.
ಆದರೆ ಎಪ್ಪತ್ತು ವರ್ಷಗಳಿಂದ ಸುರಕ್ಷಿತವಾಗಿ ಉಳಿದ ಭಾರತದ ಪ್ರಜಾಪ್ರಭುತ್ವ ಈಗ ತೀವ್ರ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ಈ ಬಿಕ್ಕಟ್ಟಿನ ಆಳದಲ್ಲಿ ದೇಶದ ಅಸ್ತಿತ್ವವನ್ನೇ ಬುಡಮೇಲು ಮಾಡುವ ಬಾಂಬುಗಳು ಅಡಗಿವೆ ಎಂದರೆ ಅತಿಶಯೋಕ್ತಿಯಲ್ಲ.
ಸೆಪ್ಟಂಬರ್ 14ರಿಂದ ಆರಂಭವಾಗುವ ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನದಲ್ಲಿ ಈ ಸಲ ಪ್ರಶ್ನೋತ್ತರ ಕಲಾಪ ಇರುವುದಿಲ್ಲ. ಅಲ್ಲದೇ ಯಾವುದೇ ಸಾರ್ವಜನಿಕ ಪ್ರಾಮುಖ್ಯತೆಯನ್ನು ಹೊಂದಿರುವ ವಿಷಯಗಳನ್ನು ಪ್ರಸ್ತಾಪಿಸಲು ಸಂಸದರಿಗೆ ಅತ್ಯಂತ ಕಡಿಮೆ ಅವಧಿಯನ್ನು ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲ ಸದಸ್ಯರು ಮಹತ್ವದ ವಿಷಯಗಳ ಬಗ್ಗೆ ಪ್ರಸ್ತಾಪಿಸುವ ಶೂನ್ಯ ವೇಳೆಯ ಕಲಾಪಗಳೂ ಇರುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಯಾವುದೇ ಖಾಸಗಿ ವಿಧೇಯಕವನ್ನು ಮಂಡಿಸಲೂ ಅವಕಾಶವಿಲ್ಲ.
ನಮ್ಮ ಪ್ರಧಾನ ಸೇವಕರು ಪ್ರಶ್ನೆಗಳನ್ನು ಇಷ್ಟಪಡುವುದಿಲ್ಲ. ಅಂತಲೇ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಆರೂವರೆ ವರ್ಷಗಳಲ್ಲಿ ಅವರು ಎಂದೂ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡಲಿಲ್ಲ. ಪತ್ರಕರ್ತರು ಅವರ ಮಾತು ಕೇಳಿ ಸುದ್ದಿ ಮಾಡಿದರೆ ಸಾಕು ಅದನ್ನು ಬಿಟ್ಟು ಪ್ರಶ್ನೆಗಳನ್ನು ಕೇಳುವ ಉಸಾಬರಿಗೆ ಅವರು ಹೋಗಬಾರದು. ಗುಜರಾತಿನ ಮುಖ್ಯ ಮಂತ್ರಿಯಾಗಿದ್ದಾಗಲೂ ಅವರದು ಇದೇ ವರಸೆ. ಮೋದಿಯವರು ಕಿವಿಗೊಡುವುದು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಮೌಖಿಕ ಆದೇಶಗಳಿಗೆ ಮಾತ್ರ. ಉಳಿದಂತೆ ಸಂಸತ್ ಕಲಾಪಗಳ ಬಗೆಗೂ ಅವರದು ದಿವ್ಯ ನಿರ್ಲಕ್ಷ. ಪ್ರಧಾನಿಯಾಗಿ ದಿಲ್ಲಿಗೆ ಬಂದ ನಂತರವೂ ಅವರು ಸದನದ ಕಲಾಪಗಳಲ್ಲಿ ಪಾಲ್ಗೊಂಡಿರುವುದು ಅತ್ಯಂತ ವಿರಳ. ದಿಲ್ಲಿಯಲ್ಲಿ ಸಂಸತ್ ಭವನದಲ್ಲಿ ಇದ್ದರೂ ಸಂಸತ್ ಅಧಿವೇಶನ ನಡೆದಾಗ ಮೋದಿಯವರು ಸದನಕ್ಕೆ ಬರದೆ ತಮ್ಮ ಚೇಂಬರ್‌ನಲ್ಲಿ ಕುಳಿತು ಕಲಾಪವನ್ನು ವೀಕ್ಷಿಸುತ್ತಿರುತ್ತಾರೆಂದು ಹಿರಿಯ ಸಂಸದೀಯ ಪಟುಗಳಾದ ಮಲ್ಲಿಕಾರ್ಜುನ ಖರ್ಗೆಯವರು ಬಹಿರಂಗವಾಗಿಯೇ ಹೇಳಿದ್ದರು. ಕಮ್ಯುನಿಸ್ಟ್ ನಾಯಕ ಸೀತಾರಾಮ ಯೆಚೂರಿ ರಾಜ್ಯಸಭೆಯ ಸದಸ್ಯರಾಗಿದ್ದಾಗ ಮೋದಿಯವರು ಸದನಕ್ಕೆ ಬರಲು ಹಿಂಜರಿಯುತ್ತಿದ್ದರು ಎಂದು ಕಲಾಪವನ್ನು ಸೂಕ್ಷ್ಮವಾಗಿ ಅವಲೋಕಿಸಿದ ಹಿರಿಯ ಪತ್ರಕರ್ತರೇ ಹೇಳುತ್ತಾರೆ.
 ಅಕಸ್ಮಾತ್ ತಮ್ಮ ಇಷ್ಟಕ್ಕೆ ವಿರುದ್ಧವಾಗಿ ಪ್ರಶ್ನೆ ಮಾಡುವ ಸಾಹಸಕ್ಕೆ ಮುಂದಾದವರನ್ನು ಬಾಯಿ ಮುಚ್ಚಿಸುವ ಅಸ್ತ್ರಗಳನ್ನೂ ಫ್ಯಾಶಿಸ್ಟ್ ಪ್ರಭುತ್ವ ಇಟ್ಟುಕೊಂಡಿರುತ್ತದೆ. ಆರ್ಥಿಕ ಪರಿಸ್ಥಿತಿ ಹಾಳಾಗಿ ಹೋಗಿರಲಿ, ಜಿಡಿಪಿ ಪಾತಾಳಕ್ಕೆ ಕುಸಿದಿರಲಿ, ನಿರುದ್ಯೋಗ ತಾಂಡವವಾಡುತ್ತಿರಲಿ, ಡೀಸೆಲ್, ಪೆಟ್ರೋಲ್ ಬೆಲೆ ಗಗನಕ್ಕೇರಿರಲಿ ಇದಾವುದನ್ನೂ ಪ್ರಶ್ನಿಸಕೂಡದು. ಪ್ರಶ್ನೆ ಮಾಡಿದರೆ ಅಂತಹವರ ಹಣೆಯ ಮೇಲೆ ‘ದೇಶದ್ರೋಹಿ’ ಎಂಬ ಹಣೆಪಟ್ಟಿ ಬೀಳುತ್ತದೆ. ನಗರ ನಕ್ಸಲ್ ಎಂಬ ಇನ್ನೊಂದು ಬಿರುದು ಸಿಗುತ್ತದೆ. ದೇಶದ ಶಾಂತಿ ಮತ್ತು ಭದ್ರತೆಗೆ ಇಂತಹವರಿಂದ ಗಂಡಾಂತರವಿದೆ ಎಂದು ಜೈಲಿಗೆ ತಳ್ಳಲಾಗುತ್ತದೆ. ಜಾಮೀನಿನ ಮೇಲೆ ಬಿಡುಗಡೆ ಮಾಡದೆ, ವಿಚಾರಣೆ ನಡೆಸದೆ ಕೊಳೆ ಹಾಕಲಾಗುತ್ತದೆ. ಹೀಗೆ ಪ್ರಶ್ನೆ ಮಾಡಲು ಯತ್ನಿಸಿದ ಪರಿಣಾಮವಾಗಿ ಕವಿ ವರವರರಾವ್, ಚಿಂತಕ ಆನಂದ್ ತೇಲ್ತುಂಬ್ಡೆ, ನ್ಯಾಯವಾದಿ ಸುಧಾ ಭಾರದ್ವಾಜ್ ಸೇರಿದಂತೆ 22 ಜನ ಪ್ರಜ್ಞಾವಂತರು ಈ ಕೋವಿಡ್ ಕಾಲದಲ್ಲೂ ಕೈದಿಗಳಿಂದ ತುಂಬಿ ತುಳುಕುತ್ತಿರುವ ಸೆರೆಮನೆಗಳಲ್ಲಿ ಚಿತ್ರ ಹಿಂಸೆಯನ್ನು ಅನುಭವಿಸುತ್ತಿದ್ದಾರೆ.
ಆದರೆ ಸದ್ಯಕ್ಕೆ ಚುನಾಯಿತ ಪ್ರತಿನಿಧಿಗಳನ್ನು ಹಾಗೆ ಮಾಡಲು ಬರುವುದಿಲ್ಲ. ಹಾಗೆ ಮಾಡಿದರೆ ಜಗತ್ತಿನ ಉಳಿದ ದೇಶಗಳಲ್ಲಿ ಭಾರತದ ಹೆಸರು ಹಾಳಾಗುತ್ತದೆ. ಅದಕ್ಕಾಗಿ ಈ ಪ್ರಭುತ್ವ ಪ್ರಶ್ನೆ ಮಾಡುವ ಅವರ ಅಧಿಕಾರವನ್ನೇ ಕಿತ್ತುಕೊಂಡಿದೆ. ಈಗ ಏನಿದ್ದರೂ ಸದಸ್ಯರು ಸಂಸತ್ ಭವನಕ್ಕೆ ಹೋಗಿ ಕಲಾಪದಲ್ಲಿ ಹಾಜರಾಗಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ, ಸರಕಾರ ಮಂಡಿಸುವ ಜನ ವಿರೋಧಿ ಮಸೂದೆಗಳಿಗೆ ಅಂಗೀಕಾರ ನೀಡಿ ನಂತರ ಸೆಂಟ್ರಲ್ ಹಾಲ್‌ನಲ್ಲಿ ಇರುವ ರಿಯಾಯಿತಿ ದರದ ಕ್ಯಾಂಟೀನ್‌ನಲ್ಲಿ ಚಿಕನ್, ಮಟನ್, ವೆಜ್ ಬಿರಿಯಾನಿ ತಿಂದು ವಾಪಸ್ ಊರ ದಾರಿ ಹಿಡಿಯುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ಇದನ್ನು ಮೀರಿ ಸಂಸತ್ ಕಲಾಪವನ್ನು ಬಹಿಷ್ಕರಿಸಬಹುದು, ಆದರೆ ಇದರಿಂದ ಸರಕಾರಕ್ಕೆ ಇನ್ನಷ್ಟು ಖುಷಿಯಾಗುತ್ತದೆ. ವಿರೋಧ ಪಕ್ಷಗಳೆಲ್ಲ ಸೇರಿದರೂ ನೂರು ಸದಸ್ಯರಿಲ್ಲ. ಇವರು ಬಾಯ್ಕೆಟ್ ಮಾಡಿದರೂ ಏನೂ ಆಗುವುದಿಲ್ಲ. ಇದು ಭಾರತದ ಸಂಸತ್ತಿನ ಇಂದಿನ ಸ್ಥಿತಿ.
ಸಾಮಾನ್ಯವಾಗಿ ಸರ್ವಾಧಿಕಾರಿಗಳು ಪ್ರಶ್ನೆಗಳನ್ನು ಇಷ್ಟ ಪಡುವುದಿಲ್ಲ. ಜರ್ಮನಿಯ ನಾಜಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ಗೆ ಪ್ರಶ್ನೆಗಳೆಂದರೆ ಅಲರ್ಜಿ. ಇಟಲಿಯ ಬೆನಿಟೊ ಮುಸಲೋನಿಗೂ ಪ್ರಶ್ನೆಗಳೆಂದರೆ ಅಪಥ್ಯ. ಜನರು ತಾವು ಹೇಳಿದಂತೆ ಕೇಳಿಕೊಂಡು ಕಣ್ಣು, ಕಿವಿ, ಬಾಯಿಗಳನ್ನು ಬಂದ್ ಮಾಡಿಕೊಂಡು ಬಿದ್ದಿರಬೇಕೆಂಬುದು ಸರ್ವಾಧಿಕಾರಿಗಳ ಹೆಬ್ಬಯಕೆ.
ಆದರೆ ವಾಸ್ತವವಾಗಿ ಸಂಸತ್ತಿನ ಉಭಯ ಸದನಗಳ ಹಾಗೂ ಶಾಸನ ಸಭೆಗಳ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಗೆ ಅಷ್ಟು ಪ್ರಾಮುಖ್ಯತೆ ಇಲ್ಲ. ನಾನೂ ಕರ್ನಾಟಕ ವಿಧಾನ ಮಂಡಲದ ಅಧಿವೇಶನದ ಕಾರ್ಯಕಲಾಪಗಳ ವರದಿಯನ್ನು ಮಾಡಿದ್ದೇನೆ. ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರ ಎಲ್ಲ ಪ್ರಶ್ನೆಗಳಿಗೆ ಅವಕಾಶ ಸಿಗುವುದಿಲ್ಲ. ಸಿಕ್ಕರೂ ಚರ್ಚೆಗೆ ಸಮಯವೇ ಇರುವುದಿಲ್ಲ. ಬಹುತೇಕ ಪ್ರಶ್ನೆಗಳಿಗೆ ಸಿದ್ಧಪಡಿಸಲಾದ ಲಿಖಿತ ಉತ್ತರ ಸದನದ ಮುಂದಿಡಲಾಗುತ್ತದೆ. ಶೂನ್ಯ ವೇಳೆಯ ಕಲಾಪಗಳೂ ಕೂಡ ಸಮಯಾವಕಾಶದಂತೆ ನಡೆಯುತ್ತವೆ. ಈಗ ಸಂಸತ್ತಿನಲ್ಲಿ ಪ್ರಶ್ನೋತ್ತರ ಕಲಾಪ ರದ್ದು ಮಾಡಿದ್ದನ್ನು ಮುಖ್ಯ ವಿಷಯವಾಗಿಸುವುದಕ್ಕಿಂತ ಸದನದಲ್ಲಿ ಚರ್ಚೆಯಾಗದೆ ಸರಕಾರ ಸುಗ್ರೀವಾಜ್ಞೆ ಮೂಲಕ ಕೆಲ ಮಹತ್ವದ, ಆದರೆ ಜನ ಮಾರಕವಾದ ಕಾನೂನುಗಳನ್ನು ಜಾರಿಗೆ ತಂದಿದೆಯಲ್ಲ ಅದರ ಬಗ್ಗೆ ಪ್ರತಿಪಕ್ಷಗಳು ಒಕ್ಕೊರಲಿನಿಂದ ಸದನದಲ್ಲಿ ಧ್ವನಿಯೆತ್ತಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಾಗಿದೆ.
 ಆದರೂ ಸಂಸತ್ತು ಮತ್ತು ರಾಜ್ಯಗಳ ಶಾಸನ ಸಭೆಗಳ ಕಲಾಪಗಳಲ್ಲಿ ಪ್ರಶ್ನೋತ್ತರ ಸಮಯಕ್ಕೆ ಅದರದೇ ಆದ ಮಹತ್ವವಿದೆ. ಹಲವಾರು ಹಗರಣಗಳು ಬಯಲಿಗೆ ಬಂದಿದ್ದು ಪ್ರಶ್ನೋತ್ತರ ಅವಧಿಯಲ್ಲಿ ಕೇಳಲಾದ ಪ್ರಶ್ನೆಗಳಿಂದ ಎಂಬುದನ್ನು ಮರೆಯಬಾರದು. ಹಲವಾರು ಜನೋಪಯೋಗಿ ಕೆಲಸಗಳಾಗಿದ್ದೂ ಇದೇ ಪ್ರಶ್ನೋತ್ತರ ಅವಧಿಯಲ್ಲೇ ಎಂಬುದು ಸತ್ಯ. ವಾಸ್ತವವಾಗಿ 1952ರಿಂದ ಇದೇ ಮೊದಲ ಬಾರಿಗೆ ಸಂಸದರು ಪ್ರಶ್ನೆಗಳನ್ನು ಕೇಳುವ ತಮ್ಮ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಆದರೆ ಸದಸ್ಯರ ಒತ್ತಡಕ್ಕೆ ಮಣಿದು ಈಗ ಕೊನೆಯ ಗಳಿಗೆಯಲ್ಲಿ ಸರಕಾರ ಪ್ರಶ್ನೋತ್ತರ ಅವಧಿಯನ್ನು ರದ್ದು ಮಾಡದೆ ಅರ್ಧ ತಾಸು ಅವಕಾಶ ನೀಡಲು ತೀರ್ಮಾನಿಸಿದೆ.
ಭಾರತದ ಸಂಸತ್ತಿನಲ್ಲಿ ಒಂದು ಕಾಲದಲ್ಲಿ ಮಹಾ ವಿದ್ವಾಂಸರು, ವಾಕ್ಪಟುಗಳು, ಕಾನೂನು ಪರಿಣತರು, ಜನರ ನಡುವಿನಿಂದ ಬಂದ ಹೋರಾಟಗಾರರು ಇದ್ದರು. ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಕಾಲದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯ ಚರ್ಚೆಗಳು ತುಂಬಾ ಘನತೆಯಿಂದ ಕೂಡಿದ್ದವು. ನೆಹರೂ ಅವರಿಗೆ ಸರಿಸಾಟಿಯಾದ ಡಾ. ರಾಮಮನೋಹರ ಲೋಹಿಯಾ, ಡಾ. ಅಂಬೇಡ್ಕರ್, ಕಮ್ಯುನಿಸ್ಟ್ ನಾಯಕರಾದ ಎಸ್.ಎ.ಡಾಂಗೆ, ಎ.ಕೆ.ಗೋಪಾಲನ್, ಭೂಪೇಶ ಗುಪ್ತಾ, ಪ್ರೊ.ಹಿರೇನ್ ಮುಖರ್ಜಿ, ಸೋಷಲಿಸ್ಟ್ ನಾಯಕರಾದ ನಾಥ ಪೈ, ಮಧು ದಂಡವತೆ, ಮಧು ಲಿಮಯೆ, ಎಸ್.ಎಂ.ಜೋಶಿ, ಎನ್‌ಜಿ.ಗೋರೆ ಅಂತಹವರಿದ್ದರು.
ಈಗ ಸಂಸತ್ತಿನಲ್ಲಿ ಹಿಂದಿನಂತೆ ತುಂಬಾ ಓದಿಕೊಂಡ ಮೇಧಾವಿಗಳಿಲ್ಲ. ಜನ ಹೋರಾಟದ ನಡುವಿನಿಂದ ಬಂದ ಹೋರಾಟಗಾರರೂ ಇಲ್ಲ. ಭಾರೀ ಬಂಡವಾಳಿಗರು, ಉದ್ಯಮಪತಿಗಳು, ರಿಯಲ್ ಎಸ್ಟೇಟ್ ದಂಧೆಕೋರರು, ಗಣಿ ಲೂಟಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಬಿಜೆಪಿಯಲ್ಲೂ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರಂತಹ ವಾಕ್ಪಟುಗಳಿದ್ದರು. ಈಗ ಆ ಪಕ್ಷದಿಂದಲೂ ಎಂಥವರು ಚುನಾಯಿತರಾಗಿ ಬಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ.
ಈಗ ಈ ಸರಕಾರಕ್ಕೆ ಕೇಳಲು ಸಾಕಷ್ಟು ಪ್ರಶ್ನೆಗಳಿವೆ. ಹಿಂದೆಂದೂ ಕಂಡರಿಯದ ಜಿಡಿಪಿ ಕುಸಿತ, ಜಿಎಸ್‌ಟಿಯಲ್ಲಿ ರಾಜ್ಯಗಳಿಗೆ ಪಂಗನಾಮ ಬಳಿದ ಸರಕಾರ, ಹೆಚ್ಚುತ್ತಿರುವ ನಿರುದ್ಯೋಗ, ದಿವಾಳಿಯ ಅಂಚಿಗೆ ಬಂದು ನಿಂತಿರುವ ಬ್ಯಾಂಕುಗಳು, ಮಾನ್ಯ ಪ್ರಧಾನ ಸೇವಕರು ತಮ್ಮ ಸ್ವಂತದ ಸೊತ್ತೆಂಬಂತೆ ಸಾರ್ವಜನಿಕ ಸೊತ್ತನ್ನು ತಮ್ಮ ಮಿತ್ರರಾದ ಅಂಬಾನಿ, ಅದಾನಿಗಳಿಗೆ ತಟ್ಟೆಯಲ್ಲಿ ಇಟ್ಟು ಕೊಡುತ್ತಿರುವುದು, ಸರಕಾರದಿಂದ ದಾನವಾಗಿ ಪಡೆದ ಒಂದು ವಿಮಾನ ನಿಲ್ದಾಣ ಮತ್ತು ಗುಜರಾತಿನ ಒಂದು ಬಂದರನ್ನು (ಹಡಗುಕಟ್ಟೆ) ಅದಾನಿ ವಿದೇಶಿ ಕಂಪೆನಿಗಳಿಗೆ ಲೀಸ್‌ಗೆ ಕೊಟ್ಟಿದ್ದು, ವಯೋವೃದ್ಧರಿಗೆ, ವಿಕಲಾಂಗರಿಗೆ ಪಾವತಿಯಾಗದ ಪಿಂಚಣಿ, ಕೊರೋನದಿಂದ ನಿತ್ಯವೂ ಸಾಯುತ್ತಿರುವ ಜನ, ಸ್ಥಗಿತಗೊಂಡ ಉತ್ಪಾದನಾ ವಲಯ, ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ನೀಡಿದ ಎಚ್ಚರಿಕೆ, ಇವುಗಳ ಬಗ್ಗೆ ಜನರಿಗೆ ಸ್ಪಷ್ಟನೆ ಮತ್ತು ಸಮಾಧಾನ ಹೇಳಬೇಕಾದ ಪ್ರಧಾನಿ ಮುಧೋಳ ತಳಿಯ ನಾಯಿಯನ್ನು ಸಾಕಲು ಹೇಳುವ ಹಾಸ್ಯಾಸ್ಪದ ಸಂಗತಿ, ಕೃಷಿ ರಂಗದ ಮೇಲೆ ಬೀಳುತ್ತಿರುವ ಒತ್ತಡ, ಇವೆಲ್ಲವುಗಳ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನಿಸಬೇಕಾದ ಮತ್ತು ಚರ್ಚಿಸಿ ಪರಿಹಾರ ಹುಡುಕಬೇಕಾದ ಸಂದರ್ಭದಲ್ಲಿ ಅದಕ್ಕೆ ಅವಕಾಶ ನೀಡದ ಸರ್ವಾಧಿಕಾರಿ ಮನೋಭಾವ ತೀವ್ರ ಆತಂಕವನ್ನುಂಟು ಮಾಡುತ್ತದೆ.
ಪ್ರಜಾಪ್ರಭುತ್ವದಲ್ಲಿ ಸಂಸತ್ತು ಮತ್ತು ಶಾಸನ ಸಭೆಗಳು ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡು ಹಿಡಿಯಬೇಕಾದ ವೇದಿಕೆಗಳು. ಇಂತಹ ವೇದಿಕೆಯಲ್ಲಿ ಚರ್ಚೆ ಮತ್ತು ಪ್ರಶ್ನೆಗಳಿಗೆ ಅವಕಾಶವಿಲ್ಲವೆಂದಾದರೆ ಸಂಸತ್ತಿನ ಹೊರಗೆ ಬೀದಿಯಲ್ಲಿ, ಪ್ರಭುತ್ವವನ್ನು ಪ್ರಶ್ನಿಸುವ, ಪ್ರತಿಭಟಿಸುವ ಹೊಸ ದಾರಿಯನ್ನು ಜನರು ಅನಿವಾರ್ಯವಾಗಿ ಕಂಡುಕೊಳ್ಳುತ್ತಾರೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News