ಸ್ವಾಮಿ ಅಗ್ನಿವೇಶ್ ಮತ್ತು ಆರ್ಯ ಸಮಾಜ

Update: 2020-09-15 05:43 GMT

ಸ್ವಾಮಿ ಅಗ್ನಿವೇಶ್ ಈಗ ನಮ್ಮ ನಡುವೆ ಇಲ್ಲ. ಮನುಷ್ಯ ಪ್ರೀತಿಗಾಗಿ ಹಂಬಲಿಸಿದ ಇಂತಹವರು ಒಬ್ಬೊಬ್ಬರಾಗಿ ಹೋಗುತ್ತಿದ್ದಾರೆ. ಇವರು ಹೋದರೆಂದು ಇವರು ಹಚ್ಚಿದ ಬೆಳಕಿನ ದೀಪ ನಂದಿ ಹೋಗಬಾರದು.ಅದು ಮನುಷ್ಯನ ಅಂತರಂಗ ಮತ್ತು ಬಹಿರಂಗದ ಕತ್ತಲನ್ನು ತೊಲಗಿಸಲು ಸದಾ ಬೆಳಗುತ್ತಿರಬೇಕು. ಹೊಸ ಪೀಳಿಗೆ ಬೆಳಕಿನ ದೀವಟಿಗೆಯನ್ನು ಹಿಡಿದೆತ್ತಿ ನಿಲ್ಲಬೇಕು.


ಕಳೆದ ಶುಕ್ರವಾರ ದಿಲ್ಲಿಯಲ್ಲಿ ಕೊನೆಯುಸಿರೆಳೆದ ಸ್ವಾಮಿ ಅಗ್ನಿವೇಶ್ ಅವರ ಹೆಸರನ್ನು ನಾನು ಮೊದಲು ಕೇಳಿದ್ದು ಎಪ್ಪತ್ತರ ದಶಕದಲ್ಲಿ. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಅವರು 14 ತಿಂಗಳು ಸೆರೆವಾಸವನ್ನು ಅನುಭವಿಸಿದ್ದರು. ತುರ್ತು ಪರಿಸ್ಥಿತಿ ಕೊನೆಗೊಂಡ ನಂತರ ಹರ್ಯಾಣ ವಿಧಾನ ಸಭೆಗೆ ಚುನಾಯಿತರಾಗಿ ಬಂದರು. ಎರಡು ವರ್ಷಗಳ ನಂತರ ಆಗಿನ ಭಜನಲಾಲ್ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು. ಇದಿಷ್ಟು ಬಿಟ್ಟರೆ ಅವರ ಬಗ್ಗೆ ಹೆಚ್ಚಿಗೆ ಗೊತ್ತಿರಲಿಲ್ಲ. ಆದರೆ ಅವರು ಎಂಬತ್ತರ ದಶಕದಲ್ಲಿ ಜೀತ ಪದ್ಧತಿ ನಿರ್ಮೂಲನೆಗೆ ಹೋರಾಟ ಕೈಗೊಂಡಾಗ ರಾಷ್ಟ್ರವ್ಯಾಪಿ ಹೆಸರು ಮಾಡಿದರು.

ಆಂಧ್ರಪ್ರದೇಶದ ಶ್ರೀ ಕಾಕುಲಂನಲ್ಲಿ 1939ರ ಸೆಪ್ಟೆಂಬರ್ 21ರಂದು ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದ ಸ್ವಾಮಿ ಅಗ್ನಿವೇಶ್ ಕೋಲ್ಕತಾ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಪಡೆದ ನಂತರ ಸೈಂಟ್ ಝೇವಿಯರ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನಂತರ 1968ರಲ್ಲಿ ಆರ್ಯ ಸಮಾಜದ ಸಿದ್ಧಾಂತಕ್ಕೆ ಮನಸೋತು ಸನ್ಯಾಸ ಸ್ವೀಕರಿಸಿ ಸಂಸ್ಥೆಯ ಪೂರ್ಣಾವಧಿ ಕಾರ್ಯಕರ್ತರಾದರು. ಅವರ ಪೂರ್ವಾಶ್ರಮದ ಹೆಸರು ವೇಪ ಶಾಮರಾವ್. 2004ರಿಂದ 2014ರವರೆಗೆ ಅವರು ಆರ್ಯ ಸಮಾಜದ ಜಾಗತಿಕ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2004ರಲ್ಲಿ ಪರ್ಯಾಯ ನೊಬೆಲ್ ಪ್ರಶಸ್ತಿ ಎಂದು ಕರೆಯಲ್ಪಡುವ ‘ರೈಟ್ ಲೈವ್ಲಿಹುಡ್’ ಪ್ರಶಸ್ತಿಗೂ ಪಾತ್ರರಾದರು.

ಇಂತಹ ಸ್ವಾಮಿ ಅಗ್ನಿವೇಶ್‌ರನ್ನು ನಾನು ಮೊದಲು ನೋಡಿದ್ದು ಚಿಕ್ಕಮಗಳೂರಿನಲ್ಲಿ ಅದು ಬಹುಶಃ 2001, ಡಿಸೆಂಬರ್ ತಿಂಗಳು. ಸಂಘಪರಿವಾರ ಬಾಬಾ ಬುಡಾನ್‌ಗಿರಿಯನ್ನು ದಕ್ಷಿಣ ಭಾರತದ ಅಯೋಧ್ಯೆಯನ್ನಾಗಿ ಮಾಡಿ ಕರ್ನಾಟಕದಲ್ಲಿ ಓಟಿನ ಬೆಳೆ ತೆಗೆಯಲು ಹೊರಟಿತ್ತು. ದತ್ತ ಜಯಂತಿ ಹೆಸರಿನಲ್ಲಿ ಮಲೆನಾಡಿನಲ್ಲಿ ಕೋಲಾಹಲದ ವಾತಾವರಣವನ್ನು ನಿರ್ಮಿಸಿತ್ತು. ಕೋಮುವಾದಿ ಶಕ್ತಿಗಳ ಈ ಹುನ್ನಾರದ ವಿರುದ್ಧ ಎಲ್ಲ ಪ್ರಗತಿಪರ, ಮತ ನಿರಪೇಕ್ಷ ಶಕ್ತಿಗಳು ಒಂದಾಗಿ ಸೌಹಾರ್ದ ಸಮಾವೇಶವನ್ನು ಏರ್ಪಡಿಸಿದ್ದವು. ಅದರಲ್ಲಿ ಪಾಲ್ಗೊಳ್ಳಲು ಚಿಕ್ಕಮಗಳೂರಿಗೆ ಹೋದಾಗ ಕಾವಿಧಾರಿ ಅಗ್ನಿವೇಶ್‌ರನ್ನು ಮೊದಲ ಬಾರಿ ಕಂಡೆ. ಆಂಧ್ರ ಪ್ರದೇಶದ ಕ್ರಾಂತಿಕಾರಿ ಗಾಯಕ ಗದ್ದರ್ ಕೂಡ ಸಮಾವೇಶಕ್ಕೆ ಬಂದಿದ್ದರು. ಗದ್ದರ್ ಜೊತೆ ತೆಲುಗು ಭಾಷೆಯಲ್ಲಿ ಮಾತಾಡುತ್ತಿದ್ದ ಅಗ್ನಿವೇಶ್ ಅಂದು ನಡೆದ ಹತ್ತು ಕಿ.ಮೀ. ಉದ್ದದ ಮೆರವಣಿಗೆಯಲ್ಲಿ ಉತ್ಸಾಹದಿಂದ ಮುಂಚೂಣಿಯಲ್ಲಿ ಪಾಲ್ಗೊಂಡಿದ್ದರು.ತಮ್ಮ ಕಂಚಿನ ಕಂಠದಿಂದ ಹಿಂದಿಯಲ್ಲಿ ಅಸ್ಖಲಿತವಾಗಿ ಮಾತಾಡಿದ್ದರು.

ಆನಂತರ ಅನೇಕ ಬಾರಿ ಸ್ವಾಮಿ ಅಗ್ನಿವೇಶ್ ಅವರನ್ನು ನೋಡಿದ್ದೇನೆ, ಮಾತಾಡಿದ್ದೇನೆ. ಗೌರಿ ಲಂಕೇಶ್ ಹತ್ಯೆಯಾದಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತಾಡಲು ಬೆಂಗಳೂರಿಗೆ ಬಂದಿದ್ದರು. ನಂತರ ಕಳೆದ ವರ್ಷ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಕಲಬುರಗಿಯಲ್ಲಿ ನಡೆದ ಸಮಾವೇಶಕ್ಕೂ ಬಂದಿದ್ದರು.

ಇಂತಹ ಸ್ವಾಮಿ ಅಗ್ನಿವೇಶ್ ಅವರ ಮೇಲೆ 2018ರಲ್ಲಿ ಜಾರ್ಖಂಡ್‌ನಲ್ಲಿ ಕೋಮುವಾದಿಗಳಿಂದ ಮಾರಣಾಂತಿಕ ಹಲ್ಲೆ ನಡೆಯಿತು. ಆದಿವಾಸಿಗಳನ್ನು ಅವರು ಶತಮಾನಗಳಿಂದ ನೆಲೆಸಿದ ಪ್ರದೇಶದಿಂದ ಎತ್ತಂಗಡಿ ಮಾಡಲು ಅಲ್ಲಿನ ಸರಕಾರ ಮುಂದಾದಾಗ ಅದರ ವಿರುದ್ಧ ಪ್ರತಿಭಟನೆಗೆ ಸ್ವಾಮಿ ಅಗ್ನಿವೇಶ್ ಅಲ್ಲಿ ಹೋದಾಗ ಈ ಹಲ್ಲೆ ನಡೆಯಿತು. ಅಲ್ಲಿಯವರೆಗೆ ಸಂಘಪರಿವಾರದ ಬಗ್ಗೆ ನನಗೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಧರ್ಮ ಗುರುಗಳನ್ನು, ಕಾವಿವಸ್ತ್ರ ಧರಿಸಿದವರನ್ನು ಅವರು ಗೌರವಿಸುತ್ತಾರೆಂಬ ಭಾವನೆ ಇತ್ತು. ಆದರೆ ಕೋಮುವಾದಿ ಶಕ್ತಿಗಳಿಗೆ ಧರ್ಮವಾಗಲಿ, ಕೇಸರಿ ಬಟ್ಟೆಯಾಗಲಿ ಮುಖ್ಯವಲ್ಲ ಅವರಿಗೆ ಅವರ ಹಣಕಾಸಿನ ಹಿತಾಸಕ್ತಿ ಮತ್ತು ಜಾತಿ ಮುಖ್ಯ. ಅದಕ್ಕೆ ಧಕ್ಕೆ ಬಂದರೆ ಯಾರನ್ನಾದರೂ ಅವರು ಥಳಿಸುತ್ತಾರೆ ಇಲ್ಲವೇ ಕೊಲ್ಲಲು ಹಿಂಜರಿಯುವುದಿಲ್ಲ ಎಂದು ಖಾತ್ರಿಯಾಯಿತು.

ಸಮಾಜದ ಬಡವರಿಗಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಎರಡನೇ ಬಾರಿ ಹಲ್ಲೆ ನಡೆದದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನ ಹೊಂದಿದಾಗ. ಅಟಲ್‌ಜಿ ಸ್ವಾಮಿ ಅಗ್ನಿವೇಶ್‌ರ ಆತ್ಮೀಯ ಸ್ನೇಹಿತರಾಗಿದ್ದರು. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಆಗಾಗ ಭೇಟಿಯಾಗಿ ಮಾತಾಡುತ್ತಿದ್ದರು. ಇಂತಹ ತಮ್ಮ ಆತ್ಮೀಯ ಮಿತ್ರನ ಅಗಲಿಕೆಯ ಸುದ್ದಿ ಕೇಳಿ ಅಂತಿಮ ದರ್ಶನ ಪಡೆಯಲು ಬಂದ ಸ್ವಾಮಿ ಅಗ್ನಿವೇಶ್‌ರ ಮೇಲೆ ಅದೇ ಕೋಮುವಾದಿ, ಫ್ಯಾಶಿಸ್ಟ್ ಸಂಘಟನೆಯ ಗೂಂಡಾಗಳು ನಡು ಬೀದಿಯಲ್ಲಿ ಹಲ್ಲೆ ಮಾಡಿದರು, ಓಡಾಡಿಸಿ ಹೊಡೆದರು. ಸಂಘ ಪರಿವಾರ ಇಂತಹ ಹಲ್ಲೆಯ ಸಂದರ್ಭದಲ್ಲಿ ಅದನ್ನು ಖಂಡಿಸುವುದಿಲ್ಲ. ಅದಕ್ಕೂ ತಮಗೂ ಸಂಬಂಧವಿಲ್ಲ ಎಂಬ ಮೊಸಳೆ ಕಣ್ಣೀರಿನ ಹೇಳಿಕೆ ನೀಡುತ್ತದೆ. ಇಲ್ಲಿ ಆಗಿದ್ದೂ ಅದೇ. ಸ್ವಾಮಿ ಅಗ್ನಿವೇಶ್ ಮೇಲೆ ಜಾರ್ಖಂಡ್ ಮತ್ತು ದಿಲ್ಲಿಯಲ್ಲಿ ಎರಡು ಸಲ ದೈಹಿಕ ಹಲ್ಲೆ ನಡೆದರೂ ಪ್ರಧಾನಿ ನರೇಂದ್ರ ಮೋದಿಯವರಾಗಲಿ ಇಲ್ಲವೇ ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್‌ರಾಗಲಿ ಖಂಡಿಸಲಿಲ್ಲ. ಈ ಹಲ್ಲೆಗಳು ನಡೆದು ಎರಡು ವರ್ಷಗಳಾದರೂ ಆರೋಪಿಗಳನ್ನು ಬಂಧಿಸಲಿಲ್ಲ.ಮೋದಿ ಪ್ರಧಾನಿಯಾದ ನಂತರ ಇಂತಹ ಘಟನೆಗಳು ಸಾಮಾನ್ಯವಾಗಿವೆ.

ಅದೆಲ್ಲ ಒತ್ತಟ್ಟಿಗಿರಲಿ ಆದರೆ ಸ್ವಾಮಿ ಅಗ್ನಿವೇಶ್ ಅವರು ತಮ್ಮನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿದ್ದ ಆರ್ಯ ಸಮಾಜವೆಂದರೆ ಏನು, ಇವರೇಕೆ ಅದರಲ್ಲಿ ಸೇರಿದರು ಎಂಬ ಕುತೂಹಲದಿಂದ ಅದರ ಮೂಲವನ್ನು ಹುಡುಕುತ್ತಾ ಹೊರಟಾಗ ಅನೇಕ ಅಪರೂಪದ ಸಂಗತಿಗಳು ಗೊತ್ತಾದವು.

ಸಾಮಾಜಿಕ ಕ್ರಾಂತಿಯನ್ನು ಬಯಸಿದ ದಯಾನಂದ ಸರಸ್ವತಿ ಜನಸಾಮಾನ್ಯರನ್ನು ಆಕರ್ಷಿಸತೊಡಗಿದರು. ಅವರನ್ನು ಹಿಂದೂ ಪುರೋಹಿತಶಾಹಿ ವರ್ಗ ಸಹಿಸಲಿಲ್ಲ. ಸಂಪ್ರದಾಯ ವಾದಿಗಳು ಅವರನ್ನು ನಾಸ್ತಿಕ ಧರ್ಮ ದ್ರೋಹಿ ಎಂದು ಹಿಯಾಳಿಸತೊಡಗಿದರು. ‘‘ಹಿಂದೂ ವೇಷ ಹಾಕಿದ ಕ್ರಿಶ್ಚಿಯನ್’’ ಎಂದು ದೂಷಿಸಿದರು. ಅವರನ್ನು ವಿಷ ಪ್ರಾಶನ ಮಾಡಿ ಕೊಲ್ಲುವ ಯತ್ನಗಳು ನಡೆದವು. ಸ್ವಾಮಿ ಅಗ್ನಿವೇಶ್‌ರ ಮೇಲೆ ನಡೆದಂತೆ ಆಗ ದಯಾನಂದರ ಮೇಲೂ ದೈಹಿಕ ದಾಳಿಗಳು ನಡೆದವು. ಆದರೂ ಹೆದರದ ದಯಾನಂದ ಸರಸ್ವತಿ ಅವರು ಸ್ತ್ರೀಯರಿಗೆ ಶಿಕ್ಷಣ ನೀಡಬೇಕೆಂಬ ವಾದ ಮುಂದಿಟ್ಟರು. ಇದು ಕಂದಾಚಾರಿಗಳಿಗೆ ಹಿಡಿಸಲಿಲ್ಲ.

145 ವರ್ಷಗಳ ಹಿಂದೆ 1875ರ ಎಪ್ರಿಲ್ 10 ರಂದು ದಯಾನಂದ ಸರಸ್ವತಿ ಅವರಿಂದ ಸ್ಥಾಪನೆಯಾದ ಆರ್ಯ ಸಮಾಜ ಭಾರತದ ಧಾರ್ಮಿಕ ಪರಂಪರೆಯಲ್ಲಿ ಒಂದು ಅಪರೂಪದ ವಿದ್ಯಮಾನ. ಧರ್ಮದ ಚೌಕಟ್ಟಿನ ಒಳಗಿದ್ದುಕೊಂಡೇ ಅದರ ಹುಳುಕುಗಳನ್ನು ಹೊರ ತೆಗೆದು ಸರಿಪಡಿಸುವುದು ಅದರ ಉದ್ದೇಶ. ದಲಿತರು, ಮಹಿಳೆಯರು ಸೇರಿದಂತೆ ಎಲ್ಲ ಜಾತಿ, ವರ್ಗದ ಜನರಿಗೆ ದ್ವಾರ ಮುಕ್ತಗೊಳಿಸಿದ ಆರ್ಯ ಸಮಾಜ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಆರಂಭಿಕ ವರ್ಷಗಳಲ್ಲಿ ಸಾಕಷ್ಟು ತೊಂದರೆ ಅನುಭವಿಸಿತು. ಹಿಂದೂ ಸಮಾಜದಲ್ಲಿ ಬಹಿಷ್ಕೃತರಾಗಿ ಬದುಕುತ್ತಿದ್ದ ಅಸ್ಪಶ್ಯ ದಲಿತ ಸಮುದಾಯದ ಜನರಿಗೆ ಆರ್ಯ ಸಮಾಜದ ದಯಾನಂದರು ಬಾಗಿಲು ತೆಗೆದರು. ಜನ್ಮದಿಂದ ನಿರ್ಧರಿಸುವ ಜಾತಿ ಪದ್ಧತಿಗೆ ವೇದಗಳಲ್ಲಿ ಸಮರ್ಥನೆಯಿಲ್ಲ ಎಂದು ಪ್ರತಿಪಾದಿಸಿದರು. ನೀರಿನಲ್ಲಿ ಮುಳುಗಿದರೆ ಪಾಪ ನಿವಾರಣೆಯಾಗುವುದಿಲ್ಲ ಎಂದು ಅವರು ಹೇಳಿದರು.ಸರ್ವವ್ಯಾಪಿಯಾದ ದೇವರನ್ನು ಒಂದು ಪ್ರತಿಮೆಯಲ್ಲಿ ಕಟೆದು ಇಡುವುದು ಮೂರ್ಖತನವೆಂದು ದಯಾನಂದ ಸರಸ್ವತಿ ಹೇಳಿದರು.

ಈ ನೆಲದ ಮೇಲೆ ಹೊರಗಿನ ದಾಳಿ ನಡೆದಾಗಲೂ ಹಿಂದೂ ಸಮಾಜ ಕಂದಾಚಾರದಲ್ಲಿ ಮುಳುಗಿತ್ತು. ಉದ್ದ ನಾಮ ಸರಿಯೋ ಅಥವಾ ಅಡ್ಡನಾಮ ಸರಿಯೋ, ತುಳಸಿ ಮಾಲೆಯೋ ಇಲ್ಲವೇ ರುದ್ರಾಕ್ಷಿ ಮಾಲೆಯೋ, ಶಿವ ಶ್ರೇಷ್ಠನೋ ಅಥವಾ ವಿಷ್ಣು ಶ್ರೇಷ್ಠನೋ, ವರ್ಣ ಸಂಕರವಾದರೆ ಯಾವ ದಂಡ ಹಾಕಬೇಕು, ಸಮುದ್ರ ದಾಟಿದವರಿಗೆ ಏನು ಪ್ರಾಯಶ್ಚಿತ್ತ, ಇಂತಹ ಪಡಿಪಾಟಲಿನಲ್ಲಿ ಮುಳುಗಿದ್ದ ಧರ್ಮಾಂಧರನ್ನು ದಯಾನಂದ ಸರಸ್ವತಿ ಟೀಕಿಸಿದರು.
ಇಂತಹ ಸಮಾಜ ಸುಧಾರಕ ದಯಾನಂದ ಸರಸ್ವತಿ ಅವರನ್ನು ಈ ಕಂದಾಚಾರಿ, ಸಂಪ್ರದಾಯ ವಾದಿ ಸಮಾಜ ಸಹಿಸಲಿಲ್ಲ. 1883ರ ಸೆಪ್ಟ್ಟಂಬರ್ 30ರ ರಾತ್ರಿ ಕುಡಿಯುವ ಹಾಲಿನಲ್ಲಿ ವಿಷ ಬೆರೆಸಿ ಅವರನ್ನು ಕೊಲ್ಲುವ ಯತ್ನ ನಡೆಯಿತು. ನಂತರ ಅವರಿಗೆ ಆಗ ಲಭ್ಯವಿದ್ದ ಆಯುರ್ವೇದ ವೈದ್ಯಕೀಯ ಚಿಕಿತ್ಸೆ ನಡೆದರೂ ಕೊನೆಗೆ 1883 ಅಕ್ಟೋಬರ್ 30ರಂದು ವಿಷ ಪ್ರಾಶನದ ಪರಿಣಾಮವಾಗಿ ಸ್ವಾಮಿ ದಯಾನಂದ ಸರಸ್ವತಿ ಅವರು ಕೊನೆಯುಸಿರೆಳೆದರು.

ಇಂತಹ ಸಮಾಜ ಸುಧಾರಕ ದಯಾನಂದ ಸರಸ್ವತಿ ಅವರ ಆರ್ಯ ಸಮಾಜದ ಸನ್ಯಾಸಿ ಸ್ವಾಮಿ ಅಗ್ನಿವೇಶ್‌ರನ್ನು ಈ ಜೀವ ವಿರೋಧಿ ಕೋಮುವಾದಿ ಶಕ್ತಿಗಳು ಸಹಿಸದೇ ಹಲ್ಲೆ ಮಾಡುತ್ತಲೇ ಬಂದವು. ಈ ನೆಲದಲ್ಲಿ ಸಮಾಜ ಬದಲಾವಣೆಗೆ ದುಡಿದ ಬಸವಣ್ಣ, ಸಂತ ತುಕಾರಾಮ, ಚೋಕಾಮೇಳಾ, ನಾಮದೇವ, ದಯಾನಂದರಂಥವರು ಬಲಿದಾನ ಮಾಡುತ್ತಲೇ ಬಂದಿದ್ದಾರೆ.

ಸ್ವಾಮಿ ಅಗ್ನಿವೇಶ್ ಈಗ ನಮ್ಮ ನಡುವೆ ಇಲ್ಲ.ಮನುಷ್ಯ ಪ್ರೀತಿಗಾಗಿ ಹಂಬಲಿಸಿದ ಇಂತಹವರು ಒಬ್ಬೊಬ್ಬರಾಗಿ ಹೋಗುತ್ತಿದ್ದಾರೆ. ಇವರು ಹೋದರೆಂದು ಇವರು ಹಚ್ಚಿದ ಬೆಳಕಿನ ದೀಪ ನಂದಿ ಹೋಗಬಾರದು.ಅದು ಮನುಷ್ಯನ ಅಂತರಂಗ ಮತ್ತು ಬಹಿರಂಗದ ಕತ್ತಲನ್ನು ತೊಲಗಿಸಲು ಸದಾ ಬೆಳಗುತ್ತಿರಬೇಕು. ಹೊಸ ಪೀಳಿಗೆ ಬೆಳಕಿನ ದೀವಟಿಗೆಯನ್ನು ಹಿಡಿದೆತ್ತಿ ನಿಲ್ಲಬೇಕು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ