ಮಸೀದಿ ಉರುಳಿದ ಆ ದಿನದ ನೆನಪು

Update: 2020-10-05 09:40 GMT

ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದವರು ಮಸೀದಿಯನ್ನು ಧ್ವಂಸ ಮಾಡಲು ಸಂಚು ರೂಪಿಸಿದ್ದರು. ಅವರ ಭಾಷಣದಿಂದ ಪ್ರಚೋದಿತರಾಗಿ ಮಸೀದಿಯನ್ನು ಕೆಡವಿದೆವು ಎಂದು ಸಾಕ್ಷ್ಯ ಹೇಳುವ ಒಬ್ಬ ಸಾಕ್ಷಿಯೂ ತಮಗೆ ಸಿಗಲಿಲ್ಲ ಎಂದು ತನಿಖಾಧಿಕಾರಿ ಎಂ.ನಾರಾಯಣ ಅವರು ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಇದನ್ನು ನಾವು ನಂಬಬಹುದೇ?


ಆ ದಿನ ನನ್ನ ಬದುಕಿನಲ್ಲಿ ಎಂದೂ ಮರೆಯಲಾಗದ, ಮರೆಯಬಾರದ ದಿನ. ಜಾತ್ಯತೀತ ಭಾರತದ ಅವಸಾನ ಆರಂಭಗೊಂಡ ದಿನವದು. ಡಿಸೆಂಬರ್ 6, 1992. ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಂಡ ದಿನವದು.ಆಗ ನಾನು ಸಂಯುಕ್ತ ಕರ್ನಾಟಕ ಪತ್ರಿಕೆಯ ಬೆಂಗಳೂರು ಕಚೇರಿಯ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಕಾಮರ್ಸ್ ವಿಭಾಗದ ಹೊಣೆಗಾರಿಕೆ. ಬೆಳಗ್ಗೆ ಹನ್ನೊಂದು ಗಂಟೆಗೆ ಆಫೀಸಿನಲ್ಲಿರಬೇಕು. ಸರಿಯಾಗಿ ಅದೇ ಸಮಯಕ್ಕೆ ಹೋದೆ. 11:30 ಆಗಿರಬಹುದು. ಟಿ.ವಿ. ಆನ್ ಮಾಡಿದಾಗ ಅಯೋಧ್ಯೆಯಲ್ಲಿ ಕರಸೇವೆಗಾಗಿ ದೇಶದ ನಾನಾ ಭಾಗಗಳಿಂದ ಬಂದಿದ್ದ ಕರಸೇವಕರು ಜಮಾವಣೆಗೊಂಡಿದ್ದರು. ಏನೋ ನಡೆಯುತ್ತಿದೆ ಎಂದು ನೋಡುವಷ್ಟರಲ್ಲಿ ಗುದ್ದಲಿ, ಸಲಿಕೆ ಹಿಡಿದ ಕರಸೇವಕರ ಗುಂಪೊಂದು ಮಸೀದಿಯ ಗುಮ್ಮಟದ ಮೇಲೇರಿ ಕೇಕೆ ಹಾಕುತ್ತಿತ್ತು.

ಮಧ್ಯಾಹ್ನ 12:30 ಆಗಿರಬಹುದು.ಗುದ್ದಲಿ, ಸಲಿಕೆಗಳಿಂದ ಮಸೀದಿಯ ಗುಮ್ಮಟಗಳನ್ನು ಒಡೆಯುತ್ತಿದ್ದ ದೃಶ್ಯ ಗೋಚರಿಸಿತು. ಸಮೀಪದ ವೇದಿಕೆಯ ಮೇಲೆ ಎಲ್.ಕೆ.ಅಡ್ವಾಣಿ, ಅಶೋಕ ಸಿಂಘಾಲ್, ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮುಂತಾದವರು ಇದ್ದರು. ವೇದಿಕೆಯ ಕೆಳಗೆ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಕುರ್ಚಿ ಹಾಕಿಕೊಂಡು ಕುಳಿತು ಗುಮ್ಮಟಗಳು ಉರುಳುವುದನ್ನು ಕಂಡು ಸಂಭ್ರಮಿಸುತ್ತಿದ್ದರು. ಸಾಧ್ವಿ ರಿತಂಬರಾ ಉಮಾ ಭಾರತಿ ಅವರನ್ನು ತಬ್ಬಿಕೊಂಡಿದ್ದರು. ಎಲ್ಲೆಡೆ ರಣಕೇಕೆ ಕೇಳುತ್ತಿತ್ತು. ಕರಸೇವಕರು ಕೆಲ ಪತ್ರಕರ್ತರ ಕ್ಯಾಮರಾ ಕಿತ್ತು ಕೊಂಡರು.

ಸುಮಾರು 1:30. ವ್ಯವಸ್ಥಾಪಕ ಸಂಪಾದಕ ಕೆ.ಶಾಮರಾವ್ ಸಂಪಾದಕೀಯ ವಿಭಾಗಕ್ಕೆ ಬಂದು ಟಿ.ವಿ.ಯಲ್ಲಿ ಬರುತ್ತಿದ್ದ ದೃಶ್ಯಗಳನ್ನು ನೋಡುತ್ತ, ‘‘ಛಿ ಹೀಗಾಗಬಾರದಿತ್ತು’’ ಎಂದು ಉದ್ಗರಿಸಿದರು. ಪಿಟಿಐ ಸುದ್ದಿಗಳನ್ನು ತರಿಸಿ ಓದಿ ದೂರದಲ್ಲಿ ಕುಳಿತಿದ್ದ ನನ್ನನ್ನು ಕರೆದು ಮಸೀದಿ ಉರುಳಿದ ಲೀಡ್ ಸುದ್ದಿಯನ್ನು ಭಾಷಾಂತರ ಮಾಡಲು ಕೊಟ್ಟರು. ನಾನು ಕಾಮರ್ಸ್ ವಿಭಾಗದಲ್ಲಿ ಇದ್ದರೂ ನನಗೆ ಸುದ್ದಿ ಭಾಷಾಂತರ ಮಾಡಲು ಕೊಟ್ಟಿದ್ದು ಅಚ್ಚರಿಯಾಯಿತು. ನನ್ನನ್ನು ಉದ್ದೇಶಿಸಿ

‘‘ಸುದ್ದಿ ನಿಷ್ಪಕ್ಷವಾಗಿರಬೇಕು. ಪೂರ್ವಾಗ್ರಹವಿರಬಾರದು. ಅದಕ್ಕೇ ನಿನಗೆ ಕೊಟ್ಟಿದ್ದು’’ ಎಂದು ಹೇಳುತ್ತ ತಮ್ಮ ಚೇಂಬರ್‌ಗೆ ಹೋದರು. ಆಗಿನ ಹಳೆಯ ತಲೆಮಾರಿನ ಸಂಪಾದಕರು ಹೀಗಿದ್ದರು.

ಆದರೆ ಕಳೆದ ಬುಧವಾರ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನ ಪ್ರಕಾರ ನಾನು ನೋಡಿದ್ದೆಲ್ಲ ಸುಳ್ಳಾಗಿದೆ. ಮಸೀದಿಯನ್ನು ನೆಲಸಮಗೊಳಿಸಿದ್ದೇನೋ ನಿಜ ಆದರೆ ಧ್ವಂಸಗೊಳಿಸಿದ್ದು ಪೂರ್ವನಿಯೋಜಿತ ಕೃತ್ಯವಲ್ಲ ಎಂದು ಹೇಳಿದೆ. ಈ ಪ್ರಕರಣದ ಆರೋಪಿ ಸ್ಥಾನದಲ್ಲಿದ್ದ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ ಸೇರಿದಂತೆ 32 ಮಂದಿಯನ್ನು ದೋಷಮುಕ್ತಗೊಳಿಸಿದೆ.

ಈ ಪ್ರಕರಣದ ಆರೋಪಿಗಳೆಲ್ಲರೂ ಆರೋಪ ಮುಕ್ತರೆಂದು ನ್ಯಾಯಾಲಯ ಹೇಳಿದೆ. ನ್ಯಾಯಾಧೀಶರು ಯಾಕೆ ಹಾಗೆ ತೀರ್ಪು ನೀಡಿದರು? ಇದಕ್ಕೆ ಕಾರಣವೇನು? ಅವರ ಮೇಲೆ ಪ್ರಭುತ್ವದ ಒತ್ತಡವೇನಾದರೂ ಇತ್ತೇ? ಹಾಗೆ ಏಕಾಏಕಿ ಆರೋಪ ಮಾಡುವುದು ತಪ್ಪಾಗುತ್ತದೆ. ಇದು ಸಿಬಿಐ ಹಾಗೂ ಪ್ರಾಸಿಕ್ಯೂಶನ್ ಹೊಣೆ ಹೊತ್ತವರ ವೈಫಲ್ಯವಲ್ಲದೆ ಬೇರೇನೂ ಅಲ್ಲ. ಕರಸೇವಕರು ಮಸೀದಿ ಕೆಡವುದನ್ನು ಇಡೀ ದೇಶ ಮಾತ್ರವಲ್ಲ ಜಗತ್ತೇ ನೋಡಿದೆ. ಎಲ್ಲಾ ದೃಶ್ಯಾವಳಿಗಳನ್ನು ಕ್ಯಾಮರಾ ಮೂಲಕ ಸೆರೆ ಹಿಡಿಯಲಾಗಿದೆ.ಇದರಿಂದ ದೇಶದ ರಾಜಕೀಯ ಚಿತ್ರವೇ ಬದಲಾಗಿದೆ. ಈ ಘಟನೆ ನಡೆಯುವ ಮುನ್ನ ಲೋಕಸಭೆಯಲ್ಲಿ ಕೇವಲ ಇಬ್ಬರು ಸದಸ್ಯರನ್ನು ಹೊಂದಿದ್ದ ಬಿಜೆಪಿ ಈಗ ದೇಶದ ಅಧಿಕಾರ ಸೂತ್ರ ಹಿಡಿದಿದೆ. ಹೀಗಿದ್ದರೂ ಈ ದುಷ್ಕೃತ್ಯಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಲು ಸಿಬಿಐನಂತಹ ಉನ್ನತ ತನಿಖಾ ಸಂಸ್ಥೆಗೆ ಸಾಧ್ಯವಾಗಲಿಲ್ಲ ಎಂದಾದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ.ವಿಶೇಷ ನ್ಯಾಯಾಲಯವೇನೋ 2,300 ಪುಟಗಳ ತನ್ನ ಆದೇಶದಲ್ಲಿ ‘‘ಕರಸೇವಕರ ನಡುವೆ ಇದ್ದ ಸಮಾಜ ಘಾತುಕ ಶಕ್ತಿಗಳು ಮಸೀದಿ ಧ್ವಂಸಕ್ಕೆ ಕಾರಣ’’ ಎಂದು ಹೇಳಿದೆ. ಆದರೆ ಈ ಸಮಾಜ ಘಾತುಕ ಶಕ್ತಿಗಳು ಯಾರು ಎಂದು ಪತ್ತೆ ಹಚ್ಚಲು ಸಿಬಿಐಗೆ ಏಕೆ ಸಾಧ್ಯವಾಗಲಿಲ್ಲ?.

ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದವರು ಮಸೀದಿಯನ್ನು ಧ್ವಂಸ ಮಾಡಲು ಸಂಚು ರೂಪಿಸಿದ್ದರು. ಅವರ ಭಾಷಣದಿಂದ ಪ್ರಚೋದಿತರಾಗಿ ಮಸೀದಿಯನ್ನು ಕೆಡವಿದೆವು ಎಂದು ಸಾಕ್ಷ್ಯ ಹೇಳುವ ಒಬ್ಬ ಸಾಕ್ಷಿಯೂ ತಮಗೆ ಸಿಗಲಿಲ್ಲ ಎಂದು ತನಿಖಾಧಿಕಾರಿ ಎಂ.ನಾರಾಯಣ ಅವರು ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಇದನ್ನು ನಾವು ನಂಬಬಹುದೇ?

ಆರೋಪಿಗಳಿಗೆ ಸಂಬಂಧಿಸಿದ ವೀಡಿಯೊ ಮತ್ತು ಆಡಿಯೊ ಕ್ಯಾಸೆಟ್‌ಗಳನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಅವುಗಳಲ್ಲಿ ಯಾವ ಕ್ಯಾಸೆಟ್‌ಗಳೂ ಸೀಲ್ಡ್ ಆಗಿರಲಿಲ್ಲ. ಈ ಕ್ಯಾಸೆಟ್ ಗಳನ್ನು ತಿರುಚಲಾಗಿಲ್ಲ ಎಂಬುದಕ್ಕೆ ಪೂರಕವಾದ ವಿಧಿ ವಿಜ್ಞಾನ ಪರೀಕ್ಷೆಯ ವರದಿಯನ್ನು ಸಿಬಿಐ ಸಲ್ಲಿಸಿರಲಿಲ್ಲ.ಅಪರಾಧ ಪ್ರಕ್ರಿಯಾ ಸಂಹಿತೆಯ ನಿಯಮಗಳನ್ನು ತನಿಖೆಯ ವೇಳೆ ಪಾಲಿಸಲಾಗಿಲ್ಲ ಎಂಬುದನ್ನು ಸಿಬಿಐ ತನಿಖಾಧಿಕಾರಿ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ.

ಬಾಬರಿ ಮಸೀದಿಯನ್ನು ಧ್ವಂಸ ಮಾಡಿದವರಲ್ಲಿ 425 ಮಂದಿ ಗಾಯಗೊಂಡಿದ್ದರು. ಅವರಲ್ಲಿ ಒಬ್ಬರನ್ನೂ ಆರೋಪಿಗಳನ್ನಾಗಿ ಮಾಡಿಲ್ಲ. ಇದನ್ನು ತನಿಖಾಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಗಾಯಾಳುಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕಾದದ್ದು ತನಿಖಾಧಿಕಾರಿಯ ಕರ್ತವ್ಯ. ಈ ಪ್ರಕರಣದಲ್ಲಿ ಆ ಹೇಳಿಕೆಗಳೇ ಬಲವಾದ ಸಾಕ್ಷ್ಯವಾಗಲಿದ್ದವು. ಇದರ ಬದಲಿಗೆ ತನಿಖಾಧಿಕಾರಿ ಕೇವಲ ರಾಜಕೀಯ ನಾಯಕರ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದರೆಂದು ನ್ಯಾಯಾಲಯ ಹೇಳಿದೆ.

ಆರೋಪಿಗಳು ಮಸೀದಿ ಧ್ವಂಸ ಮಾಡಲು ಸಂಚು ರೂಪಿಸಿದ್ದರು ಎಂಬುದನ್ನು ಸಾಬೀತು ಮಾಡಲು ದಿನಪತ್ರಿಕೆಗಳ ಕ್ಲಿಪಿಂಗ್‌ಗಳನ್ನು ಸಾಕ್ಷ್ಯಗಳಾಗಿ ಸಲ್ಲಿಸಲಾಗಿತ್ತು. ಆದರೆ ಮೂಲ ವರದಿಗಳನ್ನು ಸಲ್ಲಿಸಿಲ್ಲ. ದಿನಪತ್ರಿಕೆಗಳಲ್ಲಿ ಬಂದ ವರದಿಗಳು ಸತ್ಯವೇ ಆಗಿರಬೇಕಿಲ್ಲ. ಭಾರತೀಯ ಸಾಕ್ಷಾಧಾರ ಕಾಯ್ದೆ ಪ್ರಕಾರ ಈ ವರದಿಗಳನ್ನು ಸತ್ಯ ಎಂದು ಸಾಬೀತು ಮಾಡಬೇಕು. ಇದಕ್ಕೆ ಪೂರಕವಾದ ವರದಿಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿತ್ತು. ದಿನಪತ್ರಿಕೆಗಳ ಕ್ಲಿಪಿಂಗ್‌ಗಳನ್ನು ಪತ್ರಿಕಾ ಕಚೇರಿಗಳಿಂದ ಸಂಗ್ರಹಿಸಲಾಗಿದೆ. ಪತ್ರಿಕೆಗಳನ್ನು ಪಡೆದುಕೊಂಡದ್ದಕ್ಕೆ ಮೆಮೊ ಸಿದ್ಧಪಡಿಸಬೇಕಿತ್ತು. ಆದರೆ ಈ ಯಾವ ಕೆಲಸವನ್ನೂ ಸಿಬಿಐ ಮಾಡಿಲ್ಲ ಎಂಬುದನ್ನು ತನಿಖಾಧಿಕಾರಿಯೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಪತ್ರಿಕಾ ವರದಿಗಳನ್ನು ಸಾಕ್ಷಾಧಾರ ಎಂದು ಪರಿಗಣಿಸಿಲ್ಲವೆಂದು ನ್ಯಾಯಾಲಯ ತಿಳಿಸಿರುವುದನ್ನು ಒಪ್ಪದಿರಲಾಗುವುದಿಲ್ಲ.

ತನಿಖೆಯ ವೇಳೆ ಆರೋಪಿಗಳು ನೀಡಿದ್ದಾರೆ ಎನ್ನಲಾದ ಹೇಳಿಕೆಗಳ ಮೂಲ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಬದಲಾಗಿ ಹೇಳಿಕೆಗಳ ನಕಲು ಪ್ರತಿಗಳನ್ನು ಸಲ್ಲಿಸಲಾಗಿತ್ತು. ಅದನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ವಿಶೇಷ ನ್ಯಾಯಾಲಯ ಹೇಳಿದೆ. ಆರೋಪಿಗಳಲ್ಲಿ ಒಬ್ಬರಾಗಿದ್ದ ಸಾಧ್ವಿ ರಿತಂಬರಾ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ, ಅದಕ್ಕೆ ಸಂಬಂಧಿಸಿದ ಧ್ವನಿಮುದ್ರಣ ಇದೆ ಎಂದು ಸಿಬಿಐ ಹೇಳಿತ್ತು.ಆದರೆ ಆ ಧ್ವನಿಮುದ್ರಣವನ್ನು ಸಲ್ಲಿಸಿಲ್ಲ. ಬದಲಾಗಿ ಧ್ವನಿಮುದ್ರಣದಲ್ಲಿ ಏನಿದೆ ಎಂಬುದನ್ನು ಸಿಬಿಐ ಲಿಖಿತ ರೂಪದಲ್ಲಿ ನೀಡಿತ್ತು. ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ್ದಾರೆ ಎಂದು ಹಲವರ ವಿರುದ್ಧ ಆರೋಪ ಮಾಡಲಾಗಿತ್ತು. ಧ್ವನಿ ಮುದ್ರಣವನ್ನೂ ನೀಡಲಾಗಿತ್ತು.ಆದರೆ ಆರೋಪಿಗಳ ಧ್ವನಿ ಮಾದರಿಯನ್ನು ಸಂಗ್ರಹಿಸಿಲ್ಲ. ಧ್ವನಿ ಮುದ್ರಣದಲ್ಲಿ ಇರುವ ಧ್ವನಿ ಮತ್ತು ಆರೋಪಿಗಳ ಧ್ವನಿ ಮಾದರಿಯನ್ನು ಹೋಲಿಕೆ ಮಾಡಿಲ್ಲ. ಈ ಕೆಲಸಗಳನ್ನು ಪೂರೈಸಿದ್ದರೆ ಧ್ವನಿ ಮುದ್ರಣಗಳು ಪ್ರಬಲ ಸಾಕ್ಷ್ಯಗಳಾಗುತ್ತಿದ್ದವು ಎಂದು ವಿಶೇಷ ನ್ಯಾಯಾಲಯ ಹೇಳಿದೆ.

ಆದ್ದರಿಂದ ಹಲವಾರು ಸಾಮಾಜಿಕ ರಾಜಕೀಯ ಆಯಾಮಗಳನ್ನು ಹೊಂದಿರುವ ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಎಂಬುದನ್ನು ಪತ್ತೆ ಹಚ್ಚಿ ಅವರನ್ನು ಶಿಕ್ಷೆಗೆ ಗುರಿಪಡಿಸಲು ಸಾಧ್ಯವಾಗದಿರುವುದು ಸಿಬಿಐ ವೈಫಲ್ಯವಲ್ಲದೇ ಬೇರೇನೂ ಅಲ್ಲ.

ಬಾಬರಿ ಮಸೀದಿ ಧ್ವಂಸ ಪೂರ್ವಯೋಜಿತ ಕೃತ್ಯವಲ್ಲ ಎಂಬ ನ್ಯಾಯಾಲಯದ ತೀರ್ಪು ಕೇಳಿ ನಗು ಬರುತ್ತದೆ. ಯಾವುದೇ ಪೂರ್ವ ತಯಾರಿಯಿಲ್ಲದೆ ಇಂತಹ ಗಟ್ಟಿಯಾದ ಕಟ್ಟಡವನ್ನು ಧ್ವಂಸಗೊಳಿಸುವುದು ಸುಲಭವಲ್ಲ. ಇದಕ್ಕಾಗಿ ಆಯ್ದ ಕರಸೇವಕರಿಗೆ ಗುಜರಾತಿನಲ್ಲಿ ವಿಶೇಷ ತರಬೇತಿ ನೀಡಲಾಗಿತ್ತು. ಉತ್ತರ ಪ್ರದೇಶದ ಒಂದು ಮೂಲೆಯಲ್ಲಿರುವ ಅಯೋಧ್ಯೆಗೆ ಲಕ್ಷಾಂತರ ಕರಸೇವಕರು ಬಂದಿದ್ದು ಮಸೀದಿ ನಾಶ ಮಾಡುವ ಕರಸೇವೆಗೆ ಎಂಬುದು ಗುಟ್ಟಿನ ಸಂಗತಿಯಲ್ಲ. ಆದರೆ ಇದು ನ್ಯಾಯಾಲಯಕ್ಕೆ ಬೇಕಾಗುವ ದಾಖಲೆಯಾಗುವುದಿಲ್ಲ.

ಈ ವಿವಾದ ಇಲ್ಲಿಗೆ ಮುಗಿಯುವುದೂ ಇಲ್ಲ. ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣದ ಗುರಿ ಈಡೇರುವವರೆಗೆ ಈ ಧ್ವಂಸ ಯಾತ್ರೆ ನಡೆಯಲಿದೆ. ಭಾರತೀಯರನ್ನು ಸದಾ ಧರ್ಮದ ಆಧಾರದಲ್ಲಿ ವಿಭಜಿಸಿದರೆ ಮಾತ್ರ ಅಂತಿಮ ಗುರಿ ಸಾಧಿಸಲು ಸಾಧ್ಯ. ಅಂತಲೇ ಮಥುರಾದ ಕೃಷ್ಣ ಜನ್ಮಭೂಮಿ ಮತ್ತು ಕಾಶಿಯ ವಿಶ್ವನಾಥ ದೇವಾಲಯವನ್ನು ಮುಕ್ತ ಗೊಳಿಸಲು ಅವರೆಡು ಊರುಗಳಲ್ಲಿನ ಎರಡು ಮಸೀದಿಗಳನ್ನು ಕೆಡವಲು ತಯಾರಿ ನಡೆದಿದೆ ಎಂದು ವರದಿಯಾಗಿದೆ.
ಸಹಧರ್ಮಿಯರ ಶ್ರದ್ಧಾ ಕೇಂದ್ರಗಳನ್ನು ನಾಶ ಮಾಡುವುದೇ ಇವರ ಗುರಿ. ಈ ನೆಲದಲ್ಲಿ ಇವರ ಗುದ್ದಲಿ, ಸಲಿಕೆ, ಹಾರೆಗಳಿಗೆ ಸಾವಿರಾರು ಜೈನ ಬಸದಿಗಳು ಮತ್ತು ಬೌದ್ಧ ವಿಹಾರಗಳು ಬಲಿಯಾಗಿವೆ.

ಇದು ಇಲ್ಲಿಗೆ ನಿಲ್ಲುವುದು ಅಂದುಕೊಂಡಷ್ಟು ಸುಲಭವಲ್ಲ. ಅದಕ್ಕಾಗಿ ಸಮಾನ ಮನಸ್ಕ ಶಕ್ತಿಗಳು, ವ್ಯಕ್ತಿಗಳು ಒಂದುಗೂಡಬೇಕು. ಶ್ರೇಷ್ಠತೆಯ ವ್ಯಸನದಿಂದ ಬಳಲುತ್ತಿರುವ ಈ ಶಕ್ತಿಗಳು ಒಂದುಗೂಡಲು ಸಾಧ್ಯವೇ? ಇದು ನಮ್ಮ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ