ದೇಶದ ಸಾರ್ವಭೌಮತೆಯ ರಕ್ಷಣೆಗೆ ಸದಾ ಸಿದ್ಧ: ವಾಯುಪಡೆ ಮುಖ್ಯಸ್ಥ ಭದೌರಿಯಾ

Update: 2020-10-08 14:42 GMT

ಹೊಸದಿಲ್ಲಿ,ಅ.8: ಭಾರತೀಯ ವಾಯುಪಡೆ (ಐಎಎಫ್)ಯು ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ಸದಾ ಸನ್ನದ್ಧವಾಗಿದೆ ಎಂದು ವಾಯು ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ರಾಕೇಶಕುಮಾರ್ ಸಿಂಗ್ ಭದೌರಿಯಾ ಅವರು ಗುರುವಾರ ಹೇಳಿದರು.

 ಉತ್ತರ ಪ್ರದೇಶದ ಘಾಜಿಯಾಬಾದ್‌ನ ಹಿಂಡೋನ್ ವಾಯುನೆಲೆಯಲ್ಲಿ ಐಎಎಫ್‌ನ 88ನೇ ಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು,ಐಎಎಫ್ ಇನ್ನಷ್ಟು ವಿಕಸನಗೊಳ್ಳಲಿದೆ ಮತ್ತು ಎಂತಹುದೇ ಸ್ಥಿತಿಯಲ್ಲಿಯೂ ದೇಶದ ಸಾರ್ವಭೌಮತೆ ಹಾಗೂ ಹಿತಾಸಕ್ತಿಗಳನ್ನು ರಕ್ಷಿಸಲು ಸದಾ ಸನ್ನದ್ಧವಾಗಿರುತ್ತದೆ ಎಂದು ರಾಷ್ಟ್ರಕ್ಕೆ ಭರವಸೆಯನ್ನು ನೀಡುತ್ತಿದ್ದೇನೆ ಎಂದು ಹೇಳಿದರು.

‘ಐಎಎಫ್ ಪರಿವರ್ತನಾತ್ಮಕ ಬದಲಾವಣೆಗಳಿಗೆ ಒಳಗಾಗುತ್ತಿದೆ. ನಾವು ಎಲ್ಲಿ ವೈಮಾನಿಕ ಶಕ್ತಿಯನ್ನು ನಿಯೋಜಿಸಬೇಕು ಮತ್ತು ಸಮಗ್ರ ಬಹುಕ್ಷೇತ್ರಿಯ ಕಾರ್ಯಾಚರಣೆಗಳನ್ನು ನಡೆಸಬೇಕು ಎನ್ನುವುದನ್ನು ಪುನರ್‌ವ್ಯಾಖ್ಯಾನಿಸುವ ಯುಗವನ್ನು ನಾವು ಪ್ರವೇಶಿಸುತ್ತಿದ್ದೇವೆ ’ ಎಂದರು.

ಇತ್ತೀಚಿಗೆ ಲಡಾಖ್‌ನಲ್ಲಿ ಚೀನಾದೊಂದಿಗೆ ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ವಾಯುಪಡೆ ಯೋಧರ ತ್ವರಿತ ಕಾರ್ಯಾಚರಣೆಗಳನ್ನು ಅವರು ಪ್ರಶಂಸಿಸಿದರು.

ಪ್ರಸಕ್ತ ವರ್ಷವು ಹಿಂದೆಂದಿಗಿಂತಲೂ ಭಿನ್ನವಾಗಿದೆ ಎಂದ ಭದೌರಿಯಾ,ಕೊರೋನ ವೈರಸ್ ಸಾಂಕ್ರಾಮಿಕಕ್ಕೆ ಭಾರತವು ದೃಢವಾಗಿ ಉತ್ತರಿಸಿದೆ. ತನ್ನ ಯೋಧರ ಅಚಲತೆ ಮತ್ತು ದೃಢಸಂಕಲ್ಪದಿಂದಾಗಿ ಕೊರೋನ ಬಿಕ್ಕಟ್ಟಿನ ಅವಧಿಯಲ್ಲಿಯೂ ಪೂರ್ಣ ಪ್ರಮಾಣದ ಕಾರ್ಯಾಚರಣೆಗಳನ್ನು ನಡೆಸುವ ತನ್ನ ಸಾಮರ್ಥ್ಯವನ್ನು ಉಳಿಸಿಕೊಳ್ಳಲು ಐಎಎಫ್‌ಗೆ ಸಾಧ್ಯವಾಗಿದೆ ಎಂದು ತಿಳಿಸಿದರು.

ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಮ್‌ಬೀರ ಸಿಂಗ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News