ಬರಡು ಭೂಮಿಯಲ್ಲಿ 56 ವರ್ಷಗಳ ಬಳಿಕ ಭತ್ತ ಬೆಳೆದು ಸೈ ಎನಿಸಿಕೊಂಡ ರೈತ
ಚಿಕ್ಕಮಗಳೂರು, ಅ.11: ಜಿಲ್ಲೆಯ ಬಯಲು ಪ್ರದೇಶ ಸತತ ಬರಗಾಲಕ್ಕೆ ತುತ್ತಾಗಿದ್ದು, ಬರಪೀಡಿತ ಎಂದೇ ಘೋಷಣೆಯಾಗಿದೆ. ನೀರಾವರಿ ಸೌಕರ್ಯಗಳಿಲ್ಲದಿರುವುದರಿಂದ ಭತ್ತದ ಕೃಷಿಯಿಂದ ಇಲ್ಲಿನ ರೈತರು ವಿಮುಖರಾಗಿ ಅರ್ಧ ಶತಮಾನವೇ ಕಳೆದಿದೆ. ಇಂತಹ ಪರಿಸ್ಥಿತಿಯಲ್ಲೂ ಜಿಲ್ಲೆಯ ಬಯಲುಸೀಮೆ ಪ್ರದೇಶಕ್ಕೆ ಸೇರಿರುವ ಬರಪೀಡಿತ ಪ್ರದೇಶದಲ್ಲಿ ರೈತರೊಬ್ಬರು 56 ವರ್ಷಗಳ ಬಳಿಕ ಮೊದಲ ಬಾರಿಗೆ ಭತ್ತ ಬೆಳೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿ ವ್ಯಾಪ್ತಿಯ ಕಳಸಾಪುರ ಗ್ರಾಮದ ಬಸವರಾಜ್ ಶೆಟ್ಟಿ ಎಂಬ ರೈತ ತಮ್ಮ 1 ಎಕರೆ ಜಮೀನಿನಲ್ಲಿ 56 ವರ್ಷಗಳ ಬಳಿಕ ಭತ್ತ ಬೆಳೆದು ಇಡೀ ಹೋಬಳಿ ವ್ಯಾಪ್ತಿಯ ರೈತರನ್ನು ಚಕಿತಗೊಳಿಸಿದ್ದಾರೆ.
ಜಿಲ್ಲೆಯ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕು ಬಯಲುಸೀಮೆ ಪ್ರದೇಶವಾಗಿವೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಕೆಲ ದಶಕಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ಮಲೆನಾಡು ಭಾಗದಲ್ಲಿ ಗತಕಾಲದ ಮಳೆಯಾಗುತ್ತಿದೆ. ಇತ್ತೀಚಿನ ಮಳೆ ಮಲೆನಾಡಿನಲ್ಲಿ ಅತಿವೃಷ್ಟಿಯನ್ನೂ ಸೃಷ್ಟಿಸಿದೆ. ಕಳೆದೆರಡು ವರ್ಷಗಳಿಂದ ಜಿಲ್ಲೆಯಲ್ಲಿ ಭಾರೀ ಪ್ರಮಾಣ ದಲ್ಲಿ ಮಳೆಯಾಗಿದ್ದು, ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿ ವ್ಯಾಪ್ತಿಯಲ್ಲೂ ಸಾಧಾರಣ ಮಳೆಯಾಗಿದೆ. ಈ ಮಳೆಯಿಂದಾಗಿ ಬರಪೀಡಿತ ಪ್ರದೇಶವಾಗಿದ್ದ ಲಕ್ಯಾ ಹೋಬಳಿಯ ಕೆಲ ಕೆರೆಗಳು ತುಂಬಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಲಕ್ಯಾ ಹೋಬಳಿ ವ್ಯಾಪ್ತಿಯ ಕಳಸಾಪುರ ಭಾಗದಲ್ಲೂ ವರ್ಷಗಳಿಂದ ಉತ್ತಮ ಮಳೆಯಾಗಿದ್ದು, ಗ್ರಾಮದಲ್ಲಿನ ಕೆರೆಗಳಲ್ಲಿ ಮಳೆ ನೀರು ಸಂಗ್ರಹವಾಗಿದೆ. ಕಳಸಾಪುರ ಗ್ರಾಮದ ಚೌಡಮ್ಮನ ಕಟ್ಟೆ ಎಂಬ ಹೆಸರಿನ ಸಣ್ಣ ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಅಕ್ಕಪಕ್ಕದ ಜಮೀನುಗಳಲ್ಲಿ ತೇವಾಂಶವೂ ಹೆಚ್ಚಿದೆ. ಈ ಚೌಡಮ್ಮನ ಕಟ್ಟೆಯ ಬಳಿ ರೈತ ಬಸವರಾಜ್ ಜಮೀನು ಹೊಂದಿದ್ದು, ಜಮೀನಿನಲ್ಲಿ ನೀರಿನಂಶ ಹೆಚ್ಚಾಗಿರುವುದನ್ನು ಕಂಡ ಅವರು 9 ತಿಂಗಳ ಹಿಂದೆ ತಮ್ಮ ಜಮೀನಿನ ಪೈಕಿ 1 ಎಕರೆಯಲ್ಲಿ ಭತ್ತ ಬೆಳೆಯಲು ನಿರ್ಧಾರ ಮಾಡಿದ್ದಾರೆ.
ಇದಕ್ಕೆ ಗ್ರಾಮದ ಇತರ ರೈತರು ಆಶ್ಚರ್ಯ ವ್ಯಕ್ತಪಡಿಸಿ, ನಿನಗೆಲ್ಲೋ ಹುಚ್ಚು ಹಿಡಿದಿರಬೇಕು, ಸುಮ್ಮನೆ ಹಣ ವ್ಯರ್ಥ ಮಾಡಬೇಡ, ಈ ಭಾಗದಲ್ಲಿ ಭತ್ತ ಬೆಳೆಯಲು ಸಾಧ್ಯವಿಲ್ಲ ಎಂದು ಆಡಿಕೊಂಡಿದ್ದರು. ಆದರೆ ತಮ್ಮ ನಿರ್ಧಾರವನ್ನು ಬದಲಿಸದ ಬಸವರಾಜ್ ಅಂದುಕೊಂಡಂತೆ ತೊಗರಿ ಬೆಳೆದಿದ್ದ ಹೊಲವನ್ನೇ ಭತ್ತದ ಗದ್ದೆಯನ್ನಾಗಿ ಸಿದ್ಧಪಡಿಸಿದ್ದಾರೆ.
ಬೇಲೂರು ಪಟ್ಟಣದಿಂದ ಕಡಿಮೆ ನೀರಿನಲ್ಲಿ ಬೆಳೆಯುವ ಹೊಲದ ಭತ್ತ ಎಂಬ ತಳಿಯ ಬೀಜ ತಂದು 6 ತಿಂಗಳ ಹಿಂದೆ ನಾಟಿ ಮಾಡಿದ್ದರು. ನಾಟಿ ಮಾಡಿದ 6 ತಿಂಗಳ ಅವಧಿಯಲ್ಲಿ ಭತ್ತದ ಸಸಿಗಳನ್ನು ಉತ್ತಮ ಸಾವಯವ ಗೊಬ್ಬರ ನೀಡಿ ಆರೈಕೆ ಮಾಡಿದ ಅವರಿಗೆ ಇದೀಗ 1 ಎಕರೆ ಜಾಗದಲ್ಲಿ ಭತ್ತ ಹಲುಸಾಗಿ ಬೆಳೆದು ಉತ್ತಮ ಫಸಲು ನೀಡಿದೆ.
ಭತ್ತದ ಬೆಳೆ ಇದೀಗ ಕಟಾವಿಗೆ ಬಂದಿದ್ದರಿಂದ ರವಿವಾರ 5 ಮಂದಿ ಕೂಲಿಯಾಳುಗಳಿಂದ ಭತ್ತ ಕಟಾವು ಮಾಡಿರುವ ಅವರು, ಬರಪೀಡಿತ ಪ್ರದೇಶದಲ್ಲಿ 56 ವರ್ಷಗಳ ಬಳಿಕ ಭತ್ತದ ಬೆಳೆ ತಮ್ಮ ಕೈಹಿಡಿದಿರುವುನ್ನು ಕಂಡು ಸಂತಸಗೊಂಡಿದ್ದಾರೆ.
ಇದೇ ವೇಳೆ ಬಸವರಾಜ್ ಭತ್ತ ಬೆಳೆಯಲು ಮುಂದಾಗಿದ್ದ ವೇಳೆ ಮೂಗುಮುರಿದ ಗ್ರಾಮದ ಇತರ ರೈತರು ಇದೀಗ ಭತ್ತದ ಫಸಲು ಕಂಡು ಬೆರಗಾಗಿದ್ದಾರೆ.
ಬಸವರಾಜ್ ಅವರ ತಂದೆ ದಿ.ನಿಂಗಶೆಟ್ಟಿ 5 ದಶಕಗಳ ಹಿಂದೆ ಇದೇ ಜಮೀನಿನಲ್ಲಿ ಭತ್ತದ ಕೃಷಿ ಮಾಡುತ್ತಿದ್ದರು. ಅಲ್ಲದೆ ಈ ಭಾಗದ ರೈತರ ಪೂರ್ವಿಕರು ಈ ಹಿಂದೆ ಭತ್ತದ ಕೃಷಿಕರೇ ಆಗಿದ್ದರು. ಆದರೆ ಕಳಸಾಪುರ ಗ್ರಾಮದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಸತತ ಬರಗಾಲಕ್ಕೆ ತುತ್ತಾಗುತ್ತಿದ್ದ ಪರಿಣಾಮ ಈ ಭಾಗದಲ್ಲಿ ರೈತರು ಭತ್ತದ ಕೃಷಿಯನ್ನು ಮರೆತೇ ಬಿಟ್ಟಿದ್ದರು.
ಬರಪೀಡಿತ ಪ್ರದೇಶದಲ್ಲಿ 5 ದಶಕಗಳ ಬಳಿಕ ಅಂಜಿಕೆಯಿಂದಲೇ ಭತ್ತ ಬೆಳೆದು ಯಶಸ್ವಿಯಾಗಿರುವ ಬಸವರಾಜ್ ಅವರ ಈ ಭತ್ತದ ಗದ್ದೆ ಸದ್ಯ ಲಕ್ಯಾ ಹೋಬಳಿಯಾದ್ಯಂತ ಸುದ್ದಿಯಾಗಿದ್ದು, ಭತ್ತದ ಗದ್ದೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಲಕ್ಯಾ ಹೋಬಳಿ 5 ದಶಕಗಳಿಂದ ಸತತವಾಗಿ ಬರಗಾಲ ಪೀಡಿತ ಪ್ರದೇಶವಾಗಿದೆ. ಮಳೆ ಇಲ್ಲದೆ ಈ ಭಾಗದಲ್ಲಿ ಕೃಷಿಯೇ ನಾಶವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನನ್ನ ಕುಟುಂಬದ ಜಮೀನಿನಲ್ಲಿ ತಂದೆ ಹಿಂದೆ ಭತ್ತ ಬೆಳೆಯುತ್ತಿದ್ದರು. ನಂತರ ಮಳೆಯ ಕೊರತೆಯಿಂದ ತೊಗರಿ, ಜೋಳದಂತಹ ಬೆಳೆಗಳನ್ನು ಬೆಳೆಯುತ್ತಿದ್ದೆವು. ಈ ಬಾರಿ ಕಳಸಾಪುರ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಜಮೀನಿನಲ್ಲಿ ನೀರಿನಂಶವೂ ಹೆಚ್ಚಾಗಿತ್ತು. ಇದನ್ನು ಗಮನಿಸಿ ಭತ್ತ ಬೆಳೆಯಲು ನಿರ್ಧಾರ ಮಾಡಿದೆ. ಎಲ್ಲರೂ ಆಶ್ಚರ್ಯಪಡುವಂತೆ ಭತ್ತದ ಫಸಲು ಬಂದಿದೆ. ಮಾರಾಟಕ್ಕೆ ಭತ್ತ ಬೆಳೆದಿಲ್ಲ. ಭತ್ತದ ಕೃಷಿ ನಾಶವಾಗುತ್ತಿರುವ ಸಂದರ್ಭದಲ್ಲಿ ಅದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೃಷಿ ಮಾಡಿದೆ. ಮಳೆ ಪ್ರತಿ ವರ್ಷ ಹೀಗೆ ಬಂದಲ್ಲಿ ಪ್ರತಿ ವರ್ಷ ಭತ್ತ ಬೆಳೆಯುತ್ತೇನೆ
- ಬಸವರಾಜ್ ಶೆಟ್ಟಿ, ಬರಪೀಡಿತ ಗ್ರಾಮದಲ್ಲಿ ದಶಕಗಳ ಬಳಿಕ ಭತ್ತ ಬೆಳೆದ ರೈತ