ಮೂರು ತಿಂಗಳುಗಳ ಕಾಲ ಸುದ್ದಿವಾಹಿನಿಗಳ ರೇಟಿಂಗ್ ಸ್ಥಗಿತಕ್ಕೆ ಬಾರ್ಕ್ ನಿರ್ಧಾರ

Update: 2020-10-15 18:45 GMT

ಹೊಸದಿಲ್ಲಿ,ಅ.15: ನಕಲಿ ಟಿಆರ್‌ಪಿ ಹಗರಣದ ಹಿನ್ನೆಲೆಯಲ್ಲಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (ಬಾರ್ಕ್) ಎಲ್ಲ ಭಾಷೆಗಳ ಸುದ್ದಿವಾಹಿನಿಗಳ ಸಾಪ್ತಾಹಿಕ ರೇಟಿಂಗ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಗುರುವಾರ ಪ್ರಕಟಿಸಿದೆ.

ಅಂಕಿಅಂಶಗಳ ವಿಶ್ವಸನೀಯತೆಯನ್ನು ಹೆಚ್ಚಿಸಲು ಟಿವಿ ವಾಹಿನಿಗಳ ಕಾರ್ಯಕ್ರಮಗಳ ಜನಪ್ರಿಯತೆಯನ್ನು ಅಳೆಯುವ ಮಾನದಂಡಗಳನ್ನು ಪುನರ್‌ಪರಿಶೀಲಿಸಲು ಮತ್ತು ಅವುಗಳಲ್ಲಿ ಸುಧಾರಣೆಗಳನ್ನು ತರಲು ಬಾರ್ಕ್ ನಿರ್ಧರಿಸಿದೆ ಮತ್ತು ಇದಕ್ಕಾಗಿ ಸಾಪ್ತಾಹಿಕ ರೇಟಿಂಗ್‌ಗಳನ್ನು 12 ವಾರಗಳ ಅವಧಿಗೆ ಸ್ಥಗಿತಗೊಳಿಸಲಾಗುತ್ತಿದ್ದು,ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ ನಕಲಿ ಟಿಆರ್‌ಪಿ ಜಾಲವನ್ನು ಭೇದಿಸಿದ್ದ ಮುಂಬೈ ಪೊಲೀಸರು ಸುದ್ದಿವಾಹಿನಿಗಳ ಉದ್ಯೋಗಿಗಳು ಸೇರಿದಂತೆ ಕನಿಷ್ಠ ಐವರನ್ನು ಬಂಧಿಸಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಮೀಡಿಯಾ ಗ್ರೂಪ್‌ನ ಅಧಿಕಾರಿಗಳನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ. ತಾನು ಯಾವುದೇ ತಪ್ಪು ಮಾಡಿಲ್ಲವೆಂದು ರಿಪಬ್ಲಿಕ್ ಹೇಳಿಕೊಂಡಿದೆ.

ಬಾರ್ಕ್ ಪ್ರಕಟಿಸುವ ಟಿಆರ್‌ಪಿ ರೇಟಿಂಗ್‌ಗಳನ್ನು ಆಧರಿಸಿ ವಾಹಿನಿಗಳಿಗೆ ಜಾಹೀರಾತುಗಳು ದೊರೆಯುತ್ತವೆ. ದೇಶದಲ್ಲಿ ಟಿವಿ ಜಾಹೀರಾತುಗಳ ಮೌಲ್ಯ ವಾರ್ಷಿಕ 32,000 ಕೋ.ರೂ.ಗಳಾಗಿವೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ರೇಟಿಂಗ್ ನಿರ್ಧರಿಸಲು ಡಾಟಾ ಸಂಗ್ರಹಕ್ಕಾಗಿ ಮಾನಿಟರ್‌ಗಳನ್ನಿರಿಸಿರುವ ಮನೆಗಳಿಗೆ ಲಂಚದ ಆಮಿಷವನ್ನೊಡ್ಡಿ ಟಿಆರ್‌ಪಿಯನ್ನು ತಿರುಚಲಾಗುತ್ತಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಂಕಿಅಂಶಗಳ ವಿಶ್ವಸನೀಯತೆಯನ್ನು ಹೆಚ್ಚಿಸಲು ಮತ್ತು ಡಾಟಾ ಸಂಗ್ರಹ ಮಾನಿಟರ್‌ಗಳನ್ನು ಇರಿಸಲಾಗಿರುವ ಮನೆಗಳಲ್ಲಿ ಹಸ್ತಕ್ಷೇಪ ಪ್ರಯತ್ನಗಳನ್ನು ವಿಫಲಗೊಳಿಸಲು ಸುದ್ದಿವಾಹಿನಿಗಳ ಜನಪ್ರಿಯತೆಯನ್ನು ಅಳೆಯುವ ಮಾನದಂಡಗಳನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲು ಈಗಿನ ಡಾಟಾ ಸಂಗ್ರಹ ವ್ಯವಸ್ಥೆಯನ್ನು ಪುನರ್‌ಪರಿಶೀಲಿಸುವಂತೆ ಬಾರ್ಕ್ ತನ್ನ ತಾಂತ್ರಿಕ ಸಮಿತಿಗೆ ಸೂಚಿಸಿದೆ. ಈ ಪ್ರಕ್ರಿಯೆಯು ತಕ್ಷಣದಿಂದಲೇ ಕಾರ್ಯಗತಗೊಳ್ಳಲಿದ್ದು,ಎಲ್ಲ ಹಿಂದಿ,ಪ್ರಾದೇಶಿಕ ಮತ್ತು ಇಂಗ್ಲಿಷ್ ಭಾಷೆಗಳ ಸುದ್ದಿ ಮತ್ತು ಬಿಜಿನೆಸ್ ನ್ಯೂಸ್ ವಾಹಿನಿಗಳನ್ನು ಒಳಗೊಂಡಿರುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News