ಇದು ಕರ್ನಾಟಕತ್ವದ ಸತ್ವ ಪರೀಕ್ಷೆಯ ಕಾಲ

Update: 2020-11-02 06:59 GMT

ಇಂತಹ ಸಂಕೀರ್ಣ ಸನ್ನಿವೇಶದಲ್ಲಿ ಭಾರತೀಯತೆಯ ಅಬ್ಬರದಲ್ಲಿ ಕರ್ನಾಟಕತ್ವ ಕಳೆಗುಂದಬಾರದು. ಕರ್ನಾಟಕ ಉಳಿದರೆ ಕನ್ನಡ ಉಳಿಯುತ್ತದೆ. ದಿಲ್ಲಿಯ ಗುಲಾಮಗಿರಿ ಮಾಡುವ ಪಕ್ಷಗಳಿಂದ ಕನ್ನಡ ಪರಂಪರೆ ಉಳಿಯುವುದಿಲ್ಲ. ಬರೀ ರಾಜ್ಯೋತ್ಸವ ಮಾಡಿ, ಪರೇಡ್‌ನಲ್ಲಿ ಸಂಭ್ರಮಿಸಿದರೆ ಸಾಲದು, ಕರ್ನಾಟಕತ್ವ ಉಳಿಸಿಕೊಳ್ಳಲು ಧ್ವನಿಯೆತ್ತಬೇಕಾಗಿದೆ.


ಕರ್ನಾಟಕ ರಾಜ್ಯೋತ್ಸವವನ್ನು ರವಿವಾರ ಸಂಭ್ರಮದಿಂದ ಆಚರಿಸಲಾಯಿತು. ಭಾಷಾವಾರು ಪ್ರಾಂತಗಳ ರಚನೆಯನ್ನು ಬಲವಾಗಿ ವಿರೋಧಿಸಿದ್ದ ವಿಚಾರ ಧಾರೆಗೆ ಸೇರಿದ ಪಕ್ಷವೊಂದು ರಾಜ್ಯದ ಅಧಿಕಾರ ಸೂತ್ರ ಹಿಡಿದಿರುವ ಈ ದಿನಗಳಲ್ಲಿ ಕರ್ನಾಟಕ ಭೌಗೋಳಿಕವಾಗಿ ಒಂದಾಗಿದ್ದರೂ ಭಾವನಾತ್ಮಕವಾಗಿ ಒಂದಾಗಿಲ್ಲ ಎಂಬುದು ಕಟು ಸತ್ಯ.ಅಂತಲೇ ಅಲ್ಲಲ್ಲಿ ಪ್ರತ್ಯೇಕತೆಯ ಅಪಸ್ವರಗಳು ಕೇಳಿ ಬರುತ್ತಿವೆ.ತಾರತಮ್ಯದ ಮಾತುಗಳು ಹೊರ ಬರುತ್ತಿವೆ.

ಅದೇನೇ ಇರಲಿ ಅಕ್ಕಪಕ್ಕದ ರಾಜ್ಯಗಳಲ್ಲಿ ಹಂಚಿ ಹೋಗಿ 22 ತುಂಡಾಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಂದು ಗೂಡಿಸಲು ನಡೆದ ಹೋರಾಟದ ಕತೆ ರೋಮಾಂಚಕವಾದುದು. ಇಂದಿನ ಪೀಳಿಗೆ ಅದರಲ್ಲೂ ಮುಖ್ಯವಾಗಿ ಕನ್ನಡ ಹೋರಾಟಗಾರರು ಈ ನಾಡು ಒಂದಾದ ಚರಿತ್ರೆಯ ಪುಟಗಳನ್ನು ಓದಿ ತಿಳಿದುಕೊಳ್ಳುವುದು ಅಗತ್ಯವಿದೆ.

ಈಗ ಉತ್ತರ ಕರ್ನಾಟಕ ಎಂದು ಕರೆಯಲ್ಪಡುವ ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ ಜಿಲ್ಲೆಗಳು 1956ಕ್ಕಿಂತ ಮುಂಚೆ ಮುಂಬೈ ಕರ್ನಾಟಕದಲ್ಲಿ ಇದ್ದವು. ಅಂತಲೇ ಅವುಗಳನ್ನು ಸಾಮಾನ್ಯವಾಗಿ ‘ಮುಂಬೈ ಕರ್ನಾಟಕ’ ಎಂದು ಕರೆಯುತ್ತಾರೆ. ಇದೇ ಉತ್ತರ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳು ಹೈದರಾಬಾದ್‌ನ ನಿಜಾಮ ರಾಜ್ಯಕ್ಕೆ ಸೇರಿದ್ದವು. ಅಂತಲೇ ಅವುಗಳಿಗೆ ‘ಹೈದರಾಬಾದ್ ಕರ್ನಾಟಕ’ ಎಂದು ಕರೆಯಲಾಗುತ್ತಿತ್ತು. ಈಗ ‘ಕಲ್ಯಾಣ ಕರ್ನಾಟಕ’ವಾಗಿದೆ. ಇನ್ನು ಬಳ್ಳಾರಿ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳು ಮದ್ರಾಸ್ ಪ್ರಾಂತದಲ್ಲಿ ಇದ್ದವು. ಅಂತಲೇ ಹಿರಿಯ ಕಮ್ಯುನಿಸ್ಟ್ ನಾಯಕ ಬಿ.ವಿ.ಕಕ್ಕಿಲ್ಲಾಯರು 1953ರಲ್ಲಿ ಕರ್ನಾಟಕ ರಾಜ್ಯ ನಿರ್ಮಾಣವಾಗುವ ಮುನ್ನವೇ ಮದ್ರಾಸ್ ಪ್ರಾಂತದಿಂದ ರಾಜ್ಯಸಭೆಗೆ ಚುನಾಯಿತರಾಗಿ ಹೋಗಿದ್ದರೆಂಬುದು ಗಮನಾರ್ಹ. ಇನ್ನು ಉಳಿದಂತೆ ಈಗ ದಕ್ಷಿಣ ಕರ್ನಾಟಕ ಎಂದು ಕರೆಯಲ್ಪಡುವ ಬೆಂಗಳೂರು, ಮೈಸೂರು, ಕೋಲಾರ, ತುಮಕೂರು, ಹಾಸನ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಭಾಗಗಳು ಮೈಸೂರು ರಾಜರ ಆಡಳಿತಕ್ಕೊಳಪಟ್ಟಿದ್ದವು.

1981ರಲ್ಲಿ ಕರ್ನಾಟಕ ರಾಜ್ಯ ನಿರ್ಮಾಣದ ಬೆಳ್ಳಿಹಬ್ಬ ಆಚವರಿಸಿದ ಸಂದರ್ಭದಲ್ಲಿ ನಾನು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿ ಇದ್ದೆ. ಆಗ ಪತ್ರಿಕೆಯ ಗ್ರಂಥಾಲಯದಲ್ಲಿ ಪತ್ರಿಕೆಯ ಹಳೆಯ ಕಡತಗಳನ್ನು (ಫೈಲು) ಹುಡುಕಿ ಕರ್ನಾಟಕ ಏಕೀಕರಣದ ಹೋರಾಟದ ಇತಿಹಾಸದ ಬಗ್ಗೆ ಒಂದು ಸುದೀರ್ಘ ಲೇಖನವನ್ನು ಬರೆದಿದ್ದೆ. ಮುಂದೆ ನವಕರ್ನಾಟಕ ಪ್ರಕಾಶನದವರು ಅದರ ಬಗ್ಗೆ ದೊಡ್ಡ ಪುಸ್ತಕವನ್ನೇ ಹೊರ ತಂದರು.

ಐವತ್ತರ ದಶಕದ ಆರಂಭದ ದಿನಗಳವು. ದೇಶ ಹೊಸದಾಗಿ ಸ್ವಾತಂತ್ರ್ಯ ಪಡೆದಿತ್ತು. ಹಲವಾರು ಭಾಷೆ, ಧರ್ಮ, ಪ್ರದೇಶ, ಸಂಸ್ಕೃತಿಗಳ ಜನ ಸೇರಿ ಒಂದು ಭಾರತ ದೇಶವಾಗಿತ್ತು. ಆದರೆ ಭಾಷಾ ವೈಶಿಷ್ಟ್ಯತೆ, ಐಡೆಂಟಿಟಿಗಳನ್ನು ಉಳಿಸಿಕೊಳ್ಳುವ ತಹತಹ ಎಲ್ಲೆಡೆ ಕಂಡು ಬರುತ್ತಿತ್ತು. ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ತೆಲುಗು ರಾಜ್ಯ ಸ್ಥಾಪನೆಗಾಗಿ ಪೊಟ್ಟಿ ಶ್ರೀರಾಮುಲು ಆಮರಣ ಅನ್ನ ಸತ್ಯಾಗ್ರಹ ಮಾಡಿ ಅಸು ನೀಗಿದ ನಂತರ ಭಾಷಾವಾರು ರಾಜ್ಯಗಳ ರಚನೆಯ ಬೇಡಿಕೆಗೆ ಅಂದಿನ ನೆಹರೂ ನೇತೃತ್ವದ ಕೇಂದ್ರ ಸರಕಾರ ಮಣಿಯಬೇಕಾಯಿತು.

ಆಗ ಹರಿದು ಹಂಚಿ ಹೋಗಿದ್ದ ಕರ್ನಾಟಕದ ಏಕೀಕರಣಕ್ಕಾಗಿ ಬಹುದೊಡ್ಡ ಹೋರಾಟ ನಡೆಯಿತು.ಕರ್ನಾಟಕ ಏಕೀಕರಣದ ಬಗ್ಗೆ ಮೈಸೂರು ಪ್ರಾಂತದ ಜನರಿಗೆ ಅದರಲ್ಲೂ ರಾಜಕಾರಣಿಗಳಿಗೆ ಅಷ್ಟು ಆಸಕ್ತಿ ಇರಲಿಲ್ಲ. ಆದರೆ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಮಾತ್ರ ಈ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿದ್ದರು. ಉಳಿದಂತೆ ಉತ್ತರ ಕರ್ನಾಟಕದ ಇಂಚಗೇರಿ ಮಠದ ಮಹಾದೇವಪ್ಪಮುರಗೋಡ(ದೇವರು) ಚಿನ್ಮಯಸ್ವಾಮಿ ಓಂಕಾರಮಠ, ಶಾಂತಿನಾಥ ಇಂಗಳೆ, ತಲ್ಲೂರು ರಾಯನಗೌಡರು ಅಳವಂಡಿ ಶಿವಮೂರ್ತಿ ಸ್ವಾಮಿ, ಮುನವಳ್ಳಿ ವಕೀಲರು, ಮಂಗಳೂರಿನ ಕೆ.ಆರ್.ಕಾರಂತರು, ಕಮ್ಯುನಿಸ್ಟ್ ನಾಯಕರಾದ ಬಿ.ವಿ.ಕಕ್ಕಿಲ್ಲಾಯರು, ಎನ್.ಕೆ.ಉಪಾಧ್ಯಾಯರು, ಹುಬ್ಬಳ್ಳಿಯ ಕಮ್ಯುನಿಸ್ಟ್ ನಾಯಕ ಎ.ಜೆ.ಮುಧೋಳ, ಬಳ್ಳಾರಿಯ ಕೋ ಚನ್ನಬಸಪ್ಪನವರು, ರಮಜಾನ್ ಸಾಹೇಬರು, ಕರ್ನಾಟಕ ಏಕೀಕರಣದ ಬಗ್ಗೆ ವಿಶೇಷ ಆಸಕ್ತಿವಹಿಸಿದ್ದರು.

ಕರ್ನಾಟಕ ಏಕೀಕರಣಕ್ಕಾಗಿ ನಡೆದ ಹೋರಾಟದಲ್ಲಿ ಕರ್ನಾಟಕದಲ್ಲಿ ಬಲಿದಾನ ಮಾಡಿದ ಏಕೈಕ ವ್ಯಕ್ತಿ ಬಳ್ಳಾರಿಯ ರಮಜಾನ್ ಸಾಹೇಬರು. ಇಂದಿನ ಅನೇಕ ಕನ್ನಡ ಹೋರಾಟಗಾರರಿಗೆ ಇದರ ವೀರೋಚಿತ ಹೋರಾಟದ ಇತಿಹಾಸ ಗೊತ್ತಿಲ್ಲ.

ಆಗ ಅಂದರೆ 1952ರಲ್ಲಿ ಕರ್ನಾಟಕ ರಾಜ್ಯ ನಿರ್ಮಾಣಕ್ಕಾಗಿ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು (ಅಕರಾನಿ) ಅಸ್ತಿತ್ವಕ್ಕೆ ಬಂತು. ಅದು ಸುಮಾರು ಹತ್ತು ವರ್ಷಗಳ ಕಾಲ ಸಕ್ರಿಯ ವಾಗಿತ್ತು. ಮಹಾದೇವಪ್ಪನವರ ಹುಬ್ಬಳ್ಳಿಯ ಗಿರೀಶ ಆಶ್ರಮದಲ್ಲಿ ಮೊದಲ ಸಭೆ ಸೇರಿತ್ತು. ನಂತರ ಹಲವಾರು ಸಭೆಗಳು ನಡೆದವು. 1954ರಲ್ಲಿ ದಾವಣಗೆರೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಮೊದಲ ಸಮಾವೇಶ ನಡೆಯಿತು. ಈ ಸಭೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಸಮಿತಿಗೆ ಪದಾಧಿಕಾರಿಗಳ ನೇಮಕವಾಯಿತು. ಕೆ.ಆರ್.ಕಾರಂತರು ಅಧ್ಯಕ್ಷರಾದರು ಹಾಗೂ ಬಿ.ವಿ.ಕಕ್ಕಿಲ್ಲಾಯರು ಪ್ರಧಾನ ಕಾರ್ಯದರ್ಶಿಯಾದರು.

ಇದಕ್ಕಿಂತ ಮೊದಲು ರೋಣದ ದೊಡ್ಡಮೇಟಿ ಅಂದಾನಪ್ಪನವರು ಮೊದಲ ಬಾರಿ ಕರ್ನಾಟಕಾಂಬೆಯ ಪೋಟೊ ಇಟ್ಟುಕೊಂಡು ಅನ್ನ ಸತ್ಯಾಗ್ರಹ ಆರಂಭಿಸಿದರು. ಇದರಿಂದ ಕನ್ನಡಿಗರ ಜಾಗೃತಿಗೆ ಚಾಲನೆ ದೊರಕಿತು.

ಕರ್ನಾಟಕ ರಾಜ್ಯ ನಿರ್ಮಾಣಕ್ಕಾಗಿ ಹುಬ್ಬಳ್ಳಿ ಸಮೀಪದ ಅದರಗುಂಚಿಯ ಶಂಕರ ಗೌಡರ ಆಮರಣ ನಿರಶನ ಕೂಡ ನಡೆಯಿತು. ಆಗ ಹೋರಾಟದ ಕಾವು ತೀವ್ರಗೊಂಡಿತು. ಅಂದಿನ ಕಾಂಗ್ರೆಸ್ ನಾಯಕರು ಒಳಗೊಳಗೆ ಏಕೀಕರಣದ ಪರವಾಗಿ ಇದ್ದರೂ ಕಾಂಗ್ರೆಸ್ ಹೈಕಮಾಂಡ್‌ಗೆ ಅದರಲ್ಲೂ ನೆಹರೂ ಅವರಿಗೆ ಹೆದರಿ ಬಹಿರಂಗವಾಗಿ ಮಾತಾಡುತ್ತಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಕನ್ನಡ ಹೋರಾಟಗಾರರು ಹುಬ್ಬಳ್ಳಿಯಲ್ಲಿ ನಡೆದ ಪ್ರದೇಶ ಕಾಂಗ್ರೆಸ್ ಸಭೆಯ ಸಂದರ್ಭದಲ್ಲಿ ಅಂದಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪನವರ ವಾಹನಕ್ಕೆ ಬೆಂಕಿ ಹಚ್ಚಿದರು. ಪೊಲೀಸರು ಗೋಲಿಬಾರ್ ಮಾಡಿದರು.

ಈ ಎಲ್ಲ ವೀರೋಚಿತ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ 1956ನೇ ಇಸವಿ ನವೆಂಬರ್ 1 ರಂದು ಅಸ್ತಿತ್ವಕ್ಕೆ ಬಂತು. ಭಾಷೆಯ ಆಧಾರದಲ್ಲಿ ಕರ್ನಾಟಕ ನಿರ್ಮಾಣವಾಯಿತು. ಆದರೂ ಕನ್ನಡ ಭಾಷಿಕ ಪ್ರದೇಶಗಳಾದ ಕಾಸರಗೋಡು, ಮಂಜೇಶ್ವರ, ಹೊಸೂರು, ತಾಳವಾಡಿ, ಸೊಲ್ಲಾಪುರ, ಅದವಾನಿ, ಮುಂತಾದ ಪ್ರದೇಶಗಳನ್ನು ಕರ್ನಾಟಕದಲ್ಲಿ ಸೇರಿಸಿಕೊಳ್ಳಲು ಆಗಲಿಲ್ಲ ಎಂಬುದೊಂದು ವಿಷಾದದ ಸಂಗತಿಯಾಗಿದೆ. ಆದರೂ ಅವುಗಳು ಭಾವನಾತ್ಮಕವಾಗಿ ಕರ್ನಾಟಕದ ಜೊತೆಗಿವೆ ಅಂದರೆ ಅತಿಶಯೋಕ್ತಿಯಲ್ಲ.

ಕರ್ನಾಟಕ ರಾಜ್ಯವೇನೋ ನಿರ್ಮಾಣವಾಯಿತು.ಆದರೆ ಭಾವನಾತ್ಮಕವಾಗಿ ಕರ್ನಾಟಕ ಇನ್ನೂ ಒಂದಾಗಬೇಕಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಾದೇಶಿಕ ತಾರತಮ್ಯದ ಅಸಮಾಧಾನ ಅಲ್ಲಲ್ಲಿ ಕಂಡು ಬರುತ್ತಿದೆ. ಪ್ರತ್ಯೇಕ ಉತ್ತರ ಕರ್ನಾಟಕ, ಪ್ರತ್ಯೇಕ ಕೊಡಗು, ಪ್ರತ್ಯೇಕ ತುಳುನಾಡಿನ ಧ್ವನಿಗಳು ಆಗಾಗ ಕೇಳಿ ಬರುತ್ತಿವೆ. ಇಂತಹ ಅಸಮಾಧಾನ ಕಡಿಮೆಯಾಗಬೇಕೆಂದರೆ ಅಭಿವೃದ್ಧಿ ಯೋಜನೆಗಳಲ್ಲಿ ತಾರತಮ್ಯ ಇರಬಾರದು. ಅಭಿವೃದ್ಧಿ ಯೋಜನೆ ಒತ್ತಟ್ಟಿಗಿರಲಿ, ಇತ್ತೀಚೆಗೆ ಅತಿವೃಷ್ಟಿ ಮತ್ತು ಪ್ರವಾಹ ಉಂಟಾದಾಗ ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಜನರು ಮನೆಮಾರು ಕಳೆದುಕೊಂಡು ಬೀದಿಗೆ ಬಿದ್ದರು. ಮುನ್ನೂರಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದವು. ಅಪಾರ ಪ್ರಮಾಣದ ಬೆಳೆಗಳು ಮತ್ತು ಮೂಲ ಸೌಕರ್ಯಗಳು ಹಾಳಾದವು. ಆದರೆ ನೋವಿನ ಹಾಗೂ ಖಂಡನೀಯ ಸಂಗತಿಯೆಂದರೆ ಹೀಗೆ ಬೀದಿಗೆ ಬಿದ್ದಿರುವ ಜನರಿಗೆ ಇದುವರೆಗೆ ಪುನರ್ವಸತಿ ಕಲ್ಪಿಸಲು ಆಗಿಲ್ಲ. ತಕ್ಷಣ ಪರಿಹಾರ ನೀಡಲಿಲ್ಲ. ರಾಜ್ಯದ ಕಂದಾಯ ಸಚಿವರು ಕಲ್ಯಾಣ ಕರ್ನಾಟಕದ ಐದೂ ಜಿಲ್ಲೆಗಳಲ್ಲಿ ಒಂದೇ ದಿನ ಕಾಟಾಚಾರದ ಪ್ರವಾಸ ಮಾಡಿದರು. ವಾಹನ ಬಿಟ್ಟು ಇಳಿಯಲೇ ಇಲ್ಲ ಎಂದು ಜನ ದೂರುತ್ತಾರೆ. ಅದೇ ಬೆಂಗಳೂರಿನಲ್ಲಿ ಒಂದು ದಿನ ಮಳೆಯಾಗಿ ಮನೆಗಳಲ್ಲಿ ನೀರು ಹೊಕ್ಕಾಗ ಮುಖ್ಯ ಮಂತ್ರಿಗಳೇ ನೇರವಾಗಿ ಆ ಪ್ರದೇಶಗಳಿಗೆ ಭೇಟಿ ನೀಡಿ ತಕ್ಷಣ ಪರಿಹಾರ ನೀಡಿದರು ಎಂಬ ಟೀಕೆ ವ್ಯಕ್ತವಾಯಿತು. ಇದನ್ನೇ ತಾರತಮ್ಯ ಎಂದು ಕರ್ನಾಟಕದ ಇತರ ಭಾಗಗಳ ಜನ ಆರೋಪಿಸುತ್ತಾರೆ.

ಕರ್ನಾಟಕವನ್ನು ಕಟ್ಟಲು ರಾಜಕಾರಣಿಗಳು ಮತ್ತು ಹೋರಾಟಗಾರರು ಮಾತ್ರ ಶ್ರಮಿಸಲಿಲ್ಲ ಇವರಿಗಿಂತ ಮಿಗಿಲಾಗಿ ನಾಡಿನ ಸಾರಸ್ವತಲೋಕದ ಕವಿಗಳು, ಕಲಾವಿದರು ಕೂಡ ತಮ್ಮ ಕೊಡುಗೆ ನೀಡಿದರು. ಕುವೆಂಪು, ಅ.ನ.ಕೃಷ್ಣರಾಯರು, ನಿರಂಜನ , ಕಟ್ಟೀಮನಿ, ಬಿ.ಎ.ಸನದಿ, ನಿಸಾರ್ ಅಹಮದ್, ಲಂಕೇಶ್, ಅನಂತಮೂರ್ತಿ, ಅಡಿಗ, ಬಿ.ಎಂ.ಇದಿನಬ್ಬ, ರಾವ್ ಬಹಾದ್ದೂರ, ಮ.ರಾಮಮೂರ್ತಿ ಹೀಗೆ ಅನೇಕರು ಅವರದೇ ಆದ ಕೊಡುಗೆ ನೀಡಿದ್ದಾರೆ.

ಇನ್ನು ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯೇ ಗದುಗಿನ ಹುಯಿಲಗೋಳ ನಾರಾಯಣರಾಯರು (1884-1971) ‘‘ಉದಯವಾಗಲಿ ಚೆಲುವ ಕನ್ನಡನಾಡು’’ ಎಂಬ ಪದ್ಯವನ್ನು ಬರೆದರು. ಅದು ಕರ್ನಾಟಕ ಏಕೀಕರಣ ಕಾಲದ ನಾಡಗೀತೆಯಾಗಿತ್ತು.ಆಗ ಅಂದರೆ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲು ಹುಯಿಲಗೋಳರು ಈ ಪದ್ಯ ಬರೆದಿದ್ದರು. ಆ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಾ ಗಾಂಧೀಜಿಯವರ ಎದುರು ಗಾನ ಸರಸ್ವತಿ ಗಂಗೂಬಾಯಿ ಹಾನಗಲ್ ಅವರು ಈ ಹಾಡನ್ನು ಹಾಡಿದರು.

ಒಬ್ಬರೇ ಇಬ್ಬರೇ ಧಾರವಾಡದ ಶಾಂತಕವಿಗಳು (ಸಕ್ಕರಿ ಬಾಳಾಚಾರ್ಯ)ಕರಾವಳಿಯ ಪಂಜೆ ಮಂಗೇಶರಾಯರು ಹೀಗೆ ಅನೇಕರ ಕೊಡುಗೆ ಈ ನಾಡಿಗಿದೆ.
ಭಾಷೆಯ ಆಧಾರದಲ್ಲಿ ನಾವು ಒಂದಾಗಲು ಕಟ್ಟಿದ ಕರ್ನಾಟಕ ಈಗ ಹೆಸರಿಗೆ ಮಾತ್ರ ಒಂದಾಗಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಎಂದೆಲ್ಲ ಅಪಸ್ವರದ ಜೊತೆ ಜಾತಿಯ ಅಡ್ಡಗೋಡೆಗಳು ಅಲ್ಲಲ್ಲಿ ಎದ್ದು ನಿಲ್ಲುತ್ತಿವೆ.ವೀರಶೈವರು, ಒಕ್ಕಲಿಗರು, ಬ್ರಾಹ್ಮಣರು ಮುಸ್ಲಿಮರು, ಕ್ರೈಸ್ತರು ಹೀಗೆ ಐಡೆಂಟಿಟಿಗಳು ಕನ್ನಡದ ಏಕತೆಗೆ ಅಡ್ಡಿಯಾಗಿವೆ. ಇವುಗಳನ್ನೆಲ್ಲ ದಾಟಿ ಭಾವನಾತ್ಮಕವಾಗಿ ಕನ್ನಡಿಗರು ಒಂದಾಗಬೇಕಾಗಿದೆ.

ಈಗಂತೂ ಒಂದೇ ದೇಶ, ಒಂದೇ ಭಾಷೆ, ಒಂದೇ ಧರ್ಮದ ಹೆಸರಿನಲ್ಲಿ ಭಾಷಾವಾರು ಪ್ರಾಂತಗಳ ಪ್ರಾದೇಶಿಕ, ಸಾಂಸ್ಕೃತಿಕ ಅಸ್ಮಿತೆಯನ್ನೇ ಅಳಿಸಿ ಹಾಕುವ ಹುನ್ನಾರ ನಡೆದಿದೆ. ಬಲವಂತದ ಹಿಂದಿ ಹೇರಿಕೆ ಈ ನೆಲದ ಜನಭಾಷೆಗೆ ಕಂಟಕಕಾರಿಯಾಗಿದೆ. ಅಂತಲೇ ಕನ್ನಡಿಗರು ಯಾವುದೇ ಧರ್ಮಕ್ಕೆ, ಜಾತಿಗೆ, ಪ್ರದೇಶಕ್ಕೆ ಸೇರಿರಲಿ ತಮ್ಮ ನೆಲದ, ಜನದ ಭಾಷೆಯನ್ನು, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಪಣ ತೊಡಬೇಕಾಗಿದೆ.

ಕೇಂದ್ರದ ಬಿಜೆಪಿ ಸರಕಾರ ರಾಜ್ಯ ಸರಕಾರಗಳನ್ನು ಮುನ್ಸಿಪಾಲಿಟಿ ಮಟ್ಟಕ್ಕೆ ತಂದಿದೆ. ರಾಜ್ಯಾಂಗದ ಜಂಟಿ ಪಟ್ಟಿಯಲ್ಲಿರುವ ಶಿಕ್ಷಣ, ಕಾರ್ಮಿಕ, ಕೃಷಿ ಮುಂತಾದ ವಿಷಯಗಳ ಕುರಿತಂತೆ ತನ್ನ ನಿರ್ಧಾರಗಳನ್ನು ಏಕ ಪಕ್ಷೀಯವಾಗಿ ಹೇರುತ್ತಿದೆ. ಜಿಎಸ್‌ಟಿಯನ್ನು ತಂದು ರಾಜ್ಯಗಳ ಆದಾಯ ಮೂಲಗಳಿಗೆ ಕತ್ತರಿ ಪ್ರಯೋಗ ಮಾಡಿದೆ. ಸಂವಿಧಾನದ ಪ್ರಕಾರ ರಾಷ್ಟ್ರೀಯತೆಗಳ ಒಕ್ಕೂಟ, ಕನ್ನಡ ರಾಷ್ಟ್ರೀಯತೆ ಸೇರಿದಂತೆ ಆಯಾ ಪ್ರದೇಶಗಳ ಪ್ರಾದೇಶಿಕ ರಾಷ್ಟ್ರೀಯತೆಗಳು ಭಾರತೀಯ ರಾಷ್ಟ್ರೀಯತೆಯಷ್ಟೇ ಮುಖ್ಯ.ಎರಡೂ ಪರಸ್ಪರ ಪೂರಕವಾಗಿರಬೇಕು. ಆದರೆ ಈಗ ಪ್ರಾದೇಶಿಕ ರಾಷ್ಟ್ರೀಯತೆ ಮತ್ತು ಅಸ್ಮಿತೆಯನ್ನು ಒಡೆದು ಹಾಕಿ ಏಕ ರಾಷ್ಟ್ರೀಯತೆಯನ್ನು ಹೇರುವ ಮಸಲತ್ತು ನಡೆದಿದೆ.ರಾಷ್ಟ್ರಕವಿ ಕರ್ನಾಟಕ ಮಾತೆಯನ್ನು ಭಾರತ ಮಾತೆಯ ತನುಜಾತೆ ಎಂದು ಕರೆದರು.ಆದರೆ ಈಗ ತನುಜಾತೆಯನ್ನು ಸೊರಗಿಸುವ ಷಡ್ಯಂತ್ರ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ.

ಇಂತಹ ಸಂಕೀರ್ಣ ಸನ್ನಿವೇಶದಲ್ಲಿ ಭಾರತೀಯತೆಯ ಅಬ್ಬರದಲ್ಲಿ ಕರ್ನಾಟಕತ್ವ ಕಳೆಗುಂದಬಾರದು.ಕರ್ನಾಟಕ ಉಳಿದರೆ ಕನ್ನಡ ಉಳಿಯುತ್ತದೆ. ದಿಲ್ಲಿಯ ಗುಲಾಮಗಿರಿ ಮಾಡುವ ಪಕ್ಷಗಳಿಂದ ಕನ್ನಡ ಪರಂಪರೆ ಉಳಿಯುವುದಿಲ್ಲ. ಬರೀ ರಾಜ್ಯೋತ್ಸವ ಮಾಡಿ, ಪರೇಡ್‌ನಲ್ಲಿ ಸಂಭ್ರಮಿಸಿದರೆ ಸಾಲದು, ಕರ್ನಾಟಕತ್ವ ಉಳಿಸಿಕೊಳ್ಳಲು ಧ್ವನಿಯೆತ್ತಬೇಕಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ