ಆಕ್ರಮಣದ ಸಂದರ್ಭ ಸಾರ್ವಭೌಮತ್ವದ ರಕ್ಷಣೆಗೆ ಸಂಕಲ್ಪಿಸಿದ್ದೇವೆ: ರಾಜನಾಥ್ ಸಿಂಗ್

Update: 2020-11-05 17:27 GMT

ಹೊಸದಿಲ್ಲಿ, ನ.5: ಏಕಪಕ್ಷೀಯ ನಿರ್ಧಾರ ಮತ್ತು ಆಕ್ರಮಣದ ಸಂದರ್ಭ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಿಕೊಳ್ಳಲು ಭಾರತ ಸಂಕಲ್ಪಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ನ್ಯಾಷನಲ್ ಡಿಫೆನ್ಸ್ ಕಾಲೇಜಿನ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪಾಲ್ಗೊಂಡು ಅವರು ಮಾತನಾಡಿದರು. ವಿರೋಧ, ಭಿನ್ನಾಭಿಪ್ರಾಯ ಇರುವುದು ಸಹಜ. ಆದರೆ ಅದು ವಿವಾದದ ರೂಪ ಪಡೆಯಬಾರದು ಎಂಬ ನಿಲುವು ಭಾರತದ್ದು. ಭಿನ್ನಾಭಿಪ್ರಾಯವನ್ನು ಮಾತುಕತೆಯ ಮೂಲಕ ಶಾಂತಿಯುತವಾಗಿ ಪರಿಹರಿಸುವುದಕ್ಕೆ ನಾವು ಮಹತ್ವ ನೀಡುತ್ತೇವೆ ಎಂದು ಸಿಂಗ್ ಹೇಳಿದ್ದಾರೆ. ಪ್ರತಿಗಾಮಿ ನೀತಿ ಅನುಸರಿಸುತ್ತಿರುವ ಪಾಕಿಸ್ತಾನವನ್ನು ಹೊರತುಪಡಿಸಿ ಇತರೆಲ್ಲಾ ನೆರೆಯ ದೇಶಗಳೊಂದಿಗೆ ಭಾರತದ ಸಂಬಂಧ ಉತ್ತಮವಾಗಿದೆ.

ಮುಂದಿನ ದಶಕದಲ್ಲಿ ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಭಾರತದ ದೃಷ್ಟಿಕೋನದ ನೀಲನಕ್ಷೆಯನ್ನು ಕೇಂದ್ರ ಸರಕಾರ ಒದಗಿಸಿದೆ. ಭಾರತದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವದ ರಕ್ಷಣೆ, ಆರ್ಥಿಕ ಅಭಿವೃದ್ಧಿಗೆ ಸುರಕ್ಷಿತ ಮತ್ತು ಸುಸ್ಥಿರ ಪರಿಸ್ಥಿತಿ ನಿರ್ಮಾಣ, ವಿದೇಶದಲ್ಲಿ ನೆಲೆಸಿರುವ ಭಾರತೀಯರ ಹಿತರಕ್ಷಣೆ ಮುಂತಾದವು ಇದರಲ್ಲಿ ಸೇರಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಮಧ್ಯೆ, ಭಾರತ-ಚೀನಾ ನಡುವೆ ಸೇನಾ ಕಮಾಂಡರ್ ಮಟ್ಟದ 8ನೇ ಸುತ್ತಿನ ಮಾತುಕತೆ ಶುಕ್ರವಾರದಿಂದ ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News