ಭಾರತ್ ಬಯೋಟೆಕ್‌ನ ಕೋವಿಡ್ ಲಸಿಕೆ ಫೆಬ್ರವರಿಯಲ್ಲಿ ಲಭ್ಯ !

Update: 2020-11-05 18:49 GMT

ಹೊಸದಿಲ್ಲಿ, ನ. 5: ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆಯ ಅಂತಿಮ ಹಂತದ ಪ್ರಯೋಗ ಈ ತಿಂಗಳಲ್ಲಿ ಪ್ರಾರಂಭವಾಗಲಿರುವುದರಿಂದ ಫೆಬ್ರವರಿಯಲ್ಲಿ ಲಸಿಕೆ ಲಭ್ಯವಾಗಲಿದೆ. ಅಲ್ಲದೆ, ಈ ವರೆಗಿನ ಅಧ್ಯಯನದಲ್ಲಿ ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದು ಕಂಡು ಬಂದಿದೆ ಎಂದು ಸರಕಾರದ ಹಿರಿಯ ವಿಜ್ಞಾನಿ ಗುರುವಾರ ತಿಳಿಸಿದ್ದಾರೆ.

ಸರಕಾರಿ ಸ್ವಾಮಿತ್ವದ ವೈದ್ಯಕೀಯ ಸಂಶೋಧನೆಯ ಭಾರತೀಯ ಮಂಡಳಿ (ಐಸಿಎಂಆರ್)ಯೊಂದಿಗೆ ಖಾಸಗಿ ಕಂಪೆನಿಯಾಗಿರುವ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಮುಂದಿನ ವರ್ಷ ದ್ವಿತೀಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಬಹುದು ಎಂದು ಈ ಹಿಂದೆ ನಿರೀಕ್ಷಿಸಲಾಗಿತ್ತು. ‘‘ವ್ಯಾಕ್ಸಿನ್ ಪರಿಣಾಮಕಾರಿ ಎಂದು ಕಂಡು ಬಂದಿದೆ’’ ಎಂದು ಕೋವಿಡ್-19 ಕ್ಷಿಪ್ರ ಕಾರ್ಯಪಡೆಯ ಸದಸ್ಯರೂ ಆಗಿರುವ ಐಸಿಎಂಆರ್‌ನ ಹಿರಿಯ ವಿಜ್ಞಾನಿ ರಜನಿಕಾಂತ್ ಐಸಿಎಂಆರ್‌ನ ಹೊಸದಿಲ್ಲಿಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಗುರುವಾರ ಹೇಳಿದ್ದಾರೆ.

ಐಸಿಎಂಆರ್‌ನ ಸಂಶೋಧನಾ ನಿರ್ವಹಣೆ, ನೀತಿ, ಯೋಜನೆ ಹಾಗೂ ಸಂಯೋಜನೆ ಘಟಕದ ಮುಖ್ಯಸ್ಥರಾಗಿರುವ ರಜನಿಕಾಂತ್, ಮೂರನೇ ಹಂತದ ಪ್ರಯೋಗ ಪೂರ್ಣಗೊಳ್ಳುವ ಮೊದಲೇ ಕೊವ್ಯಾಕ್ಸಿನ್ ಲಸಿಕೆಯನ್ನು ಜನರಿಗೆ ನೀಡಬಹುದೇ ಎಂಬುದನ್ನು ಆರೋಗ್ಯ ಸಚಿವಾಲಯದ ನಿರ್ಧರಿಸಬೇಕು ಎಂದಿದ್ದಾರೆ. 1 ಹಾಗೂ 2ನೇ ಹಂತದ ಪ್ರಯೋಗಗಳಲ್ಲಿ ಸುರಕ್ಷತೆ ಹಾಗೂ ಪರಿಣಾಮ ಕಂಡು ಬಂದಿದೆ. ಆದರೆ, ಮೂರನೇ ಹಂತದ ಪ್ರಯೋಗ ಪೂರ್ಣಗೊಳ್ಳದೆ ಶೇ. 100 ಖಚಿತತೆ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಈ ಲಸಿಕೆಯಿಂದ ಸ್ಪಲ್ಪ ಅಪಾಯ ಉಂಟಾಗಬಹುದು. ಅದಕ್ಕೆ ನೀವು ಸಿದ್ಧರಾಗಿದ್ದರೆ, ಲಸಿಕೆ ತೆಗೆದುಕೊಳ್ಳಬಹುದು. ಅಗತ್ಯವಿದ್ದರೆ, ತುರ್ತು ಪರಿಸ್ಥಿತಿಗಳಲ್ಲಿ ಲಸಿಕೆ ನೀಡುವ ಬಗ್ಗೆ ಸರಕಾರ ಚಿಂತಿಸಬಹುದು ಎಂದು ರಜನಿಕಾಂತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News