ಭಾರತದ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ 'ದಮನಕಾರಿ': ಐಸಿಜೆ ಕಳವಳ

Update: 2020-11-16 07:29 GMT

ಹೊಸದಿಲ್ಲಿ: ಭಾರತದ ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆಯ ಕುರಿತು ತೀವ್ರ ಆತಂಕವನ್ನು ಇಂಟರ್ ನ್ಯಾಷನಲ್ ಕಮಿಷನ್ ಆಫ್ ಜೂರಿಸ್ಟ್ಸ್(ಐಸಿಜೆ) ವ್ಯಕ್ತಪಡಿಸಿದೆ. "ಈ ಕಾನೂನು  ಸರಕಾರೇತರ ಸಂಸ್ಥೆಗಳ ಮಹತ್ವದ ಕೆಲಸ ಕಾರ್ಯಗಳಿಗೆ ಅಕ್ರಮವಾಗಿ ಅಡ್ಡಿಯುಂಟು ಮಾಡುತ್ತಿದೆ,'' ಎಂದು ಸಂಸ್ಥೆ ಬಿಡುಗಡೆಗೊಳಿಸಿದ ವರದಿಯಲ್ಲಿ ಹೇಳಲಾಗಿದೆ.

ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರದ ಅವಧಿಯಲ್ಲಿ ಈ ನಿರ್ದಿಷ್ಟ ಕಾಯಿದೆಯನ್ನು ಹಲವಾರು ಬಾರಿ ಬಿಗಿಗೊಳಿಸಿದ ಪರಿಣಾಮವಾಗಿ ತಮ್ಮ ಕಾರ್ಯನಿರ್ವಹಣೆಗಾಗಿ ವಿದೇಶಿ ನಿಧಿಯನ್ನು ಪಡೆಯುವ ಎನ್‍ಜಿಒಗಳಿಗೆ ಕಾರ್ಯಾಚರಿಸುವುದು ಕಠಿಣವಾಗಿ ಬಿಟ್ಟಿದೆ. "ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯ ಜಾರಿಯು ಮಾನವ ಹಕ್ಕುಗಳ ಹೋರಾಟಗಾರರಿಗೆ ಹಾಗೂ ಇತರ ನಾಗರಿಕ ಸಮಾಜದ ಸಂಘಟನೆಗಳಿಗೆ ತಮ್ಮ ಮಹತ್ವದ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಅನಗತ್ಯ ಅಡೆತಡೆಗಳನ್ನು ಸೃಷ್ಟಿಸುತ್ತಿದೆ,'' ಎಂದು ವರದಿಯಲ್ಲಿ ವಿವರಿಸಲಾಗಿದೆ.

"ಎನ್‍ಜಿಒಗಳು ವಿದೇಶಿ ನಿಧಿಯನ್ನು ಪಡೆಯುವುದನ್ನು ನಿರ್ಬಂಧಿಸುವ ಮೂಲಕ ಭಾರತ ಸರಕಾರವು ಈ ಕಾಯಿದೆಯನ್ನು ತನ್ನನ್ನು ಟೀಕಿಸುವವರ ದನಿಗಳನ್ನು  ಹತ್ತಿಕ್ಕಲು ಬಳಸುತ್ತಿದೆ,'' ಎಂದು ಐಸಿಜೆಯ ಲೀಗಲ್ ಮತ್ತು ಪಾಲಿಸಿ ನಿರ್ದೇಶಕ ಇಯಾನ್  ಸೀಡಮ್ರ್ಯಾನ್ ಹೇಳಿದ್ದಾರೆ.

ಭಾರತದ "ದಮನಕಾರಿ ವಿದೇಶಿ ನಿಧಿ ದೇಣಿಗೆ ಕಾಯಿದೆ ಎನ್‍ಜಿಒಗಳನ್ನು ಹತ್ತಿಕ್ಕುತ್ತಿರುವುದರಿಂದ ಅದನ್ನು ಪರಿಷ್ಕರಿಸಬೇಕು ಇಲ್ಲವೇ ರದ್ದುಗೊಳಿಸಬೇಕು,'' ಎಂದು ಐಸಿಜೆ  ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಹಲವಾರು ಖ್ಯಾತ ಎನ್‍ಜಿಒಗಳಾದ ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್, ಲಾಯರ್ಸ್ ಕಲೆಕ್ಟಿವ್, ಗ್ರೀನ್‍ಪೀಸ್ ಇಂಡಿಯಾ, ಪೀಪಲ್ಸ್ ವಾಚ್, ಕಂಪ್ಯಾಶನ್ ಇಂಟರ್ ನ್ಯಾಷನಲ್ ಹಾಗೂ ಪಬ್ಲಿಕ್ ಹೆಲ್ತ್ ಫೌಂಡೇಶನ್  ಆಫ್ ಇಂಡಿಯಾ ಹಲವಾರು ಬಾರಿ ಸರಕಾರದ ನೀತಿಯಿಂದಾಗಿ ಸಾಕಷ್ಟು ಕಷ್ಟ ಅನುಭವಿಸಿವೆಯಲ್ಲದೆ ಆ್ಯಮ್ನೆಸ್ಟಿ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಸರಕಾರ ಮುಟ್ಟುಗೋಲು ಹಾಕಿದ ನಂತರ ಅದು ಇತ್ತೀಚೆಗೆ ತನ್ನ ಭಾರತದ ಕಚೇರಿಗಳನ್ನು ಮುಚ್ಚುವ ಅನಿವಾರ್ಯತೆಯನ್ನೂ ಎದುರಿಸಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News