ಬಟ್ಟ ಬಯಲಾದ ಕಾಂಗ್ರೆಸ್ ಒಳಗಿನ ತಳಮಳ

Update: 2020-11-22 19:30 GMT

ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಯಾವುದೇ ಒಂದು ಪಕ್ಷ ಏಕಾಂಗಿಯಾಗಿ ನಿಂತು ಈ ಅಪಾಯದಿಂದ ದೇಶವನ್ನು ಕಾಪಾಡಲು ಸಾಧ್ಯವಿಲ್ಲ. ಕಾಂಗ್ರೆಸ್‌ನಂತಹ ಪಕ್ಷಗಳು ಎಷ್ಟೇ ತಪ್ಪುಮಾಡಿರಲಿ ಅವುಗಳನ್ನೂ ಫ್ಯಾಶಿಸ್ಟ್ ವಿರೋಧಿ ಹೋರಾಟದಲ್ಲಿ ಜೊತೆ ಸೇರಿಸಿಕೊಳ್ಳಬೇಕಾಗುತ್ತದೆ. ಕೇರಳದಂತಹ ರಾಜ್ಯದಲ್ಲಿ ಸಂಘಪರಿವಾರದ ತಾಳಕ್ಕೆ ತಕ್ಕಂತೆ ಕಾಂಗ್ರೆಸ್ ಕುಣಿಯುತ್ತಿದ್ದರೂ ಬಹುತ್ವ ಭಾರತದ ಉಳಿವಿಗಾಗಿ ಕಾಂಗ್ರೆಸ್ ಉಳಿಯಬೇಕು. ತನ್ನ ಎಲ್ಲ ಲೋಪ ದೋಷಗಳನ್ನು ತಿದ್ದಿಕೊಂಡು ಈ ಮಹಾ ಸಮರದಲ್ಲಿ ತನ್ನ ಪಾತ್ರವನ್ನು ನಿರ್ವಹಿಸಬೇಕು. ಇದು ಇಂದಿನ ಚಾರಿತ್ರಿಕ ಅನಿವಾರ್ಯವಾಗಿದೆ.



ಸ್ವತಂತ್ರ ಭಾರತದ ಅಸ್ತಿತ್ವವೇ ಕುಸಿಯುತ್ತಿರುವ ಈ ದಿನಗಳಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮುಖ್ಯ ಪಾತ್ರವಹಿಸಿದ ಕಾಂಗ್ರೆಸ್ ಎಂಬ ಶತಮಾನದ ಪಕ್ಷದಲ್ಲಿ ನಡೆದಿರುವ ಆಂತರಿಕ ಸಂಘರ್ಷ, ಬಯಲಿಗೆ ಬರುತ್ತಿರುವ ತಳಮಳದ ಮಾತುಗಳು ಗಮನಾರ್ಹ ಮತ್ತು ಆತಂಕಕಾರಿಯಾಗಿವೆ. ಉಳಿದೆಲ್ಲ ಸೆಕ್ಯುಲರ್ ಪ್ರತಿಪಕ್ಷಗಳನ್ನು ಧೃತರಾಷ್ಟ್ರಾಲಿಂಗನದಿಂದಲೇ ಮುಗಿಸಿದ ನಾಗಪುರ ನಿಯಂತ್ರಿತ ಪಕ್ಷಕ್ಕೆ ಇದರಿಂದ ಖುಷಿಯಾಗಿದ್ದರೆ ದೇಶದ ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿನ ಬಗ್ಗೆ ಕಾಳಜಿ ಹೊಂದಿದವರಿಗೆ ಸಹಜವಾಗಿ ಇದರಿಂದ ಆತಂಕವಾಗಿದೆ. ಈ ಸಂದರ್ಭದಲ್ಲಿ ಈ ಹಿಂದೆ ಹಿರಿಯ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ನಾಯಕ ಹರಕಿಷನ್ ಸಿಂಗ್ ಸುರ್ಜಿತ್ ಅವರು ಆಡಿದ ಮಾತೊಂದು ನೆನಪಿಗೆ ಬರುತ್ತಿದೆ. ಕಾಂಗ್ರೆಸ್ ಪಕ್ಷವನ್ನು ನಖಶಿಖಾಂತವಾಗಿ ವಿರೋಧಿಸುತ್ತ ಬಂದಿದ್ದ ಪಕ್ಷವೊಂದರ ಪ್ರಧಾನ ಕಾರ್ಯದರ್ಶಿಯಾಗಿದ್ದ ಸುರ್ಜಿತ್‌ರನ್ನು ಪತ್ರಕರ್ತರು ಒಮ್ಮೆ ಕಾಂಗ್ರೆಸ್ ಪಕ್ಷದ ಭವಿಷ್ಯದ ಬಗ್ಗೆ ಪ್ರಶ್ನಿಸಿದಾಗ ಕಾಂಗ್ರೆಸ್ ಪಕ್ಷ ನಾಶವಾಗುವುದನ್ನು ನಾವು ಬಯಸುವುದಿಲ್ಲ ಎಂದು ಸೂಚ್ಯವಾಗಿ ಹೇಳಿದ್ದರು.

ಕಳೆದ ವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದಿರಾ ಗಾಂಧಿಯವರ 103ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅವರು ಆಡಿದ ಮಾತುಗಳು ಈ ಸಂದರ್ಭದಲ್ಲಿ ಗಮನಾರ್ಹವಾಗಿವೆ. ಖರ್ಗೆಯವರು ‘‘ಕಾಂಗ್ರೆಸ್ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ಈ ದಿನಗಳಲ್ಲಿ ಒಂದೆಡೆ ಆರೆಸ್ಸೆಸ್, ಬಿಜೆಪಿ ನಮ್ಮ ಮೇಲೆ ದಾಳಿ ನಡೆಸುತ್ತಿರುವಾಗ ಇನ್ನೊಂದೆಡೆ ಕಾಂಗ್ರೆಸ್ ಒಳಗೆ ಆಂತರಿಕ ಕಿತ್ತಾಟ ನಡೆದಿದೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ ವಿರುದ್ಧ ಹುನ್ನಾರ ನಡೆದಿದೆ’’ ಎಂದು ನೇರವಾಗಿ ಕಪಿಲ್ ಸಿಬಲ್ ಮತ್ತು ಪಿ.ಚಿದಂಬರಂ ವಿರುದ್ಧ್ದ ಆಕ್ರೋಶ ವ್ಯಕ್ತಪಡಿಸಿದರು. ಖರ್ಗೆ ಅವರ ನೋವಿಗೆ ಸ್ಪಂದಿಸಿ ಮಾತಾಡಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ‘‘ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಕಮ್ಯುನಿಸ್ಟರು ಎಲ್ಲ ಕಡೆ ಸಕ್ರಿಯರಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಿಷ್ಕ್ರಿಯವಾಗಿದೆ. ಕೋಮುವಾದಿ ಶಕ್ತಿಗಳ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ಕಾಂಗ್ರೆಸ್ ವಿಫಲಗೊಂಡಿದೆ. ಬಹುತೇಕ ಕಾಂಗ್ರೆಸ್ ಕಾರ್ಯಕರ್ತರಿಗೆ ಸೈದ್ಧಾಂತಿಕ ತಿಳುವಳಿಕೆ ಇಲ್ಲ’’ ಎಂದು ಹೇಳಿದರು.

ಖರ್ಗೆ ಮತ್ತು ಸಿದ್ದರಾಮಯ್ಯ ಇವರು ಆಡಿರುವ ಮಾತುಗಳು ಸಾಂಕೇತಿಕ ಮಾತ್ರ.ಇದರಾಚೆ ಕಾಂಗ್ರೆಸ್ ಒಳಗೆ ನಡೆದಿರುವ ಆಂತರಿಕ ಕಲಹದ ಧೂಳು ಹೊರಗೆ ಹಾರಿ ಬರುತ್ತಲೇ ಇದೆ. ಪಕ್ಷ ಗೆದ್ದಾಗ ಅಧಿಕಾರದ ಸಕಲ ಸುಖವನ್ನು ಅನುಭವಿಸುವ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ಸೋತಾಗ ಅದರ ಹೊಣೆಯನ್ನು ಗಾಂಧಿ ಕುಟುಂಬದ ತಲೆಗೆ ಕಟ್ಟಲು ಹೊರಟಿದ್ದಾರೆ. ಕಾಂಗ್ರೆಸ್ ಅಡ್ಡ ಹಾದಿ ಹಿಡಿದು ಮೂರು ದಶಕಗಳೇ ಆದವು. ಪಿ.ವಿ.ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಅವರ ಮೌನ ಸಮ್ಮತಿಯೊಂದಿಗೆ ನಡೆದ ಅಯೋಧ್ಯೆಯ ಬಾಬರಿ ಮಸೀದಿಯ ಧ್ವಂಸ ಕಾರ್ಯಾಚರಣೆಯ ಕಾಲದಿಂದಲೇ ಕಾಂಗ್ರೆಸ್ ಕ್ರಮೇಣ ನೆಲೆ ಕಳೆದುಕೊಳ್ಳುತ್ತ ಬಂತು.ಇನ್ನು ಕಾಂಗ್ರೆಸ್ ಒಳಗಿರುವ ಕಾರ್ಯಕರ್ತರಿಗೆ ಹೋಗಲಿ ನಾಯಕರಿಗೂ ಸೈದ್ಧಾಂತಿಕ ತಿಳುವಳಿಕೆ ಇಲ್ಲ. ದೇಶ ಸ್ವತಂತ್ರವಾದ ಮೂರು ದಶಕಗಳ ಕಾಲ ಅಬಾಧಿತವಾಗಿ ನಂತರ ಆಗಾಗ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರೆಲ್ಲ ಸಿದ್ಧಾಂತ ನೋಡಿ ಸೇರಿದವರಲ್ಲ. ಹೇಗಾದರೂ ಮಾಡಿ ರಾಜಕೀಯ ಅಧಿಕಾರ ಪಡೆದು ನಿರಂತರವಾಗಿ ಅಧಿಕಾರದ ಸುಖ ಅನುಭವಿಸುವ ಜೊತೆಗೆ ಐಶ್ವರ್ಯ ಸಂಪಾದಿಸಲು ಪಕ್ಷಕ್ಕೆ ಸೇರಿದವರೇ ಜಾಸ್ತಿ. ಕಾಂಗ್ರೆಸ್ ಒಳಗಿನ ಈ ದೌರ್ಬಲ್ಯವನ್ನು ಅರಿತ ಆರೆಸ್ಸೆಸ್, ವಿಶ್ವ ಹಿಂದು ಪರಿಷತ್‌ನಂತಹ ಸಂಘಟನೆಗಳು ನಮ್ಮದು ಧಾರ್ಮಿಕ ಸಂಘಟನೆಗಳು ಎಂದು ಹೇಳಿ ಅನೇಕ ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಂತಹ ಪಕ್ಷಗಳ ಹಿರಿ ಕಿರಿಯ ಪುಢಾರಿಗಳನ್ನು ಅವರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಮಾತ್ರವಲ್ಲ ಕೆಲವು ಕಡೆ ಪದಾಧಿಕಾರಿಗಳನ್ನಾಗಿಯೂ ಮಾಡಿಕೊಂಡರು. ಆದರೆ ಜವಾಹರಲಾಲ್ ನೆಹರೂ ಕಾಲದಿಂದಲೂ ನೆಹರೂ-ಗಾಂಧಿ ಕುಟುಂಬಗಳು ಮಾತ್ರ ಕಾಂಗ್ರೆಸ್ ಪಕ್ಷದ ತಾತ್ವಿಕ ನಿಲುವಿಗೆ ಬದ್ಧವಾಗಿದ್ದವು. ಅವರನ್ನು ಬಿಟ್ಟರೆ ಅಂಬೇಡ್ಕರ್ ಅವರ ರಿಪಬ್ಲಿಕನ್ ಪಕ್ಷದಲ್ಲಿ ಆರಂಭದ ರಾಜಕೀಯ ವ್ಯಕ್ತಿತ್ವ ರೂಪಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಮಮನೋಹರ ಲೋಹಿಯಾರ ಸಮಾಜವಾದಿ ಚಳವಳಿಯ ಮೂಲಕ ಬಂದ ಸಿದ್ದರಾಮಯ್ಯನವರು ಮಾತ್ರ ಸಿದ್ಧಾಂತದ ಮಾತನ್ನಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಕೋಮುವಾದಿ ಶಕ್ತಿಗಳ ವಿರುದ್ಧ ಇವರಿಬ್ಬರೂ ನಿರಂತರವಾಗಿ ಧ್ವನಿಯೆತ್ತುತ್ತಾ ಬಂದಿದ್ದಾರೆ.

ಈಗಂತೂ ಕಾಂಗ್ರೆಸ್ ಪರಿಸ್ಥಿತಿ ಚಿಂತಾಜನಕವಾಗಿದೆ. ಖರ್ಗೆಯವರು ಹೇಳಿದಂತೆ ಒಂದು ಕಾರ್ಪೊರೇಷನ್ ಚುನಾವಣೆ ಗೆಲ್ಲಲಾಗದವರು ಪಕ್ಷದ ನಾಯಕರನ್ನು ಪ್ರಶ್ನಿಸುತ್ತಿದ್ದಾರೆ. ‘‘ಮೋದಿ ವರ್ಚಸ್ಸಿನ ಮುಂದೆ ರಾಹುಲ್ ಗಾಂಧಿ ಚಿಕ್ಕವರಾಗಿ ಕಾಣುತ್ತಾರೆ. ಆಕರ್ಷಕವಾಗಿ ಮಾತಾಡುವುದಿಲ್ಲ. ಚುರುಕಾಗಿ ಯೋಚಿಸುವ ಚಾತುರ್ಯವೂ ಅವರಿಗಿಲ್ಲ’’ ಎಂದು ಕಾಂಗ್ರೆಸ್ ಒಳಗಿನ ಹಿರಿತಲೆಗಳು ಅಪಸ್ವರ ತೆಗೆದಿದ್ದಾರೆ. ಆದರೆ ‘‘ಸೋಲಿಗೆ ರಾಹುಲ್ ಮಾತ್ರ ಕಾರಣವೇ? ಆಯಾ ರಾಜ್ಯಗಳಲ್ಲಿ ಇರುವ ನಾಯಕರು ತಾವೇ ಟಿಕೆಟ್ ಹಂಚಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಾರೆ. ಗೆದ್ದಾಗ ಸಂಭ್ರಮಿಸುತ್ತಾರೆ. ಸೋತಾಗ ಗಾಂಧಿ ಕುಟುಂಬದ ವಿರುದ್ಧ ಅಪಸ್ವರ ತೆಗೆಯುತ್ತಾರೆ’’ ಎಂದು ಇನ್ನೊಂದು ಗುಂಪಿನ ಅಭಿಪ್ರಾಯವಾಗಿದೆ.

ಅದೇನಿದ್ದರೂ ರಾಷ್ಟ್ರ ಮಟ್ಟದಲ್ಲಿ ಹಳ್ಳಿಹಳ್ಳಿಗೂ ಎಲ್ಲ ಸಮುದಾಯಗಳಿಗೂ ವ್ಯಾಪಿಸಿರುವ ಪಕ್ಷ ಕಾಂಗ್ರೆಸ್ ಮಾತ್ರ. ಆದರೆ ಈಗೀಗ ಸಂಘ ಪರಿವಾರವೂ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿದೆ. ಧರ್ಮ ಮತ್ತು ರಾಜಕೀಯವನ್ನು ಬೆರೆಸಿ ಶಿಸ್ತಿನ ಕಾರ್ಯಕರ್ತರ ಮೂಲಕ ಜನ ಸಾಮಾನ್ಯರ ಅದರಲ್ಲೂ ಜಾಗತೀಕರಣದ ಪರಿಣಾಮವಾಗಿ ಹುಟ್ಟಿಕೊಂಡಿರುವ ಮಧ್ಯಮ ವರ್ಗದ ಹೊಸ ಯುವಕರ ಮೆದುಳಿಗೆ ಕೈ ಹಾಕುವಲ್ಲಿ ಅದು ಯಶಸ್ವಿಯಾಗುತ್ತಿದೆ. ಬಿಜೆಪಿಗೆ ಕಾರ್ಯಕರ್ತರ ಮಾತ್ರವಲ್ಲ ಹಣದ ಕೊರತೆಯೂ ಇಲ್ಲ. ಕಾರ್ಪೊರೇಟ್ ಲಾಬಿ ಅದರ ಪರವಾಗಿದೆ. ಅದರಲ್ಲೂ ಕಾರ್ಪೊರೇಟ್ ಜಗತ್ತಿನಲ್ಲಿ ಏಕಸ್ವಾಮ್ಯ ಸಾಧಿಸುತ್ತಿರುವ ಮುಖೇಶ್ ಅಂಬಾನಿ ಸಾಮ್ರಾಜ್ಯ, ಅದಾನಿ ಮಿನಿ ಸಾಮ್ರಾಜ್ಯ ಈಗ ಬಿಜೆಪಿಯ ಬೆಂಗಾವಲಿಗೆ ನಿಂತಿದೆ.

ಜಾಗತಿಕವಾಗಿ ಈಗ ನೆಹರೂ ಕಾಲದಲ್ಲಿದ್ದ ವಾತಾವರಣ ಇಲ್ಲ. ಆಗ ಸಮಾಜವಾದಿ ಸೋವಿಯತ್ ರಶ್ಯ ಇತ್ತು. ಪೂರ್ವ ಯುರೋಪಿನ ಕಮ್ಯುನಿಸ್ಟ್ ದೇಶಗಳಿದ್ದವು. ಅಲಿಪ್ತ ಚಳವಳಿ ಬಲಿಷ್ಠವಾಗಿತ್ತು. ಎಲ್ಲರೂ ಸಮಾನವಾಗಿ ಬದುಕಬೇಕೆಂಬ ಆಶಯಗಳು ಪ್ರಬಲವಾಗಿದ್ದವು. ಆದರೆ ಸೋವಿಯತ್ ಪತನದೊಂದಿಗೆ ವಿಶ್ವದ ರಾಜಕೀಯ ಬದಲಾವಣೆಯಾಗಿದೆ. ಇಡೀ ಜಗತ್ತನ್ನು ಆಂಗ್ಲೋ ಅಮೆರಿಕನ್ ಸಾಮ್ರಾಜ್ಯಶಾಹಿ ಶಕ್ತಿಗಳು ನಿಯಂತ್ರಿಸುತ್ತಿವೆ. ವಿಶ್ವಗುರುವಾಗಲು ಹೊರಟವರೂ ಶ್ವೇತ ಭವನದ ಕಣ್ಸನ್ನೆಯಂತೆ ಹೆಜ್ಜೆಯಿಡಬೇಕಾಗುತ್ತದೆ.ಈಗ ಅದಕ್ಕೆ ಎದುರಾಗಿ ನಿಂತಿರುವ ಏಕೈಕ ಪ್ರಬಲ ಶಕ್ತಿ ಚೀನಾ. ಅದೂ ಕೂಡ ಬಂಡವಾಳಶಾಹಿ ಆರ್ಥಿಕತೆಯ ಜೊತೆ ಅನುಸಂಧಾನ ನಡೆಸಿದೆ.ಇಂತಹ ಪರಿಸ್ಥಿತಿಯಲ್ಲಿ ಕಮ್ಯುನಿಸ್ಟ್ ಪಕ್ಷಗಳಂತಹ ಶಿಸ್ತಿನ ಪಕ್ಷಗಳೇ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯಾಸ ಪಡುತ್ತಿರುವಾಗ ರೈಲು ನಿಲ್ದಾಣದಂತಿರುವ ಕಾಂಗ್ರೆಸ್ ಪಕ್ಷ ಸಹಜವಾಗಿ ತತ್ತರಿಸಿ ಹೋಗಿದೆ. ಸಿದ್ದರಾಮಯ್ಯ ಅವರು ಹೇಳಿದಂತೆ ಭಾರತದ ಕಮ್ಯುನಿಸ್ಟ್ ಪಕ್ಷಗಳು ಈ ಎಲ್ಲ ಅಡ್ಡಿ ಆತಂಕಗಳ ನಡುವೆ ಸಕ್ರಿಯವಾಗಿವೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅವುಗಳ ಸಾಧನೆ ಗಮನಾರ್ಹವಾಗಿದೆ. ನವೆಂಬರ್ 26ಕ್ಕೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಅವು ಸಜ್ಜಾಗಿವೆ.

ಆದರೆ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣವಾಗಿ ಜಡತ್ವ ಆವರಿಸಿದೆ. ತಳಹಂತದಲ್ಲಿ ಸೈದ್ಧಾಂತಿಕ ತಿಳುವಳಿಕೆ ಇರುವ ಕಾರ್ಯಕರ್ತರ ಪಡೆ ಅದಕ್ಕಿಲ್ಲ. ಇದ್ದವರಿಗೆ ಸೂಕ್ತ ತರಬೇತಿಯಿಲ್ಲ. ಈ ಹಿಂದೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಮತ್ತು ಮಂತ್ರಿಯಾಗಿದ್ದ ಕೆ.ಎಚ್.ರಂಗನಾಥ್ ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು ‘‘ನಮ್ಮ ಕಾಂಗ್ರೆಸ್‌ನವರು ಸೋತಾಗ ಅಸ್ವಸ್ಥರಾಗಿ ಮನೆ ಹಿಡಿಯುತ್ತಾರೆ. ಗೆದ್ದಾಗ ಅವರ ಅಸ್ವಾಸ್ಥ್ಯ ಮಾಯವಾಗಿ ಕುಣಿದಾಡುತ್ತಾರೆ’’ ಎಂದು. ಆದರೆ ನೆಹರೂ-ಗಾಂಧಿ ಕುಟುಂಬ ಮಾತ್ರ ಜಾತ್ಯತೀತ ಸೈದ್ಧಾಂತಿಕ ನಿಲುವಿಗೆ ಬದ್ಧವಾಗಿದೆ.

ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಅಯೋಧ್ಯೆಯ ಬಾಬರಿ ಮಸೀದಿಯ ಬಾಗಿಲು ತೆಗೆಸಿ ತಪ್ಪುಮಾಡಿದರೂ ಅದಕ್ಕೆ ಅವರನ್ನು ದಾರಿ ತಪ್ಪಿಸಿದವರು ಅವರ ಸಲಹೆಗಾರರಾಗಿದ್ದ ಅರುಣ್‌ನೆಹರೂ ಮುಂತಾದವರು. ಇತ್ತೀಚೆಗೆ ಅಯೋಧ್ಯೆಯ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಿ ರಾಹುಲ್ ಗಾಂಧಿ ಕೂಡ ಅಂತಹ ತಪ್ಪನ್ನು ಮಾಡಿದರು.

ಸಾಮಾನ್ಯವಾಗಿ ಕಾರ್ಪೊರೇಟ್ ಬಂಡವಾಳಶಾಹಿ ತನ್ನ ಹಿತಾಸಕ್ತಿಯನ್ನು ರಕ್ಷಿಸುವ ಪಕ್ಷ ಅಧಿಕಾರದಲ್ಲಿ ಇರಬೇಕೆಂದು ಬಯಸುತ್ತದೆ. ಈಗ ಧರ್ಮದ ಮಾಯಾಜಾಲದ ಮೂಲಕ ದೇಶದ ಯುವ ಪ್ರಜೆಗಳ ಮೆದುಳಿನ ಸುತ್ತ ಜೇಡರ ಬಲೆ ಕಟ್ಟಿದ ಸಂಘಪರಿವಾರ ಕಾರ್ಪೊರೇಟ್ ಲಾಬಿಯ ಸಹಜ ಆದ್ಯತೆಯಾಗಿದೆ. ಹೀಗಾಗಿ ಬಿಜೆಪಿ ಅಧಿಕಾರದಲ್ಲಿ ಇದೆ. ಮೋದಿಯ ಪ್ರಭಾವ ಮತ್ತು ಈ ಅಧಿಕಾರ ಬಲ ಬಳಸಿಕೊಂಡು ಸಂವಿಧಾನದ ಮೇಲೆ ಗೋರಿ ಕಟ್ಟಿ ಅದರ ಮೇಲೆ ಮನುವಾದಿ, ಮನಿವಾದಿ ಹಿಂದೂರಾಷ್ಟ್ರವನ್ನು ಕಟ್ಟುವ ಗುರಿಯತ್ತ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಸಾಗಿದೆ.

ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಯಾವುದೇ ಒಂದುಪಕ್ಷ ಏಕಾಂಗಿಯಾಗಿ ನಿಂತು ಈ ಅಪಾಯದಿಂದ ದೇಶವನ್ನು ಕಾಪಾಡಲು ಸಾಧ್ಯವಿಲ್ಲ. ಕಾಂಗ್ರೆಸ್‌ನಂತಹ ಪಕ್ಷಗಳು ಎಷ್ಟೇ ತಪ್ಪುಮಾಡಿರಲಿ ಅವುಗಳನ್ನೂ ಫ್ಯಾಶಿಸ್ಟ್ ವಿರೋಧಿ ಹೋರಾಟದಲ್ಲಿ ಜೊತೆ ಸೇರಿಸಿಕೊಳ್ಳಬೇಕಾಗುತ್ತದೆ. ಕೇರಳದಂತಹ ರಾಜ್ಯದಲ್ಲಿ ಸಂಘಪರಿವಾರದ ತಾಳಕ್ಕೆ ತಕ್ಕಂತೆ ಕಾಂಗ್ರೆಸ್ ಕುಣಿಯುತ್ತಿದ್ದರೂ ಬಹುತ್ವ ಭಾರತದ ಉಳಿವಿಗಾಗಿ ಕಾಂಗ್ರೆಸ್ ಉಳಿಯಬೇಕು. ತನ್ನ ಎಲ್ಲ ಲೋಪ ದೋಷಗಳನ್ನು ತಿದ್ದಿಕೊಂಡು ಈ ಮಹಾ ಸಮರದಲ್ಲಿ ತನ್ನ ಪಾತ್ರವನ್ನು ನಿರ್ವಹಿಸಬೇಕು. ಇದು ಇಂದಿನ ಚಾರಿತ್ರಿಕ ಅನಿವಾರ್ಯವಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ