ಭಾರತದಲ್ಲಿ ಈ ವರ್ಷ 4 ತೀವ್ರ ಬಿರುಗಾಳಿಯ ಚಂಡಮಾರುತ: ಹವಾಮಾನ ಇಲಾಖೆ ಮಾಹಿತಿ

Update: 2020-12-06 17:11 GMT

ಹೊಸದಿಲ್ಲಿ, ಡಿ.6: ಈ ವರ್ಷ ಬಂಗಾಳ ಕೊಲ್ಲಿ ಅಥವಾ ಅರಬ್ಬಿ ಸಮುದ್ರದಲ್ಲಿ ಉಂಟಾದ 5 ಚಂಡಮಾರುತಗಳ ಪೈಕಿ 4 ತೀವ್ರ ಬಿರುಗಾಳಿಯ ಚಂಡಮಾರುತದ ವರ್ಗಕ್ಕೆ ಸೇರಿದ್ದವು ಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ. ಮಾನ್ಸೂನ್ ಪೂರ್ವ ಅವಧಿಯಲ್ಲಿ ಅರಬ್ಬಿ ಸಮುದ್ರದಲ್ಲಿ ಮತ್ತು ಮಾನ್ಸೂನ್ ಬಳಿಕದ ಅವಧಿಯಾದ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವುದು ಸಹಜವಾಗಿದೆ.

1990ರಿಂದ ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿ ಭಾಗದಲ್ಲಿ (ಬಂಗಾಳ ಕೊಲ್ಲಿ ಮತ್ತು ಅರಬೀ ಸಮುದ್ರ) ನಾಲ್ಕು ಚಂಡಮಾರುತ ರೂಪುಗೊಂಡಿದೆ. ಈ ವರ್ಷದ ಮೊದಲ ಚಂಡಮಾರುತ ಅಂಫಾನ್ ಬಂಗಾಳ ಕೊಲ್ಲಿಯಲ್ಲಿ ಹುಟ್ಟಿದ್ದು ಬಳಿಕ ತೀವ್ರ ಬಿರುಗಾಳಿಯ ಚಂಡಮಾರುತವಾಗಿ ಮಾರ್ಪಟ್ಟಿದೆ. ಬಳಿಕ ಸ್ವಲ್ಪ ದುರ್ಬಲಗೊಂಡು ಮೇ 19ರಂದು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸಿದೆ. ಇದಾದ 15 ದಿನದಲ್ಲೇ ಅರಬಿ ಸಮುದ್ರದಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಿ ತೀವ್ರ ಬಿರುಗಾಳಿಯ ಚಂಡಮಾರುತದ ಸ್ವರೂಪಕ್ಕೆ ತಿರುಗಿದೆ. ನಿಸರ್ಗ ಎಂದು ಹೆಸರಿಸಿದ ಈ ಚಂಡಮಾರುತ ಮುಂಬೈ ಸಮೀಪದ ಆಲಿಬಾಗ್‌ಗೆ ಅಪ್ಪಳಿಸಿದೆ ಮತ್ತು ಈ ವರ್ಷದ ಮುಂಗಾರು ಕೇರಳಕ್ಕೆ ಯಥಾಪ್ರಕಾರ ಜೂನ್ 1ರಂದೇ ಆಗಮಿಸಲು ಕಾರಣವಾಯಿತು ಎಂದು ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.

ಕಳೆದ 1 ತಿಂಗಳಲ್ಲೇ ಬಂಗಾಳ ಕೊಲ್ಲಿಯಲ್ಲಿ 2 ಮತ್ತು ಅರಬ್ಬಿ ಸಮುದ್ರದಲ್ಲಿ ಒಂದು ಚಂಡಮಾರುತ ರೂಪುಗೊಂಡಿದೆ. ನವೆಂಬರ್‌ನಲ್ಲಿ ಉಂಟಾದ ಗತಿ ಚಂಡಮಾರುತ ಪಶ್ಚಿಮ ಕರಾವಳಿಯನ್ನು ಹಾದುಹೋಗುವ ಸಂದರ್ಭ ತೀವ್ರ ಸ್ವರೂಪಕ್ಕೆ ತಿರುಗಿದ್ದರಿಂದ ಕೇರಳದಲ್ಲಿ ಭಾರೀ ಮಳೆಯಾಗಿದೆ. ನವೆಂಬರ್ 23ರಂದು ಗತಿ ಚಂಡಮಾರುತ ಸೊಮಾಲಿಯಾ ತೀರವನ್ನು ದಾಟಿತು. ತೀವ್ರ ಬಿರುಗಾಳಿ ಚಂಡಮಾರುತ ಎಂದು ಆರಂಭದಲ್ಲಿ ಊಹಿಸಲಾಗಿದ್ದ ನಿವಾರ್ ಚಂಡಮಾರುತ ಬಳಿಕ ತೀವ್ರ ಸ್ವರೂಪ ಪಡೆದು ಅತೀ ತೀವ್ರ ಬಿರುಗಾಳಿ ಚಂಡಮಾರುತವಾಗಿ ಮಾರ್ಪಟ್ಟು ನವೆಂಬರ್ 25ರ ರಾತ್ರಿ ತಮಿಳುನಾಡು ಕರಾವಳಿಯನ್ನು ಹಾದುಹೋಯಿತು. ಡಿಸೆಂಬರ್ 2ರಂದು ಬುರೇವಿ ಚಂಡಮಾರುತ ದಕ್ಷಿಣ ತಮಿಳುನಾಡು ಕರಾವಳಿ ಪ್ರದೇಶವನ್ನು ಹಾದುಹೋಯಿತು.

ಅತೀ ತೀವ್ರ ಬಿರುಗಾಳಿ ಚಂಡಮಾರುತವು ಗಂಟೆಗೆ 120ರಿಂದ 160 ಕಿ.ಮಿ ಗಾಳಿಯೊಂದಿಗೆ ಅಪ್ಪಳಿಸುತ್ತದೆ ಮತ್ತು ಮರಗಳನ್ನು ಬುಡಮೇಲುಗೊಳಿಸುವ ಜೊತೆಗೆ ವಿದ್ಯುತ್ ಪೂರೈಕೆ, ಸಂಪರ್ಕ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಮನೆಗಳಿಗೂ ಹಾನಿ ಉಂಟುಮಾಡುತ್ತದೆ. ಅತ್ಯಂತ ತೀವ್ರ ಬಿರುಗಾಳಿ ಚಂಡಮಾರುತದ ಜೊತೆಗೆ ಗಂಟೆಗೆ 160ರಿಂದ 220 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತದೆ ಎಂದವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News