ಬಿಜೆಪಿ ಸರಕಾರಕ್ಕೆ ಬಿಸಿ ತುಪ್ಪವಾದ ರೈತ ಹೋರಾಟ

Update: 2020-12-20 19:30 GMT

ದಿಲ್ಲಿಯಲ್ಲಿ ಹಿಂದೆ ಅನೇಕ ಹೋರಾಟಗಳು ನಡೆದಿವೆ. ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಪ್ರತೀ ವರ್ಷ ದಿಲ್ಲಿ ಚಲೋ ನಡೆಸಿ ಸಾಂಕೇತಿಕ ಪ್ರತಿಭಟನೆ ನಡೆಸುತ್ತಾ ಬಂದಿವೆ. ಆದರೆ ಆ ಹೋರಾಟಗಳನ್ನು ಎಂದೂ ಗಂಭೀರವಾಗಿ ಪರಿಗಣಿಸದ ಸರಕಾರ ರೈತರ ಶಿಸ್ತಿನ ಹೋರಾಟದಿಂದ ದಿಗಿಲುಗೊಂಡಿದೆ.


ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದು ಮೊದಲ ಮತ್ತು ಎರಡನೇ ಸಲ ಸೇರಿದಂತೆ ಒಟ್ಟು ಏಳು ವರ್ಷಗಳು ಗತಿಸಿವೆ. ಈ ಏಳು ವರ್ಷಗಳ ಕಾಲಾವಧಿಯಲ್ಲಿ ಹಿಂದೆಂದೂ ಕಂಡರಿಯದ ಪ್ರತಿರೋಧದ ಸನ್ನಿವೇಶ ಈಗ ಅದಕ್ಕೆ ಎದುರಾಗಿದೆ. ರಾಜಧಾನಿ ದಿಲ್ಲಿಯಲ್ಲಿ ಕೊರೆಯುವ ಚಳಿಯಲ್ಲಿ ರೈತ ಚಳವಳಿ ಆರಂಭವಾಗಿ ತಿಂಗಳಾಗುತ್ತ ಬಂತು. ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಈ ಚಳವಳಿಯನ್ನು ವಿಫಲಗೊಳಿಸಿ ರೈತರನ್ನು ಬರಿಗೈಲಿ ವಾಪಸ್ ಕಳಿಸಬೇಕೆಂಬ ಸರಕಾರದ ಮಸಲತ್ತುಗಳು ನಿರರ್ಥಕ ಕಸರತ್ತುಗಳಾಗುತ್ತಿವೆ. ಈವರೆಗೆ 25ಕ್ಕೂ ಹೆಚ್ಚು ರೈತರು ಅಸುನೀಗಿದ್ದಾರೆ. ಆದರೂ ಹೋರಾಟದ ಉತ್ಸಾಹ ಬತ್ತಿ ಹೋಗಿಲ್ಲ.

ಹೀಗಾಗಿ ನಾಗಪುರ ನಿರ್ದೇಶಿತ ಕಾರ್ಯಸೂಚಿಗಳನ್ನು ಜಾರಿಗೆ ತರಲು ಸರಕಾರಕ್ಕೆ ಹಿನ್ನಡೆಯಾಗುತ್ತಿದೆ. ಹೇಗಾದರೂ ಮಾಡಿ ಈ ರೈತ ಚಳವಳಿಯನ್ನು ವಿಫಲಗೊಳಿಸಲು ಸರಕಾರ ಯತ್ನಿಸುತ್ತಲೇ ಇದೆ. ಕೇಂದ್ರದ ಪ್ರತಿನಿಧಿಗಳ ಜೊತೆ ಹಲವಾರು ಸುತ್ತಿನ ಮಾತುಕತೆ ನಡೆದರೂ ‘ಕೋಲು ಮುರಿಯಲಿಲ್ಲ ಹಾವು ಸಾಯಲಿಲ್ಲ’ ಎಂಬಂತಾಗಿದೆ.

ಅಂಬಾನಿ, ಅದಾನಿ ಸೇರಿದಂತೆ ಕಾರ್ಪೊರೇಟ್ ಧಣಿಗಳಿಗೆ ಗುಟ್ಟಾಗಿ ಭರವಸೆ ನೀಡಿದಂತೆ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿಲ್ಲವಲ್ಲ ಎಂಬ ಒಂದು ವಿಧದ ಹತಾಶೆಯ ಭಾವನೆ ಸರಕಾರದ ಉನ್ನತ ಸ್ಥಾನದಲ್ಲಿ ಇರುವವರಲ್ಲಿ ಮೂಡುತ್ತಿದೆ. ಬಿಜೆಪಿ ಮಿತ್ರ ಪಕ್ಷವಾದ ಶಿರೋಮಣಿ ಅಕಾಲಿದಳ ಈಗಾಗಲೇ ಎನ್‌ಡಿಎ ಕೂಟವನ್ನು ತೊರೆದಿದೆ. ರಾಜಸ್ಥಾನದ ಮಿತ್ರ ಪಕ್ಷ ಆರ್‌ಎಲ್‌ಡಿ ಮತ್ತು ಹರ್ಯಾಣದ ಜೆಜೆಪಿಗಳು ಈ ಕರಾಳ ಶಾಸನದ ಬಗ್ಗೆ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿವೆ.

 ರೈತರ ತಣಿಯದ ಆಕ್ರೋಶವನ್ನು ಗಮನಿಸಿದ ಆರೆಸ್ಸೆಸ್‌ನ ಅಂಗ ಸಂಸ್ಥೆಗಳಾದ ಸ್ವದೇಶಿ ಜಾಗರಣ ಮಂಚ್ ಮತ್ತು ಭಾರತೀಯ ಕಿಸಾನ್ ಯೂನಿಯನ್‌ಗಳು ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸತೊಡಗಿವೆ. ಹೀಗಾಗಿ ಈ ಬಿಕ್ಕಟ್ಟಿನಿಂದ ಪಾರಾಗಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಗಲೂ ರಾತ್ರಿ ಕೇಂದ್ರ ಸಚಿವರೊಂದಿಗೆ, ಬಿಜೆಪಿ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

 ಇನ್ನೊಂದೆಡೆ ಈ ರೈತ ಹೋರಾಟದಲ್ಲಿ ಒಡಕು ಹುಟ್ಟಿಸುವ ಹುನ್ನಾರಗಳೂ ನಡೆದಿವೆ. ಪುಡಿ ರೈತ ಸಂಘಟನೆಗಳ ನಾಯಕರೊಂದಿಗೆ ಮಾತುಕತೆ ನಡೆಸುವ ವ್ಯರ್ಥ ಪ್ರಹಸನಗಳು ವಿಫಲವಾಗುತ್ತಿವೆ. ಮತ್ತೊಂದೆಡೆ ಈ ರೈತ ಆಂದೋಲನದ ಹಿಂದೆ ಮಾವೋವಾದಿಗಳಿದ್ದಾರೆ, ಖಾಲಿಸ್ತಾನಿಗಳಿದ್ದಾರೆ ಎಂದು ಕಳಂಕ ಹಚ್ಚಿ ಇದನ್ನು ಹತ್ತಿಕ್ಕುವ ಕುತಂತ್ರಗಳೂ ನಡೆದಿವೆ. ಅದರಲ್ಲೂ ಸರಕಾರ ಯಶಸ್ವಿಯಾಗಿಲ್ಲ. ಈ ನಡುವೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುವ ಹಕ್ಕು ರೈತರಿಗಿದೆ ಎಂದು ಹೇಳಿದೆ.

ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಸರಕಾರ ತಂದಿರುವ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾರೆ. ಇದರರ್ಥ ಸರಕಾರ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲು ತಯಾರಿಲ್ಲ ಎಂಬುದು ಸ್ಪಷ್ಟವಾಗಿದೆ.
ದಿಲ್ಲಿಯಲ್ಲಿ ಹಿಂದೆ ಅನೇಕ ಹೋರಾಟಗಳು ನಡೆದಿವೆ. ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಪ್ರತೀ ವರ್ಷ ದಿಲ್ಲಿ ಚಲೋ ನಡೆಸಿ ಸಾಂಕೇತಿಕ ಪ್ರತಿಭಟನೆ ನಡೆಸುತ್ತಾ ಬಂದಿವೆ. ಆದರೆ ಆ ಹೋರಾಟಗಳನ್ನು ಎಂದೂ ಗಂಭೀರವಾಗಿ ಪರಿಗಣಿಸದ ಸರಕಾರ ರೈತರ ಶಿಸ್ತಿನ ಹೋರಾಟದಿಂದ ದಿಗಿಲುಗೊಂಡಿದೆ.

ಈ ರೈತ ಹೋರಾಟ ಎಷ್ಟು ಶಿಸ್ತು ಬದ್ಧವಾಗಿದೆಯೆಂದರೆ ಇನ್ನು ಆರು ತಿಂಗಳವರೆಗೆ ಹೋರಾಟ ನಡೆದರೂ ಅದನ್ನು ನಿಭಾಯಿಸುವ ಸಾಮರ್ಥ್ಯ ರೈತ ಸಂಘಟನೆಗಳಿಗಿದೆ. ಪಂಜಾಬ್‌ನ ಲಕ್ಷಾಂತರ ರೈತರು ಹೋರಾಟಕ್ಕೆಂದು ದಿಲ್ಲಿಗೆ ಬಂದಿದ್ದರೂ ಪಂಜಾಬ್, ಹರ್ಯಾಣ ರಾಜ್ಯಗಳಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿಲ್ಲ. ಕೆಲ ರೈತರು ಊರುಗಳಲ್ಲೇ ಉಳಿದು ಕೃಷಿ ಚಟುವಟಿಕೆಗಳನ್ನು ನಡೆಸಿದ್ದಾರೆ. ದಿಲ್ಲಿಯಲ್ಲಿ ಹೋರಾಟ ನಿರತ ರೈತರು ಬಯಲಿನಲ್ಲಿ ಅನ್ನ ಬೇಯಿಸಿಕೊಂಡು ಊಟ ಮಾಡುತ್ತಿದ್ದಾರೆ. ಇವರಿಗಾಗಿ ದಿನ ನಿತ್ಯ ಪಂಜಾಬ್‌ನಿಂದ ಸಾವಿರಾರು ಲೀಟರ್ ಹಾಲು ಹಾಗೂ ಇತರ ಆಹಾರ ಸಾಮಗ್ರಿಗಳು ಪಂಜಾಬ್‌ನ ಗಡಿ ದಾಟಿ ನೂರಾರು ಟ್ರಾಕ್ಟರ್ ಗಳಲ್ಲಿ ಬರುತ್ತಿವೆ. ದಿನ ಕಳೆದಂತೆ ಚಳವಳಿ ತೀವ್ರವಾಗುತ್ತಿದೆ.

 ಈ ನಡುವೆ ರೈತರು ನಡೆಸುವ ಪ್ರತಿಭಟನೆಯಿಂದ ಕೋವಿಡ್-19 ವ್ಯಾಪಕವಾಗಿ ಹರಡಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಹೇಳಿದೆ. ಇದಕ್ಕೆ ಸೊಪ್ಪು ಹಾಕದ ರೈತರು ಎಷ್ಟೇ ಅಪಾಯವಿದ್ದರೂ ತಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ಕೋವಿಡ್‌ಗಿಂತ ಮೋದಿ ಸರಕಾರ ತಂದಿರುವ ಮೂರು ಕೃಷಿ ಸುಧಾರಣಾ ಕಾಯ್ದೆಗಳು ಅಪಾಯಕಾರಿ ಎಂದು ಹೇಳಿದ್ದಾರೆ. ಪ್ರತಿಭಟನಾನಿರತ ರೈತರು ಸುರಕ್ಷಿತ ಅಂತರ ಕಾಪಾಡುತ್ತಿಲ್ಲ. ಮುಖ ಕವಚ ಧರಿಸುತ್ತಿಲ್ಲ, ಇದರಿಂದ ಕೋವಿಡ್ ಹರಡುತ್ತದೆ ಎಂಬುದಕ್ಕೂ ಜಗ್ಗದ ರೈತರು ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಕೋವಿಡ್‌ನಿಂದ ನಾವು ರಕ್ಷಣೆ ಪಡೆಯಬಹುದು, ಆದರೆ ಈ ಕರಾಳ ಕಾಯ್ದೆಗಳು ಜಾರಿಯಾಗಲು ಬಿಟ್ಟರೆ ನಾವೆಲ್ಲರೂ ಸಾಯಬೇಕಾಗುತ್ತದೆ ಎಂದು ಪಂಜಾಬ್‌ನ ರೈತ ನಾಯಕ ಗುರ್ಮಿತ್‌ಸಿಂಗ್ ತಿಳಿಸಿದ್ದಾರೆ.

ಪ್ರತಿಭಟನಾ ರೈತರ ಆಕ್ರೋಶದಲ್ಲಿ ಸಹಜವಾದ ಕೋಪವಿದೆ. ಕೋವಿಡ್ ಬರುವ ಮುಂಚೆ ಕರಾಳ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಶಾಹೀನ್‌ಬಾಗ್‌ನಲ್ಲಿ ನಡೆದ ಹೋರಾಟದಿಂದ ತತ್ತರಿಸಿ ಹೋಗಿದ್ದ ಬಿಜೆಪಿ ಸರಕಾರ ಅದನ್ನು ಹತ್ತಿಕ್ಕಲು ದಿಲ್ಲಿಯಲ್ಲಿ ಕೋಮು ಹಿಂಸೆಗೆ ಪ್ರಚೋದಿಸಿತು. ಅಷ್ಟರಲ್ಲಿ ಸರಕಾರಕ್ಕೆ ವರದಾನವಾಗಿ ಬಂದ ಕೊರೋನವನ್ನು ಬಳಸಿಕೊಂಡು ಎಲ್ಲ ಜನ ಹೋರಾಟಗಳನ್ನು ನಿಷ್ಕ್ರಿಯಗೊಳಿಸಿತು. ವಿಶೇಷ ಸನ್ನಿವೇಶ ಎಂದು ಜನರು ಸಹಕರಿಸಿದರು. ಜನತೆ ಸಹಕರಿಸಿದ ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಸರಕಾರ ಕೊರೋನ ನಿಯಂತ್ರಣಕ್ಕೆ ಆದ್ಯತೆ ನೀಡುವ ಬದಲಾಗಿ ಇದನ್ನೇ ಬಳಸಿಕೊಂಡು ಜನ ವಿರೋಧಿ ಕಾಯ್ದೆಗಳನ್ನು ಒಂದೊಂದಾಗಿ ಜಾರಿಗೆ ತರತೊಡಗಿತು. ರೈಲ್ವೆ ಖಾಸಗೀಕರಣಕ್ಕೆ ಕೈ ಹಾಕಿತು, ಸಂಘಪರಿವಾರದ ಫ್ಯಾಶಿಸ್ಟ್ ಅಜೆಂಡಾವನ್ನು ವಿರೋಧಿಸುತ್ತಾ ಬಂದಿದ್ದ ಹೆಸರಾಂತ ಚಿಂತಕರು, ಲೇಖಕರನ್ನು ಜೈಲಿಗೆ ಹಾಕಿತು. ಇದು ಸಾಲದೆಂಬಂತೆ ಕಾರ್ಮಿಕರ ಹಕ್ಕುಗಳನ್ನು ಕಸಿಯುವ ಶಾಸನಗಳನ್ನು ಸಂಸತ್ತಿನಲ್ಲಿ ಚರ್ಚೆಯಿಲ್ಲದೆ ಜಾರಿಗೆ ತಂದಿತು. ನಂತರ ಭಾರತದ ಕೃಷಿರಂಗವನ್ನು ಕಾರ್ಪೊರೇಟೀಕರಣಗೊಳಿಸುವ ಕರಾಳ ಕಾಯ್ದೆಯನ್ನು ಏಕಪಕ್ಷೀಯವಾಗಿ ಹೇರಿತು. ತಮ್ಮ ಬದುಕಿನ ಅಡಿಪಾಯವೇ ಧ್ವಂಸವಾಗುವ ಇಂತಹ ಸಂದರ್ಭದಲ್ಲಿ ರೈತರು ಬೇರೆ ದಾರಿ ಕಾಣದೆ ಹೋರಾಟಕ್ಕೆ ಇಳಿದರು. ತಮ್ಮ ಮತ್ತು ತಮ್ಮ ಕುಟುಂಬಕ್ಕೆ ಆಧಾರವಾದ ಒಕ್ಕಲುತನವೇ ಕೈ ತಪ್ಪಿ ಹೋಗುತ್ತಿರುವಾಗ ಬೇರೆ ದಾರಿ ಕಾಣದೆ ಬೀದಿಗಿಳಿದ ರೈತರು ದಿಲ್ಲಿಗೆ ಬಂದಿದ್ದಾರೆ. ಅವರೊಂದಿಗೆ ಸಹಾನುಭೂತಿಯಿಂದ ಮಾತನಾಡಬೇಕಾದ ಸರಕಾರ ಅಸಡ್ಡೆಯಾಗಿ ವರ್ತಿಸುತ್ತಿರುವುದು ಖಂಡನೀಯವಾಗಿದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ರೈತ ಹೋರಾಟ ನಡೆಯುತ್ತಿದ್ದರೂ ಎನ್‌ಡಿಟಿವಿ ಹೊರತುಪಡಿಸಿ ಉಳಿದ ಸುದ್ದಿ ವಾಹಿನಿಗಳು ಕಣ್ಣು, ಕಿವಿ, ಬಾಯಿ ಮುಚ್ಚಿ ಕೊಂಡು ಕುಳಿತಿವೆ. ಮುದ್ರಣ ಮಾಧ್ಯಮಗಳಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಇದಕ್ಕೆ ಆದ್ಯತೆ ದೊರಕುತ್ತಿಲ್ಲ. ಇನ್ನು ಪ್ರತಿಪಕ್ಷಗಳು ಎಲ್ಲಿವೆ ಎಂದು ಕಂದೀಲು ಹಚ್ಚಿಕೊಂಡು ಹುಡುಕಬೇಕಾಗಿದೆ. ಕೆಲ ಎಡಪಂಥೀಯ ರೈತ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಂಡಿರುವುದು ನಿಜ ಆದರೆ, ಅದನ್ನೇ ತೋರಿಸಿ ಈ ರೈತ ಹೋರಾಟದ ಹಿಂದೆ ಉಗ್ರ ಎಡಪಂಥೀಯರಿದ್ದಾರೆ ಎಂದು ಕೇಂದ್ರ ಮಂತ್ರಿಗಳು ಅಪಪ್ರಚಾರ ಮಾಡುತ್ತಿದ್ದಾರೆ.

ವಾಸ್ತವವಾಗಿ ಇದು ಎಡಪಂಥೀಯರು ಸಂಘಟಿಸಿದ ಹೋರಾಟವಲ್ಲ. ಪಂಜಾಬ್‌ನ ರೈತರು ಬೀದಿಗಿಳಿದ ನಂತರ ಎಡಪಂಥೀಯ ರೈತ ಸಂಘಟನೆಗಳು ಜೊತೆಗೆ ಹೆಜ್ಜೆ ಹಾಕಿದವು. ಜಗತ್ತಿನ ಚರಿತ್ರೆಯನ್ನು ಅವಲೋಕಿಸಿದರೆ ಅನೇಕ ಬಾರಿ ಜನಾಂದೋಲನಗಳು ಅನಿರೀಕ್ಷಿತ ದಿಕ್ಕಿನಿಂದ ಸ್ಫೋಟಗೊಳ್ಳುತ್ತವೆ. ನಾವು ನಂಬಿದ ಸಿದ್ಧಾಂತದ ನಳಿಕೆಯ ಮೂಲಕವೇ ಚಳವಳಿಗಳು ಸಿಡಿದೇಳುತ್ತವೆ ಎಂಬುದು ನಿಜವಲ್ಲ. ಅನೇಕ ಬಾರಿ ಹೋರಾಟ ಆರಂಭವಾದ ನಂತರ ಅದಕ್ಕೊಂದು ದಿಕ್ಕು ತೋರಿಸಲು ಸಿದ್ಧಾಂತದ ಪ್ರವೇಶವಾದ ಉದಾಹರಣೆಗಳಿವೆ. ಕಮ್ಯುನಿಸ್ಟ್ ಮೆನಿಫೆಸ್ಟೊ ಬರೆದ ಕಾರ್ಲ್ ಮಾರ್ಕ್ಸ್ ಮುಂದುವರಿದ ಕೈಗಾರಿಕಾ ಪ್ರಧಾನ ದೇಶಗಳಲ್ಲಿ ಮೊದಲು ಕ್ರಾಂತಿಯಾಗುತ್ತದೆ ಎಂದು ಹೇಳಿದ್ದ ಆದರೆ ಲೆನಿನ್ ನೇತೃತ್ವದಲ್ಲಿ ಅಕ್ಟೋಬರ್ ಕ್ರಾಂತಿ ನಡೆದದ್ದು ಕೃಷಿ ಪ್ರಧಾನವಾದ ರಷ್ಯದಲ್ಲಿ ಎಂಬುದು ಚಾರಿತ್ರಿಕ ಸತ್ಯ.

ಭಾರತದ ಸಂದರ್ಭದಲ್ಲೂ ಇದು ನಿಜವಾಗುತ್ತಿದೆ.ಆದರೆ ಕಾರ್ಪೊರೇಟ್ ಆರ್ಥಿಕ ನೀತಿಗಳು ಹಾಗೂ ಕರಾಳ ಕಾಯ್ದೆ ವಿರುದ್ಧ ಸಿಡಿದೆದ್ದ ರೈತಾಪಿ ವರ್ಗ ಜಾತಿರಹಿತ, ವರ್ಗರಹಿತ ಸಮಾಜ ನಿರ್ಮಾಣಕ್ಕೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತದೆ ಎಂಬ ಪ್ರಶ್ನೆಗೆ ಸುಲಭದಲ್ಲಿ ಉತ್ತರ ಸಿಗುವುದಿಲ್ಲ. ಆದರೆ ಈಗ ಅದರ ಪ್ರಸ್ತಾವ ಬೇಡ. ಮೊದಲು ಈ ಕೋಮುವಾದಿ, ಕಾರ್ಪೊರೇಟ್ ಫ್ಯಾಶಿಸ್ಟ್ ಸರಕಾರದ ದಮನ ನೀತಿ ಕೊನೆಗೊಳ್ಳಲಿ. ಹೋರಾಟದ ಸಾಗರಕ್ಕೆ ಎಲ್ಲ ದಿಕ್ಕಿನಿಂದಲೂ ಎಲ್ಲ ನದಿಗಳು ಉಕ್ಕೇರಿ ಬರಲಿ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ