ಗೋವುಗಳನ್ನು ಆಶ್ರಯತಾಣದಿಂದ ಬಿಡುಗಡೆಗೊಳಿಸುವುದಾಗಿ ಉತ್ತರ ಪ್ರದೇಶ ಸರಕಾರಕ್ಕೆ ಪಂಚಾಯತ್ ಗಳ ಎಚ್ಚರಿಕೆ

Update: 2020-12-22 07:14 GMT

ಹೊಸದಿಲ್ಲಿ : ಉತ್ತರ ಪ್ರದೇಶದ ಬುಂದೇಲ್ಖಂಡ್ ಪ್ರಾಂತ್ಯದ ಬಂಡ ಜಿಲ್ಲೆಯಲ್ಲಿ ರಾಜ್ಯ ಸರಕಾರದ ಅನುದಾನದಿಂದ ನಡೆಯುತ್ತಿದ್ದ ಗೋವಂಶ್ ಆಶ್ರಯ ತಾಣಗಳಿಗೆ ಸರಕಾರ ಅನುದಾನವನ್ನು ಡಿಸೆಂಬರ್ 25ರೊಳಗಾಗಿ ಬಿಡುಗಡೆಗೊಳಿಸದೇ ಇದ್ದಲ್ಲಿ ಈ ತಾತ್ಕಾಲಿಕ ಗೋಶಾಲೆಗಳಿಂದ ಗೋವುಗಳನ್ನು ಬಿಡುಗಡೆ ಮಾಡುವುದನ್ನು ಬಿಟ್ಟು ತಮ್ಮ ಮುಂದೆ ಬೇರೆ ಆಯ್ಕೆಯಿಲ್ಲ ಎಂದು ಹೇಳಿ ಅಲ್ಲಿನ ಪಂಚಾಯತ್ ಪ್ರಮುಖರು ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆಂದು The Telegraph Online ವರದಿ ಮಾಡಿದೆ.

ರಾಜ್ಯ ಸರಕಾರವು ಜನವರಿ 2019ರಿಂದ ಅಲೆಮಾರಿ ದನಗಳ ಆಶ್ರಯಕ್ಕಾಗಿ ಗೋಶಾಲೆಗಳನ್ನು ನಡೆಸುತ್ತಿದೆ. ಆದರೆ ಬಂಡ ಜಿಲ್ಲೆಯ ಗೋಶಾಲೆಗಳಿಗೆ ಈ ವರ್ಷದ ಫೆಬ್ರವರಿಯಿಂದ ಅನುದಾನ ಬಿಡುಗಡೆಗೊಳಿಸದೇ ಇದ್ದರೆ, ಇತರ ಗೋಶಾಲೆಗಳಿಗೆ ಎಪ್ರಿಲ್ ತಿಂಗಳಿನಿಂದ ಅನುದಾನ ದೊರೆತಿಲ್ಲ.  ಅನುದಾನವಿಲ್ಲದೆ ಗೋವುಗಳಿಗೆ ಆಹಾರವೊದಗಿಸುವುದು ಕಷ್ಟಕರವಾಗಿರುವುದರಿಂದ ಅವುಗಳು ಹಸಿವಿನಿಂದ ಸಾಯುವಂತಾಗಿದೆ ಎಂದೂ ಪತ್ರದಲ್ಲಿ ಹೇಳಲಾಗಿದೆಯೆಂದು The Telegraph Online ವರದಿ ತಿಳಿಸಿದೆ. ಸದ್ಯ ಈ ಗೋಶಾಲೆಗಳನ್ನು ಪಂಚಾಯತುಗಳು ತಮ್ಮದೇ ಅನುದಾನದಿಂದ ನಿರ್ವಹಣೆ ಮಾಡುತ್ತಿದ್ದು ಸುಮಾರು 43 ಗೋಶಾಲೆಗಳಲ್ಲಿ 15,000 ಅಲೆಮಾರಿ ದನಗಳು ಆಶ್ರಯ ಪಡೆದಿವೆ.

ಆರ್ಥಿಕ ವರ್ಷ 2019-20ರಲ್ಲಿ ಗೋವುಗಳ ಕಲ್ಯಾಣಕ್ಕಾಗಿ ಆದಿತ್ಯನಾಥ್ ಸರಕಾರ 613 ಕೋಟಿ ರೂ. ನಿಗದಿ ಪಡಿಸಿದ್ದರೆ, ಈ ವರ್ಷ ಯಾವುದೇ ಅನುದಾನ ಒದಗಿಸಲಾಗಿಲ್ಲ. ಯೋಜನೆ ಆರಂಭಗೊಂಡ ಸಂದರ್ಭದಲ್ಲಿ ಪ್ರತಿ ದನದ ವೆಚ್ಚವಾಗಿ ಪ್ರತಿ ದಿನ 30 ರೂ. ನೀಡುವುದಾಗಿ ಸರಕಾರ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News