2019ರಲ್ಲಿ ದೇಶದಲ್ಲಿ ವಾಯುಮಾಲಿನ್ಯದಿಂದ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತೇ?

Update: 2020-12-22 16:56 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.22: ವಾಯುಮಾಲಿನ್ಯದ ಕಾರಣದಿಂದ ಅಕಾಲಿಕ ಸಾವುಗಳು ಮತ್ತು ಅನಾರೋಗ್ಯಗಳಿಂದಾಗಿ ಆರ್ಥಿಕ ನಷ್ಟವು 2019ನೇ ಸಾಲಿನಲ್ಲಿ ಜಿಡಿಪಿಯ ಶೇ.1.4ರಷ್ಟಿದೆ ಎಂದು ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಮಂಗಳವಾರ ಪ್ರಕಟಿಸಿರುವ ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ವಾಯುಮಾಲಿನ್ಯದ ಪರಿಣಾಮ ಕುರಿತ ನೂತನ ವೈಜ್ಞಾನಿಕ ಅಧ್ಯಯನ ವರದಿಯು ತಿಳಿಸಿದೆ. ಈ ಅವಧಿಯಲ್ಲಿ ದೇಶದಲ್ಲಿ 17 ಲಕ್ಷ ಸಾವುಗಳು (ಒಟ್ಟು ಸಾವುಗಳ ಶೇ.18) ವಾಯುಮಾಲಿನ್ಯದಿಂದ ಸಂಭವಿಸಿವೆ ಎಂದೂ ಅದು ಹೇಳಿದೆ.

ಭಾರತದ ಮನೆಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಕಡಿಮೆಯಾಗಿದ್ದು, ಈ ಕಾರಣದಿಂದ 1990-2010ರ ನಡುವಿನ ಅವಧಿಯಲ್ಲಿನ ಸಾವಿನ ದರವು ಶೇ.64ರಷ್ಟು ಇಳಿಕೆಯಾಗಿದೆ. ಆದರೆ ಈ ಅವಧಿಯಲ್ಲಿ ಹೊರಗಿನ ವಾತಾವರಣದಲ್ಲಿಯ ವಾಯುಮಾಲಿನ್ಯವು ಶೇ.115ರಷ್ಟು ಏರಿಕೆಯಾಗಿದೆ ಎಂದು ವರದಿಯು ಬೆಟ್ಟು ಮಾಡಿದೆ.

ಭಾರತವು ಉತ್ತಮ ಆರ್ಥಿಕತೆ ಮತ್ತು ಅಭಿವೃದ್ಧಿಯ ಪಥದಲ್ಲಿ ಸಾಗಿಬಂದಿದೆ ಮತ್ತು ವಾಯುಮಾಲಿನ್ಯವನ್ನು ಕಡಿಮೆಗೊಳಿಸಿದರೆ ಇದು ಇನ್ನಷ್ಟು ಸುಧಾರಿಸಲಿದೆ ಎಂದಿರುವ ವರದಿಯು, ರಾಜ್ಯಗಳ ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಉತ್ತರ ಭಾರತ ಮತ್ತು ಮಧ್ಯ ಭಾರತದ ರಾಜ್ಯಗಳಲ್ಲಿ ವಾಯುಮಾಲಿನ್ಯದಿಂದ ಆರ್ಥಿಕತೆಗೆ ನಷ್ಟ ಅಧಿಕವಾಗಿದೆ. ಈ ಪೈಕಿ ಜಿಡಿಪಿಯ ಶೇ.2.2ರಷ್ಟು ನಷ್ಟದೊಂದಿಗೆ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿದ್ದರೆ ಬಿಹಾರವು (ಶೇ.2)ನಂತರದ ಸ್ಥಾನದಲ್ಲಿದೆ ಎಂದು ತಿಳಿಸಿದೆ.

ವೈಜ್ಞಾನಿಕ ವರದಿಯು ಅನಾರೋಗ್ಯಗಳನ್ನು ಆರ್ಥಿಕತೆಯ ನಷ್ಟದೊಂದಿಗೆ ಸಮೀಕರಿಸುವ ಮೂಲಕ ಭಾರತದಲ್ಲಿ ವಾಯುಮಾಲಿನ್ಯದ ಇತ್ತೀಚಿನ ಚಿತ್ರಣವನ್ನು ಒದಗಿಸಿದೆ. ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಭಾರತವು ಹಲವಾರು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ ಎಂದು ನೀತಿ ಆಯೋಗದ ಸದಸ್ಯ ಪ್ರೊ.ವಿನೋದ್ ಪಾಲ್ ತಿಳಿಸಿದರು. ವಾಯುಮಾಲಿನ್ಯ ಮತ್ತು ಅದರ ಪರಿಣಾಮ ಕೇವಲ ಆರೋಗ್ಯ ಕ್ಷೇತ್ರಕ್ಕೆ ಸೀಮಿತವಲ್ಲ ಮತ್ತು ಭಾರತೀಯರ ಆರೋಗ್ಯ ಮತ್ತು ಉತ್ಪಾದಕತೆಯ ಮೇಲೆ ದುಷ್ಪರಿಣಾಮವನ್ನುಂಟು ಮಾಡುವ ವಿಷಯುಕ್ತ ವಾತಾವರಣಕ್ಕೆ ಒಡ್ಡಿಕೊಳ್ಳುವುದನ್ನು ತಗ್ಗಿಸುವ ಸಾಮಾನ್ಯ ಬದ್ಧತೆಯೊಂದಿಗೆ ಬಹು-ಕ್ಷೇತ್ರೀಯ ದೃಷ್ಟಿಕೋನದಲ್ಲಿ ಪರಿಹಾರವು ಅಡಗಿದೆ ಎಂದರು.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮತ್ತು ಉನ್ನತ ಚೂಲ್ಹಾ ಅಭಿಯಾನದಂತಹ ವಿವಿಧ ಸರಕಾರಿ ಕಾರ್ಯಕ್ರಮಗಳು ದೇಶದಲ್ಲಿಯ ಮನೆಗಳಲ್ಲಿ ವಾಯುಮಾಲಿನ್ಯವನ್ನು ತಗ್ಗಿಸಲು ನೆರವಾಗಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾ ನಿರ್ದೇಶಕ ಬಲರಾಮ್ ಭಾರ್ಗವ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News