ಉತ್ತರಪ್ರದೇಶ: ಸರಕಾರಿ ಹ್ಯಾಂಡ್‌ಪಂಪ್ ಬಳಸಿದಕ್ಕಾಗಿ ದಲಿತ ವ್ಯಕ್ತಿಗೆ ಥಳಿತ

Update: 2020-12-25 16:05 GMT

 ಬಂದಾ (ಉತ್ತರಪ್ರದೇಶ), ಡಿ. 26: ಸರಕಾರಿ ಹ್ಯಾಂಡ್‌ಪಂಪ್ ಬಳಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜನರ ಗುಂಪೊಂದು 45 ವರ್ಷದ ದಲಿತ ವ್ಯಕ್ತಿಯೋರ್ವನಿಗೆ ಥಳಿಸಿದ ಘಟನೆ ಉತ್ತರಪ್ರದೇಶದ ಬಂದಾದ ಗ್ರಾಮವೊಂದರಲ್ಲಿ ಶುಕ್ರವಾರ ನಡೆದಿದೆ.

ಇಲ್ಲಿನ ತೆಂದುರಾ ಗ್ರಾಮದಲ್ಲಿರುವ ಹ್ಯಾಂಡ್‌ಪಂಪ್‌ನಿಂದ ಇಂದು ಬೆಳಗ್ಗೆ ನೀರು ತರಲು ತೆರಳುತ್ತಿದ್ದಾಗ ರಾಮ್ ದಯಾಳ್ ಯಾದವ್‌ನ ಕುಟುಂಬದ ಸದಸ್ಯರು ತನಗೆ ದೊಣ್ಣೆಯಿಂದ ಥಳಿಸಿದರು ಎಂದು ಬಿಸಂದಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಎಫ್‌ಐರ್‌ನಲ್ಲಿ ರಾಮಚಂದ್ರ ರೈದಾಸ್ ಆರೋಪಿಸಿದ್ದಾರೆ ಎಂದು ಎಸ್‌ಎಚ್‌ಒ ನರೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.

ದಾಳಿಯಿಂದ ಗಾಯಗೊಂಡಿರುವ ರೈದಾಸ್ ಅವರನ್ನು ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 ಯಾದವ ಸಮುದಾಯ ಇರುವ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಹ್ಯಾಂಡ್ ಪಂಪ್‌ನಿಂದ ನೀರು ತೆಗೆಯುವುದಕ್ಕೆ ನಿಷೇಧ ಹೇರಲಾಗಿತ್ತು. ಆದರೆ, ಅತಾರಾದ ಉಪ ವಿಭಾಗೀಯ ದಂಡಾಧಿಕಾರಿ ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ಈ ವಿವಾದ ಪರಿಹಾರವಾಗಿತ್ತು ಎಂದು ರೈದಾಸ್ ಹೇಳಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News