ಕೆಲವರು ನನಗೆ ಪ್ರಜಾಪ್ರಭುತ್ವದ ಪಾಠ ಕಲಿಸಲು ಯತ್ನಿಸುತ್ತಿದ್ದಾರೆ: ನರೇಂದ್ರ ಮೋದಿ

Update: 2020-12-26 13:56 GMT

ಹೊಸದಿಲ್ಲಿ,ಡಿ.26: ‘ದಿಲ್ಲಿಯಲ್ಲಿನ ಕೆಲವರು ನನಗೆ ಪ್ರಜಾಪ್ರಭುತ್ವದ ಪಾಠಗಳನ್ನುಕಲಿಸಲು ಬಯಸಿದ್ದಾರೆ ’ ಎಂದು ಶನಿವಾರ ಇಲ್ಲಿ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದರು. ಇತ್ತೀಚಿಗೆ ಸರಕಾರ ಮತ್ತು ಮೋದಿ ವಿರುದ್ಧ ದಾಳಿ ನಡೆಸಿದ್ದ ರಾಹುಲ್,ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ ಮತ್ತು ಅದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಆಗಿದ್ದರೂ ಸರಿ,ಪ್ರಧಾನಿ ವಿರುದ್ಧ ಧ್ವನಿಯೆತ್ತುವವರಿಗೆ ಭಯೋತ್ಪಾದಕರು ಎಂಬ ಹಣೆಪಟ್ಟಿಯನ್ನು ಕಟ್ಟಲಾಗುತ್ತದೆ ಎಂದು ಟೀಕಿಸಿದ್ದರು.

ಆನ್‌ಲೈನ್ ಮೂಲಕ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಎಲ್ಲ ನಿವಾಸಿಗಳಿಗಾಗಿ ‘ಆಯುಷ್ಮಾನ ಭಾರತ’ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, “ನನ್ನನ್ನು ಯಾವಾಗಲೂ ಮೂದಲಿಸುವ ಮತ್ತು ಅವಮಾನಿಸುವ ಜನರು ದಿಲ್ಲಿಯಲ್ಲಿದ್ದಾರೆ. ಅವರು ನನಗೆ ಪ್ರಜಾಪ್ರಭುತ್ವದ ಪಾಠವನ್ನು ಕಲಿಸಲು ಬಯಸಿದ್ದಾರೆ. ಜಮ್ಮು-ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ)ಗಳಿಗೆ ನಡೆದ ಚುನಾವಣೆ ಪ್ರಜಾಪ್ರಭುತ್ವಕ್ಕೆ ನಿದರ್ಶನವಾಗಿದೆ ಎಂದು ನಾನು ಅವರಿಗೆ ತೋರಿಸಲು ಬಯಸಿದ್ದೇನೆ” ಎಂದು ಹೇಳಿದರು.

ಕೆಲವು ರಾಜಕೀಯ ಶಕ್ತಿಗಳು ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಬಿಗಿಯುತ್ತಲೇ ಇರುತ್ತವೆ,ಆದರೆ ಅವರ ಇಬ್ಬಗೆ ನಿಲುವು ಮತ್ತು ಪೊಳ್ಳುತನವನ್ನು ನೋಡಿ. ಪುದುಚೇರಿಯನ್ನು ಆಳುತ್ತಿರುವ ಪಕ್ಷ (ಕಾಂಗ್ರೆಸ್)ವು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ್ದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಿಲ್ಲ. ಇದೇ ವೇಳೆ ಜಮ್ಮು-ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾದ ಒಂದು ವರ್ಷದೊಳಗೆ ಪಂಚಾಯತ್ ಮಟ್ಟದ ಚುನಾವಣೆಗಳನ್ನು ನಡೆಸಲಾಗಿದೆ ಎಂದರು.

ಜಮ್ಮು-ಕಾಶ್ಮೀರದಲ್ಲಿಯ ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿವೆ ಎಂದ ಮೋದಿ,ಎಂಟು ಹಂತಗಳ ಚುನಾವಣೆಗಳಲ್ಲಿ ತಮ್ಮ ಮತದಾನದ ಹಕ್ಕುಗಳನ್ನು ಚಲಾಯಿಸಿದ್ದಕ್ಕೆ ಮತದಾರರನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News