ಕ್ರೀಡಾಂಗಣದಲ್ಲಿ ಅರುಣ್ ಜೇಟ್ಲಿ ಪ್ರತಿಮೆ ಸ್ಥಾಪಿಸುವುದಾದರೆ, ನನ್ನ ಹೆಸರು ಅಳಿಸಿಬಿಡಿ: ಬಿಷನ್ ಸಿಂಗ್ ಬೇಡಿ

Update: 2020-12-27 09:06 GMT

ಹೊಸದಿಲ್ಲಿ,ಡಿ.27: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ, ಸ್ಪಿನ್ ಮಾಂತ್ರಿಕ ಬಿಷನ್ ಸಿಂಗ್ ಬೇಡಿ, ದಿಲ್ಲಿಯ ಪಿರೋಝ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ಮುಖಂಡರಾಗಿದ್ದ ಅರುಣ್ ಜೇಟ್ಲಿಯವರ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸಿ ದಿಲ್ಲಿ ಕ್ರಿಕೆಟ್ ಅಸೋಸಿಯೇಶನ್ ಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ದೊರಕದ ಕಾರಣ ಇದೀಗ ಅವರು ಮತ್ತೆ ಪತ್ರ ಬರೆದಿದ್ದು, “ಕೂಡಲೇ ಕ್ರೀಡಾಂಗಣದ ಭಾಗವೊಂದಕ್ಕೆ ನನ್ನ ಹೆಸರಿರುವುದನ್ನು ತೆರವುಗೊಳಿಸಬೇಕು, ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

“ನಾನು ಈ ಹಿಂದೆ ಬರೆದ ಪತ್ರಕ್ಕೆ ಸಾರ್ವಜನಿಕರಿಂದ ಹಾಗೂ ಕ್ರಿಕೆಟ್ ಅಭಿಮಾನಿಗಳಿಂದ ಅಪಾರ ಸಂಖ್ಯೆಯಲ್ಲಿ ಬೆಂಬಲ ವ್ಯಕ್ತವಾಗಿತ್ತು. ಆದರೆ ಇದುವರೆಗೂ ದಿಲ್ಲಿ ಕ್ರಿಕೆಟ್ ಅಸೋಸಿಯೇಶನ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನನ್ನ ಪತ್ರದ ಕುರಿತು ನೀವು ಅಸಡ್ಡೆ ತೋರುತ್ತಿದ್ದೀರಿ. ಕ್ರೀಡಾಂಗಣದಲ್ಲಿ ಕ್ರೀಡೆಗೆ ಸಂಬಂಧಿಸಿದ ವ್ಯಕ್ತಿಗಳ ಬದಲು ರಾಜಕಾರಣಿಯ ಪ್ರತಿಮೆ ನಿರ್ಮಾಣವನ್ನು ನಾನು ವಿರೋಧಿಸುತ್ತಿದ್ದೇನೆ.

“ಈ ಕ್ರೀಡಾಂಗಣದ ಒಂದು ಭಾಗಕ್ಕೆ ನನ್ನ ಹೆಸರನ್ನು ತೂಗುಹಾಕಲಾಗಿದೆ. ಇಲ್ಲಿ ರಾಜಕೀಯ ವ್ಯಕ್ತಿಗಳಿಗೆ ಅವಕಾಶ ನೀಡುತ್ತೀರಿ ಎಂದಾದರೆ ಅಲ್ಲಿ ನನ್ನ ಹೆಸರು ಇರಬಾರದು. ಕೂಡಲೇ ನನ್ನ ಹೆಸರನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಾನು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ” ಎಂದು ಬೇಡಿ ಪತ್ರದಲ್ಲಿ ತಿಳಿಸಿದ್ದಾರೆ.

ಸೋಮವಾರದಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜೇಟ್ಲಿ ಪ್ರತಿಮೆಯನ್ನು ಅನಾವರಣ ಮಾಡಲಿದ್ದು, ಗೃಹಮಂತ್ರಿ ಅಮಿತ್ ಶಾ ಹಾಗೂ ಅನುರಾಗ್ ಠಾಕೂರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News