ಆತಂಕದ ಇರುಳಿನಿಂದ ಹೊಸ ವರ್ಷದ ಬೆಳಕಿಗೆ

Update: 2020-12-27 19:30 GMT

2021ರ ಹೊಸ ವರ್ಷದಲ್ಲಿ ಜಗತ್ತಿನ ಎಲ್ಲೆಡೆ ಬಲಪಂಥೀಯ ಫ್ಯಾಶಿಸ್ಟ್ ಸರ್ವಾಧಿಕಾರಿಗಳ ಕುವ್ಯವಸ್ಥೆಯ ಅಂತ್ಯದ ಆರಂಭವಾಗಲಿ. ಲಾಭಕೋರ ಬಂಡವಾಳಶಾಹಿಯಿಂದಾಗಿ ಮನುಷ್ಯ ಮಾತ್ರವಲ್ಲ ನಿಸರ್ಗವೂ ಬೆಂದು ಬಸವಳಿದು ಹೋಗಿದೆ. ಹೊಸ ವರ್ಷ ಇದೆಲ್ಲಕ್ಕೆ ಕೊನೆ ಹೇಳುವ ದಿಕ್ಕಿನತ್ತ ಮುನ್ನಡೆಯಲಿ.


ಕೊರೋನದಿಂದ ತತ್ತರಿಸಿದ ಹಳೆಯ ವರ್ಷಗಳ ನೆನಪುಗಳ ನೆರಳಲ್ಲಿ ಇನ್ನೇನು ಹೊಸ ವರ್ಷ ಪ್ರವೇಶಿಸಲಿದ್ದೇವೆ. ಕೊರೋನ ವೈರಾಣು ಹೊಸ ರೂಪದಲ್ಲಿ ಅತ್ಯಂತ ಅಪಾಯಕಾರಿಯಾಗಿ ಬರಲಿದೆ ಎಂಬ ವದಂತಿಗಳ ಜೊತೆಗೆ 2021 ವರ್ಷದತ್ತ ಹೆಜ್ಜೆ ಇಡುತ್ತಿದ್ದೇವೆ. ‘ಬರವನ್ನು ವರವನ್ನಾಗಿ ಬಳಸಿಕೊಂಡಂತೆ’ ಜಗತ್ತಿನ ಎಲ್ಲ ಶೋಷಕ ಪ್ರಭುತ್ವಗಳು ಕೋವಿಡ್-19 ಎಂಬ ಅದೃಶ್ಯ ವೈರಸ್‌ನ್ನು ಬಳಸಿಕೊಂಡು ಜನ ಚಳವಳಿಗಳ ಕತ್ತು ಹಿಸುಕಲು ಮಸಲತ್ತು ನಡೆಸುತ್ತಲೇ ಇವೆ. ಜನರನ್ನು ಶತ್ರುಗಳೆಂದು ಕಾಣುವ ಸರಕಾರಗಳು ವಿಶ್ವದ ಎಲ್ಲೆಡೆ ಮನುಕುಲದ ಜೊತೆಗೆ ಪರಿಸರಕ್ಕೂ ಕಂಟಕಕಾರಿಯಾಗಿ ಪರಿಣಮಿಸಿವೆ.

ನಿಜ, 2020 ಎಂಬುದು ಭಾರತ ಸೇರಿದಂತೆ ಜಗತ್ತಿನ ಎಲ್ಲ ದೇಶಗಳ ಪಾಲಿಗೆ ಅತ್ಯಂತ ಭೀತಿಯನ್ನುಂಟು ಮಾಡಿದ ವರ್ಷ. ಮನುಷ್ಯ ಭೂಮಿಯ ಮೇಲೆ ಕಾಣಿಸಿಕೊಂಡ ನಂತರ ಇಂತಹ ಸಾವಿರಾರು ವೈರಾಣುಗಳು ಬಂದಿರಬಹುದು, ಹೋಗಿರಬಹುದು ಆದರೆ ನಾಗರಿಕತೆ ಅರಳಿದ ನಂತರ ಕಣ್ಣಿಗೆ ಕಾಣದ ವೈರಾಣುವೊಂದರ ಕಾರಣಕ್ಕಾಗಿ ಬಾಗಿಲು ಹಾಕಿಕೊಂಡು ಮನೆ ಸೇರಿದ್ದು ಬಹುಶಃ ಇದೇ ಮೊದಲ ಸಲವಿರಬೇಕು. ಕಳೆದ ಮಾರ್ಚ್ ತಿಂಗಳಲ್ಲಿ ಮುಚ್ಚಿದ ಶಾಲೆಗಳು ಇನ್ನೂ ತೆರೆದಿಲ್ಲ. ಅಸ್ತವ್ಯಸ್ತಗೊಂಡ ಬದುಕು ಇನ್ನೂ ಹಳಿಗೆ ಬಂದಿಲ್ಲ. ಎರಡು ತಿಂಗಳ ಕಾಲ ನಿರ್ಜನವಾಗಿದ್ದ ರಸ್ತೆಗಳಲ್ಲಿ ಮತ್ತೆ ಜೀವ ಸೆಲೆ ಒಸರುತ್ತಿರಬಹುದು. ಆದರೆ ಬದುಕು ಇನ್ನೂ ಮೊದಲಿನಂತಾಗಿಲ್ಲ.

ಕಳೆದ ಮಾರ್ಚ್ ತಿಂಗಳಿನ ಒಂದು ರಾತ್ರಿ ನಮ್ಮ ಪ್ರಧಾನ ಮಂತ್ರಿ ಅವರು ದಿಢೀರನೆ ಟಿವಿಯಲ್ಲಿ ಕಾಣಿಸಿಕೊಂಡು ನಾಳೆಯಿಂದ ‘ಲಾಕ್‌ಡೌನ್’ ಎಂದು ಸಾರಿಬಿಟ್ಟರು. ಅದರ ಮರು ದಿನದಿಂದ ಈ ದೇಶದ ದುಡಿದುಂಡು ಜೀವಿಸುವ ಬಡವರು ಅನುಭವಿಸಿದ ಯಾತನೆ, ಪಟ್ಟ ಪಾಡನ್ನು ಹೇಗೆ ಮರೆಯಲು ಸಾಧ್ಯ?. ಹೊಟ್ಟೆಪಾಡಿಗಾಗಿ ಹಳ್ಳಿಗಳಿಂದ ಮುಂಬೈ, ಮದ್ರಾಸ್, ಬೆಂಗಳೂರು, ದಿಲ್ಲಿಯಂತಹ ನಗರಗಳಿಗೆ ಹೋದವರಿಗೆ ಒಮ್ಮೆಲೇ ಬಂದೆರಗಿದ ಆಘಾತ ಉಂಟು ಮಾಡಿದ ಗಾಯ ಸುಲಭವಾಗಿ ಒಣಗುವಂತಹದ್ದಲ್ಲ. ನಮ್ಮ, ನಿಮ್ಮಂತಹ ಮಧ್ಯಮ ವರ್ಗದ, ಮೇಲ್ಮಧ್ಯಮವರ್ಗದ ಜನ ಹೇಗೋ ಮನೆ ಬಾಗಿಲು ಹಾಕಿಕೊಂಡು ಒಳಗೆ ಕುಳಿತೆವು. ಹೊತ್ತಿಗೆ ಸರಿಯಾಗಿ ಊಟ ಮಾಡಲು ತೊಂದರೆ ಇರಲಿಲ್ಲ. ಅದರಲ್ಲೂ ಮನೆಯ ಒಳಗಿದ್ದ ಎಲ್ಲರಿಗೂ ಸುಖವಿರಲಿಲ್ಲ. ಅಲ್ಲೂ ಬಿಕ್ಕಳಿಕೆಗಳಿದ್ದವು ಅದೆಲ್ಲ ಬರೆಯಲು ಹೊರಟರೆ ಅದೇ ಇನ್ನೊಂದು ಲೇಖನವಾಗುತ್ತದೆ. ಆದರೆ ಬೀದಿಯಲ್ಲಿ ಬದುಕು ಕಟ್ಟಿಕೊಂಡವರು ಅನುಭವಿಸಿದ ಸಂಕಟ ತುಂಬಾ ಅಸಹನೀಯವಾದುದು.

ಹೀಗೆ ಊರು ಬಿಟ್ಟು ಮಹಾನಗರಗಳನ್ನು ಸೇರಿದವರ ಬದುಕಿಗೆ ಕೊರೋನ ದಿಗ್ಬಂಧನದಿಂದ (ಲಾಕ್‌ಡೌನ್) ದಾರಿ ಕಾಣದಾಯಿತು.ಕೈಗೆ ಕೆಲಸವಿಲ್ಲ, ಊರಿಗೆ ಮರಳಿ ಹೋಗಲು ರೈಲು, ಬಸ್ಸು ಸೇರಿದಂತೆ ಯಾವುದೇ ವಾಹನಗಳಿಲ್ಲ. ಊರಿಗೆ ಸೇರಬೇಕೆಂದರೆ ಐದಾರು ನೂರು, ಸಾವಿರದೈನೂರು, ಎರಡು ಸಾವಿರ ಮೈಲಿ ನಡೆಯುತ್ತ ಹೋಗುವುದನ್ನು ಬಿಟ್ಟರೆ ಬೇರೆ ಪರ್ಯಾಯಗಳಿಲ್ಲ. ಹೀಗಾಗಿ ದುಡಿಯುವ ಬಡವರು ದಂಡೆಯಾತ್ರೆ ಆರಂಭಿಸಿದರು. ಇವರಲ್ಲಿ ಎಲ್ಲರೂ ಯುವಕರಲ್ಲ, ಕೈಕಾಲುಗಳಲ್ಲಿ ತ್ರಾಣವಿಲ್ಲದ ವಯಸ್ಸಾದವರು, ಮಕ್ಕಳು, ಕಾಯಿಲೆ ಪೀಡಿತರೂ ಇದ್ದರು. ಅಂತಹವರನ್ನೆಲ್ಲ ಮುರಿದ ಸೈಕಲ್‌ಗಳ ಮೇಲೆ, ತಳ್ಳುವ ಕಟ್ಟಿಗೆಯ ಗಾಡಿಗಳ ಮೇಲೆ ಕೂರಿಸಿಕೊಂಡು ಬಡವರು ಊರಿನ ದಾರಿ ಹಿಡಿದ ಕತೆ ಎಲ್ಲರಿಗೂ ಗೊತ್ತು. ಹೀಗೆ ಹೊರಟವರಲ್ಲಿ ಎಷ್ಟೋ ಜನ ದಾರಿಯಲ್ಲೇ ಅಸುನೀಗಿದರು. ಹಸಿವಿನಿಂದ ಸತ್ತರು, ಕೈ ಕಾಲು ಸೋತು ನೆಲಕ್ಕುರುಳಿದರು. ಹೆದ್ದಾರಿಯಲ್ಲೇ ಹೆರಿಗೆಗಳಾದವು, ಗರ್ಭಿಣಿಯರು, ಬಾಣಂತಿಯರು ನಡೆದೇ ನಡೆದರು. ಮಹಾರಾಷ್ಟ್ರದ ಔರಂಗಾಬಾದ್ ಬಳಿ ರೈಲಿಗೆ ಸಿಕ್ಕು ಕೆಲವರು ಹೆಣವಾದರು.ಇದಾವುದಕ್ಕೂ ಸ್ಪಂದಿಸದ ಪ್ರಭುತ್ವದ ಸೂತ್ರಧಾರರು ಜನರಿಗೆ ದೀಪ ಹಚ್ಚುವ, ಚಪ್ಪಾಳೆ ಹೊಡೆಯುವ ಸಂದೇಶ ನೀಡುತ್ತಲೇ ಇದ್ದರು.ಕೊರೋನ ವೈರಸ್‌ಗೆಹೆದರಿ ದೇವರೂ ಬಾಗಿಲು ಹಾಕಿಕೊಂಡು ಗುಡಿಯೊಳಗೆ ಕುಳಿತ. ದೇವರೇ ಬಾಗಿಲು ಹಾಕಿಕೊಂಡ ಮೇಲೆ ಇನ್ಯಾರ ಮೊರೆ ಹೋಗಬೇಕು?

ಕೋವಿಡ್ ಬರುವ ಮೊದಲೇ ಭಾರತದ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿದಿತ್ತು. ಯಾವ ಮುನ್ಸೂಚನೆಯೂ ನೀಡದೆ ತಂದ ನೋಟು ಅಮಾನ್ಯೀಕರಣ, ಜಿಎಸ್‌ಟಿ, ಲಂಗು ಲಗಾಮಿಲ್ಲದ ಬೆಲೆ ಏರಿಕೆ ಇವುಗಳಿಂದ ಜನರು ತತ್ತರಿಸಿ ಹೋಗಿದ್ದರು. ಅದರ ಮೇಲೆ ಈ ಕೊರೋನ ಎಂಬ ಬರೆ ಬಿತ್ತು.ಇಂತಹ ಕಾಲಘಟ್ಟದಲ್ಲಿ ಬಡವರ ಬದುಕು ಹರಿದು ಚಿಂದಿ ಚಿಂದಿಯಾಗಿದ್ದರೆ ಇನ್ನೊಂದೆಡೆ ಅಂಬಾನಿ, ಅದಾನಿಯಂತಹ ಕಾರ್ಪೊರೇಟ್ ರಾಜರ ಸಂಪತ್ತು ನೂರಾರು ಪಟ್ಟು ಹೆಚ್ಚಾಗಿದ್ದು ಒಂದು ಪವಾಡ.

ಕೊರೋನ ಕಾಲದಲ್ಲಿ ಸರಕಾರದ ಮನವಿಗೆ ಜನರು ಸಹಕರಿಸಿದರು. ಮನೆ ಬಿಟ್ಟು ಹೊರಗೆ ಬರಲಿಲ್ಲ. ಬೀದಿಗಿಳಿದು ಚಳವಳಿ ಮಾಡಲಿಲ್ಲ.ಕರಾಳ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದಿಲ್ಲಿಯ ಶಾಹೀನ್‌ಬಾಗ್ ಸೇರಿದಂತೆ ದೇಶವ್ಯಾಪಿ ನಡೆಸುತ್ತಿದ್ದ ಹೋರಾಟವನ್ನು ಕೈ ಬಿಟ್ಟರು. ಆದರೆ ಸರಕಾರ ಮಾತ್ರ ತನ್ನ ಚಾಳಿಯನ್ನು ಬಿಡಲಿಲ್ಲ. ಕೊರೋನ ಬರುವ ಮುಂಚೆ ಬಂಧಿಸಲ್ಪಟ್ಟಿದ್ದ ವರವರರಾವ್, ಆನಂದ ತೇಲ್ತುಂಬ್ಡೆ, ಗೌತಮ್ ನವ್ಲಾಖಾ, ಮುಂತಾದ ಚಿಂತಕರನ್ನು ನ್ಯಾಯವಾಗಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ವಯೋವೃದ್ಧರಾಗಿರುವ ಹಾಗೂ ಸಾಸ್ಥ ವಿಲ್ಲದ ಇವರನ್ನು ಬಿಡುಗಡೆಯಾಗದಂತೆ ಅಡ್ಡಗಾಲು ಹಾಕಲಾಯಿತು. ಜೈಲುಗಳಲ್ಲಿ ಜಾಗವಿರಲಿಲ್ಲ. ಈಗಲೂ ಇಲ್ಲ, ಕೋವಿಡ್ ಜೈಲಿನೊಳಗೂ ಹಬ್ಬುವ ಭೀತಿ ಇಂತಹ ಆತಂಕದ ಸನ್ನಿವೇಶದಲ್ಲೂ ಬಿಡುಗಡೆ ಮಾಡಲಿಲ್ಲ.

ಕೇಂದ್ರ ಸರಕಾರವನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸುವ ನಾಗಪುರದ ಗುಪ್ತ ಕಾರ್ಯಸೂಚಿಗಳು ಕೊರೋನ ಬಂತೆಂದು ನಿಲ್ಲಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡು ಅವುಗಳು ಒಂದೊಂದಾಗಿ ಜಾರಿಗೆ ಬರುತ್ತಲೇ ಇವೆ. ಪ್ರತಿಪಕ್ಷಗಳು ಸೊಂಟ ಮುರಿದುಕೊಂಡು ಬಿದ್ದಿವೆ.ಜನರ ಪರವಾಗಿ ಧೈರ್ಯದಿಂದ ಮಾತಾಡುವವರು ಜೈಲು ಸೇರಿದ್ದಾರೆ.ಇಂತಹ ಸಂದರ್ಭವನ್ನು ಬಳಸಿಕೊಂಡು ಸರಕಾರ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಕೆಲಸದ ಅವಧಿಯನ್ನು ಎಂಟರಿಂದ ಹನ್ನೆರಡು ತಾಸುಗಳಿಗೆ ಹೆಚ್ಚಿಸಿತು. ಇದರ ವಿರುದ್ಧ ಕಾರ್ಮಿಕ ಸಂಘಟನೆಗಳ ಪ್ರತಿರೋಧವೇನೋ ಬಂತು. ಆದರೆ ಅದು ಸಾಂಕೇತಿಕವಾಗಿತ್ತು ಎಂದು ಹೇಳಿದರೆ ಸಂಘಟಿತ ಕಾರ್ಮಿಕ ಚಳವಳಿಯ ನಾಯಕರಿಗೆ ಕೋಪ ಬರುತ್ತದೆ.

ಆದರೆ ನಾವು ಅನ್ನದಾತರೆಂದು ಕರೆಯುವ ರೈತರು ಮಾತ್ರ ತಮ್ಮ ಹೋರಾಟವನ್ನು ಸಾಂಕೇತಿಕಗೊಳಿಸಲಿಲ್ಲ. ಕಳೆದ ಇಪ್ಪತ್ತು ದಿನಗಳಿಂದ ದೇಶದ ರಾಜಧಾನಿ ದಿಲ್ಲಿಯಲ್ಲಿ ಮಣ್ಣಿನ ಮಕ್ಕಳು ನಡೆಸಿರುವ ಅತ್ಯಂತ ವ್ಯವಸ್ಥಿತವಾದ, ಸಂಘಟಿತವಾದ ಹೋರಾಟ ಪ್ರಭುತ್ವದ ದೊರೆಗಳಿಗೆ ಚಳಿಜ್ವರ ಹಿಡಿಸಿದೆ. ಕೊರೆಯುವ ಚಳಿಗೂ ಹೆದರದೆ ಬಟಾ ಬಯಲಿನಲ್ಲಿ ನಡೆಸಿದ ಹೋರಾಟವನ್ನು ವಿಫಲಗೊಳಿಸಲು ದುಷ್ಟಶಕ್ತಿಗಳು ನಡೆಸಿರುವ ಹುನ್ನಾರಗಳಿಗೆ ರೈತರು ಸೊಪ್ಪು ಹಾಕಲಿಲ್ಲ.

ಈ ಸಂದರ್ಭದಲ್ಲೇ ರೂಪಾಂತರಗೊಂಡ ಹೊಸ ಕೊರೋನದ ವದಂತಿಗಳು ಹರಡಿವೆ. ಇದನ್ನೇ ಬಳಸಿಕೊಂಡು ರೈತರ ಹೋರಾಟವನ್ನು ಮುಗಿಸಲು ಪ್ರಭುತ್ವ ಮಸಲತ್ತು ನಡೆಸಿದೆ. ಆದರೆ ಕೊರೋನ ಬಂತೆಂದು ರೈತರೇಕೆ ಹೋರಾಟ ಕೈ ಬಿಡಬೇಕು? ಕೊರೋನ ಬಂತೆಂದು ಸರಕಾರ ತನ್ನ ಜನವಿರೋಧಿ ನೀತಿಗಳನ್ನು ಕೈ ಬಿಡಲಿಲ್ಲ.ಕಾರ್ಪೊರೇಟ್ ಬಂಡವಾಳಶಾಹಿ ತನ್ನ ಲಾಭವನ್ನು ಬಿಟ್ಟುಕೊಡಲಿಲ್ಲ. ಕೋಮುವಾದಿಗಳು ದೇಶಕ್ಕೆ ಬೆಂಕಿ ಹಚ್ಚುವ ತಮ್ಮ ಅಜೆಂಡಾಗಳನ್ನು ಬಟ್ಟೆಯಲ್ಲಿ ಸುತ್ತಿ ಕಪಾಟಿನಲ್ಲಿಡಲಿಲ್ಲ. ಉತ್ತರ ಪ್ರದೇಶದ ಆದಿತ್ಯ ಸರಕಾರ ‘ಲವ್ ಜಿಹಾದ್’ ನಿರ್ಬಂಧಿಸುವ ಕಾಯ್ದೆ ತರುವುದನ್ನು ನಿಲ್ಲಿಸಲಿಲ್ಲ. ಕೊರೋನ ತೀವ್ರವಾಗಿದ್ದ ಕಾಲದಲ್ಲೇ ಇದಕ್ಕೆ ತಬ್ಲೀಗಿ ಎಂದು ಹೆಸರಿಟ್ಟು ಅಲ್ಪಸಂಖ್ಯಾತರ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಲಿಲ್ಲ. ಇವೆಲ್ಲ ಅನಿರ್ಬಂಧಿತವಾಗಿ ನಡೆದಿರುವಾಗ ರೈತ ರೇಕೆ ತಮ್ಮ ಹೋರಾಟ ಕೈ ಬಿಡಬೇಕು?.

ಇಷ್ಟೇ ಅಲ್ಲ ಕೊರೋನ ಕಾಲದಲ್ಲಿ ದಲಿತರ ಮೇಲೆ, ಮಹಿಳೆಯರ ಮೇಲೆ ದಮನ, ದಬ್ಬಾಳಿಕೆ, ಅತ್ಯಾಚಾರಗಳು ನಿಲ್ಲಲಿಲ್ಲ. ಹಾಥರಸ್‌ನಂತಹ ರೇಪ್‌ಗಳು ನಿಲ್ಲಲಿಲ್ಲ. ಇವೆಲ್ಲ ಕೊರೋನ ಭೀತಿಯ ನಡುವೆಯೂ ನಡೆಯುತ್ತಿರುವಾಗ ಇವುಗಳಿಗೆ ಪ್ರತಿರೋಧ, ಪ್ರತಿಭಟನೆಗಳೂ ನಿಲ್ಲಬೇಕಾಗಿಲ್ಲ. ಅಂತಲೇ ರೈತರ ಹೋರಾಟ ಗೆಲ್ಲುವವರೆಗೆ ನಡೆಯಲೇಬೇಕು. ರೈತರು ಹೋರಾಟ ಕೈ ಬಿಡಬೇಕೆಂದು ಸರಕಾರ ಬಯಸಿದರೆ ಮೊದಲು ಅದು ರೈತ ವಿರೋಧಿಯಾದ ಮೂರು ಕಾಯ್ದೆಗಳನ್ನು ವಾಪಸ್ ಪಡೆಯಲಿ. ಬೆಲೆ ಏರಿಕೆಗೆ ಕಡಿವಾಣ ಹಾಕಲಿ. ಪೆಟ್ರೋಲ್, ಡಿಸೇಲ್ ಮತ್ತು ಅಡಿಗೆ ಅನಿಲಗಳ ಬೆಲೆಯನ್ನು ಪ್ರತಿದಿನ, ಪ್ರತಿ ವಾರ ಏರಿಸುವುದನ್ನು ನಿಲ್ಲಿಸಲಿ. ಮೀಸಲು ವ್ಯವಸ್ಥೆಯ ವಿರುದ್ಧ ನಡೆಸಿದ ಮಸಲತ್ತನ್ನು, ಸಂವಿಧಾನದ ವಿರುದ್ಧ ನಡೆಸಿರುವ ಸಂಚನ್ನು ಕೈ ಬಿಡಲಿ. ಸರಕಾರ ಜನರ ನೋವು ಸಂಕಟಗಳಿಗೆ ಸ್ಪಂದಿಸಿದರೆ ಜನರೂ ಸಹಕಾರ ನೀಡುತ್ತಾರೆ.

ಆದರೆ ಕಾರ್ಪೊರೇಟ್, ಕಮ್ಯುನಲ್, ಫ್ಯಾಶಿಸ್ಟ್ ಸರಕಾರದಿಂದ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವೇ? ಮನುವಾದಿ ಹಿಂದೂ ರಾಷ್ಟ್ರ ಕಟ್ಟಲು ಕಾರ್ಪೊರೇಟ್ ಮಾಫಿಯಾ ಜೊತೆ ಒಪ್ಪಂದ ಮಾಡಿಕೊಂಡವರಿಂದ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಭಾರತ ಮಾತ್ರವಲ್ಲ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಜನತಂತ್ರ ಅತಂತ್ರವಾಗುತ್ತಿದೆ. ಅಮೆರಿಕದಲ್ಲಿ ಟ್ರಂಪ್ ತೊಲಗಿರಬಹುದು, ಆದರೆ ಅದರ ನೀತಿ, ಧೋರಣೆಗಳಲ್ಲಿ ಬದಲಾವಣೆ ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ರಶ್ಯದಲ್ಲಿ ಪುಟಿನ್ ಎಂಬ ಸರ್ವಾಧಿಕಾರಿ ತಾನು ಜೀವಂತವಾಗಿರುವವರೆಗೆ ಅಧಿಕಾರದಲ್ಲಿ ಉಳಿಯುವಂತೆ ಸಂವಿಧಾನವನ್ನು ತಿದ್ದಿಕೊಂಡಿದ್ದಾನೆ. ಭಾರತದ ಕತೆ ಹೇಳುವುದೇ ಬೇಡ, ‘ಹೊಟ್ಟೆಗೆ ಕೂಳಿಲ್ಲದಾಗ ಜುಟ್ಟಿಗೆ ಮಲ್ಲಿಗೆ ಹೂ’ ಎಂಬಂತೆ ಆರ್ಥಿಕ ಬಿಕ್ಕಟ್ಟಿನ ಈ ದುರಿತ ಕಾಲದಲ್ಲಿ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೊಸ ‘ಸಂಸತ್ ಭವನ’ ಕಟ್ಟಲು ಪ್ರಧಾನಿ ಮೋದಿ ಹೊರಟಿದ್ದಾನೆ.ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಶೃಂಗೇರಿ ಪುರೋಹಿತರಿಂದ ಹೋಮ ಮಾಡಿಸಿ ತಾನೇ ಪೂಜೆಗೆ ಕುಳಿತು ಶಂಕುಸ್ಥಾಪನೆ ಕಾರ್ಯ ನೆರವೇರಿಸಿದ್ದಾಗಿದೆ. ಭಾರತ ಮಾತ್ರವಲ್ಲ ಜಗತ್ತು ದಿಕ್ಕು ತಪ್ಪಿ ನಿಂತಿದೆ.ಇದಕ್ಕೆ ಕಾರಣ ಸೋವಿಯತ್ ಸಮಾಜವಾದಿ ಪರ್ಯಾಯದ ವೈಫಲ್ಯ ಎಂದರೆ ಅತಿಶಯೋಕ್ತಿಯಲ್ಲ.

ಅದೇನೇ ಇರಲಿ 2021ರ ಹೊಸ ವರ್ಷದಲ್ಲಿ ಜಗತ್ತಿನ ಎಲ್ಲೆಡೆ ಬಲಪಂಥೀಯ ಫ್ಯಾಶಿಸ್ಟ್ ಸರ್ವಾಧಿಕಾರಿಗಳ ಕುವ್ಯವಸ್ಥೆಯ ಅಂತ್ಯದ ಆರಂಭವಾಗಲಿ. ಲಾಭಕೋರ ಬಂಡವಾಳಶಾಹಿಯಿಂದಾಗಿ ಮನುಷ್ಯ ಮಾತ್ರವಲ್ಲ ನಿಸರ್ಗವೂ ಬೆಂದು ಬಸವಳಿದು ಹೋಗಿದೆ. ಹೊಸ ವರ್ಷ ಇದೆಲ್ಲಕ್ಕೆ ಕೊನೆ ಹೇಳುವ ದಿಕ್ಕಿನತ್ತ ಮುನ್ನಡೆಯಲಿ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ