ಶಾಲಾರಂಭದಿಂದಾಗಿ ಶಿಕ್ಷಕರಲ್ಲಿ ಕೊರೋನ ಪತ್ತೆ ಎಂಬಂತೆ ಬಿಂಬಿಸುವುದು ಖಂಡನೀಯ
ಬೆಂಗಳೂರು, ಜ.6: ರಾಜ್ಯದ ಕೆಲವು ಶಿಕ್ಷಕರಲ್ಲಿ ಕೊರೋನ ಸೋಂಕು ಪತ್ತೆಯಾಗಿರುವುದನ್ನು ದೊಡ್ಡ ಸುದ್ದಿಯನ್ನಾಗಿಸಿ, ಶಾಲೆಗಳು ಆರಂಭಗೊಂಡು ಅವರಲ್ಲಿ ಕೊರೋನ ಸೋಂಕು ಉಂಟಾಗಿದೆ ಎಂಬಂತೆ ಬಿಂಬಿಸುವ ಪ್ರಯತ್ನಗಳಾಗುತ್ತಿವೆ. ಇದು ಕುಟಿಲ ಕಾರ್ಯವಾಗಿದ್ದು, ಇದನ್ನು ಬಲವಾಗಿ ಖಂಡಿಸುತ್ತೇವೆ ಎಂದು ಮಕ್ಕಳ ನಡೆ-ಶಾಲೆಯ ಕಡೆ ಅಭಿಯಾನ ಸಮಿತಿ ತಿಳಿಸಿದೆ.
ಶಾಲೆಗಳನ್ನು ತೆರೆಯುವ ಮೊದಲೇ ಶಿಕ್ಷಕರಲ್ಲಿ ಕೊರೋನ ಪತ್ತೆಯ ಪರೀಕ್ಷೆಗಳನ್ನು ಸರಕಾರವು ನಡೆಸಿದ್ದು, ಅವುಗಳ ವರದಿಗಳಷ್ಟೇ ಈಗ ಬರುತ್ತಿವೆ. ಜೊತೆಗೆ, ಕೊರೋನ ಸೋಂಕು ಪತ್ತೆಯಾಗಲು ಸೋಂಕು ತಗಲಿದ ಬಳಿಕ 2-14 ದಿನಗಳಾಗುವುದರಿಂದ, ಶಾಲೆಗಳನ್ನು ತೆರೆಯುವ ಮೊದಲೇ ಈ ಪರೀಕ್ಷೆಗಳನ್ನು ನಡೆಸಲಾಗಿರುವುದರಿಂದ, ಶಾಲೆಗಳನ್ನು ತೆರೆದು ಒಂದೆರಡು ದಿನಗಳಷ್ಟೇ ಆಗಿರುವುದರಿಂದ, ಮತ್ತು ಹೀಗೆ ಸೋಂಕಿತರಾದ ಶಿಕ್ಷಕರು ಈಗ ತೆರೆದಿರುವ ಶಾಲೆಗಳಿಗೆ ಹೋಗಿಯೇ ಇಲ್ಲವಾದ್ದರಿಂದ ಅವರಲ್ಲಿ ಸೊಂಕುಂಟಾಗಿರುವುದಕ್ಕೆ ಶಾಲೆಗಳನ್ನು ತೆರೆದಿರುವುದು ಯಾವ ರೀತಿಯಲ್ಲೂ ಕಾರಣವಾಗಲು ಸಾಧ್ಯವೇ ಇಲ್ಲ. ಆದ್ದರಿಂದ ಈ ಎಲ್ಲಾ ಸೋಂಕುಗಳೂ ಶಾಲೆಗಳು ಆರಂಭಗೊಳ್ಳುವ ಮೊದಲೇ ತಗಲಿರುವುದು ಸ್ಪಷ್ಟವಾಗಿದೆ. ನಾವು ಈ ಹಿಂದೆಯೇ ಹಲವು ಬಾರಿ ಹೇಳಿರುವಂತೆ ಶಿಕ್ಷಕರೂ ಸೇರಿದಂತೆ ವಯಸ್ಕರು ಶಾಲೆಗಳ ಮಕ್ಕಳಿಂದ ಸೋಂಕಿತರಾಗುವ ಸಾಧ್ಯತೆಗಳು ಅತಿ ಕಡಿಮೆ ಇದ್ದು, ಹೊರಗಡೆಯೇ ಸೋಂಕಿತರಾಗುವ ಸಾಧ್ಯತೆಗಳು ಹೆಚ್ಚು. ಶಾಲೆ ಆರಂಭಕ್ಕೆ ಮೊದಲೇ ನಡೆಸಲಾಗಿರುವ ಪರೀಕ್ಷೆಗಳಲ್ಲಿ ಕೆಲವು ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿರುವುದು ನಾವು ಹೇಳುತ್ತಾ ಬಂದಿರುವುದನ್ನು ಸಂಪೂರ್ಣವಾಗಿ ಪುಷ್ಟೀಕರಿಸುತ್ತದೆ ಎಂದು ಸಮಿತಿಯು ತಿಳಿಸಿದೆ.
ಸರಕಾರವು ಕೈಗೊಂಡ ಈ ಮುಂಜಾಗ್ರತಾ ಕ್ರಮದಿಂದಾಗಿ ಸೋಂಕಿತ ಶಿಕ್ಷಕರು ಗುರುತಿಸಲ್ಪಟ್ಟು ಶಾಲೆಗಳ ಕರ್ತವ್ಯಕ್ಕೆ ಹಾಜರಾಗದೇ ಉಳಿದಿರುವುದರಿಂದ ಆ ಶಿಕ್ಷಕರಿಂದ ಇತರ ಶಿಕ್ಷಕರಿಗಾಗಲೀ, ಮಕ್ಕಳಿಗಾಗಲೀ, ಶಾಲೆಗೆ ಬರುವ ಇತರರಿಗಾಗಲೀ ಸೋಂಕು ಹರಡದಂತೆ ತಡೆಯಲು ಸಹಾಯವಾಗಿದೆ. ಆದ್ದರಿಂದ ಹೀಗೆ ಪತ್ತೆಯಾಗಿರುವುದು ಶಾಲೆಗಳನ್ನು ತೆರೆಯುವಾಗ ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಸಾಕ್ಷಿಯಾಗಿದೆ, ಮಾತ್ರವಲ್ಲ, ಶಾಲೆಗಳು ಸುರಕ್ಷಿತವಾಗಿವೆ ಎನ್ನುವುದನ್ನು ದೃಢಪಡಿಸುತ್ತದೆ.
ರಾಜ್ಯದ ಎರಡು ಲಕ್ಷಕ್ಕೂ ಹೆಚ್ಚು ಶಿಕ್ಷಕರಲ್ಲಿ ಇಂತಹ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೇವಲ ಬೆರಳೆಣಿಕೆಯಷ್ಟು ಸಂಖ್ಯೆಯ ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿದೆ, ಮತ್ತು ಅವರೆಲ್ಲರೂ ಶಾಲೆಗಳಿಂದ ದೂರವೇ ಉಳಿದಿದ್ದಾರೆ. ಒಟ್ಟಿನಲ್ಲಿ, ಸರಕಾರದ ಮುಂಜಾಗ್ರತಾ ಕ್ರಮಗಳ ಕಾರಣದಿಂದ, ಶಾಲೆಗಳು ತೆರೆಯುವ ಮೊದಲೇ ಕೆಲವು ಶಿಕ್ಷಕರಲ್ಲಿ ಕೊರೋನ ಸೋಂಕು ಪತ್ತೆಯಾಗಿದೆಯೇ ಹೊರತು ಶಾಲೆಗಳನ್ನು ತೆರೆದಿರುವುದರಿಂದಲ್ಲ ಮತ್ತು ಈಗ ತೆರೆಯಲಾಗಿರುವ ಶಾಲೆಗಳು ಮಕ್ಕಳಿಗೂ, ಶಿಕ್ಷಕರಿಗೂ ಅತ್ಯಂತ ಸುರಕ್ಷಿತವೇ ಆಗಿವೆ.
ಆದ್ದರಿಂದ ಮಾಧ್ಯಮಗಳು ಇಂಥ ಅವಿವೇಕದ ಅಪಪ್ರಚಾರವನ್ನು ತಕ್ಷಣವೇ ನಿಲ್ಲಿಸಿ, ರಾಜ್ಯದ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಶಾಲೆಗಳನ್ನು ತೆರೆದಿರುವುದನ್ನು ಬೆಂಬಲಿಸಬೇಕು ಎಂದು ಆಗ್ರಹಿಸುತ್ತೇವೆ. ಮಾತ್ರವಲ್ಲ, ಒಂದನೇ ತರಗತಿಯಿಂದ ಎಲ್ಲಾ ತರಗತಿಗಳನ್ನೂ ಕೂಡಲೇ ಪೂರ್ಣವಾಗಿ ತೆರೆಯಬೇಕೆಂದೂ, ಎಲ್ಲಾ ಮಕ್ಕಳಿಗೆ ಶಾಲಾ ಬಿಸಿಯೂಟವನ್ನೂ ಒದಗಿಸಬೇಕೆಂದೂ, ಈ 19-20ರ ಶೈಕ್ಷಣಿಕ ವರ್ಷವನ್ನು ಜೂನ್ ಅಂತ್ಯದವರೆಗೆ ನಡೆಸಿ ಎಲ್ಲಾ ಶಿಕ್ಷಣವನ್ನು ಪೂರ್ಣಗೊಳಿಸಬೇಕೆಂದು ಮಕ್ಕಳ ನಡೆ - ಶಾಲೆಯ ಕಡೆ ಅಭಿಯಾನ ಸಮಿತಿಯು ತಿಳಿಸಿದೆ.