ಫಾತಿಮಾ ಶೇಖ್ ಕೊಡುಗೆಯನ್ನು ಮರೆತ ಭಾರತ

Update: 2021-01-10 19:30 GMT

ಆಧುನಿಕ ಭಾರತದ ನಿರ್ಮಾಣದಲ್ಲಿ ಫಾತಿಮಾ ಶೇಖ್‌ರಂತಹವರ ಅನನ್ಯ ಕೊಡುಗೆಯೂ ಇದೆ. ಇದು ಚರಿತ್ರೆಯಲ್ಲಿ ಸರಿಯಾಗಿ ದಾಖಲಾಗದಿರುವುದರಿಂದ ಈಗ ಇಂತಹವರು ಹೊಸ ಪೀಳಿಗೆಯ ಪಾಲಿಗೆ ಅಪರಿಚಿತರಾಗಿ ಉಳಿದು ಬಿಡುತ್ತಾರೆ. ಈಗಂತೂ ಜನಾಂಗ ದ್ವೇಷದ, ಕೋಮುವಾದದ ಅಬ್ಬರದ ಕಾಲ. ದೇಶ ಕಟ್ಟಿದ ಇಡೀ ಒಂದು ಸಮುದಾಯದ ದೇಶ ನಿಷ್ಠೆಯನ್ನು ದೇಶಕ್ಕೆ ದ್ರೋಹ ಬಗೆದವರು ಅಸಭ್ಯವಾಗಿ, ಅನಾಗರಿಕವಾಗಿ ಪ್ರಶ್ನಿಸುತ್ತಿರುವ ಕಾಲ. ಇಂತಹ ಕಾಲಘಟ್ಟದಲ್ಲಿ ನಾವು ಫಾತಿಮಾ ಶೇಖ್, ಉಸ್ಮಾನ್ ಶೇಖ್‌ರಂತಹವರ ಕೊಡುಗೆಯನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳಬೇಕಾಗಿದೆ.


ಹತ್ತೊಂಭತ್ತನೆಯ ಶತಮಾನವನ್ನು ಒಂದು ವಿಧದಲ್ಲಿ ನವೋದಯದ ಶತಮಾನ ಎಂದು ಕರೆಯುತ್ತೇವೆ. ಭಾರತ ಮಾತ್ರವಲ್ಲ ಜಗತ್ತಿನ ಎಲ್ಲೆಡೆ ಅವಕಾಶ ವಂಚಿತ ಸಮುದಾಯಗಳಲ್ಲಿ ಹೊಸ ಜಾಗೃತಿ ಮೂಡಿದ ಕಾಲಘಟ್ಟವದು. ಶೋಷಣೆ, ದಬ್ಬಾಳಿಕೆ, ಗುಲಾಮಗಿರಿ ವಿರುದ್ಧ ದಮನಿತ ಸಮುದಾಯಗಳು ಸಿಡಿದೆದ್ದ ಶತಮಾನವದು. ಇದೇ ಶತಮಾನದಲ್ಲಿ ಜರ್ಮನಿಯಲ್ಲಿ ಕಾರ್ಲ್ ಮಾರ್ಕ್ಸ್, ಎಂಗೆಲ್ಸ್ ಕಮ್ಯುನಿಸ್ಟ್ ಪ್ರಣಾಳಿಕೆ ಬರೆದರು. ನಂತರ ಕಳೆದ ಶತಮಾನದ ಎರಡನೇ ದಶಕದಲ್ಲಿ ಸೋವಿಯತ್ ರಶ್ಯದಲ್ಲಿ ಲೆನಿನ್ ನೇತೃತ್ವದಲ್ಲಿ ಸಮಾಜವಾದಿ ಕ್ರಾಂತಿ ನಡೆದು ಜಗತ್ತು ಆ ವರೆಗೆ ಕಂಡರಿಯದ ಸಮಾನತೆಯ ಸಮಾಜವೊಂದು ಅಲ್ಲಿ ಸ್ಥಾಪನೆಯಾಯಿತು. ಮುಂದೆ ಅದರ ಪ್ರಭಾವದಿಂದಾಗಿ ಪೂರ್ವ ಯುರೋಪಿನ ದೇಶಗಳು ಸಮತಾವಾದವನ್ನು ಒಪ್ಪಿಕೊಂಡವು. ನಂತರ ಚೀನಾ, ವಿಯೆಟ್ನಾಂ, ಕ್ಯೂಬಾ ಮುಂತಾದ ದೇಶಗಳು ಅದೇ ಹಾದಿ ಹಿಡಿದವು. ಇದೇ ಕಾಲಘಟ್ಟದಲ್ಲಿ ಭಾರತದಲ್ಲಿ ಸತಿ ಸಹಗಮನ, ಜಾತಿ ಶೋಷಣೆಯ ವಿರುದ್ಧ ಹೋರಾಟಗಳು ಆರಂಭವಾದವು. ಅದಕ್ಕಿಂತ ಮೊದಲೇ ಮಹಾರಾಷ್ಟ್ರದ ಪುಣೆಯಲ್ಲಿ ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ ಫುಲೆ ಅಕ್ಷರ ಕ್ರಾಂತಿಯನ್ನೇ ಮಾಡಿದರು.

ಕಳೆದ ಜನರಿ 3ನೇ ತಾರೀಕನ್ನು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವೆಂದು ಎಲ್ಲೆಡೆ ಆಚರಿಸಿದೆವು.ಇತ್ತೀಚಿನ ವರ್ಷಗಳಲ್ಲಿ ತಪ್ಪದೇ ಆ ತಾಯಿಯ ಜನ್ಮದಿನವನ್ನು ದೇಶದಲ್ಲಿ ಆಚರಿಸಲಾಗುತ್ತದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರೂ ನೆನಪು ಮಾಡಿಕೊಂಡು ಸಾವಿತ್ರಿಬಾಯಿ ಅವರನ್ನು ಸ್ಮರಿಸಿ ಸಂದೇಶ ನೀಡಿದ್ದರು. ಇದಕ್ಕೆ ಕಾರಣವಿದೆ. ಪುಣೆಯಲ್ಲಿ ಮನುವಾದಿ ಪೇಶ್ವೆಶಾಹಿ ಸರಕಾರ ಮಹಿಳಾ ಶಿಕ್ಷಣಕ್ಕೆ ವಿರೋಧವಾಗಿತ್ತು. ಆಗ ಮನುಶಾಸ್ತ್ರದ ಪ್ರಕಾರ ಸ್ತ್ರೀ ಶಿಕ್ಷಣ ಮತ್ತು ದಲಿತರ ಶಿಕ್ಷಣಕ್ಕೆ ನಿರ್ಬಂಧವಿತ್ತು. ಈ ನಿರ್ಬಂಧವನ್ನು ಧಿಕ್ಕರಿಸಿ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರು ಹೆಣ್ಣು ಮಕ್ಕಳಿಗಾಗಿ ಆರಂಭಿಸಿದ ಶಾಲೆಗಳು, ಅದಕ್ಕಾಗಿ ಅವರು ಅನುಭವಿಸಿದ ಹಿಂಸೆ, ಕಲ್ಲೇಟು ಈಗ ಎಲ್ಲರಿಗೂ ಗೊತ್ತಿದೆ. ಆದರೆ ಸಾವಿತ್ರಿಬಾಯಿ ಅವರೊಂದಿಗೆ ಮಹಿಳಾ ಶಿಕ್ಷಣಕ್ಕಾಗಿ ಅವರಷ್ಟೇ ಕೆಲಸ ಮಾಡಿದ ಫಾತಿಮಾ ಶೇಖ್ ಅವರ ಹೆಸರು ಬಹುತೇಕ ಜನರಿಗೆ ಗೊತ್ತಿಲ್ಲ.

ಇತ್ತೀಚಿನವರೆಗೆ ಸಾವಿತ್ರಿಬಾಯಿ, ಜ್ಯೋತಿಬಾ ಫುಲೆ ಅವರ ಹೆಸರು ಮತ್ತು ಸಾಧನೆ ಹೆಚ್ಚಾಗಿ ಬೆಳಕಿಗೆ ಬಂದಿರಲಿಲ್ಲ. ಆದರೆ ಕಾನ್ಶೀರಾಮ್ ಅವರು ಬಾಮಸೆಫ್ ಸಂಘಟನೆ ಕಟ್ಟಿದ ಮೇಲೆ ಬಿಎಸ್‌ಪಿ ಮೂಲಕ ಎಪ್ಪತ್ತರ ದಶಕದ ನಂತರ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಶಾಹು ಮಹಾರಾಜರ ಬಗ್ಗೆ ಅರಿವು ಮೂಡಿಸಿದ ಮೇಲೆ ಎಲ್ಲರಿಗೂ ಗೊತ್ತಾಯಿತು. ಬಾಲ್ಯದಿಂದಲೂ ಕಮ್ಯುನಿಸ್ಟ್ ಚಳವಳಿಯಲ್ಲಿ ಬೆಳೆದು ಬಂದ ನನ್ನಂತಹವರಿಗೂ ಈ ಮಹಾಚೇತನಗಳ ಬಗ್ಗೆ ಗೊತ್ತಿರಲಿಲ್ಲ. ನಮಗೆ ಸಿಗುತ್ತಿದ್ದ ಸಾಹಿತ್ಯದಲ್ಲಿ ಇವರ ಬಗ್ಗೆ ಮಾಹಿತಿ ಇರುತ್ತಿರಲಿಲ್ಲ. ಆದರೆ ಈಗ ಕಮ್ಯುನಿಸ್ಟ್ ಪ್ರಕಾಶನ ಸಂಸ್ಥೆಗಳು ಇವರ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ಹೊರ ತಂದಿವೆ.
ಈಗ ನಾನು ಹೇಳಲು ಹೊರಟಿದ್ದು ಜ್ಯೋತಿಬಾ ಇಲ್ಲವೇ ಸಾವಿತ್ರಿಬಾಯಿ ಅವರ ಬಗೆಗಲ್ಲ. ಆದರೆ ಅವರ ಜೊತೆಗೆ ಅಕ್ಷರ ಕ್ರಾಂತಿ ಮಾಡಿದ ಫಾತಿಮಾ ಶೇಖ್ ಬಗ್ಗೆ.

ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರು 1848ರಿಂದ 1851ರ ನಾಲ್ಕು ವರ್ಷಗಳ ಕಾಲಾವಧಿಯಲ್ಲಿ ಪುಣೆಯಲ್ಲಿ ಹದಿನೆಂಟು ಶಾಲೆಗಳನ್ನು ಹೆಣ್ಣು ಮಕ್ಕಳಿಗಾಗಿ ಆರಂಭಿಸಿದರು. ಇದರಿಂದ ಮನುವಾದಿ ಪೇಶ್ವೆಗಳು ಜ್ಯೋತಿಬಾ ಫುಲೆ ಅವರ ತಂದೆ ಗೋವಿಂದರಾವ್ ಫುಲೆ ಅವರ ಮೇಲೆ ಒತ್ತಡ ತಂದು ಜ್ಯೋತಿಬಾ, ಸಾವಿತ್ರಿ ಅವರನ್ನು ಮನೆಯಿಂದ ಹೊರಗೆ ಹಾಕಿಸಿದರು. ಆಗ ಬೀದಿಗೆ ಬಿದ್ದ ಫುಲೆ ದಂಪತಿಗೆ ಆಸರೆ ನೀಡಿದವರು ಇದೇ ಫಾತಿಮಾ ಶೇಖ್ ಮತ್ತು ಅವರ ಸೋದರ ಉಸ್ಮಾನ್ ಶೇಖ್. ಮನೆಯಿಂದ ಹೊರ ಹಾಕಲ್ಪಟ್ಟ ಈ ದಂಪತಿಗೆ ಈ ಶೇಖ್ ಅಣ್ಣ, ತಂಗಿ ಆಸರೆ ನೀಡಿದರು. ಉಸ್ಮಾನವಾಡದಲ್ಲಿ ಮಹಿಳೆಯರ ಶಾಲೆ ಆರಂಭಿಸಲು ನೆರವಾದರು.

ಭಾರತದಲ್ಲಿ ಸಮಾಜ ಸುಧಾರಕರೆಂದರೆ ರಾಜಾರಾಮ್ ಮೋಹನರಾಯ್, ಈಶ್ವರಚಂದ್ರ ವಿದ್ಯಾಸಾಗರ, ದಯಾನಂದ ಸರಸ್ವತಿ, ಮಹಾದೇವ ಗೋವಿಂದ ರಾನಡೆ ಹೆಸರನ್ನು ಮಾತ್ರ ಹೇಳಲಾಗುತ್ತದೆ.ಆದರೆ ಇವರಿಗಿಂತ ಮುಂಚೆ ವಿದ್ಯೆಯ ಬೆಳಕನ್ನು ನೀಡಿದ ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ ಫುಲೆ ಹಾಗೂ ಫಾತಿಮಾ ಶೇಖ್‌ರಂತಹವರನ್ನು ಮರೆ ಮಾಚಲಾಗುತ್ತದೆ.

ಅದರಲ್ಲೂ ಫಾತಿಮಾ ಶೇಖ್ ಹೆಸರು ಬಹಳ ಜನರಿಗೆ ಗೊತ್ತಿಲ್ಲ. ಅವರ ಕುರಿತು ಯಾವ ದಾಖಲೆಗಳೂ ಇಲ್ಲ. ಜ್ಯೋತಿಬಾ ಮತ್ತು ಸಾವಿತ್ರಿ ಲೇಖನ, ಪತ್ರಗಳನ್ನು ಬರೆಯುತ್ತಿದ್ದುದರಿಂದ ಅವರ ಬಗ್ಗೆ ಮಾಹಿತಿ ಸಿಗುತ್ತದೆ. ಆದರೆ ಫಾತಿಮಾ ಶೇಖ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.ಆದರೆ ಇತ್ತೀಚೆಗೆ ಕೆಲ ವಿವರಗಳು ಬೆಳಕಿಗೆ ಬಂದಿವೆ.
ಸಾವಿತ್ರಿಬಾಯಿ ಫುಲೆ ಅವರು ಹಿಂದೂ ಧರ್ಮದಲ್ಲಿನ ಮನುವಾದಿ ಕಂದಾಚಾರಿಗಳನ್ನು ಎದುರಿಸಿ ಮಹಿಳೆಯರಿಗೆ ಅಕ್ಷರ ಕಲಿಸಿದರು. ಆದರೆ ಫಾತಿಮಾ ಶೇಖ್ ಅವರು ಹಿಂದೂ ಮತ್ತು ಮುಸ್ಲಿಂ ಧರ್ಮಗಳಲ್ಲಿನ ಮೂಲಭೂತವಾದಿಗಳನ್ನು ಎದುರಿಸಿ ನಿಂತರು. ಇಸ್ಲಾಂ ಧರ್ಮದಲ್ಲಿ ಸ್ತ್ರೀ ಶಿಕ್ಷಣಕ್ಕೆ ನಿಷೇಧವಿಲ್ಲ ಎಂದು ಧಾರ್ಮಿಕ ಗ್ರಂಥಗಳನ್ನು ಉಲ್ಲೇಖಿಸಿ ಮನವರಿಕೆ ಮಾಡಿಕೊಟ್ಟು ಮುಸ್ಲಿಂ ಹೆಣ್ಣು ಮಕ್ಕಳು ಕೂಡ ಫುಲೆ ದಂಪತಿ ಆರಂಭಿಸಿದ ಶಾಲೆಗಳಿಗೆ ಬರುವಂತೆ ಮಾಡಿದರು.

 ಅದೇ ಕಾಲಘಟ್ಟದಲ್ಲಿ ಸರ್ ಸೈಯದ್ ಅಹ್ಮದ್ ಖಾನ್ ಆಂಗ್ಲೊ ಓರಿಯಂಟಲ್ ಶಾಲೆ, ಕಾಲೇಜನ್ನು ಆರಂಭಿಸಿದರು. ಮುಂದೆ ಅವರು ಆರಂಭಿಸಿದ ಕಾಲೇಜು ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯವೆಂದು ಖ್ಯಾತಿ ಪಡೆಯಿತು. ಭಾರತದ ನವ ಜಾಗೃತಿಯ ಹರಿಕಾರರ ಸಾಲಿನಲ್ಲಿ ಸೈಯದ್ ಅಹ್ಮದ್‌ಖಾನ್ ಸೇರ್ಪಡೆಯಾದರು. ಆದರೆ ಇಂತಹ ಪ್ರಖ್ಯಾತಿ ಫಾತಿಮಾ ಶೇಖ್ ಅವರಿಗೆ ಸಿಗಲಿಲ್ಲ. ಇದಕ್ಕೆ ಏನು ಕಾರಣವೋ ಗೊತ್ತಿಲ್ಲ.

ಇತ್ತೀಚೆಗೆ ಮಹಾರಾಷ್ಟ್ರ ಸರಕಾರವೇನೋ ಉರ್ದು ಶಾಲೆಗಳ ಪಠ್ಯಪುಸ್ತಕಗಳಲ್ಲಿ ಫಾತಿಮಾ ಶೇಖ್ ಅವರ ಕುರಿತು ಒಂದು ಪಾಠವನ್ನು ಸೇರ್ಪಡೆ ಮಾಡಿದೆ.ಇದನ್ನು ಬಿಟ್ಟರೆ ಚರಿತ್ರೆಯಲ್ಲಿ ಫಾತಿಮಾ ಅವರಿಗೆ ನ್ಯಾಯವಾದ ಸ್ಥಾನ ಮಾನ ಸಿಕ್ಕಿಲ್ಲ.

ಫಾತಿಮಾ ಶೇಖ್ ಶಿಕ್ಷಕಿಯಾಗಿ ಸಾವಿತ್ರಿಬಾಯಿ ಫುಲೆ ಅವರೊಡನೆ ಶಾಲೆಗೆ ಹೋಗುವಾಗ ಮನುವಾದಿ ದುಷ್ಟರು ಆಕೆಯ ಮೇಲೂ ಕಲ್ಲು, ಕೆಸರು, ಸೆಗಣಿ, ರಾಡಿ ಎಸೆದು ಹಲ್ಲೆ ಮಾಡುತ್ತಾರೆ. ಈ ಬೆದರಿಕೆಗೆ ಸೊಪ್ಪುಹಾಕದ ಫಾತಿಮಾ ಸಾರ್ವತ್ರಿಕ ಶಿಕ್ಷಣಕ್ಕಾಗಿ ಅಂಜದೆ ಅಳುಕದೆ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ.ಅವರ ಉಸ್ಮಾನವಾಡ ಮನೆಯಲ್ಲೇ ಶಾಲೆ ನಡೆಯುತ್ತಿದ್ದುದರಿಂದ ಮುಸ್ಲಿಂ ಸಮಾಜದಲ್ಲೂ ಹೊಸ ಜಾಗೃತಿ ಮೂಡುತ್ತದೆ. ಅಲ್ಲೂ ಕೂಡ ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದೆಂಬ ಬೆದರಿಕೆಗಳೂ ಆಗಾಗ ಬರುತ್ತಿರುತ್ತವೆ. ಅದನ್ನು ಜ್ಯೋತಿಬಾ, ಸಾವಿತ್ರಿಬಾಯಿ, ಫಾತಿಮಾ ಶೇಖ್‌ಮತ್ತು ಅವರ ಸೋದರ ಉಸ್ಮಾನ್ ಶೇಖ್ ಒಂದಾಗಿ ಎದುರಿಸುತ್ತಾರೆ.

ಆಧುನಿಕ ಭಾರತದ ನಿರ್ಮಾಣದಲ್ಲಿ ಫಾತಿಮಾ ಶೇಖ್‌ರಂತಹವರ ಅನನ್ಯ ಕೊಡುಗೆಯೂ ಇದೆ. ಇದು ಚರಿತ್ರೆಯಲ್ಲಿ ಸರಿಯಾಗಿ ದಾಖಲಾಗದಿರುವುದರಿಂದ ಈಗ ಇಂತಹವರು ಹೊಸ ಪೀಳಿಗೆಯ ಪಾಲಿಗೆ ಅಪರಿಚಿತರಾಗಿ ಉಳಿದು ಬಿಡುತ್ತಾರೆ. ಈಗಂತೂ ಜನಾಂಗ ದ್ವೇಷದ, ಕೋಮುವಾದದ ಅಬ್ಬರದ ಕಾಲ. ದೇಶ ಕಟ್ಟಿದ ಇಡೀ ಒಂದು ಸಮುದಾಯದ ದೇಶ ನಿಷ್ಠೆಯನ್ನು ದೇಶಕ್ಕೆ ದ್ರೋಹ ಬಗೆದವರು ಅಸಭ್ಯವಾಗಿ, ಅನಾಗರಿಕವಾಗಿ ಪ್ರಶ್ನಿಸುತ್ತಿರುವ ಕಾಲ. ಇಂತಹ ಕಾಲಘಟ್ಟದಲ್ಲಿ ನಾವು ಫಾತಿಮಾ ಶೇಖ್, ಉಸ್ಮಾನ್ ಶೇಖ್‌ರಂತಹವರ ಕೊಡುಗೆಯನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳಬೇಕಾಗಿದೆ.

ಅಂದು ಅಂದರೆ ನೂರಾ ಎಂಭತ್ತು ವರ್ಷಗಳ ಹಿಂದೆ ಹೆಣ್ಣು ಮಕ್ಕಳು ಮತ್ತು ದಲಿತರಿಗೆ ಅಕ್ಷರ ಕಲಿಸಲು ಹೊರಟಾಗ ದುಷ್ಟ ಮನುವ್ಯಾಧಿಗಳ ಕುತಂತ್ರದಿಂದಾಗಿ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರು ಉಟ್ಟ ಬಟ್ಟೆಯಲ್ಲೇ ಬರಿಗೈಯಿಂದ ಮನೆಯಿಂದ ಹೊರ ಬೀಳಬೇಕಾಯಿತು.ಆಗ ಬೀದಿಗೆ ಬಿದ್ದ ಅವರನ್ನು ಪ್ರೀತಿ ಮತ್ತು ಅಕ್ಕರೆಯಿಂದ ತಮ್ಮ ಮನೆಗೆ ಬರಮಾಡಿಕೊಂಡು ಆಸರೆ ನೀಡಿದ ಉಸ್ಮಾನ್ ಶೇಖ್ ಮತ್ತು ಫಾತಿಮಾ ಶೇಖ್ ಅವರನ್ನು ಹೇಗೆ ಮರೆಯಲು ಸಾಧ್ಯ? ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಅವರನ್ನು ಮನೆಗೆ ಕರೆದುಕೊಂಡಿದ್ದು ಮಾತ್ರವಲ್ಲದೆ ತಮ್ಮ ಮನೆಯಿಂದಲೇ ಜ್ಯೋತಿಬಾ ಅವರ ಸಂಸಾರಕ್ಕೆ ಬೇಕಾಗುವ ಪಾತ್ರೆ ಪರಿಕರಗಳನ್ನು ಒದಗಿಸಿದವರು ಉಸ್ಮಾನವಾಡದ ಈ ಅಣ್ಣ ತಂಗಿ. ಈ ಆಧುನಿಕ ಭಾರತ ರೂಪುಗೊಂಡಿದ್ದು ಇಂಥ ಪ್ರೀತಿ ತುಂಬಿದ ಮನಸ್ಸುಗಳಿಂದ.

ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರನ್ನು ನೆನೆಯುವಾಗ ನಾವು ತಪ್ಪದೆ ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಫಾತಿಮಾ ಶೇಖ್ ಅವರನ್ನು ನೆನೆಯಬೇಕಾಗುತ್ತದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News