ವಕ್ಫ್ ಬೋರ್ಡ್ ಅನುದಾನ ದುರುಪಯೋಗ ಆರೋಪ: ಸರಕಾರದ ಮೌನವೇಕೆ ?
ಬೆಂಗಳೂರು, ಜ.11: ಕಳೆದ ವರ್ಷ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯಿಂದ ಆಗಸ್ಟ್ ಮೊದಲ ವಾರ ಸರಕಾರಕ್ಕೆ ಸಲ್ಲಿಕೆಯಾಗಿದ್ದ ಸುಮಾರು 250 ಪ್ರಸ್ತಾವನೆಗಳನ್ನು ಕೈಬಿಟ್ಟು, ವಕ್ಫ್ ಬೋರ್ಡ್ ವತಿಯಿಂದ ಪ್ರಸ್ತಾವನೆ ಕಳುಹಿಸದೆ ಇರುವಂತಹ 90 ಸಂಸ್ಥೆಗಳಿಗೆ 8 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಆದರೆ ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ.
ರಾಜ್ಯ ವಕ್ಫ್ ಬೋರ್ಡ್ ವತಿಯಿಂದ ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಕಾಂಪೌಂಡ್ ನಿರ್ಮಾಣ ಹಾಗೂ ಹಳೆಯ ಮಸೀದಿ, ಮದ್ರಸಾಗಳ ದುರಸ್ಥಿ ಮತ್ತು ನವೀಕರಣಕ್ಕಾಗಿ ಅನುದಾನ ನೀಡಲಾಗುತ್ತದೆ. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಎಲ್ಲ ಇಲಾಖೆಗಳಿಗೂ ಅನುದಾನ ಕಡಿತಗೊಳಿಸಿದಂತೆ ವಕ್ಫ್ ಬೋರ್ಡ್‍ಗೂ ಅನುದಾನ ಕಡಿತ ಮಾಡಿ, ಈ ಬಾರಿ ಕೇವಲ ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಮಾತ್ರ 15 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿತ್ತು.
ಜಿಲ್ಲಾ ವಕ್ಫ್ ಸಮಿತಿಗಳ ಮುಖಾಂತರ ಅನುದಾನ ಕೋರಿ ರಾಜ್ಯ ವಕ್ಫ್ ಬೋರ್ಡ್‍ಗೆ ಪ್ರಸ್ತಾವನೆ ಸಲ್ಲಿಸಿದ ಬಳಿಕ, ರಾಜ್ಯ ವಕ್ಫ್ ಬೋರ್ಡ್ ಸರಕಾರಕ್ಕೆ ಅನುದಾನ ಬಿಡುಗಡೆ ಕೋರಿ ಪ್ರಸ್ತಾವನೆ ಸಲ್ಲಿಸುತ್ತದೆ. ಬಳಿಕ ಇಲಾಖೆಯ ಸಚಿವರ ಅನುಮೋದನೆ ಪಡೆದು ವಕ್ಫ್ ಬೋರ್ಡ್‍ನಲ್ಲಿ ನೋಂದಣಿಯಾಗಿರುವ ಸಂಬಂಧಪಟ್ಟ ಸಂಸ್ಥೆಗಳಿಗೆ ಅನುದಾನ ಬಿಡುಗಡೆಯಾಗುತ್ತದೆ.
ವಕ್ಫ್ ಬೋರ್ಡ್ ವತಿಯಿಂದ ಪ್ರಸ್ತಾವನೆ ಕಳುಹಿಸದೆ ಇರುವಂತಹ ಈ 90 ಸಂಸ್ಥೆಗಳ ಪೈಕಿ ಎರಡು ಸಂಸ್ಥೆಗಳು ವಕ್ಫ್ ಬೋರ್ಡ್ ನಲ್ಲಿ ನೋಂದಣಿಯಾಗಿರಲಿಲ್ಲ. ಇದರಲ್ಲಿ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಎನ್.ಕೆ.ಎಂ.ಶಾಫಿ ಸಅದಿ ಕಾರ್ಯದರ್ಶಿಯಾಗಿರುವ ಬನ್ನೇರುಘಟ್ಟದಲ್ಲಿರುವ ಸಅದಿಯ ಎಜ್ಯುಕೇಷನಲ್ ಫೌಂಡೇಶನ್ ಸಹ ಸೇರಿತ್ತು ಎನ್ನಲಾಗಿದೆ. ಇದಲ್ಲದೆ, ಕಳೆದ ಸಾಲಿನ ಫೆಬ್ರವರಿಯಲ್ಲಿ ಅನುದಾನ ಪಡೆದಿದ್ದ 25 ಸಂಸ್ಥೆಗಳು ಪುನಃ ಅನುದಾನ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೂ ಸರಕಾರದಲ್ಲಿ ಅನುಮೋದನೆ ಸಿಕ್ಕಿತ್ತು ಎಂದು ಹೇಳಲಾಗುತ್ತಿದೆ.
2020-21ನೆ ಸಾಲಿನ ಬಜೆಟ್‍ನಲ್ಲಿ ವಕ್ಫ್ ಬೋರ್ಡ್‍ಗೆ ದುರಸ್ಥಿ ಮತ್ತು ನವೀಕರಣಕ್ಕೆ ಅನುದಾನ ಲಭ್ಯವಿಲ್ಲದಿದ್ದರೂ ಆರ್ಥಿಕ ನೆರವು ಕೋರಿ ಒಂದು ಪಟ್ಟಿ ಸಿದ್ಧವಾಗಿತ್ತು. ಅದರಲ್ಲಿಯೂ, ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳಲ್ಲಿದ್ದ ಸಂಸ್ಥೆಗಳ ಹೆಸರು ಸೇರ್ಪಡೆಯಾಗಿತ್ತು ಎಂದು ದೂರಲಾಗಿದೆ. ಈ ಪ್ರಸ್ತಾವನೆಗಳಲ್ಲಿ ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಒಟ್ಟು ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿ ಶೇ.90ರಷ್ಟು ಅನುದಾನವನ್ನು ಹಂಚಿಕೆ ಮಾಡಲು ಉದ್ದೇಶಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.
ವಕ್ಫ್ ಸಂಸ್ಥೆಯಲ್ಲಿ ನೋಂದಣಿಯಾಗದ, ಫೆಬ್ರವರಿಯಲ್ಲಿ ಅನುದಾನ ಪಡೆದಿರುವ, ದುರಸ್ಥಿ ಹಾಗೂ ನವೀಕರಣಕ್ಕೆ ಅನುದಾನದ ಲಭ್ಯತೆ ಇಲ್ಲದಿರುವುದರಿಂದ ಹಾಗೂ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿ ಅನುದಾನದ ಹಂಚಿಕೆ ಮಾಡುವ ಪ್ರಕ್ರಿಯೆ ಸರಿಯಲ್ಲ ಎಂದು ಸರಕಾರಕ್ಕೆ ಇಲಾಖೆ ವತಿಯಿಂದ ಕಡತ ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಆದರೂ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯಿಂದ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಲಕ್ಷಾಂತರ ರೂ.ಗಳ ಭ್ರಷ್ಟಾಚಾರ ಹಾಗೂ ಅವ್ಯವಹಾರ ನಡೆದಿರುವ ಸಾಧ್ಯತೆಗಳಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಜನಪ್ರತಿನಿಧಿಗಳ ಮನವಿಗೆ ಇಲ್ಲ ಮಾನ್ಯತೆ: ಈ ಅವಧಿಯಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರು, ಸಚಿವರು ಹಾಗೂ ಸಂಸದರು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ವಕ್ಫ್ ಸಂಸ್ಥೆಗಳಿಗೆ ಅನುದಾನ ನೀಡುವಂತೆ ಕೋರಿ ಸರಕಾರಕ್ಕೆ ಸಲ್ಲಿಸಿದ್ದ ಎಲ್ಲ ಪ್ರಸ್ತಾವನೆಗಳನ್ನು ತಿರಸ್ಕರಿಸಿ, ಯಾವುದೇ ಅನುದಾನ ಬಿಡುಗಡೆ ಮಾಡಿರಲಿಲ್ಲ ಎಂಬ ಆರೋಪವು ಕೇಳಿ ಬಂದಿದೆ.
ಬನ್ನೇರುಘಟ್ಟದಲ್ಲಿ ಎನ್.ಕೆ.ಎಂ.ಶಾಫಿ ಸಅದಿ ಕಾರ್ಯದರ್ಶಿಯಾಗಿರುವ ‘ಸಅದಿಯ ಎಜ್ಯುಕೇಷನಲ್ ಫೌಂಡೇಷನ್’ ಅವರ ಮಸೀದಿಯಿದೆ. ಅಲ್ಲಿ ಯಾವ ಶಾಲೆಯೂ ನಡೆಯುತ್ತಿಲ್ಲ. ಮಸೀದಿಗೆ ಬೀಗ ಹಾಕಿ ಇಟ್ಟಿದ್ದಾರೆ. 2015ರಲ್ಲೆ ಮಸೀದಿ ಉದ್ಘಾಟನೆಯಾಗಿದೆ. ವಕ್ಫ್ ಬೋರ್ಡ್‍ನಿಂದ 19 ಲಕ್ಷ ರೂ.ಗಳನ್ನು ಪಡೆಯುವ ಉದ್ದೇಶದಿಂದ ಕಳೆದ ಸೆಪ್ಟಂಬರ್ ತಿಂಗಳಲ್ಲಿ ಮಸೀದಿಯನ್ನು ವಕ್ಫ್ ಬೋರ್ಡ್‍ನಲ್ಲಿ ನೋಂದಣಿ ಮಾಡಿಸಲಾಗಿದೆ. ಅಕ್ಟೋಬರ್ ನಲ್ಲಿ ಅನುದಾನ ಮಂಜೂರು ಮಾಡಿಸಿ, ಡಿಸೆಂಬರ್ ನಲ್ಲಿ ಹಣ ಬಿಡುಗಡೆ ಮಾಡಿಸಿದ್ದಾರೆ. ಇಷ್ಟೊಂದು ತ್ವರಿತಗತಿಯಲ್ಲಿ ವಕ್ಫ್ ಬೋರ್ಡ್ ಕೆಲಸ ಮಾಡುತ್ತಿದೆ ಎಂಬುದೇ ಆಶ್ಚರ್ಯಕರ. ಇದರಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆದಿರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ದಾಖಲಿಸಿದ್ದೇನೆ.
-ನಯಾಝ್ ಅಹ್ಮದ್,
ಬೆಂಗಳೂರು ನಗರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ
ಶೋಕಾಸ್ ನೋಟಿಸ್; ಅನುದಾನ ತಡೆ ಹಿಡಿಯಲಾಗಿದೆ
ಸರಕಾರದಿಂದ ಅನುದಾನ ಮಂಜೂರು ಆಗಿದೆ. ಜಿಲ್ಲಾ ವಕ್ಫ್ ಅಧಿಕಾರಿಯಿಂದ ಈ ಕೆಲಸಕ್ಕಾಗಿ ಪ್ರಸ್ತಾವನೆ ಬಂದ ನಂತರ ಮೊದಲ ಕಂತು 5 ಲಕ್ಷ ರೂ., ಮಂಜೂರು ಮಾಡಲಾಗಿದೆ. ಈಗಾಗಲೆ ಅಲ್ಲಿ ಕಾಂಪೌಂಡ್ ಗೋಡೆ ಇದೆ. ಆದರೂ ಇದೇ ಕಾಮಗಾರಿಗೆ ಅನುದಾನ ಮಂಜೂರು ಆಗಿದೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಅನುದಾನವನ್ನು ತಡೆಹಿಡಿಯಲಾಗಿದೆ. ಈ ಪ್ರಸ್ತಾವನೆ ಯಾವ ರೀತಿ ಬಂದಿದೆ ಎಂಬುದರ ಕುರಿತು ಬೆಂಗಳೂರು ದಕ್ಷಿಣ ಜಿಲ್ಲಾ ವಕ್ಫ್ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ 7 ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ. ಅವರ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಮುಹಮ್ಮದ್ ಯೂಸುಫ್, ರಾಜ್ಯ ವಕ್ಫ್ ಬೋರ್ಡ್ ಸಿಇಒ
ಈ ಬಗ್ಗೆ ವಕ್ಫ್ ಬೋರ್ಡ್ ಸದಸ್ಯ ಎನ್.ಕೆ.ಎಂ.ಶಾಫಿ ಸಅದಿ ಅವರು ಪ್ರತಿಕ್ರಿಯಿಸಿದ್ದು, ಎಲ್ಲಾ ಆರೋಪದ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.