ರೈಲು ನಿಲ್ದಾಣದಲ್ಲಿ...

Update: 2021-01-17 06:10 GMT

ಈಗ, ಕಳೆದೆಂಟು ತಿಂಗಳಿನಿಂದ ಎಲ್ಲ ಕಳೆದು ಹೋಗಿದೆ. ಬೆಳಗಿನ ಸಿದ್ದಗಂಗಾ ಇಂಟರ್ ಸಿಟಿಯಿಂದ ಹಿಡಿದು ರಾತ್ರಿಯ ಸ್ವರ್ಣ ಜಯಂತಿವರೆಗೆ ಎಷ್ಟೊಂದು ರೈಲುಗಳ ಸಂಭ್ರಮ ಇರುತ್ತಿತ್ತು ಈ ನಿಲ್ದಾಣದಲ್ಲಿ! ಅದರಲ್ಲೂ ಹರಿಪ್ರಿಯ, ರಾಣಿ ಚೆನ್ನಮ್ಮ, ಪುದುಚೇರಿ ಇತ್ಯಾದಿ ಎಕ್ಸ್‌ಪ್ರೆಸ್ ಗಾಡಿಗಳಂತು ಆಸ್ಥಾನಕ್ಕೆ ಮಹಾನ್ ರಾಣಿ ಒಬ್ಬಳ ಆಗಮನದಂತೆ ಗಂಭೀರವಾಗಿ ಬರುತ್ತಿದ್ದವು. ನಾವು ಪ್ರವಾಸಿಗರು ಆಗಿರಲೇಬೇಕು ಎಂದೇನಿಲ್ಲ ಈ ಐರಾವತಗಳ ಸಡಗರ ಅನುಭವಿಸಲು. ಬೇಲ್ ಮಾರುವವರು, ಸೌತೆಕಾಯಿ ಮಾರುವವರು, ಇಡ್ಲಿ-ವಡಾ ಮಾರುವವರು ಎಲ್ಲರೂ ಈ ರಾಣಿಯರ ನಿತ್ಯ ಸಂಗದಲ್ಲಿ ಇರೋ ಭಾಗ್ಯವಂತರು. ಆದರೆ ಇಂದು ಯಾವ ರಾಣಿಯರು ಕೂಡ ಕಾಣಿಸುವುದಿಲ್ಲ. ಆಸ್ಥಾನ ಪ್ರಶಾಂತವಾದ ಪ್ರೇತವನ ಆಗಿದೆ.

ಮೂಲತಃ ಬಾಗಲಕೋಟೆಯವರಾಗಿರುವ ಆನಂದ ಝಂಜರವಾಡ ಮಹಾರಾಷ್ಟ್ರದ ಸಂತ ಪರಂಪರೆಯ ಸಾಂಗತ್ಯದಲ್ಲಿ ಬೆಳೆದವರು. ‘ಪದಗಳ ಪರಿಧಿಯಲ್ಲಿ’, ‘ಖನನೋದ್ಯಮ’, ‘ಎಲ್ಲಿದ್ದಾನೆ ಮನುಷ್ಯ?’, ‘ಶಬ್ದ ಪ್ರಸಂಗ’, ‘ದಿಂಡಿ ಮತ್ತು ದಾಂಡಿ’, ‘ಬೆಂಚಿಲ ರಸ್ತೆಯ ಕವಿತೆಗಳು’ ಇವರ ಕಾವ್ಯ ಸಂಗ್ರಹಗಳು. ‘ಪ್ರೇತ ಕಾಂಡ’ ಸಮಗ್ರ ಸಂಕಲನ. ಪುತಿನ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಉದಯೋನ್ಮುಖ ವರ್ಧಮಾನ ಪ್ರಶಸ್ತಿ ಇವರ ಪ್ರತಿಭೆಗೆ ಸಂದ ಗೌರವಗಳು. ನ್ಯಾಯಾಂಗದಲ್ಲಿ ಕರಣಿಕರಾಗಿ ವೃತ್ತಿ ನಿರ್ವಹಿಸಿ, ಈಗ ಧಾರವಾಡದಲ್ಲಿದ್ದಾರೆ.

ನಿನ್ನೆ ಯಥಾ ಪ್ರಕಾರ ಸಂಜೆ ವಾಕಿಂಗ್ ಎಂದು ರೈಲು ನಿಲ್ದಾಣಕ್ಕೆ ಹೋದೆ.

ಎಲ್ಲ ದೀಪಗಳು ಕೂಡ ಆರಿ ಹೋಗಿದ್ದವು. ಕೌಂಟರ್‌ನಲ್ಲಿದ್ದ ಕ್ಲರ್ಕ್ ಅಮ್ಮ ಆಕಳಿಸುತ್ತಿದ್ದರು. ಅಲ್ಲೊಬ್ಬ ಇಲ್ಲೊಬ್ಬ ಸಿಬ್ಬಂದಿ ತಿರುಗಾಡುತ್ತ ಇದ್ದಂತಿತ್ತು. ನಿಲ್ದಾಣವನ್ನು ಕ್ಲೀನ್ ಆಗಿ ಇಡಲು ಒಂದಿಬ್ಬರು ಮಹಿಳಾ ಕಾರ್ಮಿಕರು ಒಂದೆಡೆ ಕೂತು ಬೇಸತ್ತಿದ್ದರು.

ನಮ್ಮ ಧಾರವಾಡ ನಿಲ್ದಾಣ ಹಾಗೆ ನೋಡಿದರೆ ಬರಿ ನಿಲ್ದಾಣ ಅಲ್ಲ. ಅದು ರಹದಾರಿ. ನಿಲ್ದಾಣದ ಒಳಗಡೆ ಹೋಗಿ ಹಳಿಗಳನ್ನು ದಾಟಿ ಆಚೆಗಿನ ಕಲ್ಯಾಣ ನಗರಕ್ಕೆ ನಡೆದು ಹೋಗುವವರು ನೂರಾರು ಜನ. ಅದು ರೈಲ್ವೆ ಸಿಬ್ಬಂದಿ, ಅಧಿಕಾರಿಗಳಿಗೂ ರೂಢಿ ಆಗಿದೆ. ಹೀಗಾಗಿ ನಮ್ಮ ನಿಲ್ದಾಣ ಸದಾ ಗದ್ದಲದಿಂದ ತುಂಬಿರುತ್ತಿತ್ತು.

ಈಗ, ಕಳೆದೆಂಟು ತಿಂಗಳಿನಿಂದ ಎಲ್ಲ ಕಳೆದು ಹೋಗಿದೆ. ಬೆಳಗಿನ ಸಿದ್ದಗಂಗಾ ಇಂಟರ್ ಸಿಟಿಯಿಂದ ಹಿಡಿದು ರಾತ್ರಿಯ ಸ್ವರ್ಣ ಜಯಂತಿವರೆಗೆ ಎಷ್ಟೊಂದು ರೈಲುಗಳ ಸಂಭ್ರಮ ಇರುತ್ತಿತ್ತು ಈ ನಿಲ್ದಾಣದಲ್ಲಿ!. ಅದರಲ್ಲೂ ಹರಿಪ್ರಿಯ, ರಾಣಿ ಚೆನ್ನಮ್ಮ, ಪುದುಚೇರಿ ಇತ್ಯಾದಿ ಎಕ್ಸ್‌ಪ್ರೆಸ್ ಗಾಡಿಗಳಂತು ಆಸ್ಥಾನಕ್ಕೆ ಮಹಾನ್ ರಾಣಿ ಒಬ್ಬಳ ಆಗಮನದಂತೆ ಗಂಭೀರವಾಗಿ ಬರುತ್ತಿದ್ದವು. ನಾವು ಪ್ರವಾಸಿಗರು ಆಗಿರಲೇಬೇಕು ಎಂದೇನಿಲ್ಲ ಈ ಐರಾವತಗಳ ಸಡಗರ ಅನುಭವಿಸಲು. ಬೇಲ್ ಮಾರುವವರು, ಸೌತೆಕಾಯಿ ಮಾರುವವರು, ಇಡ್ಲಿ-ವಡಾ ಮಾರುವವರು ಎಲ್ಲರೂ ಈ ರಾಣಿಯರ ನಿತ್ಯ ಸಂಗದಲ್ಲಿ ಇರೋ ಭಾಗ್ಯವಂತರು.

ಆದರೆ ಇಂದು ಯಾವ ರಾಣಿಯರು ಕೂಡ ಕಾಣಿಸುವುದಿಲ್ಲ. ಆಸ್ಥಾನ ಪ್ರಶಾಂತವಾದ ಪ್ರೇತವನ ಆಗಿದೆ.

ಕೆ.ಎಸ್.ನ. ‘‘ಎಲ್ಲಿದ್ದಿಯೆ ಮೀನಾ’’ ಅನ್ನೋ ಸುಂದರ ಪದ್ಯ ಬರೆದರು. ಆ ಪದ್ಯದ ಸುತ್ತ ನಾವು ಒಂದು ಕಲ್ಪನೆಯನ್ನು ಡೊನೇಟ್ ಮಾಡಿದರೆ ಆ ಪದ್ಯ ಇನ್ನೂ ಹೆಚ್ಚು ಮೈ ತುಂಬಿಕೊಳ್ಳುತ್ತದೆ.

ತವರು ಮನೆಗೆ ಬಾಣಂತಿತನಕ್ಕೆ ಬಂದ ಮಗಳು ಮರಳಿ ಅತ್ತೆ ಮನೆಗೆ ಹೊರಟಿದ್ದಾಳೆ. ಪುಟ್ಟ ಮಗು ಇದೆ. ಗಂಡ ಅಥವಾ ಅತ್ತೆ ಮನೆಯ ಇತರರು ಯಾರೂ ಕರೆದುಕೊಂಡು ಹೋಗಲು ಬಂದಂತಿಲ್ಲ. ಈ ಕಾಲದಲ್ಲಿ ಇದು ಅನಿವಾರ್ಯವೂ ಆಗಿರಬಹುದು. ತನ್ನ ಪುಟ್ಟ ಕಂದಮ್ಮನನ್ನು ಕರೆದುಕೊಂಡು ಒಬ್ಬಳೇ ಹೊರಟ ತಾಯಿಯ ಲಗೇಜು ಬಹಳ ಇರೋದು ಅನಿವಾರ್ಯ. ಅವಳು ತವರು ಮನೆಯಲ್ಲಿ ನಾಲ್ಕೈದು ತಿಂಗಳು ಇದ್ದು, ಈಗ ಹೊರಟವಳು. ಜೊತೆಗೆ ತಾಯಿ ಕಟ್ಟಿ ಕೊಟ್ಟ ಮಸಾಲೆ ಪುಡಿ, ಹುಳಿ ಪುಡಿ, ಸೇವಿಗೆ ಇತ್ಯಾದಿ ಸಾಮಾನು ಕೂಡ ಇರಬೇಕು. ಜೊತೆಗೆ ತವರು ಮನೆಯವರು ಕೊಟ್ಟ ಭಾರದ ತೊಟ್ಟಿಲನ್ನು ಕೂಡ ತೆಗೆದುಕೊಂಡು ಹೊರಟಿದ್ದಾಳೆ. ಲೆಸ್ ಲಗೇಜ್ ಮೋರ್ ಕಂಫರ್ಟ್ ಎನ್ನೋ ಆಧುನಿಕ ಲೋಕದ ಅರಿವಿಗೆ ಒಗ್ಗಿದ ಜೀವ ಅಲ್ಲ ಅವಳದು. ಒಂದು ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಸದ ಲಗೇಜ್‌ಗಳಿಗೆ ನಿರ್ದಿಷ್ಟ ಹೆಸರೇ ಇದ್ದವು. ಟ್ರಂಕ್, ಹಾಸಿಗಿ, ಸುರಳಿ, ಭಿರಕನಿ, ತಂಬಿಗಿ ಇವು ಅಂತೂ ಇದ್ದೇ ಇರುತ್ತಿದ್ದವು. ಈ ಬಾಹ್ಯ ಲಗೇಜ್‌ಗಳ ಜೊತೆಗೆ ತವರು ಮನೆಯ ಹೃದ್ಯ ವಾತ್ಸಲ್ಯದ ಸಂಬಂಧಗಳ ಲಗೇಜ್ ಕೂಡ ಅವಳ ಮನಸ್ಸಿನಲ್ಲಿ ಭಾರವಾಗಿ ಕೂತಿವೆ.

ರೈಲು ಒಂದು ಭಯಾನಕ ವಾಹಕ ಚಿತ್ರವಾಗಿ ಈ ಪದ್ಯದಲ್ಲಿ ಬಂದಿದೆ. ಅಹುದು, ಅದು ಅಗಲಿಸುವ ಬಂಡಿ, ಮತ್ತೆ ಎಲ್ಲರನ್ನೂ ತಮ್ಮ ತಮ್ಮ ಕಠಿಣವಾದ ಸಂಸಾರದ ಗಾಣಕೆ ತಳ್ಳುವ ಬಂಡಿ, ನಿಷ್ಕರುಣಿಯಿಂದ ಸಂಭ್ರಮಗಳನ್ನೆಲ್ಲ ಕಿತ್ತಿಕೊಂಡು ಬಿಡುವ ಬಂಡಿ.

ಆಧುನಿಕತೆ ಬದುಕಿನ ಕ್ರೌರ್ಯ, ಹಿಂಸೆ ಅಷ್ಟೆ ಇಲ್ಲಿ ಇಲ್ಲ. ಇದು ನಿಯತಿಯ, ಕಾಲದ ಪರಿವರ್ತನೆಯ ವರ್ತನೆಯೂ ಹೌದು.

ಹೊರಗೆ ಕಳಿಸಲು ಬಂದ ವೃದ್ಧ ತಂದೆ ತಾಯಿಗೆ ಈ ಜೀವ ತನ್ನ ಪುಟ್ಟ ಮಗುವನ್ನು ಕಟ್ಟಿಕೊಂಡು ಹೇಗೆ ಸುರಕ್ಷಿತವಾಗಿ ಗಂತವ್ಯ ತಲುಪುವುದೋ ಅನ್ನೋ ಆತಂಕದಲ್ಲಿ ಇದೆ. ಆದರೆ ಏನೂ ಮಾಡಲು ಬರುವಂತಿಲ್ಲ. ಒಳಗೆ ಹೋಗಿ ಅವಳ ಸರಂಜಾಮುಗಳನ್ನು ಸರಿಯಾಗಿ ಇಟ್ಟು ಕೊಡುವುದಕ್ಕೂ ಸಾಧ್ಯವಿಲ್ಲ. ಅಷ್ಟು ಗದ್ದಲ, ಅಲ್ಪ ಸಮಯ.

  ಆದರೂ ಕರುಳು ಕೇಳುವುದಿಲ್ಲ, ಕೂಸಿನ ಹಾಲಿನ ಪುಡಿಗೆ ಬಿಸಿ ನೀರು ಇದೆಯೇ, ಕೂಸಿನ ಮೈ ಹೊರಡುವ ಸಮಯದಲ್ಲೇ ಬಿಸಿಯಾದ ದುಗುಡ, ಲಗೇಜುಗಳೆಲ್ಲ ಸರಿಯಾಗಿಟ್ಟುಕೊಳ್ಳುವ ಬಗೆಗೆ ಆತಂಕ, ಹೀಗೆ ಏನೇನೋ ಇರಿಸು ಮುರಿಸುಗಳು ಹೊರಗಿದ್ದವರಿಗೆ. ಒಳಗೆ ಹೋದವಳಿಗೆ ಎಲ್ಲ ಹೊಂದಿಸಿಕೊಳ್ಳುವ ಒತ್ತಡ, ಹೊರಗೆ ಕಳುಹಿಸಲು ಬಂದವರಿಗೂ ತನ್ನ ಅಗಲುವಿಕೆಯ ದುಃಖಕ್ಕೆ ಸಮಾಧಾನ ಹೇಳುವ ಆರ್ತ ಭಾವ, ಜೊತೆಗೆ ಒಬ್ಬಳೇ ಕೂಸನ್ನು ನೋಡಿಕೊಳ್ಳಬೇಕು.

ಹೀಗಾಗಿ ಇಡೀ ಸಂಭಾಷಣೆ ಒಂದು ಅಸಹಾಯಕ, ಅಸ್ಪಷ್ಟ, ನಿರುಪಯುಕ್ತ, ಸಂವಾದವಾಗಿ ಬಿಡುತ್ತದೆ.

ಈಗ ಧಾರವಾಡ ನಿಲ್ದಾಣದ ಬೆತ್ತಲೆತನ ನೋಡಿದಾಗ ಇನ್ನು ಮುಂದೆ ಕೆ.ಎಸ್.ನ. ಅವರಿಗೆ ಉದ್ದೀಪನ ನೀಡಿದ ಇಂತಹ ದೃಶ್ಯವೇ ಇನ್ನು ಮುಂದೆ ಎಂದೂ ಸಿಗಲಾರದು ಎನಿಸುತ್ತದೆ.

ನನ್ನ ಎರಡು ವರ್ಷದ, ಲಂಡನ್‌ನಲ್ಲೇ ಹುಟ್ಟಿ, ಅಲ್ಲೇ ಶಾಲೆಗೆ ಹೋಗಲಿರುವ ಮೊಮ್ಮಗ ತಪ್ಪಿಕನ್ನಡ ಕಲಿತು, ಕಾವ್ಯದಲ್ಲಿ ಆಸಕ್ತನು ಕೂಡ ಆದರೆ ಇನ್ನೂ ಇಪ್ಪತ್ತು ವರ್ಷದ ಮೇಲೆ ಆತ ಈ ನಿಲ್ದಾಣದ ದೃಶ್ಯವನ್ನು ಊಹಿಸುವುದಾದರೂ ಸಾಧ್ಯವೇ?.

ಕಾಲದ ತಕ್ಕಡಿಯಲಿ ಕವಿಯ ರೂಪಕದ ಧಾರಣೆ ಏನು ಅನ್ನೋದು ಅನಿಶ್ಚಿತ ಮಾತ್ರ ಅಲ್ಲ ವಿನಾಶಕ್ಕೆ ಇಡಾಗುವಂತಹದು ಆಗಿರಬಹುದೇ?

ಜೀವನ ಮೌಲ್ಯಗಳ ಬೆಲೆ ಸೂಚ್ಯಕಗಳು ಏರಿಳಿದಂತೆ ಕವಿಯ ರೂಪಕದ ರಸದ ಅಂಟಿನ ನಂಟು ಕೂಡ ಒಣಗುತ್ತ ಹೋಗುತ್ತದೆಯೇ?.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News