ಕೊರೋನ ಕಾಲದ ಮುಂಬೈ
ಪಂಜು ಗಂಗೊಳ್ಳಿ ಮೂಲತಃ ಕುಂದಾಪುರ ತಾಲೂಕಿನ ಗಂಗೊಳ್ಳಿಯವರು. ಲಂಕೇಶ್ ಪತ್ರಿಕೆ ಸಹಿತ ಕನ್ನಡದ ಹಲವು ನಿಯತಕಾಲಿಕಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ಜನಪ್ರಿಯರಾಗಿರುವ ಪಂಜು , ಸದ್ಯ ಮುಂಬೈಯಲ್ಲಿ ಬ್ಯುಝಿನೆಸ್ ಇಂಡಿಯಾ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬೈನಲ್ಲಿದ್ದೂ ಕನ್ನಡ ನಾಡು ನುಡಿಗಾಗಿ ಕೆಲಸ ಮಾಡುತ್ತಿರುವ ಗಂಗೊಳ್ಳಿ ಅವರು ಪ್ರಧಾನ ಸಂಪಾದಕರಾಗಿರುವ 10,000ಕ್ಕೂ ಹೆಚ್ಚು ಪದಗಳಿರುವ ‘ಕುಂದಾಪ್ರ ಕನ್ನಡ ನಿಘಂಟು’ ಶೀಘ್ರ ಬಿಡುಗಡೆಯಾಗಲಿದೆ.
ಕೊರೋನ ದಾಳಿಗೂ ಮೊದಲೇ ಮುಂಬೈ ತನ್ನ ಹಿಂದಿನ ಔದ್ಯೋಗಿಕ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿತ್ತು. ಬೆಂಗಳೂರು, ಹೈದರಾಬಾದ್‌ಗಳು ಐಟಿ ಹಬ್‌ಗಳಾಗಿ ಅಭಿವೃದ್ಧಿ ಹೊಂದಲು ಶುರುವಾದ ಮೇಲಂತೂ ದಕ್ಷಿಣ ಭಾರತದ ಉನ್ನತ ಶಿಕ್ಷಣ ಪಡೆದ ಯುವಕ-ಯುವತಿಯರು ಉದ್ಯೋಗ ನಿಮಿತ್ತ ಮುಂಬೈಗೆ ಬರುವುದು ಇಳಿಮುಖವಾಗಿದೆ. ಕೊರೋನ ದಾಳಿಯ ನಂತರ ಮುಂಬೈ ಎಂಬ ಈ ಮಾಯಾನಗರಿ ಇನ್ನಷ್ಟು ಕಳೆಗುಂದುವುದು ನಿಶ್ಚಿತ...
ಮುಂಬೈಗರು ಸ್ವಭಾವತಃ ಬಿಂದಾಸ್ ಜನ. ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳುವ ಜಾಯಮಾನದವರಲ್ಲ. ಏನೇ ಅನಾಹುತ ನಡೆಯಲಿ, ಏನೇ ಆಗಬಾರದ್ದು ಆಗಲಿ ಮರುಕ್ಷಣವೇ ಸಾವರಿಸಿಕೊಂಡು ಏನೂ ನಡೆಯಲಿಲ್ಲ ಅನ್ನುವಂತೆ ನಡೆಯುತ್ತಲೇ ಇರುತ್ತಾರೆ. ನೂರಾರು ಜನರನ್ನು ಬಲಿ ತೆಗೆದುಕೊಂಡು ಸಾವಿರಾರು ಜನರನ್ನು ಗಾಯಗೊಳಿಸಿದ 1992ರ ಕೋಮುಗಲಭೆಯಾಗಲಿ ಮತ್ತು 1993ರ ಸರಣಿ ಬಾಂಬ್ ಸ್ಫೋಟಗಳಾಗಲಿ ಮುಂಬೈಗರನ್ನು ಆರೇಳು ದಿನಗಳಿಗಿಂತ ಹೆಚ್ಚು ಕಾಲ ಭಯಭೀತಗೊಳಿಸಲು ಶಕ್ಯವಾಗಲಿಲ್ಲ. 2008ರ ನವೆಂಬರ್‌ನಲ್ಲಿ ನಾಲ್ಕು ದಿನಗಳ ಕಾಲ ಭಯೋತ್ಪಾದಕ ದಾಳಿ ನಡೆದು 170ಕ್ಕೂ ಹೆಚ್ಚು ಜನ ಸತ್ತಾಗಲೂ 5ನೇ ದಿನವೇ ಮುಂಬೈಗರು ಮೈಕೊಡವಿ ಎದ್ದಿದ್ದರು. ಕೆಲವು ವರ್ಷಗಳ ಹಿಂದೆ ಹಕ್ಕಿ ಜ್ವರ ಕಾಣಿಸಿಕೊಂಡಾಗಲೂ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ತಿರುಗಾಡುತ್ತಿದ್ದ ಮುಂಬೈಗರು ಅಲ್ಲೋ ಇಲ್ಲೋ ಕೆಲವರಷ್ಟೇ. ಆದರೆ, ಈ ಬಾರಿ ಕೊರೋನ ವೈರಸ್ ಮುಂಬೈಗರನ್ನು ಭಯಭೀತಗೊಳಿಸಿದ ಪರಿಯನ್ನು ಮುಂಬೈ ಕೆಲವು ತಲೆಮಾರುಗಳ ಕಾಲ ಮರೆಯಲಾರದು!
ಮಾಧ್ಯಮಗಳಲ್ಲಿ ಚೀನಾ, ಇಟಲಿ ಮತ್ತು ಇನ್ನು ಕೆಲವು ದೇಶಗಳಲ್ಲಿ ಕೊರೋನ ವೈರಸ್ ಸಾಂಕ್ರಾಮಿಕವಾಗುತ್ತಿರುವ ವರದಿಗಳು ಹೆಚ್ಚುತ್ತಿದ್ದಂತೆ ಮಾರ್ಚ್ ಮೂರನೇ ವಾರದ ಹೊತ್ತಿಗೆ ಮುಂಬೈನ ಅಲ್ಲಿ ಇಲ್ಲಿ ಮುಖಕ್ಕೆ ಮಾಸ್ಕ್ ಅಥವಾ ಕರವಸ್ತ್ರ ಕಟ್ಟಿಕೊಂಡು ತಿರುಗಾಡುವವರು ಕಾಣಿಸಿತೊಡಗಿದರು. ಮಾರ್ಚ್ 21ರಂದು ಮಹಾರಾಷ್ಟ್ರ ಸರಕಾರ ಖಾಸಗಿ ಕಚೇರಿಗಳು ಮಾರ್ಚ್ 1ರ ತನಕ ಮುಚ್ಚಬೇಕೆಂದು ಆದೇಶ ಹೊರಡಿಸಿದಾಗ ಮುಂಬೈಗರಲ್ಲಿ ಸಣ್ಣ ರೀತಿಯ ಆತಂಕ ಹುಟ್ಟಿಕೊಂಡಿತು.
ಮುಂಬೈಗರು ಸಾಮಾನ್ಯವಾಗಿ ಮನೆಯಲ್ಲಿ ಯಾವತ್ತೂ ಒಂದೆರಡು ದಿನಗಳಿಗೆ ಬೇಕಾಗುವುದಕ್ಕಿಂತ ಹೆಚ್ಚಿನ ಸಾಮಗ್ರಿಗಳನ್ನು ಶೇಖರಿಸಿಟ್ಟುಕೊಳ್ಳುವವರಲ್ಲ. ಮೊದಲನೆಯದಾಗಿ, ಅಷ್ಟೊಂದು ಸಾಮಾನುಗಳನ್ನು ಒಮ್ಮೆಗೆ ತಂದರೆ ಶೇಖರಿಸಿಡಲು ಹೆಚ್ಚಿನವರ ಮನೆಗಳಲ್ಲಿ ಜಾಗವಿರುವುದಿಲ್ಲ. ಎರಡನೆಯದಾಗಿ, ಕಾಲ ಬುಡದಲ್ಲೇ ಅಂಗಡಿಗಳಿರುವುದರಿಂದ ಬೇಕಾದಾಗ ಹೋಗಿ ಬೇಕಾದ ಸಾಮಾನುಗಳನ್ನು ತರಬಹುದು. ಅಂತಹ ಮುಂಬೈಗರು ಕಿರಾಣಿ ಅಂಗಡಿ, ಮಾಲ್‌ಗಳಿಗೆ ಮುಗಿ ಬಿದ್ದು ತಿಂಗಳು ಕಾಲ ಬೇಕಾಗುವಷ್ಟು ದಿನಸಿ ವಸ್ತು ಮತ್ತು ಇತರ ಗೃಹಬಳಕೆ ವಸ್ತುಗಳನ್ನು ಖರೀದಿಸಿ ತಂದು ಸಂಗ್ರಹಿಸತೊಡಗಿದರು. ಫ್ರಿಡ್ಜ್‌ನಲ್ಲಿ ಹಿಡಿಸುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ, ಮೀನು, ಮಾಂಸ, ಮೊಟ್ಟೆ ತುಂಬಿಸಿದರು. ಆಗಲೂ ಮುಂಬೈಗರು ಕೊರೋನ ವೈರಸನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಮಾರ್ಚ್ 25 ರಂದು ಕೇಂದ್ರ ಸರಕಾರ ತತ್ ಕ್ಷಣವೇ ಜಾರಿಗೆ ಬರುವಂತೆ ಲಾಕ್‌ಡೌನ್ ಹೇರಿ ಖಾಸಗಿ, ಸರಕಾರಿ ಕಚೇರಿಗಳು ಮುಚ್ಚಿ, ಬಸ್ಸು, ಟ್ಯಾಕ್ಸಿ, ರಿಕ್ಷಾ, ಲೋಕಲ್ ರೈಲುಗಳ ಓಡಾಟ ನಿಂತಾಗ ಮುಂಬೈಗರಿಗೆ ಆಕಾಶ ತಲೆ ಮೇಲೆಯ ಬಿದ್ದಂತಹ ಅನುಭವ!
ಲೋಕಲ್ ರೈಲುಗಳು ಮುಂಬೈಗರ ಜೀವನಾಡಿ. ಆ ನಾಡಿ ಬಡಿತವೇ ನಿಂತರೆ ಹೇಗಾದೀತು! ರೈಲ್ವೆ ಹಳಿಗಳ ಮೇಲೆ ಚಲಿಸದೆ ಗರ ಬಡಿದವಂತೆ ಅಲ್ಲಲ್ಲಿ ನಿಂತ ರೈಲುಗಳು, ವಾಹನಗಳ ಓಡಾಟವಿಲ್ಲದೆ ಬಿಕೋ ಅನ್ನುವ ರಸ್ತೆಗಳು ಮುಂಬೈಗರನ್ನು ಒಂದು ರೀತಿಯ ಖಿನ್ನತೆಗೆ ಒಳಪಡಿಸಿದವು. ಏಕೆಂದರೆ, ಲೋಕಲ್ ರೈಲುಗಳು ಕಾಲಿಡಲೂ ಸಾಧ್ಯವಾಗದಷ್ಟು ಜನರಿಂದ ತುಂಬಿ ತುಳುಕುತ್ತಿದ್ದರೆ, ರಸ್ತೆಗಳು ವಾಹನಗಳ ಇಂಜಿನ್, ಹಾರ್ನ್ ಶಬ್ದಗಳಿಂದ ಕರ್ಕಶಮಯವಾಗಿದ್ದರೆ, ಅಂಗಡಿ, ಪೇಟೆ, ಮಾಲ್‌ಗಳಲ್ಲಿ ಒಬ್ಬರಿಗೊಬ್ಬರು ಮೈಕೈ ತಾಗಿಸಿಕೊಂಡು ಖರೀದಿ ಮಾಡುತ್ತಿದ್ದರೇನೇ ಮುಂಬೈಗರಿಗೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಅನ್ನುವ ಭಾವನೆ ಬರುತ್ತದೆ. ಹಾಗಿಲ್ಲದೆ, ಬಸ್ಸು ರೈಲುಗಳು ಖಾಲಿಯಿದ್ದು, ರಸ್ತೆಗಳಲ್ಲಿ ವಾಹನಗಳ ಓಡಾಟ ಮಂದವಾಗಿದ್ದರೆ, ಅಂಗಡಿ, ಮಾಲ್‌ಗಳಲ್ಲಿ ದೊಡ್ಡ ಸಂಖ್ಯೆಯ ಗ್ರಾಹಕರು ಇಲ್ಲದಿದ್ದರೆ ಅವರಿಗೆ ‘ಕುಚ್ತೋ ಲಫ್ಡಾ ಹೈ’ ಎಂದೆನಿಸುತ್ತದೆ! ಕೊರೋನ ಲಾಕ್‌ಡೌನ್ ಮೊತ್ತಮೊದಲಿಗೆ ಮುಂಬೈಗರ ಮೇಲೆ ಉಂಟು ಮಾಡಿದ ಪರಿಣಾಮವೇ ಇದು.
ಮುಂಬೈ ಪ್ಲೇಗ್
1896ರಲ್ಲಿ ಭಾರತದಲ್ಲಿ ಕಾಣಿಸಿಕೊಂಡಿದ್ದ ಬುಬೊನಿಕ್ ಪ್ಲೇಗಿಗೆ ಒಂದು ಕೋಟಿಯಷ್ಟು ಜನ ಬಲಿಯಾಗಿದ್ದರು. ಆಗಲೂ, ಈಗಿನ ಕೊರೋನದಂತೆ, ಚೀನಾದಲ್ಲಿ ಹುಟ್ಟಿಕೊಂಡ ಬ್ಯಾಕ್ಟೀರಿಯಾ ಅದಕ್ಕೆ ಕಾರಣವಾಗಿತ್ತು. ಆಗ ಚೀನಾದಲ್ಲಿ ತೀವ್ರವಾಗಿ ಹರಡುತ್ತಿದ್ದ ಈ ಪ್ಲೇಗ್ 1894ರಲ್ಲಿ ಹಾಂಕಾಂಗ್‌ಗೆ ಬಂದು ಅಲ್ಲಿಂದ ಹಡಗುಗಳ ಮೂಲಕ ಮುಂಬೈಗೆ ಬಂತು. ಬ್ರಿಟಿಷರು ಆಗ ಮುಂಬೈಯನ್ನು ಲಂಡನ್ ನಂತರ ವಿಶ್ವದ ಅತೀ ದೊಡ್ಡ ನಗರವನ್ನಾಗಿಸಲು ಯೋಜನೆ ರೂಪಿಸುತ್ತಿದ್ದು ಕೆಲಸ ನಿಮಿತ್ತ ಅಪಾರ ಸಂಖ್ಯೆಯಲ್ಲಿ ಕಾರ್ಮಿಕರು ಮುಂಬೈಗೆ ಬರುತ್ತಿದ್ದರು. ಹೀಗೆ ಬಂದ ಕಾರ್ಮಿಕರಿಗೆ ವಸತಿ ಒದಗಿಸಲು ಒತ್ತೊತ್ತಾಗಿ ಗುಡಿಸಲುಗಳಿರುವ ಚಾಲ್‌ಗಳನ್ನು ನಿರ್ಮಿಸಲಾಗಿತ್ತು. ಇದರಿಂದ ಎಲ್ಲೆಂದರಲ್ಲಿ ಅಸ್ವಚ್ಛತೆ ತಾಂಡವವಾಡುತ್ತ ನೊಣ, ಇಲಿಗಳು ಸಮೃದ್ಧವಾಗಿ ಬೆಳೆದಿದ್ದವು. ಪ್ಲೇಗ್ ಭುಗಿಲೆದ್ದಾಗ ಚಾಲ್ ವಾಸಿಗಳು ನೊಣ, ಇಲಿಗಳಂತೆ ಸಾಯತೊಡಗಿದರು. ಆಗ, ಆಗಿನ ಬ್ರಿಟಿಷ್ ಸರಕಾರ ಈಗಿನ ಮೋದಿ ಸರಕಾರ ಹಠಾತ್ ಲಾಕ್‌ಡೌನ್ ಹೇರಿದಂತೆ, ಕಾರ್ಮಿಕರ ಮೇಲೆ ನಿರ್ದಾಕ್ಷಿಣ್ಯವಾದ ಅನೇಕ ರೀತಿಯ ನಿಯಂತ್ರಣಗಳನ್ನು ಹೇರಿತು. ಪ್ಲೇಗ್ ರೋಗಿಗಳಿರುವ ಗುಡಿಸಲುಗಳನ್ನು ಸುಟ್ಟರು. ರೋಗಿಗಳನ್ನು ಬಲ ಪ್ರಯೋಗ ಮಾಡಿ ಪ್ರತ್ಯೇಕಿಸಿ ‘ಪ್ಲೇಗ್ ಕ್ಯಾಂಪ್’ಗಳಲ್ಲಿ ಕ್ವಾರಂಟೈನಿಗೆ ಒಳಪಡಿಸಿದರು. ಆಗ ಕಾರ್ಮಿಕರು ಗುಂಪು ಗುಂಪಾಗಿ ವಾಪಸ್ ತಮ್ಮ ಊರುಗಳತ್ತ ಮರಳತೊಡಗಿದರು. ಮುಂಬೈಯಲ್ಲಿ ಮೊತ್ತ ಮೊದಲ ಬಾರಿಗೆ ಪ್ಲೇಗ್ ಕಾಣಿಸಿಕೊಂಡಾಗ ಇಲ್ಲಿನ ಜನಸಂಖ್ಯೆ 8,20,000 ಇತ್ತು. 1901ರಲ್ಲಿ ಜನಗಣತಿ ನಡೆದಾಗ ಮುಂಬೈಯ ಜನಸಂಖ್ಯೆ 7,80,000ಕ್ಕೆ ಇಳಿದಿತ್ತು!
ಹಾಗಿದ್ದೂ, ಮನೆಗಳಲ್ಲಿ ಸಾಕಷ್ಟು ದಿನಸಿ ಸಂಗ್ರಹವಿದ್ದುದರಿಂದ ಲಾಕ್‌ಡೌನ್‌ನ ಮೊದಲ ಕೆಲವು ದಿನಗಳು ಮುಂಬೈಗರಿಗೆ ಸಮಸ್ಯೆಯಾಗಲಿಲ್ಲ. ಆದರೆ, ಇರುವೆಗಳಂತೆ ಸದಾ ಏನಾದರೊಂದು ಕೆಲಸ ಮಾಡುತ್ತಲೇ ಇರುವ ಜಾಯಮಾನದ ಮುಂಬೈಗರಿಗೆ ಮನೆಯೊಳಗೆ ಸುಮ್ಮನೆ ಕುಳಿತುಕೊಳ್ಳುವುದೆಂದರೆ ಮಾನಸಿಕ ಯಾತನೆಯಾಗುತ್ತದೆ. ಅದರ ಜೊತೆಯಲ್ಲಿ, ಕೂಡಿಟ್ಟ ತರಕಾರಿ, ಮೀನು, ಮೊಟ್ಟೆ, ಮಾಂಸ ಮುಗಿಯುತ್ತ ಬಂದಂತೆ ಮುಂಬೈಗರಿಗೆ ಲಾಕ್‌ಡೌನ್‌ನ ನಿಜವಾದ ಬಿಸಿ ತಟ್ಟತೊಡಗಿತು. ವೈರಸ್‌ನ ಭಯ ಮತ್ತು ಪೊಲೀಸರ ಭಯದಿಂದಾಗಿ ಹೊರ ಹೋಗುವಂತೆಯೂ ಇಲ್ಲ. ತುಸು ಧೈರ್ಯ ಮಾಡಿ ಹೊರ ಹೋಗಿ ಕದ್ದು ಮುಚ್ಚಿ ತರಕಾರಿ, ಮೊಟ್ಟೆ ಮಾರುವ ಯಾರಾದರೂ ಸಿಕ್ಕರೆ ಆವತ್ತು ಮನೆಯಲ್ಲಿ ಮಾಮೂಲಿ ಊಟ. ಏನೂ ಸಿಗದೆ ಬರಿಗೈಲಿ ವಾಪಸ್ ಬಂದರೆ ಸಪ್ಪೆ ದಾಲ್-ಚಾವಲ್ ಗತಿ! ಮುಂಬೈಗರಿಗೆ ಈ ಸ್ಥಿತಿಯಲ್ಲಿ ಹಿಂದೆ ಮನುಷ್ಯನ ಪೂರ್ವಜರು ಬೇಟೆಯಾಡಿ ಆಹಾರ ಸಂಗ್ರಹಿಸುತ್ತಿದ್ದ ದಿನಗಳ ನೆನಪು ಮರಳಿ ಬಂದಿದ್ದರೆ ಆಶ್ಚರ್ಯವಿಲ್ಲ. ಇದರ ಜೊತೆ, ಇಂತಹ ಆಪತ್ಕಾಲವನ್ನು ನಿಭಾಯಿಸಿ ಅನುಭವವಿಲ್ಲದೆ ದಿನಕ್ಕೊಂದು ನಿಯಮಗಳನ್ನು ಮಾಡುತ್ತಿದ್ದ ಸರಕಾರದ ಕ್ರಮಗಳಿಂದ ಇನ್ನಷ್ಟು ಗೊಂದಲಕ್ಕೊಳಗಾಗಬೇಕಾಯಿತು.
ಲಾಕ್‌ಡೌನ್ ಕಾಲದಲ್ಲಿ ಮೊದಲ ಬಾರಿಗೆ ಮುಂಬೈಗರಿಗೆ ಹಣವಿದ್ದರಷ್ಟೇ ಸಾಲದು, ಖರೀದಿಸಲು ವಸ್ತುಗಳಿದ್ದರಷ್ಟೇ ಆ ಹಣಕ್ಕೆ ಬೆಲೆ ಬರುತ್ತದೆ ಎಂಬ ಸತ್ಯದ ದರ್ಶನವಾಯಿತು. ಎಷ್ಟೋ ಮುಂಬೈಗರು ಇತ್ತೀಚಿನ ಕೆಲವು ವರ್ಷಗಳಿಂದ ಹವಾನಿಯಂತ್ರಿತ ಐಷಾರಾಮಿ ಮಾಲ್‌ಗಳಿಗೆ ಹೋಗಿ ಮೋಜು ಮಸ್ತಿ ಜೊತೆ ಖರೀದಿ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದರು. ಈ ಕಾರಣಕ್ಕಾಗಿ ಎಷ್ಟೋ ಚಿಕ್ಕಪುಟ್ಟ ಕಿರಾಣಿ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಲಾಕ್‌ಡೌನ್ ಕಾಲದಲ್ಲಿ ಮಾಲ್‌ಗಳು ಬಾಗಿಲು ಹಾಕಿಕೊಂಡು, ಬಿಗ್ ಬಾಸ್ಕೆಟ್, ರಿಲಯನ್ಸ್ ಫ್ರೆಶ್ ಮೊದಲಾದವು ಸ್ತಬ್ಧಗೊಂಡಾಗ ಮುಂಬೈಗರಿಗೆ ಆಪದ್ಬಾಂಧವರಂತೆ ಒದಗಿ ಬಂದವು ಈ ಕಿರಾಣಿ ಅಂಗಡಿಗಳು ಮತ್ತು ಫುಟ್ ಪಾತ್ ತರಕಾರಿ ವ್ಯಾಪಾರಿಗಳು. ಆದರೆ, ಕಿರಾಣಿ ಅಂಗಡಿಗಳಿಗೆ ಲಾಕ್‌ಡೌನ್‌ನಿಂದ ರಿಯಾಯಿತಿ ಇದ್ದರೂ ಕಡಿಮೆ ಸಮಯದಿಂದಾಗಿ ಅವುಗಳ ಎದುರು ಗ್ರಾಹಕರು ಸುರಕ್ಷಿತ ಅಂತರ ಕಾದುಕೊಂಡು ಮೈಲುದ್ದದ ಸಾಲುಗಳಲ್ಲಿ ನಿಲ್ಲಬೇಕಾಯಿತು. ನೀರಿನ ನಳ್ಳಿ, ರೈಲು, ಬಸ್ಸು, ರಿಕ್ಷಾಗಳ ಎದುರು ಮಾತ್ರವಲ್ಲ ಸಾರ್ವಜನಿಕ ಶೌಚಾಲಯಗಳ ಎದುರೂ ದಿನಾ ಕ್ಯೂ ನಿಂತು ಅಭ್ಯಾಸವಿದ್ದ ಮುಂಬೈಗರು ಯಾವತ್ತೂ ಕಿರಾಣಿ ಅಂಗಡಿಗಳ ಎದುರು ಕ್ಯೂ ನಿಂತವರಲ್ಲ. ಕೊರೋನ ಕಾಲದಲ್ಲಿ ಕಿರಾಣಿ ಅಂಗಡಿ, ಹಾಲಿನಂಗಡಿಗಳ ಎದುರೂ ಸಾಲು ನಿಲ್ಲುವ ಹೊಸ ಅಭ್ಯಾಸವನ್ನು ಮಾಡಿಕೊಳ್ಳಬೇಕಾಯಿತು.
ಈ ನಡುವೆ ಉದ್ಯೋಗ, ನೆಲೆ ಕಳೆದುಕೊಂಡ ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರು ತಾವು ಇಷ್ಟು ವರ್ಷಗಳ ಕಾಲ ದುಡಿಯುತ್ತಿದ್ದ ಈ ಮಹಾನಗರಕ್ಕೆ ಇದ್ದಕ್ಕಿದ್ದಂತೆ ಬೇಡದವರಾಗಿ ಅವರೆಲ್ಲ ಬಗಲಲ್ಲಿ ಮಕ್ಕಳನ್ನು ಇಟ್ಟುಕೊಂಡು, ಹೆಗಲ ಮೇಲೆ ವಯಸ್ಸಾಗಿ ನಡೆಯಲಾರದ ಹಿರಿಯರು, ತಲೆ ಮೇಲೆ ಸಾಮಾನುಗಳ ಕಟ್ಟನ್ನು ಏರಿಸಿಕೊಂಡು ಗುಂಪು ಗುಂಪಾಗಿ ಕಾಲು ನಡಿಗೆಯಲ್ಲೋ, ಸಿಕ್ಕ ಸಿಕ್ಕ ವಾಹನಗಳನ್ನು ಏರಿಯೋ ತಮ್ಮ ಹಳ್ಳಿಗಳತ್ತ ಹಿಮ್ಮುಖ ವಲಸೆ ಹೋಗುವುದು ಶುರುವಾಯಿತು. ತಮ್ಮ ವ್ಯವಧಾನವಿಲ್ಲದ ಜೀವನಕ್ರಮದಲ್ಲೂ ಮುಂಬೈಗರು ಇನ್ನೊಬ್ಬರ ಕಷ್ಟಸುಖಗಳಿಗೆ ಸದಾ ಮಿಡಿಯುವವರು. ಕೆಲವು ವರ್ಷಗಳ ಹಿಂದೆ ಬಡ ರೈತರು ಸಾವಿರಾರು ಸಂಖ್ಯೆಯಲ್ಲಿ ನೂರಾರು ಮೈಲು ನಡೆದು ನಗರಕ್ಕೆ ಪಾದ ಯಾತ್ರೆಯಲ್ಲಿ ಬಂದಾಗ ಮುಂಬೈಗರು ಅವರಿಗೆ ಉಣ್ಣಲು ಅನ್ನ, ಕುಡಿಯಲು ಬಾಟಲಿ ನೀರು, ಹೊದೆಯಲು ಬಟ್ಟೆ, ನಡೆಯಲು ಚಪ್ಪಲಿ ಕೊಟ್ಟು ಬರಮಾಡಿಕೊಂಡಿದ್ದರು. ಆದರೆ, ಈ ಬಾರಿ ವೈರಸ್‌ನ ಸೋಂಕಿನ ಭಯದಿಂದಾಗಿ ಹಸಿವು, ನೀರಡಿಕೆ, ಧೂಳು, ಬಿಸಿಲಲ್ಲಿ ನಡೆಯುತ್ತ ತಮ್ಮ ಮೂಲ ನೆಲೆಯತ್ತ ವಾಪಸಾಗುತ್ತಿರುವ ಆ ಬಡಪಾಯಿಗಳಿಗೆ ಯಾವ ಸಹಾಯವನ್ನೂ ಮಾಡಲಾಗದೆ ಅಸಹಾಯಕರಾಗಿ ನೋಡುತ್ತ ನಿಲ್ಲಬೇಕಾಯಿತು.
ದಿನೇ ದಿನೇ ಕೊರೋನ ಸೋಂಕು ಮತ್ತು ಸಾವುಗಳ ಸಂಖ್ಯೆ ಏರುತ್ತ ಹೋದಂತೆ ಮುಂಬೈಗರ ಮುಖದ ಮೇಲಿನ ಬಿಂದಾಸ್ ಕಳೆ ಹೋಗಿ ಅದರ ಜಾಗದಲ್ಲಿ ಮಾಸ್ಕ್ ಬಂದು ಕುಳಿತಿತು. ಎಲ್ಲಡೆ ಕಟ್ಟುನಿಟ್ಟಿನ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಯಿತು. ವೇಗದ ಬದುಕಿನಲ್ಲಿ ಸ್ವಚ್ಛತೆಗೆ ಕಿಂಚಿತ್ತೂ ಗಮನ ಕೊಡದ ಮುಂಬೈಗರು ಈಗ ದಿನಕ್ಕೆ ಹತ್ತಾರು ಬಾರಿ ಸಾಬೂನು, ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳುವ ಹೊಸ ಅಭ್ಯಾಸ ಮಾಡಿಕೊಳ್ಳಬೇಕಾಯಿತು. ನೆರಮನೆಯವರಾದರೂ ಪರಸ್ಪರ ಅಪರಿಚಿತರಾಗಿರುತ್ತಿದ್ದವರು ಮಾಸ್ಕ್ ಧರಿಸಿ ತಿರುಗಾಡಲು ಶುರು ಮಾಡಿದ ಮೇಲಂತೂ ಪರಸ್ಪರ ಇನ್ನಷ್ಟು ಅಪರಿಚಿತರಾಗತೊಡಗಿದರು. ಇತರ ದಿನಗಳಲ್ಲಿ ‘ರಶ್ ಅವರ್’ ಸಮಯದಲ್ಲಿ ಲೋಕಲ್ ರೈಲು, ಬಸ್ಸುಗಳಲ್ಲಿ ಒಬ್ಬರಿಗೊಬ್ಬರು ಒತ್ತಿಕೊಂಡು ನಿಂತು ಮುಖದ ಮೇಲೇ ಕೆಮ್ಮಿದರೂ, ಸೀನಿದರೂ ಲೆಕ್ಕಕ್ಕೆ ತೆಗೆದುಕೊಳ್ಳದಿದ್ದ ಮುಂಬೈಗರು ಈಗ ಮಾರುದ್ದ ದೂರದಲ್ಲಿ ಯಾರಾದರೂ ಕೆಮ್ಮಿದರೆ, ಸೀನಿದರೆ ಹೌಹಾರುವ ಪರಿಸ್ಥಿತಿ ಏರ್ಪಟ್ಟಿತು!
ಅತ್ತ ಕೊರೋನ ಸೋಂಕಿತರು ಹಾಸಿಗೆ, ಆಕ್ಸಿಜನ್ ಸಿಲಿಂಡರಿಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ತಡಕಾಡಿದರೆ ಇತ್ತ ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರಕ್ಕಾಗಿ ಸ್ಮಶಾನದಿಂದ ಸ್ಮಶಾನಕ್ಕೆ ಅಲೆದಾಡುವ ಸ್ಥಿತಿ ಏರ್ಪಟ್ಟಿತು. ಚಾಲ್‌ಗಳು, ಸ್ಲಮ್‌ಗಳು ಕೊರೋನ ಹಾಟ್ ಸ್ಪಾಟ್‌ಗಳಾಗಿ ಮಾರ್ಪಟ್ಟವು. ಮುಂಬೈಯಲ್ಲಿನ ಕೊರೋನ ಸಾವಿನಲ್ಲಿ ಸ್ಲಮ್ ವಾಸಿಗಳ ಪ್ರಮಾಣ ಶೇ.60. ಮುಂಬೈಯಲ್ಲಿರುವ ವಿದ್ಯುತ್ ಚಿತಾಗಾರಗಳ ಸಂಖ್ಯೆ ಕೇವಲ ಎಂಟು. ಅವುಗಳಲ್ಲಿ 2-3 ಯಾವತ್ತೂ ಹಾಳಾದ ಸ್ಥಿತಿಯಲ್ಲಿರುವುದು ಸಾಮಾನ್ಯ. ಹೀಗಾಗಿ ಉಳಿದ ಐದು ಅಥವಾ ಆರು ಚಿತಾಗಾರಗಳ ಎದುರು ಕೋವಿಡ್ ಶವಗಳನ್ನು ಇರಿಸಿಕೊಂಡ ಆ್ಯಂಬುಲೆನ್ಸ್‌ಗಳು ದಿನವಿಡೀ ಸರತಿಯಲ್ಲಿ ನಿಲ್ಲಬೇಕಾಗಿ ಬಂತು. ಜೀವಂತವಿರುವಾಗ ದಿನನಿತ್ಯದ ಅಗತ್ಯಗಳಿಗೆ ಕ್ಯೂ ನಿಲ್ಲುತ್ತಿದ್ದ ಮುಂಬೈಗರಿಗೆ ಈಗ ಸತ್ತ ನಂತರ ಅಂತ್ಯ ಸಂಸ್ಕಾರಕ್ಕೂ ಕ್ಯೂ ನಿಲ್ಲಬೇಕಾಗಿ ಬಂದುದು ಅವರ ಬಿಂದಾಸ್‌ತನವನ್ನು ಇನ್ನಷ್ಟು ಕುಗ್ಗಿಸಿತು.
ಬೆರಳೆಣಿಕೆಯ ಸಂಖ್ಯೆಯ ಸೋಂಕುಗಳಿದ್ದಾಗ ಹೇರಲ್ಪಟ್ಟ ಲಾಕ್‌ಡೌನ್ 86 ಲಕ್ಷ ಅಧಿಕೃತ ಸೋಂಕುಗಳಿರುವ ಈ ಹೊತ್ತಲ್ಲಿ ಹಿಂದೆಗೆಯಲ್ಪಟ್ಟಿದೆ. ಇದರಲ್ಲಿ ಮಹಾರಾಷ್ಟ್ರದ ಪಾಲು 18 ಲಕ್ಷವಾದರೆ ಅದರಲ್ಲಿ ಮುಂಬೈಯ ಪಾಲು 2.5 ಲಕ್ಷ. ಸುರಕ್ಷಿತ ಅಂತರವೆಂಬುವುದು ಹೆಚ್ಚೂ ಕಡಿಮೆ ಇಲ್ಲವಾಗಿದೆ. ವ್ಯಾಪಾರ ವಹಿವಾಟುಗಳು ಮಾಮೂಲು ಸ್ಥಿತಿಗೆ ಮರಳುತ್ತಿವೆ. ತಮ್ಮ ಹಳ್ಳಿಗಳಿಗೆ ವಾಪಸಾದ ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಮರಳಿ ಬರುತ್ತಿದ್ದಾರೆ. ಹೊಟೇಲ್, ಅಂಗಡಿ, ಮಾಲ್, ಸಿನೆಮಾ ಥಿಯೇಟರ್, ಬೇಕರಿ, ಸಲೂನ್, ಬ್ಯೂಟಿ ಪಾರ್ಲರ್, ಫುಟ್‌ಪಾತ್ ಅಂಗಡಿಗಳು ತೆರದಿವೆ. ಆದರೆ, ಎಲ್ಲಿಯೂ ಗ್ರಾಹಕರಿಲ್ಲ. ಜನರಿಗೆ ಈಗ ಕೊರೋನ ವೈರಸ್‌ನ ಭಯ ಅಷ್ಟಾಗಿ ಕಾಡುತ್ತಿಲ್ಲ. ಅವರನ್ನು ವೈರಸ್‌ಗಿಂತಲೂ ಹೆಚ್ಚು ಕಾಡುತ್ತಿರುವುದು ಅನಿಶ್ಚಿತ ಭವಿಷ್ಯದ ಭಯ! ಉದ್ಯೋಗ ಕಳೆದುಕೊಂಡವರು, ಹೊಟ್ಟೆಪಾಡಿನ ದಾರಿ ಕಳೆದುಕೊಂಡವರು ಮುಂದೇನು ಎಂದು ಚಿಂತಿತರಾಗಿದ್ದರೆ ಸಂಬಳ ಕಡಿತ, ಆದಾಯ ಕುಸಿತವಾದವರು ತಮ್ಮ ಖರ್ಚು ವೆಚ್ಚಗಳನ್ನು ಮಿತಿಗೊಳಿಸುವ ಲೆಕ್ಕಾಚಾರ ಹಾಕುತ್ತಿದ್ದಾರೆ. ಬಿಇಎಸ್ಟಿ ಬಸ್ಸುಗಳು ಓಡಾಡುತ್ತಿವೆ. ಈಗ ಅಗತ್ಯ ಸೇವಾಕ್ಷೇತ್ರಗಳ ಉದ್ಯೋಗಿಗಳ ಪ್ರಯಾಣಕ್ಕೆ ಮಾತ್ರ ಅನುಮತಿ ಇರುವ ಲೋಕಲ್ ರೈಲುಗಳೂ ಇನ್ನು ಕೆಲವು ದಿನಗಳಲ್ಲಿ ಎಲ್ಲರಿಗೂ ಮುಕ್ತವಾಗಬಹುದು. ಆದರೆ, ಮುಂಬೈಗರ ಆ ಬಿಂದಾಸ್‌ತನ ಮರಳಿ ಬರಲು ಎಷ್ಟು ಕಾಲ ಬೇಕು ಎನ್ನುವುದು ತಿಳಿಯದು. ಕೊರೋನ ದಾಳಿಗೂ ಮೊದಲೇ ಮುಂಬೈ ತನ್ನ ಹಿಂದಿನ ಔದ್ಯೋಗಿಕ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿತ್ತು. ಬೆಂಗಳೂರು, ಹೈದರಾಬಾದ್‌ಗಳು ಐಟಿ ಹಬ್‌ಗಳಾಗಿ ಅಭಿವೃದ್ಧಿ ಹೊಂದಲು ಶುರುವಾದ ಮೇಲಂತೂ ದಕ್ಷಿಣ ಭಾರತದ ಉನ್ನತ ಶಿಕ್ಷಣ ಪಡೆದ ಯುವಕ-ಯುವತಿಯರು ಉದ್ಯೋಗ ನಿಮಿತ್ತ ಮುಂಬೈಗೆ ಬರುವುದು ಇಳಿಮುಖವಾಗಿದೆ. ಕೊರೋನ ದಾಳಿಯ ನಂತರ ಮುಂಬೈ ಎಂಬ ಈ ಮಾಯಾನಗರಿ ಇನ್ನಷ್ಟು ಕಳೆಗುಂದುವುದು ನಿಶ್ಚಿತ...
ಧಾರಾವಿ ಮ್ಯಾಜಿಕ್!
ಮುಂಬೈಯ ಧಾರಾವಿ ಏಶ್ಯದ ಅತ್ಯಂತ ದೊಡ್ಡ ಸ್ಲಮ್. ಮುಂಬೈಯಲ್ಲಿ ಕೊರೋನ ಸೋಂಕು ಹರಡಲು ಶುರುವಾಗಿ ಎಪ್ರಿಲ್ ಹೊತ್ತಿಗೆ ಧಾರಾವಿಯಲ್ಲಿ 490 ಕೊರೋನ ಸೋಂಕು ಪ್ರಕರಣ ಮತ್ತು ಒಂದು ಸಾವು ಸಂಭವಿಸಿದಾಗ ಇನ್ನೇನು ಧಾರಾವಿಯಲ್ಲಿ ಹೆಣಗಳ ರಾಶಿಯೇ ಬೀಳುತ್ತದೆ ಎಂದು ಇಡೀ ನಗರ ಹೆದರಿತ್ತು! 2 ಕಿ.ಮೀ. ಚದರಡಿ ವಿಸ್ತೀರ್ಣದಲ್ಲಿ ಗುಡಿಸಲಿಗೆ ಸರಾಸರಿ 15 ಜನರಂತೆ ಸುಮಾರು 10 ಲಕ್ಷ ಜನರಿರುವ ಧಾರಾವಿಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಮಾತೇ ಇರಲಿಲ್ಲ. ಇದನ್ನು ಮನಗಂಡ ಮುಂಬೈ ಮುನಿಸಿಪಾಲಿಟಿ ತನ್ನೆಲ್ಲ ಶಕ್ತಿ, ಸಂಪನ್ಮೂಲವನ್ನು ವ್ಯಯಿಸಿ ಪರೀಕ್ಷಿಸುವುದು, ಪ್ರತ್ಯೇಕಿಸುವುದು ಮತ್ತು ಆರೈಕೆ ಮಾಡುವುದು ಈ ಮೂರು ಕೆಲಸಗಳಿಗಾಗಿ ಒಂದು ಸಾವಿರ ಜನ ನಿಷ್ಠಾವಂತ ಪೌರಕಾರ್ಮಿಕರ ತಂಡವೊಂದನ್ನು ರಚಿಸಿತು. ಈ ತಂಡ ತಮ್ಮಲ್ಲಿ ಒಬ್ಬರೂ ಕೊರೋನ ಸೋಂಕಿಗೆ ಬಲಿಯಾಗದೆ ಕರ್ತವ್ಯವನ್ನು ನಿಭಾಯಿಸಿದ ರೀತಿ ಬೇರೆ ನಗರಗಳ ಮುನಿಸಿಪಾಲಿಟಿಗಳಿಗೆ ಮಾದರಿಯಾಗಬಹುದು.
ಆರೋಗ್ಯ ಕಾರ್ಯಕರ್ತರು ಮನೆಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸಿದರು. ಶಂಕಿತರನ್ನು ಪ್ರತ್ಯೇಕಿಸಿದರು. ಸೋಂಕು ದೃಢಪಟ್ಟವರಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡಿದರು. ಈ ಕರ್ಮಚಾರಿಗಳು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವುದರಿಂದ ಅವರಿಗೆ ಕೊರೋನ ಸೋಂಕು ತಗಲುವುದು ಬಹು ಸುಲಭವಾಗಿತ್ತು. ಇದನ್ನು ಮನಗಂಡು ‘ಆರ್ ನಿಸರ್ಗ ಫೌಂಡೇಶನ್’ ಎಂಬ ಒಂದು ಸಾಮಾಜಿಕ ಸಂಸ್ಥೆ ಅವರ ಬೆಂಬಲಕ್ಕೆ ನಿಂತು, ಅವರಿಗಾಗಿಯೇ ಮೂರು ಹಂತಗಳ ಒಂದು ವಿಶೇಷ ಸುರಕ್ಷಾ ಪ್ರಾಜೆಕ್ಟನ್ನು ರೂಪಿಸಿತು. ಮೊತ್ತ ಮೊದಲ ಹಂತದ ಪ್ರಕಾರ, ಕೊರೋನ ರೋಗಿಗಳ ಸಂಪರ್ಕಕ್ಕೆ ಬರುವ ಕರ್ಮಚಾರಿಗಳಿಗೆ ಒಮ್ಮೆ ಉಪಯೋಗಿಸಿ ಬಿಸಾಡಬಹುದಾದ ಪಿಪಿಇ ಸೂಟು ಮತ್ತು ಕಸ ತೆಗೆಯುವ ಕರ್ಮಚಾರಿಗಳಿಗೆ ಪ್ರತೀದಿನ ಒಗೆದು ಬಳಸಬಹುದಾದ ಪಿಪಿಇ ಸೂಟುಗಳನ್ನು ನೀಡಿತು. ಎರಡನೇ ಹಂತದ ಪ್ರಕಾರ, ಅವರ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಗ್ಲುಕೋಸ್ ಬಿಸ್ಕಿಟ್ ಮತ್ತು ಔಷಧಿಗಳನ್ನು ನೀಡಿತು. ಮೂರನೇ ಹಂತದ ಪ್ರಕಾರ, ಅವರ ದೇಹದ ಆಮ್ಲಜನಕದ ಪ್ರಮಾಣವನ್ನು ನಿರಂತರವಾಗಿ ಅಳೆಯಲು ಅಲ್ಲಲ್ಲಿ ಆಕ್ಸಿಮೀಟರುಗಳನ್ನು ಅಳವಡಿಸಿತು. ವ್ಯಕ್ತಿಯು ಹೊರನೋಟಕ್ಕೆ ಆರೋಗ್ಯವಂತನಾಗಿ ಕಂಡರೂ ದೇಹದೊಳಗೆ ಆಮ್ಲಜನಕದ ಪ್ರಮಾಣ ಕಡಿಮೆಯಾಗಿರುವ ಸಾಧ್ಯತೆ ಇರುತ್ತದೆ. ಆಕ್ಸಿಮೀಟರ್ ಮೂಲಕ ಕೊರೋನ ಪಾಸಿಟಿವ್ ಪ್ರಕರಣಗಳನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚಲು ಸಹಾಯವಾಗುತ್ತದೆ. ಇವೆಲ್ಲ ಕ್ರಮಗಳ ಪರಿಣಾಮವಾಗಿ ಎಪ್ರಿಲ್‌ನಲ್ಲಿ ಸೋಂಕಿನ ಪ್ರಮಾಣ ದುಪ್ಪಟ್ಟುಗೊಳ್ಳಲು ತಗಲುತ್ತಿದ್ದ 18 ದಿನಗಳ ಅವಧಿ ಜೂನ್ ಹೊತ್ತಿಗೆ 78 ದಿನಗಳಿಗೆ ಇಳಿಯಿತು. ಈ ತಂಡದ ಕೆಲವರಿಗೆ ಕೊರೋನ ಸೋಂಕು ತಗಲಿದರೂ ಯಾರೊಬ್ಬರ ಪ್ರಾಣಕ್ಕೂ ಅಪಾಯವಾಗಲಿಲ್ಲ. ಜುಲೈ ತಿಂಗಳ ತನಕ ಧಾರಾವಿಯಲ್ಲಿನ ಸೋಂಕಿನ ಸಂಖ್ಯೆ 2,370 ಮತ್ತು ಸಾವಿನ ಸಂಖ್ಯೆ 200 ಆಗಿತ್ತು. ಸೆಪ್ಟ�