ಸಿದ್ಧ ಮಾರ್ಗವ ತೊರೆವ ಸುಖ...
ಅಂತರ್‌ರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಜೋಡಿ ಕೃಪಾಕರ-ಸೇನಾನಿ. ಪರಿಸರ ವಿಜ್ಞಾನಿಗಳಾಗಿ ತಮ್ಮ ವಿಜ್ಞಾನ ಬರಹಗಳ ಮೂಲಕ ಓದುಗರನ್ನು ಬೆರಗಿಗೆ ಹಚ್ಚಿದವರು. ಏಶ್ಯಟಿಕ್ ಕಾಡುನಾಯಿಗಳ ಕುರಿತು ಅವರು ನಿರ್ಮಿಸಿರುವ ‘ದಿ ಪ್ಯಾಕ್’ ಸಾಕ್ಷಚಿತ್ರ ಪ್ರತಿಷ್ಠಿತ ವೈಲ್ಡ್ ಸ್ಕ್ರೀನ್ ಚಲನಚಿತ್ರೋತ್ಸವದಲ್ಲಿ ಗ್ರೀನ್ ಆಸ್ಕರ್ ಪ್ರಶಸ್ತಿಗೆ ಪಾತ್ರವಾಗಿದೆ. ಕೃಪಾಕರ-ಸೇನಾನಿ ವೀರಪ್ಪನ್ ಒತ್ತೆಯಾಳುಗಳಾಗಿದ್ದಾಗಿನ ಸಂಗತಿಗಳನ್ನು ಸೊಗಸಾಗಿ ದಾಖಲಿಸಿದ ‘ಸೆರೆಯಲ್ಲಿ ಕಳೆದ 14 ದಿನಗಳು’ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಅರಣ್ಯ, ಪ್ರಾಣಿ, ಪಕ್ಷಿ ಪರಿಸರ ಕುರಿತ ಲೇಖನಗಳನ್ನು ಬರೆಯುವ ಇವರು, ಇಂಗ್ಲಿಷ್‌ನಲ್ಲೂ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ನೀವು ವನ್ಯಜೀವಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಹಿನ್ನೆಲೆ ಏನು? ಪ್ರೇರಣೆ ಏನು?
ಇದು ನಮಗೆ ಅನೇಕರು ಕೇಳುವ ಸಾಮಾನ್ಯ ಪ್ರಶ್ನೆ. ಈ ಪ್ರಶ್ನೆಗೆ ನಮಗೆ ಒಂದು ಸಾಲಿನಲ್ಲಿ ಉತ್ತರಿಸಲು ಸಾಧ್ಯವಾಗಿಲ್ಲ.
ಹಾಡುವ ಹಕ್ಕಿ, ಚಲಿಸುವ ಮೋಡ, ಓಡುವ ನದಿ, ಬೀಸುವ ಗಾಳಿ, ಮಿನುಗುವ ನಕ್ಷತ್ರಗಳು ಬಾಲ್ಯದಿಂದ ನಮ್ಮ ಆಸಕ್ತಿ ಕೆರಳಿಸಿದ್ದು ನಿಜ. ಬಹುಶಃ ಇವುಗಳೆಲ್ಲ ನಾವು ಕಾಡಿನತ್ತ ಮುಖಮಾಡಲು ಪ್ರೇರಕವಾಗಿರಬಹುದು.
ಕೆಲವು ವರ್ಷಗಳ ಹಿಂದೆ ಬಿಬಿಸಿಯ ಛಾಯಾಗ್ರಾಹಕ ಮಿತ್ರ ಕ್ರಿಸ್ ದಿವೇರೆಗೆ ಜನ ನಮಗೆ ಕೇಳುವ ಪ್ರಶ್ನೆಯನ್ನು ಕೇಳಿದೆವು.
ತುಸು ಹೊತ್ತು ಯೋಚಿಸಿ... ನಾನು ಹೆಚ್ಚು ಓದಲಿಲ್ಲ. ಓದಿ ಮುಂದೊಂದು ದಿನ ವನ್ಯಜೀವಿ ಛಾಯಾಗ್ರಾಹಕ ಆಗಬೇಕೆಂಬ ಬಯಕೆ ಇತ್ತು. ಇದನ್ನು ಈಡೇರಿಸಿಕೊಳ್ಳಲು ಹಲವರನ್ನು ಭೇಟಿ ಮಾಡಿ ನನ್ನ ಆಸೆಯನ್ನು ತೋಡಿಕೊಂಡೆ. ಯಾವ ಭರವಸೆಯೂ ದೊರಕಲಿಲ್ಲ.
‘‘ಇಚ್ಛಿಸಿದ್ದನ್ನು ಪ್ರೀತಿಸಿದ್ದನ್ನು ಮಾಡಲಾಗದ ಬದುಕಿನ ಬಗ್ಗೆ ಜಿಗುಪ್ಸೆ ಮೂಡಿತು. ಎಚ್ಚರಿಕೆಯಿಂದ ರಕ್ಷಣಾತ್ಮಕವಾಗಿ ಬದುಕಿ ಜೀವನ ಪೂರೈಸುವುದು ನಿರರ್ಥಕವೆನಿಸಿತು. ಒಂದು ಮುಂಜಾನೆ ಏಕಾಂತವಾಗಿ ಕುಳಿತು ದೀರ್ಘವಾಗಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆ. ಸಮಾಜದ ನಿರೀಕ್ಷೆಗಳನ್ನು ಪೂರೈಸುತ್ತ ಬದುಕು ಸವೆಸುವುದರಲ್ಲಿ ಅರ್ಥವಿಲ್ಲ. ಪುನರ್ಜನ್ಮವೆಂಬ ಕಲ್ಪನೆಯೇ ಬದುಕಿನ ಸ್ಫೂರ್ತಿಗೆ ಮಾರಕ. ಬದುಕಿನ ಸಹಜ ಸೆಳೆತಕ್ಕೆ ಸ್ಪಂದಿಸುವುದರಲ್ಲಿ ಅರ್ಥವಿದೆ ಎಂದು ತಿಳಿದೆ. ಮರುಘಳಿಗೆಯಲ್ಲಿ ನನ್ನ ಕೊಠಡಿಯಲ್ಲಿದ್ದ ಮೇಜು, ಕುರ್ಚಿ, ಗಡಿಯಾರ, ಮ್ಯೂಸಿಕ್ ಸಿಸ್ಟಂ ಮತ್ತಿತರ ಅಳಿದುಳಿದ ವಸ್ತುಗಳನ್ನೆಲ್ಲ ಗುಡ್ಡೆ ಮಾಡಿಕೊಂಡು ರಸ್ತೆಯ ಮಗ್ಗುಲಲ್ಲಿ ಹರಡಿ ಕುಳಿತೆ, ಮೂರ್ನಾಲ್ಕು ದಿನಗಳಲ್ಲಿ ಎಲ್ಲವನ್ನು ಮಾರಿ ಕ್ಯಾಮರಾ ಕೊಂಡು ಅಲೆದಾಡಲು ಆರಂಭಿಸಿದೆ’’.
‘‘ಆನಂತರದ ಎರಡು ವರ್ಷಗಳ ಕಾಲ ಇಂಗ್ಲೆಂಡ್ ನೆಲದಲ್ಲಿ ವಾಸ್ತವ್ಯ ಹೂಡಲು ಹಣವಿಲ್ಲವಾದ್ದರಿಂದ ವಾರಸುದಾರರಿಲ್ಲದೆ ಸಮುದ್ರದಲ್ಲಿ ತೇಲುತ್ತಿದ್ದ ಹಳೆಯ ದೋಣಿಯಲ್ಲಿ ದಿನ ಕಳೆದೆ. ಆ ಅವಧಿಯಲ್ಲಿ ಯಾವುದೇ ವ್ಯವಹಾರಗಳಿಗೆ ನೀಡಲು ನನಗೆ ವಿಳಾಸವೇ ಇರಲಿಲ್ಲ!’’ ಇದು ಬಿಬಿಸಿಯ (ಬ್ರಿಟಿಷ್ ಬ್ರಾಡ್‌ಕ್ಯಾಸ್ಟಿಂಗ್ ಕಾರ್ಪೊರೇಷನ್) ಹೆಸರಾಂತ ಛಾಯಾಗ್ರಾಹಕ ಕ್ರಿಸ್ಟಫರ್ ಸಾಗಿ ಬಂದ ಹಾದಿ. ‘‘ಸವಾಲಿನ ದಾರಿ ಹಿಡಿದು ದಡ ತಲುಪಿದ ತೃಪ್ತಿ ಇದೆಯಾ ಕ್ರಿಸ್’’ ಎಂಬ ನಮ್ಮ ಪ್ರಶ್ನೆಗೆ ‘‘ವೃತ್ತಿ ಸಂತೃಪ್ತಿಗಳ ವಿಷಯ ಇಲ್ಲಿ ಮುಖ್ಯವಲ್ಲ; ಅನುಭವಗಳಿಗಾಗಿ ಪ್ರಯಾಣ; ಬದುಕಿನ ಸಹಜ ತುಡಿತಗಳಿಗೆ ಸ್ಪಂದಿಸುವುದು ದಟ್ಟ ಅನುಭವಗಳ ಬೆಚ್ಚನೆಯ ಅಪ್ಪುಗೆ ನನಗಿಷ್ಟ’’ ಎಂದ.
ನಮ್ಮ ಸ್ನೇಹಿತ ಕ್ರಿಸ್‌ನ ನೆನಪಾದ ಕಾರಣವಿಷ್ಟೆ. ವನ್ಯಜೀವಿ ಛಾಯಾಗ್ರಹಣವನ್ನು ಪೂರ್ಣಾವಧಿಯ ವೃತ್ತಿಯಾಗಿಸಿಕೊಳ್ಳಲು ಬೇಕಿರುವ ಅರ್ಹತೆ ಏನೆಂದು ಬಹಳ ಮಂದಿ ಕೇಳುತ್ತಾರೆ. ನಮ್ಮ ಪ್ರಕಾರ ಪರಮಾವಧಿ ಹುಚ್ಚೇ ನಿಜವಾದ ಅರ್ಹತೆ. ಸಕಾರಣಗಳನ್ನು ಒದಗಿಸಿಯೂ ಸಮಾಜಕ್ಕೆ ಎಂದಿಗೂ ಮನವರಿಕೆ ಮಾಡಿಕೊಡಲಾಗದೆ ಸಾಗುವ ಪ್ರಯಾಣ. ಹರಿಯುವ ನದಿಗೆ ಮರಳ ಸೇತುವೆಯ ಕಟ್ಟಿ ಹಿಂದಿರುಗಿ ನೋಡದೆ ಮುನ್ನಡೆದಂತೆ.
ಸಿದ್ಧ ರಸ್ತೆಗಳನ್ನು ತಿರಸ್ಕರಿಸಿ ಇಷ್ಟ ಬಂದ ದಿಕ್ಕಿನತ್ತ ಸಾಗುವುದು ನಮ್ಮ ಸಾಂಪ್ರದಾಯಿಕ ಸಮಾಜದಲ್ಲಿ ಅಷ್ಟೇನು ಸುಲಭವಲ್ಲ. ಪ್ರತಿ ಹೆಜ್ಜೆಗೂ ಎಲ್ಲಿಗೆ, ಏಕೆ ಎಂಬ ಪ್ರಶ್ನೆಗಳ ಸುರಿಮಳೆಗಳು, ಲೆಕ್ಕವಿಲ್ಲದಷ್ಟು ಉಚಿತ ಸಲಹೆಗಳು ಸದಾ ಸುತ್ತಿಕೊಳ್ಳುತ್ತವೆ. ಇವುಗಳೆಲ್ಲ ನೀವು ಸಾಗಲು ನಿಶ್ಚಯಿಸಿ ಹೊರಟ ದಿಕ್ಕನ್ನು ತಪ್ಪಿಸುವ ಒಳಸಂಚಿನಂತೆ ಕಾಣುತ್ತವೆ, ನಿಜ. ನಿಮ್ಮ ಉದ್ದೇಶಗಳನ್ನು, ಅಪೇಕ್ಷೆಗಳನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡಲಾಗದ ಅಸಹಾಯಕ ಸನ್ನಿವೇಶಗಳು ಎದುರಾಗುವುದು ಸಾಮಾನ್ಯ. ಇದನ್ನು ಮೀರಲು ನಿರುತ್ತರವೆಂಬ ಅಸ್ತ್ರವನ್ನು ಮನನ ಮಾಡಿಕೊಳ್ಳಬೇಕು.
ಇದನ್ನೆಲ್ಲ ಮೀರಿದಾಗ ಸಿದ್ಧವಿಲ್ಲದ ಕಾಡಿನ ಜಾಡುಗಳು ರೋಚಕವೆನಿಸುತ್ತವೆ. ಈ ಹಲವು ವರ್ಷಗಳ ಪ್ರಯಾಣದ ಬಳಿಕ ಕಾಡು ಸ್ವಲ್ಪ ಪರಿಚಯವಾಗುತ್ತಾ ಸಾಗುತ್ತದೆ. ನಂತರ ಗಿಡ ಬಳ್ಳಿ, ಝರಿ, ಕಲ್ಲುಬಂಡೆ, ಹಕ್ಕಿ, ಬೀಸುವ ಗಾಳಿಯೊಂದಿಗೆ ಸಂವಾದ ಆರಂಭಗೊಳ್ಳುತ್ತದೆ. ಜೀವ ಜಾಲದ ಪರಿವಿಡಿ ತೆರೆದುಕೊಂಡು ನೂರಾರು ಪ್ರಶ್ನೆಗಳು ಎದ್ದು ನಿಲ್ಲುತ್ತವೆ.
ಹಾರುವ ಹಕ್ಕಿಗಳಲ್ಲೇಕೆ ಇಷ್ಟೊಂದು ಬಗೆ? ಇಷ್ಟೊಂದು ಬಣ್ಣ? ಕತ್ತಲು ಕಾಡಿನಲ್ಲಿ ಅಡ್ಡಾಡಲು ಟ್ರೋಗನ್ ಹಕ್ಕಿಗೇಕೆ ಬೇಕು ಅಷ್ಟೊಂದು ಬಣ್ಣ? ಹೊರಲಾಗದಷ್ಟು ಉದ್ದನೆಯ ಬಾಲ ಕಟ್ಟಿಕೊಂಡು ತಿರುಗುವ ತಾಪತ್ರಯ ನವಿಲುಗಳಿಗೇಕೆ? ಹೂವಿನ ರಚನೆಯಲ್ಲಿ ಏನಿಷ್ಟು ವೈವಿಧ್ಯ? ಬಿಳಿ ಹೂವುಗಳು ಹೆಚ್ಚಾಗಿ ಕತ್ತಲಲ್ಲಿ ಅರಳುವ ಒಳಗುಟ್ಟೇನು? ಸುವಾಸನೆ ಸೂಸುವ ಹೂವುಗಳ ತಂತ್ರ ಮಂತ್ರಗಳೇನು? ರಾಣಿ ಹೆತ್ತ ಸಾವಿರಾರು ಮರಿಗಳನ್ನು ಪೋಷಿಸಿ ಬೆಳೆಸುವ ಉಳಿದ ಇರುವೆಗಳಿಗೆ ಲಭಿಸುವ ಲಾಭವೇನು?
ವಿಕಾಸದ ಹಾದಿಯಲ್ಲಿ ಸಂಭವಿಸಿರಬಹುದಾದ ಘಟನಾವಳಿಗಳೇನು? ಕಾಡಿನಲ್ಲಿ ಒಬ್ಬಂಟಿಗನಾಗಿ ಕುಳಿತು ಧ್ಯಾನಿಸುವಾಗ ಇಂಥ ನೂರಾರು ಪ್ರಶ್ನೆಗಳು ಪುಂಕಾನುಪುಂಖವಾಗಿ ಆವರಿಸುತ್ತ ಉತ್ಸಾಹ ತುಂಬುತ್ತವೆ. ಈ ಅರಿವು ಛಾಯಾಗ್ರಾಹಕನ ಆಲೋಚನೆಯನ್ನು ನೋಡುವ ದೃಷ್ಟಿಕೋನವನ್ನು ಬದಲಿಸುತ್ತವೆ. ಅಮೂರ್ತಗಳು ಮೂರ್ತ ರೂಪ ಪಡೆದುಕೊಳ್ಳುತ್ತವೆ. ಹೀಗೆ ಹತ್ತಾರು ದಿಕ್ಕುಗಳಿಂದ ಸಂಪಾದಿಸುವ ಜ್ಞಾನದ ಜೊತೆಗೆ ಓದು, ಬರಹ, ಸಾಹಿತ್ಯ, ಕಲೆ, ಸಂವಾದಗಳು ಕೃತಿರೂಪಗೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
ಇಲ್ಲಿ ಕವಿ ಎಲಿಯಟ್‌ನ Broken Images ನೆನಪಾಗುತ್ತಿದೆ. “One thousand moves on the river Thames every one looking at his own feet”ಎಂಬ ಸಾಲು.
ಕೇವಲ ಉಪಕರಣಗಳಷ್ಟೆ ಅದ್ಭುತ ಚಿತ್ರಗಳನ್ನು ಅನಾವರಣಗೊಳಿಸಲು ಸಾಧ್ಯವಿಲ್ಲ.
ಮೊದಲಿಗೆ ಅನುಭವಿಸಿದ ಸೌಂದರ್ಯ ಹೃದಯದಲ್ಲಿ ಹೆಪ್ಪುಗಟ್ಟಬೇಕು. ಕವನವಾಗಿ ಹಾಡಬೇಕು. ಆ ಹಾಡಿಗೆ ವಿವಿಧ ಆಯಾಮಗಳನ್ನು ನೀಡಿ ನಿಶ್ಚಿತ ಆಯಕಟ್ಟಿನಲ್ಲಿ ಬಂಧಿಸಿಡಬೇಕು. ಆಗಷ್ಟೇ ಅದು ಸುಂದರ ಕೃತಿಯಾಗಿ ಅರಳ ಬಲ್ಲದು. ನೋಡುಗರ, ಕೇಳುಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬಲ್ಲದು. ಸಿದ್ಧ ಗಣಿತ ಸೂತ್ರಗಳಿಂದ ಉತ್ತಮ ಕೃತಿಗಳು ಅರಳುವುದಿಲ್ಲ.
ಎಲ್ಲಾ ಕಲಾ ಪ್ರಕಾರಗಳಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಕೇವಲ ಶ್ರದ್ಧೆ ಮತ್ತು ಪರಿಶ್ರಮಗಳಿಂದ ಕೃತಿಗಳನ್ನು ಸೃಷ್ಟಿಸಲು ಸಾಧ್ಯವಿಲ್ಲವೆಂಬುದು. ತಮಟೆಯಿಂದ ಹೊರಹೊಮ್ಮುವ ನಾದ ಕೇವಲ ತಮಟೆ ತಟ್ಟುವ ಬೆರಳುಗಳ ನೆರವಿನಿಂದಲ್ಲ ಅದು ಹೃದಯ ಮತ್ತು ಬೆರಳುಗಳ ನಡುವಿನ ಒಲುಮೆಯ ಸಂವಾದವಾಗಿರುತ್ತದೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನೇ ನೋಡಿ, ಕೇವಲ ಭಾಷೆ ಮತ್ತು ಪಾಂಡಿತ್ಯದಿಂದ ಈ ಅಪೂರ್ವ ಕೃತಿಯನ್ನು ಕಟ್ಟಲು ಸಾಧ್ಯವಾಗುತ್ತಿದ್ದರೆ ಅನೇಕಾನೇಕ ಮದುಮಗಳು ಕನ್ನಡದಲ್ಲಿ ಇರಬೇಕಿತ್ತು. ಇದೇ ರೀತಿ ಕೇವಲ ದುಬಾರಿ ಉಪಕರಣಗಳ ನೆರವಿನಿಂದ ಅದ್ಭುತ ಚಿತ್ರಗಳನ್ನು ಅನಾವರಣಗೊಳಿಸಲು ಸಾಧ್ಯವಿಲ್ಲ. ಸೃಜನಾತ್ಮಕತೆಗೆ ಸೂಕ್ಷ್ಮ ಗ್ರಹಿಕೆಯೂ ಮುಖ್ಯ.
ಆಗಷ್ಟೇ ನಾವು ಸೃಷ್ಟಿಸುವ ಕೃತಿಗಳಿಗೆ ಜೀವಂತಿಕೆ ಇರುತ್ತದೆ. ಇಲ್ಲವಾದಲ್ಲಿ ಪ್ಲಾಸ್ಟಿಕ್ ಹೊದಿಕೆಯಲ್ಲಿ ಕುಳಿತ ಬಿಂಬಗಳಾಗಿ ಉಳಿಯುತ್ತವೆ. ತಾಂತ್ರಿಕವಾಗಿ ಅವುಗಳಲ್ಲಿ ಯಾವ ಲೋಪದೋಷಗಳಿಲ್ಲದಿದ್ದರೂ ನೋಡುಗನೊಂದಿಗೆ ಆ ಚಿತ್ರಗಳು ಸಂವಾದಿಸಲು ಸೋಲುತ್ತವೆ. ದಟ್ಟ ಅನುಭವಗಳಿಂದ ಮೂಡಿಬರದ ಕೃತಿಗಳ ದೌರ್ಬಲ್ಯವೇ ಇದು. ಭಾಷೆ, ಛಂದಸ್ಸು, ವ್ಯಾಕರಣಗಳೆಲ್ಲ ಮೇಳೈಸಿದರೂ ಅನೇಕ ಕೃತಿಗಳು ಓದುಗರೊಂದಿಗೆ ಮಾತನಾಡುವುದಿಲ್ಲ. ಅದು ಕೇವಲ ಮತ್ತೊಂದು ಪುಸ್ತಕವಾಗಿ ಕೊನೆಗೊಳ್ಳುತ್ತದೆ.
ಇದೆಲ್ಲಕ್ಕಿಂತ ಮೊದಲು ನಾವು ತಿರುಗಾಡುವ ಕಾಡು ನಮಗೆ ಆಪ್ತವಾಗಿರಬೇಕು. ಇದು ಇಲ್ಲವಾದಾಗ ಹಾದಿ ಕಷ್ಟವೆನಿಸುತ್ತದೆ. ನಿಶ್ಚಿತ ಗುರಿ ತಲುಪಿಬಿಡುವ ಪೂರ್ವ ಸಿದ್ಧತೆಯಿಂದ ಹೊರಟ ಪ್ರಯಾಣ ನಡುದಾರಿಯಲ್ಲಿ ಧಣಿವಾಗಿ, ನಾವು ಹೊತ್ತು ತರುವ ಚಿತ್ರಗಳು ನೋಡುಗರಿಗೆ ಪ್ರಯಾಸವೆನಿಸಿದರೆ ಅಚ್ಚರಿ ಇಲ್ಲ. ಕೃತಿಕಟ್ಟುವಲ್ಲಿ ಎಡವಿದರೂ ಕಾಡಿನಲ್ಲಿ ಕಂಡ ನೂರೆಂಟು ಬೆಚ್ಚನೆಯ ಅನುಭವಗಳು ಬದುಕಿನ ನೆನಪಿನಂಗಳದಲ್ಲಿ ಉಳಿದುಬಿಟ್ಟಲ್ಲಿ ಅದು ಇನ್ನಷ್ಟು ಸಾರ್ಥಕ.