ಘೋಷಣೆಗೆ ಸೀಮಿತವಾದ ಕಳಸ ತಾಲೂಕು ಕೇಂದ್ರ: 2 ವರ್ಷ ಕಳೆದರೂ ತಾಲೂಕು ಕೇಂದ್ರದ ಅನುಷ್ಠಾನ ನೆನೆಗುದಿಗೆ

Update: 2021-02-12 18:34 GMT

ಚಿಕ್ಕಮಗಳೂರು, ಫೆ.12: ಜಿಲ್ಲೆಯ ಮಲೆನಾಡು ಭಾಗದಲ್ಲಿರುವ, ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿರುವ ಕಳಸ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಕಳೆದ ಫೆ.8ಕ್ಕೆ ಭರ್ತಿ ಎರಡು ವರ್ಷವಾಗಿದೆ. ಆದರೆ ನೂತನ ತಾಲೂಕು ಕೇಂದ್ರ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಕಳಸ ತಾಲೂಕು ಕೇಂದ್ರಕ್ಕೆ ಅಧಿಕೃತ ಸ್ಥಾನಮಾನ ಹಾಗೂ ಅನುಷ್ಠಾನಕ್ಕೆ ರಾಜ್ಯ ಸರಕಾರ ಇನ್ನೂ ಮುಂದಾಗದಿರುವುದರಿಂದ ಸಾರ್ವಜನಿಕರು ನೂತನ ತಾಲೂಕು ಕೇಂದ್ರದ ಕನಸು ನನಸಾಗುತ್ತದೋ ಇಲ್ಲವೋ ಎಂಬ ಗೊಂದಲಕ್ಕೊಳಗಾಗುವಂತಾಗಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿರುವ ಕಳಸ ಹೋಬಳಿ ಕೇಂದ್ರ ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿಮೀ ದೂರದಲ್ಲಿದ್ದರೆ, ಮೂಡಿಗೆರೆ ತಾಲೂಕು ಕೇಂದ್ರದಿಂದ ಕಳಸ ಪಟ್ಟಣ ಸುಮಾರು 65 ಕಿಮೀ ದೂರದಲ್ಲಿದೆ. ಆದರೆ ಕಳಸ ಹೋಬಳಿಯ ವ್ಯಾಪ್ತಿ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರದಿಂದ ಸುಮಾರು 150ರಿಂದ 200 ಕಿಮೀ ದೂರದಲ್ಲಿದೆ. ಕಳಸ ಹೋಬಳಿ ವ್ಯಾಪ್ತಿಯಲ್ಲಿ 6 ಗ್ರಾಮ ಪಂಚಾಯತ್‍ಗಳಿದ್ದು, ಸುಮಾರು 55ರಿಂದ 60 ಸಾವಿರ ಜನಸಂಖ್ಯೆ ಇದೆ. ಇಲ್ಲಿನ ಸಾರ್ವಜನಿಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ರೈತರು ಸರಕಾರದ ವಿವಿಧ ಇಲಾಖೆಗಳ ಸೌಲಭ್ಯಗಳಿಗಾಗಿ ದೂರದ ತಾಲೂಕು, ಇಲ್ಲವೇ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದಬೇಕಿದ್ದು, ಉತ್ತಮ ಸಾರಿಗೆ ಸೌಕರ್ಯ ಮತ್ತಿತರ ಸಮಸ್ಯೆಗಳಿಂದಾಗಿ ಇಲ್ಲಿನ ಜನರು ಈ ಸೌಲಭ್ಯಗಳಿಗಾಗಿ ಇಡೀ ದಿನ ಮೀಸಲಿಡುವುದಲ್ಲದೇ ಭಾರೀ ಹಣ ಖರ್ಚು ಮಾಡುವುದು ಅನಿವಾರ್ಯವಾಗಿತ್ತು. ಈ ಕಾರಣಕ್ಕೆ ತಾಲೂಕು, ಜಿಲ್ಲಾ ಕೇಂದ್ರದಿಂದ ಭಾರೀ ದೂರದಲ್ಲಿರುವ ಕಳಸ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಹೋಬಳಿ ವ್ಯಾಪ್ತಿಯ ಜನರು ಕಳೆದ 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ.

ಈ ಹೋರಾಟದ ಫಲ ಎಂಬಂತೆ ಹಿಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ 2019, ಫೆ.8ರಂದು ಕಳಸ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿದ್ದರು. ಸರಕಾರದ ಈ ಘೋಷಣೆಯಿಂದಾಗಿ ಕಳಸ ಹೋಬಳಿಯ ಜನರು ಸಂಭ್ರಮಾಚರಣೆಯನ್ನೂ ಮಾಡಿದ್ದರು. ಬಳಿಕ ಕಳಸ ತಾಲೂಕು ಕೇಂದ್ರದ ಅನುಷ್ಠಾನ ಸಂಬಂಧಿ ಪ್ರಕ್ರಿಯೆಗೆ ಜಿಲ್ಲಾಡಳಿತ ಚಾಲನೆ ನೀಡಿತ್ತಾದರೂ ಈ ವೇಳೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸಮ್ಮಿಶ್ರ ಸರಕಾರ ಅಧಿಕಾರ ಕಳೆದುಕೊಂಡು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಕಳಸ ತಾಲೂಕು ಕೇಂದ್ರದ ಅನುಷ್ಠಾನ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದೇ ಕಳಸ ಹೋಬಳಿ ವ್ಯಾಪ್ತಿಯ ಜನರು ಸಂತಸ ವ್ಯಕ್ತಪಡಿಸಿದ್ದರು. ಆದರೆ ಕಳಸ ತಾಲೂಕು ಘೋಷಣೆಯಾಗಿ 2 ವರ್ಷ ಕಳೆದರೂ ಬಿಜೆಪಿ ಸರಕಾರ ಈ ತಾಲೂಕು ಕೇಂದ್ರದ ಅನುಷ್ಠಾನಕ್ಕೆ ಇದುವರೆಗೂ ಯಾವುದೇ ಕ್ರಮಕೈಗೊಳ್ಳದಿರುವುದು ಇಲ್ಲಿನ ಜನರನ್ನು ಕೆರಳುವಂತೆ ಮಾಡಿದೆ.

ಸಾರ್ವಜನಿಕರ 30 ವರ್ಷಗಳ ಹೋರಾಟದ ಫಲವಾಗಿರುವ ಕಳಸ ತಾಲೂಕು ಕೇವಲ ಘೋಷಣೆ ಮಾತ್ರ ಸೀಮಿತವಾಗಿರುವುದರಿಂದ ಆಕ್ರೋಶಗೊಂಡ ಸಾರ್ವಜನಿಕರು, ವಿವಿಧ ರಾಜಕೀಯ ಪಕ್ಷಗಳು ಇತ್ತೀಚೆಗೆ ಅಂಚೆ ಪತ್ರ ಚಳವಳಿಯಂತಹ ಹೋರಾಟಕ್ಕೂ ಚಾಲನೆ ನೀಡಿದ್ದರು. ಅಲ್ಲದೇ ಕೆಲ ತಿಂಗಳುಗಳ ಹಿಂದೆ ನಡೆದ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಲು ಬಿಜೆಪಿಯೇತರ ರಾಜಕೀಯ ಪಕ್ಷಗಳ ಮುಖಂಡರು, ಹೋರಾಟಗಾರರು, ಸಾರ್ವಜನಿಕರು ಕರೆ ನೀಡಿದ್ದರು. ಈ ವೇಳೆ ಹಾಲಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಕಳಸ ತಾಲೂಕು ಕೇಂದ್ರದ ಅನುಷ್ಠಾನಕ್ಕೆ ಬಿಜೆಪಿ ಸರಕಾರ ಬದ್ಧವಾಗಿದೆ, ಗ್ರಾಪಂ ಚುನಾವಣೆ ಮುಗಿದ ಬಳಿಕ ಸಿಎಂ ಬಳಿ ನಿಯೋಗದೊಂದಿಗೆ ತೆರಳಿ ಈ ಸಂಬಂಧ ಒತ್ತಡ ಹೇರಲಾಗುವುದು ಎಂದು ಭರವಸೆ ನೀಡಿದ್ದರು. 

ಅಲ್ಲದೇ ಸಾರ್ವಜನಿಕರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನೂ ಈ ಸಂಬಂಧ ಪ್ರಶ್ನಿಸಿದಾಗ, ತಾಲೂಕು ಕೇಂದ್ರದ ಅನುಷ್ಠಾನಕ್ಕೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು. ಶೀಘ್ರ ತಾಲೂಕು ಕೇಂದ್ರದ ಅನುಷ್ಠಾನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಭರವಸೆ ನೀಡಿದ್ದರು. ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಇದೇ ಮಾತನ್ನು ಪುನರುಚ್ಚರಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಟಿ.ರವಿ ಅವರು ಕಳಸ ಪಟ್ಟಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕಳಸ ತಾಲೂಕು ಕೇಂದ್ರ ಅನುಷ್ಠಾನ ಪ್ರಸ್ತಾಪಿಸಿದ್ದರು. ಕಳಸ ಹೋಬಳಿ ಕೇಂದ್ರಕ್ಕೆ ಅಧಿಕೃತ ಸ್ಥಾನಮಾನ, ಅನುಷ್ಠಾನಕ್ಕೆ ಸರಕಾರದ ಮಟ್ಟದಲ್ಲಿ ಚರ್ಚಿಸಲಾಗಿದೆ. ಈ ಸಂಬಂಧ ಶೀಘ್ರ ಗೆಜೆಟ್ ನೋಟಿಫಿಕೇಷನ್ ಆಗಲಿದೆ. ಬಳಿಕ ಕಳಸ ಅಧಿಕೃತವಾಗಿ ಜಿಲ್ಲೆಯ 9ನೇ ತಾಲೂಕು ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದರು. ಆದರೆ, ಸಿ.ಟಿ.ರವಿ, ವಿಪ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಸಂಸದೆ ಶೋಭಾ, ಶಾಸಕ ಎಂ.ಪಿ.ಕುಮಾರಸ್ವಾಮಿ ಸಾರ್ವಜನಿಕರಿಗೆ ಹೀಗೆ ಭರವಸೆ ನೀಡಿ 2 ವರ್ಷ ಕಳೆದಿದ್ದರೂ ರಾಜ್ಯ ಸರಕಾರ ಕಳಸ ತಾಲೂಕು ಕೇಂದ್ರ ಅನುಷ್ಠಾನ ಪ್ರಕ್ರಿಯೆಗೆ ಇದುವರೆಗೂ ಚಾಲನೆ ನೀಡಿಲ್ಲ ಎಂಬುದು ಸದ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಕಳಸ ತಾಲೂಕು ಕೇಂದ್ರ ಘೋಷಣೆಯಾದ ಸಂದರ್ಭದಲ್ಲಿ ಜಿಲ್ಲಾಡಳಿತ ನೂತನ ತಾಲೂಕು ಕೇಂದ್ರದ ಅನುಷ್ಠಾನ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಕಳಸ ಪಟ್ಟಣದಲ್ಲಿ ಸರಕಾರದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳ ಆರಂಭಕ್ಕಾಗಿ ಸ್ಥಳ ಪರಿಶೀಲನೆಯಂತಹ ಚಟುವಟಿಕೆಗಳೂ ನಡೆಸಿತ್ತು. ಕಳಸ ಹೋಬಳಿ ವ್ಯಾಪ್ತಿಯಲ್ಲಿರುವ ಕುದುರೆಮುಖದಲ್ಲಿರುವ ಟೌನ್‍ಶಿಪ್ ಬಳಿಸಿಕೊಂಡು ಅಲ್ಲಿ ಕಳಸ ತಾಲೂಕು ಕೇಂದ್ರಕ್ಕೆ ಸಂಬಂಧಿಸಿದ ಸರಕಾರಿ ಕಚೇರಿಗಳ ಆರಂಭಕ್ಕೂ ಚಿಂತನೆ ನಡೆಸಲಾಗಿತ್ತು. ಆದರೆ ಸಾರ್ವಜನಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಜಿಲ್ಲಾಡಳಿತದ ಈ ಪ್ರಸ್ತಾವವನ್ನು ಕೈಬಿಟ್ಟಿದೆ. ಬಳಿಕ ತಾಲೂಕು ಕೇಂದ್ರದ ಎಲ್ಲಾ ಸರಕಾರಿ ಕಚೇರಿಗಳನ್ನು ಒಂದೇ ಕಡೆಯಲ್ಲಿ ತೆರೆಯಬೇಕೆಂಬ ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಕಳಸ ಪಟ್ಟಣ ಸಮೀಪದ ಗಣಪತಿಕಟ್ಟೆ ಬಡಾವಣೆ ಬಳಿ ಸುಮಾರು 40 ಎಕರೆ ಜಾಗವನ್ನು ಗುರುತು ಮಾಡಿ ಸರ್ವೇಯನ್ನೂ ಮಾಡಲಾಗಿದೆ. ಆದರೆ ಇದುವರೆಗೂ ಕಳಸ ಪಟ್ಟಣಕ್ಕೆ ತಾಲೂಕು ಕೇಂದ್ರದ ಯಾವುದೇ ಸರಕಾರಿ ಕಚೇರಿಗಳು ಕಾರ್ಯಾರಂಭ ಮಾಡಿಲ್ಲ. ತಾತ್ಕಾಲಿಕ ಸರಕಾರಿ ಕಚೇರಿಗಳನ್ನು ಎಲ್ಲ ಆರಂಭಿಸುವುದೆಂಬ ಬಗ್ಗೆಯೂ ಅನಿಶ್ಚಿತತೆ ನಿರ್ಮಾಣವಾಗಿದೆ.

ನೂತನ ಕಳಸ ತಾಲೂಕಿಗೆ ಕಳಸ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯತ್‍ಗಳಲ್ಲದೇ ಬಾಳೂರು ಹೋಬಳಿ ವ್ಯಾಪ್ತಿಯ ನಿಡುವಾಳೆ, ಮಾಳಿಂಗನಾಡು, ಕಲ್ಮನೆ, ಮಧುಗುಂಡಿ, ಕೂವೆ, ಮರ್ಕಲ್, ಸುಂಕಸಾಲೆ ಮಂತಾದ ಗ್ರಾಮ ಪಂಚಾಯತ್‍ಗಳು ಹಾಗೂ ಎನ್.ಆರ್.ಪುರ ತಾಲೂಕಿನ ಮಾಗುಂಡಿ ಗ್ರಾಪಂ ಸೇರ್ಪಡೆಗೊಳ್ಳಬೇಕು ಎನ್ನುವ ಪ್ರಸ್ತಾವ ಆರಂಭದಲ್ಲಿತ್ತು. ಆದರೆ ನೂತನ ಕಳಸ ತಾಲೂಕಿಗೆ ಈ ಗ್ರಾಮಗಳ ಸೇರ್ಪಡೆಗೆ ಅಲ್ಲಿನ ಜನರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಪ್ರಸ್ತಾವವನ್ನೂ ಕೈಬಿಟ್ಟಿದ್ದು, ಕಳಸ ಹೋಬಳಿ ವ್ಯಾಪ್ತಿಯಲ್ಲಿನ ಗ್ರಾಮಗಳು ಹಾಗೂ ಗ್ರಾಮ ಪಂಚಾಯತ್‍ಗಳೊಂದಿಗೆ ತಾಲೂಕು ರಚನೆಯ ಪ್ರಸ್ತಾವವನ್ನು ಜಿಲ್ಲಾಡಳಿತ ಸರಕಾರಕ್ಕೆ ಕಳುಹಿಸಿದೆ ಎಂದು ತಿಳಿದು ಬಂದಿದ್ದು, ನೂತನ ಕಳಸ ತಾಲೂಕಿಗೆ ಸೇರ್ಪಡೆಗೊಳ್ಳುವ ಹೊಸ ಗ್ರಾಮಗಳ ಬಗ್ಗೆಯೂ ಇಂದಿಗೂ ಅಧಿಕೃತ ಘೋಷಣೆ, ಆದೇಶವಾಗಿಲ್ಲ.

ಈ ಬೆಳವಣಿಗೆಗಳ ಮಧ್ಯೆ ಶಾಸಕ ಕುಮಾರಸ್ವಾಮಿ, ಸಿ.ಟಿ.ರವಿ, ವಿಪ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಇತ್ತೀಚೆಗೆ ಕಳಸ ತಾಲೂಕು ಕೇಂದ್ರದ ಕಾರ್ಯಾರಂಭಕ್ಕೆ ಪೂರಕವಾಗಿ ಈ ಬಾರಿಯ ಬಜೆಟ್ ನಲ್ಲಿ ಅನುದಾನ ನೀಡುವಂತೆ ಸಿಎಂ ಯಡಿಯೂರಪ್ಪ ಅವರನ್ನು ಇತ್ತೀಚೆಗೆ ಕೋರಿದ್ದಾರೆ ಎಂದು ಕಳಸ ಪಟ್ಟಣದ ಸ್ಥಳೀಯ ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದಾರೆ. ಸರಕಾರ ಬಜೆಟ್‍ನಲ್ಲಿ ಕಳಸ ತಾಲೂಕು ಕೇಂದ್ರದ ಅನುಷ್ಠಾನಕ್ಕೆ ಅನುದಾನ ಘೋಷಿಸಿದರೆ ಇಲ್ಲಿನ ಸಾರ್ವಜನಿಕರ ಕನಸು ನನಸಾಗಲಿದೆ. ಈ ಹಿನ್ನೆಲೆಯಲ್ಲಿ ಕಳಸ ಹೋಬಳಿ ವ್ಯಾಪ್ತಿಯ ಜನರ ಕಣ್ಣು ಇದೀಗ ರಾಜ್ಯ ಸರಕಾರದ ಬಜೆಟ್ ಮೇಲೆ ನೆಟ್ಟಿದೆ. 

ಒಟ್ಟಾರೆ ಕಳೆದ 30 ವರ್ಷಗಳಿಂದ ಕಳಸ ತಾಲೂಕು ಕೇಂದ್ರಕ್ಕೆ ಹೋರಾಟ ಮಾಡಿಕೊಂಡು ಬಂದಿದ್ದ ಸಾರ್ವಜನಿಕರ ಕನಸು ನನಸಾಗುವ ಸಂದರ್ಭದಲ್ಲಿ ಸರಕಾರದ ನಿರ್ಲಕ್ಷ್ಯ ಇಲ್ಲಿನ ಜನರನ್ನು ಗೊಂದಲದಲ್ಲಿ ಮುಳುಗುವಂತೆ ಮಾಡಿದೆ. ಕೂಡಲೇ ರಾಜ್ಯ ಸರಕಾರ ಕಳಸ ತಾಲೂಕು ಕೇಂದ್ರದ ಕಾರ್ಯಾರಂಭಕ್ಕೆ ಅಧಿಕೃತವಾಗಿ ಚಾಲನೆ ನೀಡಬೇಕಿದೆ. ಈ ಮೂಲಕ ಕಳಸ ಹೋಬಳಿ ವ್ಯಾಪ್ತಿಯಲ್ಲಿನ ಕುಗ್ರಾಮಗಳ ಆದಿವಾಸಿಗಳು, ಪರಿಶಿಷ್ಟರು ಸೇರಿದಂತೆ ಎಲ್ಲ ಸಮುದಾಯಗಳ ಜನರ ಏಳಿಗೆಗೆ ಕಾರ್ಯಪ್ರವೃತ್ತವಾಗಬೇಕಿದೆ. 

ಕಳಸ ಹೋಬಳಿ ವ್ಯಾಪ್ತಿಯ ಜನರು ತಾಲೂಕು ಕೇಂದ್ರದ ಸೇವೆಗಳಿಗೆ ಪರದಾಡುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕಳಸ ತಾಲೂಕು ಘೋಷಣೆ ಸರಿಯಾದ ಕ್ರಮವಾಗಿದೆ. ತಾಲೂಕು ಕೇಂದ್ರದ ಅನುಷ್ಠಾನಕ್ಕೆ ಈ ಬಾರಿ ಸರಕಾರದ ಬಜೆಟ್‍ನಲ್ಲಿ ಅನುದಾನ ನೀಡುವಂತೆ ಶಾಸಕರಾದ ಸಿ.ಟಿ.ರವಿ, ಎಂ.ಪಿ.ಕುಮಾರಸ್ವಾಮಿ ತಾನೂ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಸಿಎಂ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಳಸ ಭಾಗದ ಜನರ ಕನಸು ನನಸಾಗಲಿದೆ.
- ಎಂ.ಕೆ.ಪ್ರಾಣೇಶ್, ವಿಧಾನ ಪರಿಷತ್ ಉಪಸಭಾಪತಿ

ಕಳಸ ತಾಲೂಕು ಕೇಂದ್ರದ ಕಾರ್ಯರಂಭದ ಕುರಿತು ಈಗಾಗಲೇ ಪ್ರಾಣೇಶ್ ಸೇರಿದಂತೆ ಸ್ಥಳಿಯ ಶಾಸಕರ ಜೊತೆಗೂಡಿ ಬಜೆಟ್‍ನಲ್ಲಿ ಅನುದಾನ ನೀಡುವಂತೆ ಮನವಿಯನ್ನು ನೀಡಲಾಗಿದೆ. ಬಜೆಟ್‍ನಲ್ಲಿಗಿಂತ ಮುಂಚಿತವಾಗಿ ಮತ್ತೊಮ್ಮೆ ಸಿಎಂ ಗಮನವನ್ನು ಸೆಳೆಯಲಿದ್ದೇವೆ. ಸಂಸದೆ ಶೋಭಾ ಅವರೂ ಮುಖ್ಯಮಂತ್ರಿ ಜೊತೆ ಮಾತನಾಡಿದ್ದಾರೆ. ಈ ಬಾರಿ ತಹಶೀಲ್ದಾರರ ನೇಮಕವಾಗಲಿದ್ದು, ತಾಲೂಕು ಕೇಂದ್ರ ಕಾರ್ಯರಾಂಭ ಆಗುವ ಆಶಾಭಾವನೆ ಹೊಂದಿದ್ದೇವೆ.
- ಎಂ.ಎ.ಶೇಷಗಿರಿ, ಬಿಜೆಪಿ ಮುಖಂಡ, ಕಳಸ

ಮೂಡಿಗೆರೆ ತಾಲೂಕು ಹಾಗೂ ಚಿಕ್ಕಮಗಳೂರು ಜಿಲ್ಲಾ ಕೇಂದ್ರಗಳು ಕಳಸ ಹೋಬಳಿ ವ್ಯಾಪ್ತಿಯಿಂದ ದೂರದಲ್ಲಿರುವುದರಿಂದ ಇಲ್ಲಿನ ಜನರಿಗೆ ಸರಕಾರಿ ಸೇವೆಗಳು ಸಮರ್ಪಕವಾಗಿ ಸಿಗದಂತಾಗಿದೆ. ಹೋಬಳಿಯ ಅನೇಕ ಗ್ರಾಮಗಳು ಇಂದಿಗೂ ಕುಗ್ರಾಮಗಳಾಗಿ ಉಳಿದಿವೆ. ಕಳಸ ಹೋಬಳಿಯ ಜನರು ಸರಕಾರಿ ಸೌಲಭ್ಯ, ಜಮೀನು ದಾಖಲೆ ಇತ್ತಾದಿ ಕೆಲಸಗಳಿಗೆ ಕಳಸ ಪಟ್ಟಣಕ್ಕೆ ಬರಲು ಹರಸಾಹಸಪಡುವ ಸ್ಥಿತಿ ಇದೆ. ಇನ್ನು ದೂರದ ಮೂಡಿಗೆರೆ, ಚಿಕ್ಕಮಗಳೂರಿಗೆ ಹೋಗಿ ಬರುವುದು ಎಲ್ಲಿಂದ. ಈ ಕೆಲಸಗಳಿಗಾಗಿ ಜನರು ಇಂದಿಗೂ ದಲ್ಲಾಳಿಗಳು, ಮಧ್ಯವರ್ತಿಗಳನ್ನು ಅವಲಂಬಿಸಿದ್ದಾರೆ. ಈ ಸಮಸ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಲ್ಲಿನ ಎಲ್ಲ ಪಕ್ಷಗಳ ಮುಖಂಡರು, ಹೋರಾಟಗಾರರು, ಸಾರ್ವಜನಿಕರು ಕಳೆದ 30 ವರ್ಷಗಳಿಂದ ತಾಲೂಕು ಕೇಂದ್ರಕ್ಕಾಗಿ ಹೋರಾಡಿದ್ದಾರೆ. ಹಿಂದಿನ ಸರಕಾರ ತಾಲೂಕು ಕೇಂದ್ರವನ್ನಾಗಿ ಘೋಷಿಸಿದೆ. ಆದರೆ ಕಳಸ ತಾಲೂಕು ಕೇವಲ ಘೋಷಣೆಗೆ ಸೀಮಿತವಾಗಿದೆ. ಆಡಳಿತ ಪಕ್ಷದವರು, ಕ್ಷೇತ್ರದ ಶಾಸಕ, ಸಂಸದರು ಕೇವಲ ಭರವಸೆ ನೀಡುತ್ತಿದ್ದಾರೆ. ಕಳಸ ಪಟ್ಟಣದಲ್ಲಿ ನೂತನ ತಾಲೂಕು ಕೇಂದ್ರಕ್ಕೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ. ಸರಕಾರ ಬಜೆಟ್‍ನಲ್ಲಿ ತಾಲೂಕು ಕೇಂದ್ರದ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸದಿದ್ದಲ್ಲಿ ಎಲ್ಲ ಪಕ್ಷಗಳ ಜತೆ ಮತ್ತೆ ಹೋರಾಟ ರೂಪಿಸುತ್ತೇವೆ.
- ಎಂ.ಕೆ.ಲಕ್ಷ್ಮಣ್ ಆಚಾರ್, ಸಿಪಿಐ ಮುಖಂಡ, ಕಳಸ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News