ಈಗ ಬುದ್ಧ, ಮಹಾವೀರ ಮುಂದೆ?

Update: 2021-02-21 19:30 GMT

ಮಠಾಧೀಶರ ಒತ್ತಡಕ್ಕೆ ಮಣಿದು ವಿವಾದಿತ ಎನ್ನಲಾದ ಪಠ್ಯ ಪುಸ್ತಕಗಳನ್ನು ತೆಗೆದು ಹಾಕುವ ಮುನ್ನ ಈ ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸಿದ ಪರಿಣಿತರೊಂದಿಗೆ ಸಚಿವರು ಸಮಾಲೋಚನೆ ಮಾಡಬೇಕಿತ್ತಲ್ಲವೇ? ಸಂವಿಧಾನದ ಆಧಾರದಲ್ಲಿ ಅಸ್ತಿತ್ವಕ್ಕೆ ಬಂದ ಸರಕಾರವೊಂದು ಯಾವುದೋ ಧರ್ಮದ ಮಠಾಧೀಶರ ಒತ್ತಡಕ್ಕೆ ಮಣಿದು ಪಠ್ಯಕ್ರಮ ಪರಿಷ್ಕರಿಸುವುದು ಎಷ್ಟು ಸರಿ? ಈ ಪ್ರಶ್ನೆಗಳಿಗೆ ಉತ್ತರ ಬಯಸುವುದು ಜನಸಾಮಾನ್ಯರ ಹಕ್ಕಾಗಿದೆ.


ರಾಜ್ಯದ ಬಿಜೆಪಿ ಸರಕಾರ ನಾಗಪುರ ಗುರುಪೀಠದ ರಹಸ್ಯ ಕಾರ್ಯಸೂಚಿಗಳನ್ನು ಸದ್ದು ಗದ್ದಲವಿಲ್ಲದೇ ಜಾರಿಗೆ ತರುತ್ತಿದೆ. ಗೋಹತ್ಯೆ ನಿಷೇಧದ ನಂತರ ಶೈಕ್ಷಣಿಕ ರಂಗದ ಮೇಲೆ ಕಣ್ಣು ಹಾಕಿದೆ. ಆರನೇ ತರಗತಿಯ ಸಮಾಜ ವಿಜ್ಞಾನ ಭಾಗದಲ್ಲಿರುವ ‘ಹೊಸ ಧರ್ಮಗಳ ಉದಯ’ ಅಧ್ಯಾಯದಲ್ಲಿನ ಕೆಲವು ಅಂಶಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಮಂತ್ರಾಲಯದ ಸುಭುದೇಂದ್ರ ತೀರ್ಥರು ಸೇರಿದಂತೆ ಹಲವು ಸ್ವಾಮಿಗಳ ಆಗ್ರಹವನ್ನು ಮನ್ನಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮರುದಿನ ಸ್ಪಷ್ಟೀಕರಣ ನೀಡಿರುವ ಸಚಿವರು ‘‘ಬೌದ್ಧ ಮತ್ತು ಜೈನ ಧರ್ಮಗಳ ಪರಿಚಯ ಪಾಠವನ್ನೇನೂ ಕೈ ಬಿಟ್ಟಿಲ್ಲ, ವಿವಾದಿತ ಭಾಗವನ್ನು ಮಾತ್ರ ಕೈ ಬಿಡಲಾಗಿದೆ, ಈ ವಿಚಾರದಲ್ಲಿ ಅನಗತ್ಯ ವಿವಾದ ಹುಟ್ಟು ಹಾಕುವ ಅವಶ್ಯಕತೆ ಇಲ್ಲ’’ ಎಂದು ಹೇಳಿದ್ದಾರೆ.

ಆದರೆ ಸಚಿವರು ಉಲ್ಲೇಖಿಸಿದ ವಿವಾದಿತ ಭಾಗ ಯಾವುದು? ‘‘ಯಾಗ, ಯಜ್ಞಗಳಲ್ಲಿ ಆಹಾರ ಧಾನ್ಯ ಹಾಲು ತುಪ್ಪಗಳನ್ನು, ಹವಿಸ್ಸಿನ ರೂಪದಲ್ಲಿ ದಹಿಸಲಾಗುತ್ತಿತ್ತು. ಇದರಿಂದ ಆಹಾರದ ಅಭಾವ ಸೃಷ್ಟಿಯಾಗುತ್ತಿತ್ತು, ಸಮಾಜದಲ್ಲಿ ಬ್ರಾಹ್ಮಣರೆಂದು ಕರೆಯಲಾಗುತ್ತಿದ್ದ ಪುರೋಹಿತ ವರ್ಗ ಹಲವು ಸವಲತ್ತುಗಳನ್ನು ಹೊಂದಿತ್ತು. ಕ್ಷತ್ರಿಯರು ಕೂಡ ಪ್ರಾಬಲ್ಯಕ್ಕೆ ಬರಲಾರಂಭಿಸಿದರು. ಇವರಿಗೆ ಪ್ರತಿಯಾಗಿ ಬೌದ್ಧ, ಜೈನ ಎಂಬ ಹೊಸ ಧರ್ಮಗಳು ಉದಯವಾದವು’’ ಇವುಗಳನ್ನು ವಿವಾದಿತ ಸಾಲುಗಳು ಎಂದು ಸಚಿವರು ಹೇಳುತ್ತಾರೆ.

ಇಷ್ಟೇ ಅಲ್ಲ. ‘‘ವೇದಗಳ ಕಾಲದಲ್ಲಿ ವರ್ಣ ವ್ಯವಸ್ಥೆಯಿಂದ ಸಾಮಾಜಿಕ ವಿಘಟನೆ ಉಂಟಾಯಿತು. ಇದು ಸಮಾಜದಲ್ಲಿ ತಾರತಮ್ಯಕ್ಕೂ ಕಾರಣವಾಯಿತು. ಬ್ರಾಹ್ಮಣರೆಂದು ಕರೆಯಲ್ಪಡುತ್ತಿದ್ದ ಪುರೋಹಿತರು ಹಲವು ಸವಲತ್ತುಗಳನ್ನು ಹೊಂದಿದ್ದರು. ಇದೇ ಕಾಲದಲ್ಲಿ ಕ್ಷತ್ರಿಯರ ಪ್ರಾಬಲ್ಯವೂ ಹೆಚ್ಚಾಗಿತ್ತು. ಇದಕ್ಕೆ ಪ್ರತಿಯಾಗಿ ಹೊಸ ಧರ್ಮಗಳು ಹುಟ್ಟಿಕೊಂಡವು. ಅವುಗಳಲ್ಲಿ ಬೌದ್ಧ ಮತ್ತು ಜೈನ ಧರ್ಮಗಳು ಪ್ರಮುಖವಾದವುಗಳು’’ ಇವು ತೆಗೆದು ಹಾಕಿದ ಕೆಲ ಸಾಲುಗಳು. ಇವುಗಳಲ್ಲಿ ಆಕ್ಷೇಪಾರ್ಹವಾದುದು ಏನಿದೆಯೋ ಅರ್ಥವಾಗಲಿಲ್ಲ. ಇದ್ದರೂ ಸಂಬಂಧಿಸಿದ ಮಠಾಧೀಶರಿಗೆ ಸಹಜವಾಗಿ ಕೆಲ ಆಕ್ಷೇಪಣೆಗಳಿರುವುದು ಸಹಜ. ಆದರೆ ಸಂವಿಧಾನ ಬದ್ಧವಾಗಿ ಅಸ್ತಿತ್ವಕ್ಕೆ ಬಂದ ಸೆಕ್ಯುಲರ್ ಸರಕಾರ ಮತ್ತು ಸಚಿವರಿಗೆ ಇದು ಯಾಕೆ ಆಕ್ಷೇಪಾರ್ಹ ಎನಿಸಿತೋ ತಿಳಿಯಲಿಲ್ಲ. ಸಚಿವರ ಪಕ್ಷ ಸೆಕ್ಯುಲರ್ ಆಗಿರಲಿಕ್ಕಿಲ್ಲ. ಆದರೆ ಅವರು ವಹಿಸಿಕೊಂಡ ಸಚಿವ ಖಾತೆ ಸೆಕ್ಯುಲರ್ ಆಗಿದೆ ಎಂಬುದನ್ನು ಮರೆಯಬಾರದು.

ಭಾರತದಲ್ಲಿ ವೈದಿಕೇತರ ಧರ್ಮಗಳ ದೊಡ್ಡ ಪರಂಪರೆಯೇ ಇದೆ. ದೇವರ ಅಸ್ತಿತ್ವವನ್ನೇ ಒಪ್ಪದ ಚಾರ್ವಾಕ, ಲೋಕಾಯತ ವೈಚಾರಿಕ ಧಾರೆಗಳು ನಮ್ಮಲ್ಲಿವೆ. ಇವೆಲ್ಲವುಗಳ ಆಚೆ ತಮ್ಮದೇ ಪರಂಪರೆ ಹೊಂದಿರುವ, ಪ್ರಕೃತಿಯನ್ನು ಆರಾಧಿಸುವ ಬುಡಕಟ್ಟು ಸಮುದಾಯಗಳಿವೆ. ನಂತರ ಹುಟ್ಟಿಕೊಂಡ ಸಿಖ್, ಲಿಂಗಾಯತ ಧರ್ಮಗಳಿವೆ. ಹೊರಗಿನಿಂದ ಬಂದರೂ ಈ ನೆಲದ ಧರ್ಮಗಳೇ ಆಗಿರುವ ಇಸ್ಲಾಂ, ಕ್ರೈಸ್ತ, ಯೆಹೂದಿ ಧರ್ಮಗಳಿವೆ.ಅತಿ ಅಲ್ಪಸಂಖ್ಯಾತ ಪಾರ್ಸಿ ಸಮುದಾಯವಿದೆ.ಒಕ್ಕಲಿಗರು, ಮರಾಠರು, ತಮಿಳರು, ಕೊಂಕಣಿಗಳು, ಬ್ಯಾರಿಗಳು, ಬಿಲ್ಲವರು ಹೀಗೆ ಹೆಸರಿರುವ, ಹೆಸರಿಲ್ಲದ ಜನ ಸಮುದಾಯಗಳಿವೆ. ಇವುಗಳೆಲ್ಲ ಸೇರಿ ಬೃಹತ್ ಭಾರತವಾಗಿದೆ. ಇದನ್ನು ಗಮನಿಸಿಯೇ ನಮ್ಮ ಸ್ವಾತಂತ್ರ್ಯ ಹೋರಾಟದ ಹಿರಿಯರು ವಿಶೇಷವಾಗಿ ಗಾಂಧೀಜಿ, ನೆಹರೂ ಮತ್ತು ಅಂಬೇಡ್ಕರ್ ಅವರು ಇದನ್ನು ಮತ ನಿರಪೇಕ್ಷ ಒಕ್ಕೂಟ ರಾಜ್ಯವಾಗಿ ಉಳಿಸಿಕೊಳ್ಳಲು ತೀರ್ಮಾನಿಸಿದರು. ಇದಕ್ಕೆ ಅತ್ಯಂತ ಸೂಕ್ತವಾದ ಸಂವಿಧಾನವನ್ನು ಬಾಬಾಸಾಹೇಬರು ನೀಡಿದರು. ಈಗ ಯಾರೋ ಮಠಾಧೀಶರು, ಜಾತಿ ಜಗತ್ತಿನ ಗುರುಗಳು ಸೇರಿ ಬಹುತ್ವ ಭಾರತದ ಮೇಲೆ ಸನಾತನ ಹಿಂದೂ ಧರ್ಮದ ಟೋಪಿ ಹಾಕಲು ಹೊರಟರೆ ಹೇಗೆ ಒಪ್ಪಿಕೊಳ್ಳಲು ಸಾಧ್ಯ?

 ಹೀಗೆ ಮಠಾಧೀಶರ ಮಾತು ಕೇಳಿ ಶಾಲಾ ಪಠ್ಯ ಪುಸ್ತಕದಿಂದ ಪಾಠಗಳನ್ನು ತೆಗೆದು ಹಾಕುತ್ತಾ ಹೋದರೆ ಇಡೀ ಸಮಾಜ ಶಾಸ್ತ್ರ ಪಠ್ಯವನ್ನೇ ಬದಲಿಸಬೇಕಾಗುತ್ತದೆ ನಮ್ಮ ದೇಶದ ಬಹುತೇಕ ಸಮಾಜ ಸುಧಾರಕರು, ಜಾತಿ ಶ್ರೇಣೀಕರಣದ ವ್ಯವಸ್ಥೆಯನ್ನು ಟೀಕಿಸುವಾಗ ಯಾವ ಮುಲಾಜನ್ನೂ ನೋಡಿಲ್ಲ. ಹೀಗೆ ತೆಗೆದು ಹಾಕುತ್ತ ಹೋದರೆ ‘‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ’’ ಎಂದು ಹೇಳಿದ ಬಸವಣ್ಣ, ಕುಲ, ಕುಲವೆಂದು ಹೊಡೆದಾಡದಿರಿ ಎಂದ ಕನಕದಾಸ, ಎಲ್ಲ ದೇವರೂ ಒಂದೇ ಎಂದು ಹೇಳಿದ ನಾರಾಯಣಗುರುಗಳು, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಹೊಲೆಯರ ಶಿವ ನಾಗಯ್ಯ, ಶಿಶುನಾಳ ಶರೀಫ, ಸರ್ವಜ್ಞ, ಅಂಬೇಡ್ಕರ್ ಇವರೆಲ್ಲರ ಕುರಿತ ಪಠ್ಯಗಳನ್ನು ತೆಗೆಯಬೇಕಾಗುತ್ತದೆ. ಆಗ ಉಳಿಯುವುದು, ಮನುಸ್ಮತಿ ಮತ್ತು ಗೋಳ್ವಾಲ್ಕರ್‌ರ ‘ಚಿಂತನ ಗಂಗಾ’ ಮಾತ್ರ.

ಹೀಗೆ ಪ್ರತಿಯೊಂದು ಧರ್ಮದವರು, ಜಾತಿಯವರು ಆಕ್ಷೇಪಿಸುತ್ತಾ ಹೋದರೆ, ಆ ಆಕ್ಷೇಪಕ್ಕೆ ಮಣಿದು ಪಠ್ಯ ಪುಸ್ತಕಗಳನ್ನು ಬದಲಿಸುತ್ತಾ ಹೋದರೆ ನಮ್ಮ ಶಿಕ್ಷಣ ವ್ಯವಸ್ಥೆ ತಲುಪುವುದೆಲ್ಲಿಗೆ?
ಈಗಾಗಲೇ ನಮ್ಮ ಬಹುತೇಕ ಪಠ್ಯ ಪುಸ್ತಕಗಳಲ್ಲಿ ಸನಾತನ ಹಿಂದೂ ಧರ್ಮಕ್ಕೆ ಪೂರಕವಾದ ಅಂಶಗಳನ್ನು ಸೇರಿಸಲಾಗಿದೆ. ಎರಡೂವರೆ ಸಾವಿರ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಜೈನ ಮತ್ತು ಬೌದ್ಧ ಧರ್ಮಗಳಿಗೆ ಸಾವಿರ ವರ್ಷದಿಂದ ಈಚೆಗೆ ಅಸ್ತಿತ್ವಕ್ಕೆ ಬಂದ ಹಿಂದೂ ಧರ್ಮವೇ ಆಧಾರವೆಂದು ಪದವಿ ಪೂರ್ವ ಶಿಕ್ಷಣದ ಪಠ್ಯದಲ್ಲಿ ಸೇರಿಸಲಾಗಿದೆ.

ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದ ಬಸವಣ್ಣ ತಾನು ಹಾರುವನೆಂದರೆ ಕೂಡಲ ಸಂಗಯ್ಯ ನಗುವನೆಂದು ಮಹಾ ಮಾನವನಾದ. ಜನಿವಾರ ಇಲ್ಲದ ಶಿಶುನಾಳ ಶರೀಫರಿಗೆ ಪಾಠ ಮಾಡುವುದನ್ನು ಮಡಿವಂತ ಬ್ರಾಹ್ಮಣರು ಆಕ್ಷೇಪಿಸಿದಾಗ ಗುರು ಗೋವಿಂದ ಭಟ್ಟರು ಶರೀಫರಿಗೆ ಜನಿವಾರ ಹಾಕಿ ಅಕ್ಷರ ಕಲಿಸಿದರು. ಮಂಗಳೂರಿನ ಕುದ್ಮುಲ್ ರಂಗರಾವ್ ಅವರು ದಲಿತರ ಮಕ್ಕಳಿಗೆ ವಿದ್ಯಾಭ್ಯಾಸ ದ ವ್ಯವಸ್ಥೆ ಮಾಡಿ ಅಕ್ಷರ ಕಲಿತ ದಲಿತನೊಬ್ಬ ದೊಡ್ಡ ಅಧಿಕಾರಿಯಾಗಿ ಕಾರಿನಲ್ಲಿ ಓಡಾಡಿದರೆ ಆ ಕಾರಿನ ಧೂಳು ತನ್ನ ತಲೆಯ ಮೇಲೆ ಬಿದ್ದರೆ ಸಂತೋಷವಾಗುತ್ತದೆ ಎಂದು ಹೇಳಿದರು. ಊರಲ್ಲಿನ ಬಲಿಷ್ಠ ಜಾತಿಗಳ ಅಡ್ಡಿ ಆತಂಕಗಳನ್ನು ಎದುರಿಸಿ ಸತಾರಾದಲ್ಲಿ ಬಾಬಾಸಾಹೇಬರಿಗೆ ಅಕ್ಷರ ಕಲಿಸುವುದು ಮಾತ್ರವಲ್ಲ ತನ್ನ ಸರ್ ನೇಮ್‌ನ್ನೇ ಕೊಟ್ಟ ಅಂಬೇಡ್ಕರ್ ಗುರುಗಳು ಬ್ರಾಹ್ಮಣರಿಗೆ ಮಾದರಿಯಾಗಬೇಕೇ ಹೊರತು, ಜಾತಿ ದ್ವೇಷ, ಮತ ದ್ವೇಷದ ವಿಷವನ್ನು ಮೆದುಳಿಗೆ ಮೆತ್ತುವವರಲ್ಲ.

ಅಷ್ಟಕ್ಕೂ ಮಠಾಧೀಶರ ಒತ್ತಡಕ್ಕೆ ಮಣಿದು ವಿವಾದಿತ ಎನ್ನಲಾದ ಪಠ್ಯ ಪುಸ್ತಕಗಳನ್ನು ತೆಗೆದು ಹಾಕುವ ಮುನ್ನ ಈ ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸಿದ ಪರಿಣಿತರೊಂದಿಗೆ ಸಚಿವರು ಸಮಾಲೋಚನೆ ಮಾಡಬೇಕಿತ್ತಲ್ಲವೇ? ಸಂವಿಧಾನದ ಆಧಾರದಲ್ಲಿ ಅಸ್ತಿತ್ವಕ್ಕೆ ಬಂದ ಸರಕಾರವೊಂದು ಯಾವುದೋ ಧರ್ಮದ ಮಠಾಧೀಶರ ಒತ್ತಡಕ್ಕೆ ಮಣಿದು ಪಠ್ಯಕ್ರಮ ಪರಿಷ್ಕರಿಸುವುದು ಎಷ್ಟು ಸರಿ? ಈ ಪ್ರಶ್ನೆಗಳಿಗೆ ಉತ್ತರ ಬಯಸುವುದು ಜನಸಾಮಾನ್ಯರ ಹಕ್ಕಾಗಿದೆ.
ಪ್ರಗತಿಪರ ಅಥವಾ ಮುಕ್ತ ವಿಚಾರದಲ್ಲಿ ನಂಬಿಕೆ ಇರುವ ಸಂಘ ಸಂಸ್ಥೆಗಳು, ಸಂಘಟನೆಗಳು ಶಿಕ್ಷಣದ ಸನಾತನೀಕರಣದ ಬಗ್ಗೆ ಎಚ್ಚರವಾಗಿರಬೇಕು, ಯಾವ್ಯಾವ ಪಠ್ಯ ಪುಸ್ತಕಗಳಲ್ಲಿ ಸಂವಿಧಾನ ವಿರೋಧಿ ಅಂಶಗಳು ಎಲ್ಲೆಲ್ಲಿವೆ ಎಂಬುದನ್ನು ಪತ್ತೆ ಹಚ್ಚಲು ತಜ್ಞರ ಒಂದು ಸರಕಾರೇತರ ಸಮಿತಿಯನ್ನು ರಚಿಸಿ ಲೋಪ, ದೋಷಗಳನ್ನು ಗುರುತಿಸಬೇಕು. ನಂತರ ಅವುಗಳನ್ನು ಸರಿಪಡಿಸಲು ಹೋರಾಟ ಮಾಡಬೇಕು.

ಹೋರಾಟಕ್ಕೆ ಯುವಕರು ಬೇಕು. ಆದರೆ ದುರಂತವೆಂದರೆ ಬಹುತೇಕ ಯುವಕರು ಬ್ರೈನ್ ವಾಶ್‌ಗೊಳಗಾಗಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇದೊಂದೇ ಈಗ ಉಳಿದ ದಾರಿಯಾಗಿದೆ.
ಶಾಲಾ ಪಠ್ಯಕ್ರಮದಿಂದ ಗೌತಮ ಬುದ್ಧ ಮತ್ತು ಮಹಾವೀರರ ಕುರಿತ ಹಾಗೂ ಬೌದ್ಧ ಮತ್ತು ಜೈನ ಧರ್ಮದ ಕುರಿತ ಪಾಠಗಳನ್ನು ತೆಗೆದು ಹಾಕಿದ ನಂತರ ನನ್ನ ಸ್ನೇಹಿತರೊಬ್ಬರು ‘‘ಬುದ್ಧ, ಮಹಾವೀರರಿಗೆ ಈ ಗತಿಯಾದರೆ, ಪೈಗಂಬರ್, ಏಸು ಕ್ರಿಸ್ತರ ಪರಿಸ್ಥಿತಿ ಏನು?’’ ಎಂದು ಕೇಳಿದರು. ಅವರ ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ. ನಾವೆಲ್ಲ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಲಾಗದ ಕಾಲಘಟ್ಟದಲ್ಲಿ ಇದ್ದೇವೆ.

  ದೇಶ ಈ ಬಿಕ್ಕಟ್ಟಿನಿಂದ ಪಾರಾಗುವುದು ಅಷ್ಟು ಸುಲಭವಲ್ಲ. ಕಳೆದ ಎಂಭತ್ತು ವರ್ಷಗಳಿಂದ ಆರೆಸ್ಸೆಸ್ ಕಾರ್ಯಕರ್ತರ ಅಪಾರ ಪರಿಶ್ರಮದಿಂದ ಹಿಂದೂ ರಾಷ್ಟ್ರ ನಿರ್ಮಾಣದ ಗುರಿಯಿಟ್ಟುಕೊಂಡು ಬಲಿಷ್ಠ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಸೇರಿ ಸರಕಾರದ ಎಲ್ಲ ಇಲಾಖೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ನ್ಯಾಯಾಂಗ, ಕಾರ್ಯಾಂಗ, ಗುಡಿ ಗುಂಡಾರ, ಅಷ್ಟೇ ಅಲ್ಲ ಸೇನಾ ಪಡೆಗಳಲ್ಲಿ ಕೂಡ ಅವರ ಬೆಂಬಲಿಗರಿದ್ದಾರೆ. ಅವರನ್ನು ಎದುರಿಸುವ ಕಾರ್ಯತಂತ್ರ ರೂಪಿಸುವಲ್ಲಿ ಎಡಪಂಥೀಯ ಪ್ರಗತಿಪರ ಸಂಘಟನೆಗಳು, ಸಂವಿಧಾನ ಪರ ವ್ಯಕ್ತಿ, ಶಕ್ತಿಗಳು ಈ ವರೆಗೆ ಯಶಸ್ವಿಯಾಗಿಲ್ಲ. ಮುಖ್ಯವಾಗಿ ಹೊಸ ಪೀಳಿಗೆಯ ಯುವಕರಲ್ಲಿ ಬದಲಾವಣೆ ಆದರೆ ಮಾತ್ರ ದೇಶ ಈ ಅಪಾಯದಿಂದ ಪಾರಾಗಬಹುದು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News