ಕವಿಮನಸ್ಸಿನ ಪತ್ರಕರ್ತನಿಗೆ ಪ್ರತಿಷ್ಠಿತ ಪ್ರಶಸ್ತಿ

Update: 2021-02-25 19:30 GMT

ಕನ್ನಡ ನಾಡು ಕಂಡ ಓರ್ವ ಅಪ್ರತಿಮ ಪತ್ರಕರ್ತ, ಚಿಂತಕ ವಡ್ಡರ್ಸೆ ರಘುರಾಮ ಶೆಟ್ಟಿಯವರ ಗರಡಿಯಲ್ಲಿ ಪಳಗಿದ್ದ ಜಿ.ಕೆ.ರಮೇಶ್ ಮುಂಗಾರು ಪತ್ರಿಕೆಯ ಬೆಳವಣಿಗೆಗೆ, ಮುಂಬೈಯಿಂದ ಅಪಾರವಾದ ಕೊಡುಗೆಯನ್ನಿತ್ತವರು. ಮುಂದೆ ಮುಂಗಾರು ಪತ್ರಿಕೆಯ ಎಲ್ಲ ಏಳು-ಬೀಳುಗಳಲ್ಲಿ ಭಾಗಿಯಾದವರು. ಅವರು ಮುಂಗಾರುವಿನಲ್ಲಿದ್ದ ನಾಲ್ಕು ವರ್ಷಗಳು ಮುಂಬೈ ಕನ್ನಡಿಗರಿಗೆ ಪತ್ರಿಕೆ ಹೊಸ ದಿಕ್ಕು-ದೆಸೆ ತೋರಿಸಿತ್ತು. ಇಲ್ಲಿನ ಸಾಂಸ್ಕೃತಿಕ ಬದುಕು, ನಾಟಕಗಳ ವಿಮರ್ಶೆ, ಕೃತಿಗಳ ವಿಮರ್ಶೆ, ಸಂಘ-ಸಂಸ್ಥೆಗಳ ಹುಟ್ಟು-ಬೆಳವಣಿಗೆಯ ಸಚಿತ್ರ ಲೇಖನ, ಇಲ್ಲಿನ ಕನ್ನಡಿಗರ ಏಳು-ಬೀಳುಗಳ ವಿವರ ಎಲ್ಲವೂ ಒಳನಾಡಿನಲ್ಲಿಯೂ ತಿಳಿಯುವಂತಾಯಿತು. ಆನಂತರ ಸುಮಾರು ಒಂಭತ್ತು ವರ್ಷ ‘ಮೊಗವೀರ’ ಪತ್ರಿಕೆಯ ಸಂಪಾದಕರಾಗಿದ್ದರಲ್ಲದೆ, ಹಲವಾರು ವರ್ಷ ಸಲಹೆಗಾರರಾಗಿದ್ದವರು ಜಿ.ಕೆ. ರಮೇಶ್.



‘‘ಮೊನ್ನೆ ಮೊನ್ನೆ ಡಿ.ಎನ್. ರೋಡ್‌ನಲ್ಲಿ ರಮೇಶಣ್ಣನಿಗೆ ಯಾರೋ ಗೂಂಡಾಗಳು ತಲವಾರಿನಿಂದ ಹೊಡೆದರು’’ ಎಂಬ ಒಕ್ಕಣಿಕೆ ‘ಪಾಠಕ್’ ಅನ್ನುವ ಕಥಾ ಸಂಕಲನದ ಒಂದು ಕತೆಯಲ್ಲಿ ಬರುತ್ತದೆ. ಅದು ಕಳೆದ ಶತಮಾನದ ಎಂಭತ್ತು-ತೊಂಭತ್ತರ ದಶಕದಲ್ಲಿ ಗಿಜಿಗುಡುವ ಡಿ.ಎನ್. ರೋಡ್‌ನಲ್ಲಿ ನಡು ಮಧ್ಯಾಹ್ನ ನಡೆದಿದ್ದ ಘಟನೆ. ಆ ಗೂಂಡಾಗಳ ತಲವಾರನ್ನು ಎಡಗೈಯಲ್ಲಿ ಹಿಡಿದು ಗೂಂಡಾಗಳನ್ನು ನೇರ ದೃಷ್ಟಿಯಿಂದ ಆ ವ್ಯಕ್ತಿ ನೋಡಿದಾಗ ಆ ಗೂಂಡಾಗಳು ಅಲ್ಲಿಂದ ಪಲಾಯನ ಗೈಯುತ್ತಾರೆ. ತಲವಾರಿನಿಂದ ಅಂದು ಕಿವಿಯ ಭಾಗ ಹಾಗೂ ‘ಅಂಗೈ’ಗೆ ಗಾಯವಾಗಿಸಿಕೊಂಡ ಆ ವ್ಯಕ್ತಿ ಬೇರಾರೂ ಅಲ್ಲ; ಈ ವರ್ಷ ನೀಡಲಾದ ಪ್ರತಿಷ್ಠಿತ ‘ಕೆ.ಟಿ.ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ’ ಪಡೆದಿರುವ ಕತೆಗಾರ, ಪತ್ರಕರ್ತ, ಕವಿಮನಸ್ಸಿನ ಜಿ.ಕೆ. ರಮೇಶ್.

ಮುಂಬೈ ಕಂಡ ಓರ್ವ ಅಪರೂಪದ ಪತ್ರಕರ್ತ ಕೆ.ಟಿ.ವೇಣುಗೋಪಾಲ್, ಹಲವು ಪತ್ರಕರ್ತರಿಗೆ ಆದರ್ಶರಾದವರು. ‘ಕಪಸಮ’ದ ಪ್ರಾರಂಭದ ಹಂತದಲ್ಲಿ ರೋನ್ಸ್ ಬಂಟ್ವಾಳ ಅವರಿಗೆ ಸಲಹೆ ಮಾರ್ಗದರ್ಶನಗಳನ್ನು ನೀಡಿದ್ದಲ್ಲದೆ, ಸಂಘ ಅಸ್ತಿತ್ವಕ್ಕೆ ಬಂದನಂತರ ಸಂಘದ ನಿಯಮಾವಳಿಗಳ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದ್ದವರು ಕೆ.ಟಿ.ವೇಣುಗೋಪಾಲ್. ಅವರ ಹೆಸರಿನಲ್ಲಿ ಅವರ ಪತ್ನಿ ತುಳಸಿ ವೇಣುಗೋಪಾಲ್ ಹಾಗೂ ಮಗ ವಿಕಾಸ್ ವೇಣುಗೋಪಾಲ್ ಕೊಡಮಾಡಿದ ಒಂದುವರೆ ಲಕ್ಷ ರೂಪಾಯಿಗಳಿಗೆ ಸಂಘವು ಒಟ್ಟು ಮೂರು ಲಕ್ಷ ಐವತ್ತು ಸಾವಿರ ರೂಪಾಯಿಗಳನ್ನು ಸೇರಿಸಿ ಠೇವಣಿಯಲ್ಲಿಟ್ಟು ಅದರ ಬಡ್ಡಿಯಿಂದ ಪ್ರತಿವರ್ಷ ರಾಷ್ಟ್ರಮಟ್ಟದಲ್ಲಿ ಓರ್ವ ಅರ್ಹ ಪತ್ರಕರ್ತನನ್ನು ಆರಿಸಿ ಈ ಪ್ರಶಸ್ತಿ ನೀಡುತ್ತದೆ. ಈ ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿ ಮೊತ್ತವನ್ನೊಳಗೊಂಡಿದೆ. ಒಂದು ವರ್ಷ ಮಹಾರಾಷ್ಟ್ರದ ಪತ್ರಕರ್ತನಾದರೆ ಮುಂದಿನ ವರ್ಷ ಮಹಾರಾಷ್ಟ್ರದಿಂದ ಹೊರಗೆ ಈ ಪ್ರಶಸ್ತಿ ನೀಡಲಾಗುವುದೆಂದು ಸಮಿತಿ ತೀರ್ಮಾನಿಸಿದೆ. ಕಳೆದ ವರ್ಷ ಹಿರಿಯ ಪತ್ರಕರ್ತ ವಸಂತ್ ಎಸ್. ಕಲಕೋಟಿಯವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಿದ್ದರೆ ಈ ವರ್ಷ ಕೊರೋನದ ನಿಮಿತ್ತ ಮಹಾರಾಷ್ಟ್ರದ ಪತ್ರಕರ್ತರಿಗೆ ನೀಡುವುದಾಗಿ ಸಂಘ ತಿಳಿಸಿದಂತೆ ಡಾ. ಸುನೀತಾ ಎಂ. ಶೆಟ್ಟಿಯವರ ಕಾರ್ಯಾಧ್ಯಕ್ಷತೆಯಲ್ಲಿ ಪ್ರಶಸ್ತಿ ಸಮಿತಿಯು ಜಿ.ಕೆ.ರಮೇಶ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು.

ಸಾಹಿತ್ಯದಲ್ಲಿ ಒಲವಿರಿಸಿಕೊಂಡಿರುವ ಅರ್ಥಶಾಸ್ತ್ರದ ಪದವೀಧರ ಜಿ.ಕೆ. ರಮೇಶ್ ಮುಂಬೈ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮೂಲತಃ ಅವಿಭಜಿತ ದಕ್ಷಿಣ ಕನ್ನಡದ ಪಡುಬಿದ್ರಿಯ ಕಾಡಿಪಟ್ಣದವರಾದ ಜಿ.ಕೆ.ಗುರುವ ಕರ್ಕೇರ ಹಾಗೂ ಕೂಸು ಬಾ ಕರ್ಕೇರ ಅವರ ಸುಪುತ್ರ. ಪಡುಬಿದ್ರಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಮೀನುಗಾರಿಕಾ ಪ್ರೌಢಶಾಲೆಯಲ್ಲಿ ಮುಗಿಸಿ 1964ರಲ್ಲಿ ಕರ್ಮಭೂಮಿ ಮುಂಬೈಗಾಗಮಿಸಿದ್ದರು. ಕಠಿಣ ಪರಿಶ್ರಮಿ ಜಿ.ಕೆ.ಯಂಗ್‌ಮೆನ್ಸ್ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ ಹಗಲಿನಲ್ಲಿ ಸೆಂಟ್ರಲ್ ಬ್ಯಾಂಕಿನಲ್ಲಿ ದುಡಿಯುತ್ತಾ ಸುಂದರವಾದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಂಡರು.

ರಾತ್ರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಬವಣೆ ಚೆನ್ನಾಗಿ ಅರಿತಿರುವ ಇವರು ಸರಸ್ವತಿ ನೈಟ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನಲ್ಲಿ ಅಧ್ಯಾಪನವನ್ನು ಮಾಡಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿದ್ದರು. ಅಧ್ಯಾಪಕರ ಕೊರತೆಯಿಂದ ಸಿದ್ದಾರ್ಥ ಕಾಲೇಜಿನಲ್ಲಿ ಕನ್ನಡ ವಿಭಾಗ ಮುಚ್ಚಲ್ಪಡುವ ಸ್ಥಿತಿಗೆ ಬಂದಾಗ ಅಲ್ಲಿ ಕನ್ನಡ ಉಳಿಸುವ ನಿಟ್ಟಿನಲ್ಲಿ ಕನ್ನಡದ ಶಿಕ್ಷಕರಾಗಿ ಸೇರಿದುದು ಮಾತ್ರವಲ್ಲದೆ ಅಲ್ಲಿನ ಕನ್ನಡ ಸಂಘಕ್ಕೂ ಹೊಸ ಚೈತನ್ಯ ನೀಡಿದವರು; ಅಲ್ಲಿನ ಭಿತ್ತಿ ಪತ್ರಿಕೆಗೆ ಹೊಸ ರೂಪವನ್ನು ಕೊಟ್ಟವರು.

ಓರ್ವ ರಂಗನಟನೂ ಆಗಿದ್ದ ಜಿ.ಕೆ., ಸದಾನಂದ ಸುವರ್ಣ, ಡಾ. ಸೀತಾರಾಮ್ ಶೆಟ್ಟಿ ಮೊದಲಾದವರ ಗರಡಿಯಲ್ಲಿ ಪಳಗಿ ತಾನೂ ನಿರ್ದೇಶನಕ್ಕೆ ಇಳಿದದ್ದು ಇಂದು ಇತಿಹಾಸ.

1997ರಲ್ಲಿ ‘ಮುಂಬೈ ಚುಕ್ಕಿ ಸಂಕುಲ’ ಎಂಬ ಸಂಸ್ಥೆಯು ತನ್ನ ಸದಸ್ಯರ ಚೊಚ್ಚಲ ಕತಾ ಸಂಕಲನ ‘ಚುಕ್ಕಿ ಕತೆಗಳು’ ಕೃತಿ ಬಿಡುಗಡೆಗೊಳಿಸಿದ್ದ ಸಂದರ್ಭದಲ್ಲಿ ಹೊರತಂದ ಸ್ಮರಣಿಕೆಯಲ್ಲಿ ಅತಿಥಿ ರಮೇಶ್ ಅವರನ್ನು ಪರಿಚಯಿಸಿದ ಪರಿಯನ್ನು ಗಮನಿಸೋಣ:

‘‘ಹದಿನೈದು ವರ್ಷಗಳ ಹಿಂದೆ ಮುಂಬೈ ಕನ್ನಡ ಸಾಹಿತ್ಯ ರಂಗದಲ್ಲಿ ಪ್ರತಿಷ್ಠಿತ ಹಾಗೂ ಕಿರಿಯ ಬರಹಗಾರರ ನಡುವೆ ದೊಡ್ಡ ಕಂದಕವೊಂದಿತ್ತು. ಅವರಿಗೆ ಇವರು ಅಪರಿಚಿತರು. ಮಾರ್ಗದರ್ಶನದ ಕೊರತೆ, ಕೀಳರಿಮೆ ಇವರಲ್ಲಿ, ಆಗ ಇಂತಹ ಕಿರಿಯರಿಗೆ ಮಾರ್ಗದರ್ಶಕರಾಗಿ, ಅವರ ಕತೆ, ಕವಿತೆ, ಲೇಖನಗಳೂ ಪತ್ರಿಕೆಗಳಲ್ಲಿ ಪ್ರಕಟಗೊಳ್ಳಲು ಸಾಧ್ಯ ಎನ್ನುವ ಭರವಸೆಯನ್ನು ಮೂಡಿಸಿದ್ದ ಜಿ.ಕೆ. ರಮೇಶ್ ಸ್ವತಃ ಸೃಜನಶೀಲ ಬರಹಗಾರರು.’’

ಪ್ರಾರಂಭದಿಂದಲೂ ಕತೆಗಳನ್ನು ನೆಚ್ಚಿಕೊಂಡು ಬಂದಿರುವ ಜಿ.ಕೆ. ರಮೇಶ್ ಅವರ ಬಹಳಷ್ಟು ಕತೆಗಳು ದೊರೆಯದೆ ಹೋಗಿವೆ. ಅಳಿದುಳಿದ ಕೆಲವೊಂದು ಕತೆಗಳನ್ನು ಆರಿಸಿ ಮೊಗವೀರ ವ್ಯವಸ್ಥಾಪಕ ಮಂಡಳಿಯು ‘ಮೊಗವೀರ’ ಪತ್ರಿಕೆಯ ‘ಷಷ್ಟಬ್ದಿ’ ನಿಮಿತ್ತ ಜಿ.ಕೆ. ರಮೇಶ್ ಅವರ ಕೆಲವೊಂದು ಕತೆಗಳನ್ನು ಸಂಕಲಿಸಿ ‘ಕಣ್ಣುಗಳು’ ಕಥಾ ಸಂಕಲನವನ್ನು ಸಹೃದಯರ ಕೈಗೆ ನೀಡಿರುವುದು ಉಲ್ಲೇಖಾರ್ಹ.

ಕನ್ನಡ ನಾಡು ಕಂಡ ಓರ್ವ ಅಪ್ರತಿಮ ಪತ್ರಕರ್ತ, ಚಿಂತಕ ವಡ್ಡರ್ಸೆ ರಘುರಾಮ ಶೆಟ್ಟಿಯವರ ಗರಡಿಯಲ್ಲಿ ಪಳಗಿದ್ದ ಜಿ.ಕೆ.ರಮೇಶ್ ಮುಂಗಾರು ಪತ್ರಿಕೆಯ ಬೆಳವಣಿಗೆಗೆ, ಮುಂಬೈಯಿಂದ ಅಪಾರವಾದ ಕೊಡುಗೆಯನ್ನಿತ್ತವರು. ರಮೇಶ್ ಅವರನ್ನು ಮಂಗಳೂರಿಗೆ ಕರೆಸಿಕೊಂಡ ವಡ್ಡರ್ಸೆಯವರು ಮಂಗಳೂರಿಗೆ ಆಗಮಿಸಿದ್ದ, ಅಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರ ಮಂಗಳೂರು ಸರ್ಕಿಟ್ ಹೌಸ್‌ನಲ್ಲಿ ನಡೆದಿದ್ದ ಪತ್ರಿಕಾಗೋಷ್ಠಿಯ ವರದಿಗಾಗಿ ಕಳುಹಿಸಿದ್ದರು. ಅಂದಿನ ಗೋಷ್ಠಿಯಲ್ಲಿ ಭಾಗವಹಿಸಿ ಅದರ ಅತ್ಯುತ್ತಮ ಎನಿಸುವ ವರದಿಯನ್ನು ಒಪ್ಪಿಸಿ ವಡ್ಡರ್ಸೆಯವರಿತ್ತ ಪರೀಕ್ಷೆಯನ್ನು ಯಶಸ್ವಿಗೊಳಿಸಿದ್ದರು. ಮುಂದೆ ಮುಂಗಾರು ಪತ್ರಿಕೆಯ ಎಲ್ಲ ಏಳು-ಬೀಳುಗಳಲ್ಲಿ ಭಾಗಿಯಾದವರು ಜಿ.ಕೆ. ರಮೇಶ್. ತುಳಿತಕ್ಕೊಳಗಾದವರು, ಅನ್ಯಾಯಕ್ಕೊಳಗಾದವರ ಪರವಾಗಿ ಸದಾ ನಿಲ್ಲುತ್ತಿದ್ದ ಜಿ.ಕೆ.ಯವರು ಒಮ್ಮೆ ಅನ್ಯಾಯಕ್ಕೊಳಗಾಗಿ ಜೀವ ಕಳಕೊಂಡ ಒಂದು ಹೆಣ್ಣಿನ ಪರವಾಗಿ ವರದಿಗೆಂದು ಹೋಗಿ ಮನೆಗೆ ಹಿಂದಿರುಗಿ ಬರುವುದರೊಳಗಾಗಿ ಗಂಡಿನ ಮನೆಯವರಿಂದ ಮನೆಗೆ ಬೆದರಿಕೆಯ ಕರೆ. ಆ ಕರೆಗೆ ಒಂದಿನಿತೂ ವಿಚಲಿತಗೊಳ್ಳದೆ ಆ ವರದಿ ಬರುವಂತೆ ಮಾಡಿದವರು ಜಿ.ಕೆ.ರಮೇಶ್. ಅವರು ಮುಂಗಾರುವಿನಲ್ಲಿದ್ದ ನಾಲ್ಕು ವರ್ಷಗಳು ಮುಂಬೈ ಕನ್ನಡಿಗರಿಗೆ ಪತ್ರಿಕೆ ಹೊಸ ದಿಕ್ಕು-ದೆಸೆ ತೋರಿಸಿತ್ತು. ಇಲ್ಲಿನ ಸಾಂಸ್ಕೃತಿಕ ಬದುಕು, ನಾಟಕಗಳ ವಿಮರ್ಶೆ, ಕೃತಿಗಳ ವಿಮರ್ಶೆ, ಸಂಘ-ಸಂಸ್ಥೆಗಳ ಹುಟ್ಟು-ಬೆಳವಣಿಗೆಯ ಸಚಿತ್ರ ಲೇಖನ, ಇಲ್ಲಿನ ಕನ್ನಡಿಗರ ಏಳು-ಬೀಳುಗಳ ವಿವರ ಎಲ್ಲವೂ ಒಳನಾಡಿನಲ್ಲಿಯೂ ತಿಳಿಯುವಂತಾಯಿತು.

ವೀರಪ್ಪಮೊಯ್ಲಿ ಮೊದಲ್ಗೊಂಡು ಹಲವಾರು ರಾಜಕಾರಣಿಗಳ, ಶ್ರೇಷ್ಠ ಸಾಹಿತಿಗಳ ಸಂದರ್ಶನ; ಅದರಲ್ಲೂ ವೀರೇಂದ್ರ ಹೆಗ್ಡೆಯವರ ‘ವಿಜ್ಞಾನ ಹಾಗೂ ಧರ್ಮ’ದ ಕುರಿತು ಸಂದರ್ಶನ ಒಂದು ಅತ್ಯುತ್ತಮ ಸಂದರ್ಶನ ಹೇಗಿರಬೇಕು ಎಂಬುದಕ್ಕೆ ನಿದರ್ಶನ.

ಸುಮಾರು ಒಂಭತ್ತು ವರ್ಷ ‘ಮೊಗವೀರ’ ಪತ್ರಿಕೆಯ ಸಂಪಾದಕರಾಗಿದ್ದು, ಹಲವಾರು ವರ್ಷ ಸಲಹೆಗಾರರಾಗಿದ್ದ ಜಿ.ಕೆ. ರಮೇಶ್ ಅವರ ಕಾರ್ಯ ವೈಖರಿಗೆ ಡಾ. ಜಿ.ಪಿ. ಕುಸುಮಾ, ತಮ್ಮ ಎಂ.ಫಿಲ್. ಮಹಾಪ್ರಬಂಧದಲ್ಲಿ ಉಲ್ಲೇಖಿಸಿರುವುದನ್ನು ನಾವು ಗಮನಿಸಬೇಕು: ‘‘ಇವರು ಸಂಪಾದಕರಾಗಿದ್ದಾಗ ‘ಮೊಗವೀರ’ ಪತ್ರಿಕೆಯು ಹೊರನಾಡಾದ ಮುಂಬೈಯಲ್ಲಿ ಒಂದು ಶ್ರೇಷ್ಠ ದರ್ಜೆಯ ಮಾಸ ಪತ್ರಿಕೆಯಾಗಿ ಕನ್ನಡಕ್ಕೆ ವಿಶೇಷ ರೀತಿಯಲ್ಲಿ ಸೇವೆ ಸಲ್ಲಿಸಿತ್ತು.... ಇವರ ಕಾಲಾವಧಿಯಲ್ಲಿ ಪತ್ರಿಕೆಯ ವಸ್ತು-ವಿಷಯಗಳಲ್ಲಿ ಆಯ್ಕೆ, ವಿನ್ಯಾಸ ಆಯಾ ಸಂದರ್ಭಕ್ಕೆ ತಕ್ಕಂತೆ ಹೊಸತೆನಿಸತೊಡಗಿತು. ಹೊಸ ಹೊಸ ವಿಷಯಗಳಿಗೆ ಸ್ಪಂದಿಸುವ ಲೇಖಕರ ಸಂಖ್ಯೆ ಹೆಚ್ಚಾಯಿತು.’’

ಹೌದು! ಇವರು ಸಬಿಕು ಅವರು ‘ಮೊಗವೀರ’ದ ಸಂಪಾದಕರಾಗಿದ್ದಾಗ ಜಿ.ಕೆ. ರಮೇಶ್ ಉಪಸಂಪಾದಕರಾಗಿದ್ದು ಅಂದಿನ ದಿನಗಳಿಂದಲೇ ಹೊಸ ಲೇಖಕರಿಗೆ ಸೂಕ್ತ ಮಾರ್ಗದರ್ಶನ, ಸಾಹಿತ್ಯದ ಅರಿವನ್ನು ಮೂಡಿಸಿ, ಹೊಸಬರ ಬರಹಗಳು ಮೊಗವೀರದಲ್ಲಿ ಬೆಳಕು ಕಾಣುವುದಕ್ಕೆ ಕಾರಣರಾಗಿ ದ್ದಾರೆ. ಅವರಲ್ಲಿ ಚಂದ್ರಶೇಖರ ರಾವ್, ಜಿ.ಪಿ.ಕುಸುಮಾ, ಗೋಪಾಲ್ ತ್ರಾಸಿ, ಸಾ. ದಯಾ, ವಿದ್ಯಾಧರ ಮುತಾಲಿಕ ದೇಸಾಯಿ, ಡಾ. ಕರುಣಾಕರ ಶೆಟ್ಟಿ ಮೊದಲಾದವರ ಹೆಸರುಗಳು ಉಲ್ಲೇಖಾರ್ಹ. ಹೀಗೆ ಸದಾ ಹೊಸ ಲೇಖಕರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುತ್ತಾ ಬಂದಿದ್ದ ಜಿ.ಕೆ. ಉಪಸಂಪಾದಕರಾಗಿದ್ದಾಗ ‘ಮೊಗವೀರ’ದ ಲೇಖಕರ ಬಳಗದ ಸ್ನೇಹ ಮಿಲನ ಕಾರ್ಯಕ್ರಮ ಹಮ್ಮ್ಮಿಕೊಂಡಿದ್ದು ದಾಖಲಾರ್ಹ ಸಂಗತಿ. ‘ಮೊಗವೀರ’ ಪತ್ರಿಕೆ ‘ಸ್ವರ್ಣ ಮಹೋತ್ಸವ’ ಆಚರಿಸಿದ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸಿದ ಜಿ.ಕೆ., ಆ ಸಂದರ್ಭ ಬರೆದಿದ್ದ ಮೊಗವೀರ ಐವತ್ತರ ಸಂಭ್ರಮಕ್ಕೆ ಕಾಲಿಟ್ಟಿದ್ದು; ಅದರ ಹುಟ್ಟು ಬೆಳವಣಿಗೆಯ ಸಚಿತ್ರ ಲೇಖನವನ್ನು ಗಮನಿಸಿ ಹೆಸರಾಂತ ಸಾಹಿತಿ ಅಂಕಣಕಾರ ಹಾ.ಮಾ.ನಾ. ಅವರು ತಮ್ಮ ಸಂಯುಕ್ತ ಕರ್ನಾಟಕದ ಅಂಕಣದಲ್ಲಿ ಮೊಗವೀರ ಪತ್ರಿಕೆಯಲ್ಲಿ ಬಗ್ಗೆ ಅಭಿಮಾನ ಪೂರ್ವಕವಾಗಿ ಬರೆದದ್ದು ಅದರಿಂದ ಒಳನಾಡಿನಲ್ಲೂ ‘ಮೊಗವೀರ’ ಗೌರವಕ್ಕೆ ಪಾತ್ರವಾಗಿ ‘ಕರ್ನಾಟಕ ಪತ್ರಿಕಾ ಅಕಾಡಮಿ’ಯ ವರ್ಷದ ಪುರಸ್ಕಾರಕ್ಕೂ ಪಾತ್ರವಾದುದು ಮುಂಬೈ ಕನ್ನಡಿಗರಿಗೆ ಹೆಮ್ಮೆಯ ಗರಿ. ಅದರ ಹಿಂದಿನ ಶಕ್ತಿ ಜಿ.ಕೆ. ರಮೇಶ್.

‘ಇಲ್ಲಿನ ಪತ್ರಕರ್ತರು ಊರಿನ ಜೊತೆ ನಂಟನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿದ್ದಾರೆ’ ಎಂದು ‘ಮಾಧ್ಯಮಶ್ರೀ’ ಪ್ರಶಸ್ತಿಯನ್ನು ಪ್ರದಾನಿಸಿದ್ದ ಶಾಸಕ ಗೋಪಾಲ ಶೆಟ್ಟಿಯವರು ಹೇಳಿದ್ದ ಮಾತು ಜಿ.ಕೆ. ರಮೇಶ್ ಅವರಿಗೂ ಅನ್ವಯಿಸುವಂತದ್ದು.

ಮೊಗವೀರ ವ್ಯವಸ್ಥಾಪಕ ಮಂಡಳಿಯ ಆಡಳಿತ ಸಮಿತಿಯಲ್ಲಿ ಹಲವಾರು ವರ್ಷಗಳಿಂದ ದುಡಿದ ಜಿ.ಕೆ. ರಮೇಶ್, ಆ ಹಿರಿಯ, ಪ್ರತಿಷ್ಠಿತ ಸಂಸ್ಥೆಯ ಪಾರುಪತ್ಯಗಾರರಾಗಿ ಹಲವಾರು ವರ್ಷ ದುಡಿದಿದ್ದಾರೆ. ‘ಮುಂಬೈ ತುಳು ಸಂಘ’ದ ಮೂಲಕ ಬಹಳಷ್ಟು ಕೆಲಸ ಮಾಡಿದ್ದ ಎನ್.ಎಂ. ಅಮೀನ್, ಮುಂಬೈ ವಿಶ್ವವಿದ್ಯಾನಿಲಯದಲ್ಲಿ ‘ತುಳುಪೀಠ’ ಆಗಬೇಕೆಂದು ಹಲವಾರು ವರ್ಷ ದಣಿವಿಲ್ಲದೆ ದುಡಿದವರು. ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತವರು ಈರ್ವರು, ಒಬ್ಬರು ಮುಂಬೈ ಕನ್ನಡಿಗರ ಅಕ್ಕ ಡಾ. ಸುನೀತಾ ಎಂ. ಶೆಟ್ಟಿಯಾದರೆ ಇನ್ನೊಬ್ಬರು ಈ ವರ್ಷದ ಪ್ರಶಸ್ತಿಗೆ ಭಾಜನರಾದ ಜಿ.ಕೆ. ರಮೇಶ್.

‘ಪತ್ರಕರ್ತರು ಸಮಾಜವನ್ನು ಬದಲಾಯಿಸಬಲ್ಲರು’ ಎಂದು ಈ ಸಂದರ್ಭದಲ್ಲಿ ಉಲ್ಲೇಖಿಸಿದ ಕೆ.ಎಲ್. ಬಂಗೇರ ಅವರು ‘ಪ್ರಶಸ್ತಿ ಯೋಗ್ಯ ವ್ಯಕ್ತಿಗೆ ಸಂದಿದೆ’ ಎಂದು ಹೇಳಿರುವುದು ‘ಕಪಸಮ’ಕ್ಕೆ ಹೆಮ್ಮೆಯುಂಟು ಮಾಡಿರಬಹುದು. ಒತ್ತಡವಿಲ್ಲದೆ, ವಸ್ತುನಿಷ್ಠವಾಗಿ, ನಿರ್ಭೀತಿಯಿಂದ ಓರ್ವ ಪತ್ರಕರ್ತ ಇಂದು ಬರೆಯಬಲ್ಲನೇ? ಎಂಬ ಜಿ.ಕೆ.ಯವರ ಮಹತ್ವದ ಪ್ರಶ್ನೆ ಪತ್ರಿಕಾರಂಗ ಇಂದು ನಡೆಯುತ್ತಿರುವ, ನಡೆದ ಹಾದಿಯತ್ತ ಬೆಳಕು ಚೆಲ್ಲುವ ಅವಶ್ಯಕತೆಯನ್ನು ಸೂಚಿಸುತ್ತದೆ. ಅಂದಿನ ದಿನಗಳಲ್ಲಿ ಜಿ.ಕೆ. ರಮೇಶ್ ಮೊದಲಾದವರಿಗಿದ್ದ ಬದ್ಧತೆ ಹಾಗೂ ಪ್ರಾಮಾಣಿಕತೆ ನಮಗಿಂದು ಆದರ್ಶವಾಗಬೇಕಾಗಿದೆ.

ವಡ್ಡರ್ಸೆಯವರಿಂದ ಲೋಹಿಯಾ ಚಿಂತನೆಗೆ ಮರುಳಾದ ಜಿ.ಕೆ. ರಮೇಶ್ ತಮ್ಮ ನಿವೃತ್ತಿ ಬದುಕಿನಲ್ಲಿ ಬುದ್ಧ್ದ, ವಿವೇಕಾನಂದ, ಜೀಸಸ್ ಮೊದಲಾದವರ ಚಿಂತನೆಗಳ ಪಾಲಕರಾಗಿ ಓರ್ವ ಆಧ್ಯಾತ್ಮ ಚಿಂತಕರಾಗಿ ಬೆಳೆಯುತ್ತಿದ್ದಾರೆ. ಆಧ್ಯಾತ್ಮ ಮತ್ತು ಧರ್ಮ ಬೇರೆ ಬೇರೆ ಎನ್ನುವ ಜಿ.ಕೆ. ರಮೇಶ್ ಅವರ ಆದರ್ಶನೀಯ ಬದುಕು ಅವರನ್ನು ಓರ್ವ ಶ್ರೇಷ್ಠ ವ್ಯಕ್ತಿಯನ್ನಾಗಿಸಿದೆ.

‘ಮಾಧ್ಯಮ ಜನರ ವಿಕಾಸಕ್ಕೆ ಪಾತ್ರವಾಗಬೇಕು’ ಎಂದು ಅಭಿವ್ಯಕ್ತಿಸಿರುವ ಕಾರ್ಯಕ್ರಮ ಹಾಗೂ ಕಪಸಮದ ಅಧ್ಯಕ್ಷ ರೋನ್ಸ್ ಬಂಟ್ವಾಳರ, ‘‘ಬಹುಮಂದಿ ಪತ್ರಕರ್ತರನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲಿ ನಾವು ಸಮಾರಂಭದ ಮೂಲಕ ಪ್ರಶಸ್ತಿ ಪ್ರದಾನಿಸದೆ ಅನಿವಾರ್ಯವಾದ ಈ ಪ್ರಶಸ್ತಿ ಪ್ರಧಾನ ಕಾರ್ಯವನ್ನು ಕಾರ್ಯಕ್ರಮದ ರೂಪದಲ್ಲಿ ಹಮ್ಮಿಕೊಂಡಿದ್ದೇವೆ’’ ಎಂಬ ಅರ್ಥಪೂರ್ಣ ಮಾತಿನಲ್ಲಿ ‘ಕಪಸಮ’ದ ಘನತೆಯನ್ನು ಗುರುತಿಸಬಹುದು. ಇಂತಹ ಗೌರವಾನ್ವಿತ ಪ್ರಶಸ್ತಿಗೆ ಪಾತ್ರರಾದ ಜಿ.ಕೆ. ರಮೇಶ್ ಅಭಿನಂದನಾರ್ಹರು.

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News