ಇಲ್ಲಿ ಇರಲಾಗದು... ಅಲ್ಲಿಗೆ ಹೋಗಲಾಗದು...

Update: 2021-03-04 19:30 GMT

ನಿಜ. ಮುಂಬೈ ಹೊಲಸಿನ ಆಗರ, ಮುಟ್ಟಿದರೆ ಹೊಲಸು, ರೈಲು ಹತ್ತಿದರೆ ಹೊಲಸು, ರಾತ್ರಿ ನಿದ್ದೆಗೆ ಜಾರಿದರೆ ಹೊರಗಿನಿಂದ ಬರುವ ಗಾಳಿ ಹೊಲಸು...ಎಲ್ಲ ಹೊಲಸು. ಆದರೆ ಈ ಹೊಲಸು ಮುಂಬೈಗೆ ಹೃದಯ ಅನ್ನುವುದಿದೆ. ಆ ಹೊಲಸಿನಲ್ಲೂ ತಾವರೆಯಂತಹ ಮನಸ್ಸುಗಳು ಅರಳುತ್ತವೆ. ಎಷ್ಟೇ ಪೆಟ್ಟು ತಿಂದರೂ, ಒದೆ ತಿಂದರೂ ಅದನ್ನು ತಾಳುವ ಶಕ್ತಿಯನ್ನು ಕೊಡುತ್ತದೆ ಮುಂಬೈ. ಈ ಹೊಲಸು, ಒದೆತದ ನೋವು ಎಲ್ಲವನ್ನು ತಿಂದು ಬದುಕು ಸಹನೀಯಗೊಳಿಸುವಲ್ಲಿ ಸಾರ್ಥಕಗೊಳಿಸುವಲ್ಲಿ ಈ ನಗರಿ ಕೈಜೋಡಿಸುತ್ತದೆ.


ಊರು ಬಿಟ್ಟಾಗ ಅಪ್ಪನ ಅಪ್ಪ
ಒಳಗೊಳಗೇ ಅತ್ತದ್ದು
ಕಿಸೆಗೆ ಆಣೆ ತೂರಿಸಿ
ಅಮ್ಮ ಹಣೆ ತುಂಬ ಮುತ್ತಿಟ್ಟದ್ದು
ಆಗ ಕೊಡಮಂತಾಯ ಮದಿಪು ನೀಡಿದ್ದು
‘ಮಂಜಿ’ಯಲ್ಲಿ ಅಳುತ್ತಾ
ನೀರಿನಲ್ಲಿ ತೇಲುತ್ತಾ ಮುಂಬೈ ಸೇರಿದ್ದು
ಡೈರಿಗೆ ಮುನ್ನುಡಿ ಬರೆದಿದ್ದ ಅಪ್ಪ

ಹೌದು
ಅಂದಿನ ನಿರ್ಗತಿಕ ತಂದೆ ತಾಯಿಗಳಿಗೆ ತಮ್ಮ ಮಗನನ್ನು ಮಾಯಾನಗರಿಗೆ ಕಳುಹಿಸಿಕೊಡುವುದೊಂದೇ ದಾರಿ. ಆಗ ಅವರಲ್ಲಿದ್ದದ್ದು ಆಶೀರ್ವಾದ ಮತ್ತು ಪ್ರೀತಿಯ ರಕ್ಷೆ. ಅವರು ಇವರ ಮೇಲಿಟ್ಟ ವಿಶ್ವಾಸವನ್ನು ಹೆಗಲ ಮೇಲಿರಿಸಿಕೊಂಡು, ಆಶೀರ್ವಾದವನ್ನು ಕವಚವಾಗಿರಿಸಿಕೊಂಡು ಮುಂಬೈಗೆ ಆಗಮಿಸಿದ್ದ ಅಂದಿನ ಮಕ್ಕಳು ತಮ್ಮ ಬಾಲ್ಯವನ್ನು ತಮ್ಮವರಿಗಾಗಿ ಇಲ್ಲಿ ಅಡವಿಟ್ಟರು.
ಬಟನ್ ಇಲ್ಲದ ಅಂಗಿಗೆ
ಲಾಡಿ ಇಲ್ಲದ ಚಡ್ಡಿ ಜೋಡಿ
ಆಣೆ ಆಣೆ ಕೂಡಿಸಿಟ್ಟು
ಹೊಟೇಲ್ ದಂಧೆಯಲ್ಲಿ
ಅವನ ಅಕ್ಕನ ಮದುವೆ;
ಮನೆಗೆ ಹಂಚು
ದೈವಕ್ಕೆ ನೇಮ
.....
ಮತ್ತೆ ಒಂದಿಷ್ಟು ಮೌನ
ನೀರಿಗಾಗಿ ಪರದಾಡಿದ್ದು ಸಾಕು; ಕೂಡಲೇ ಒಂದೈನೂರು ಕಳುಹಿಸಿಕೊಡು, ಒಂದು ವಾರದೊಳಗೆ ಬಾವಿ ತೋಡಿಸಬೇಕಾಗಿದೆ. ಕಳೆದ ತಿಂಗಳು ಕಳುಹಿಸಿದ್ದ ಹತ್ತು ರೂಪಾಯಿಯಲ್ಲಿ ನಿನ್ನ ಅಕ್ಕನ ಕರಿಮಣಿ ಸರಿಮಾಡಿರುವೆ. ಮನೆಯಲ್ಲಿ ನಮ್ಮದೇ ಒಂದು ದನ ಇದ್ದರೆ ಒಳ್ಳೆಯದು. ನಮ್ಮ ಕಾಟಿ ಕೋಣಗಳು ಮುದಿಯಾಗಿವೆ. ಅವುಗಳನ್ನು ಮಾರಿ ಹೊಸ ಕೋಣಗಳನ್ನು ಖರೀದಿಸಬೇಕಾಗಿದೆ. ನಿನ್ನ ಸೊಸೆ ಮೈನೆರೆದು ಐದಾರು ವರ್ಷ ಕಳೆದಿವೆ. ಆಕೆಯ ಮದುವೆಯ ಬಗ್ಗೆ ನೀನು ಏನು ವಿಚಾರ ಮಾಡಿರುವೆ? ಮಗಾ, ನಮ್ಮ ನಾಗಬನದ ಕಲ್ಲು ಸರಿ ಇಲ್ಲವಂತೆ, ಜೀರ್ಣೋದ್ಧಾರ ಆಗಬೇಕಂತೆ ಕೂಡಲೇ ಹಣ ಕಳುಹಿಸಿ ಕೊಡು...


-ಅಲ್ಲಿಂದ ಇಲ್ಲಿಗೆ ತೇಲಿಬರುತ್ತಿದ್ದ ಓಲೆಗಳು ಧ್ವನಿಸುತ್ತಿದ್ದವು *
ದಿನ ಬದಲಾಗಿದೆ,
ಲೆಕ್ಕಾಚಾರದ ಮೇಲೆ ಸಂಬಂಧಗಳು ನಿಂತಿವೆ. ದೊಂಬಿವಿಲಿ ಶಹರದಲ್ಲಿ ನೆಲೆಸಿರುವ ಜಯ ಬಂಗೇರ ತಾನು ತನ್ನವರಿಗಾಗಿ ಜಾಗ ಖರೀದಿಸಿ ತಾನೇ ಕಟ್ಟಿಸಿದ ಊರಿನಲ್ಲಿನ ಮನೆಯಲ್ಲಿ ಹೋಗಿ ಇರುವುದಕ್ಕೆ ತನ್ನ ತಂಗಿಯೊಂದಿಗೆ ಕಾಡಿ ಬೇಡಿ ಈಗ ಕೋರ್ಟ್-ಕಚೇರಿ ಎಂದು ಸುತ್ತುತ್ತಿದ್ದಾರೆ. ಘಾಟ್ಕೋಪರ್ ನಲ್ಲಿ ವಾಸಿಸುವ ಸತೀಶ್ ನಾಯಕ್ ತಾನು ದುಡಿಯುತ್ತಿದ್ದ ಕಂಪೆನಿಯಿಂದ ನಿವೃತ್ತರಾಗಿ ತಾನು ಊರಿನಲ್ಲಿ ಸೆಟ್ಲ್ ಆಗಲೆಂದು ಉತ್ಸಾಹದಿಂದ ಹೋದರೆ, ಅಲ್ಲಿ ತಾನು ಕಟ್ಟಿಸಿದ ಮನೆಯಲ್ಲಿ ತನಗೆ ಪಾಲು ಇಲ್ಲ ಎಂದು ತಿಳಿದು ಆಘಾತಗೊಂಡು, ಉಡುಪಿಯಲ್ಲಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿದ್ದಾರೆ. ನವಿಮುಂಬೈಯಲ್ಲಿ ಪಾನ್‌ಬೀಡಿ ಶಾಪ್ ಒಂದನ್ನು ನಡೆಸುತ್ತಾ ಇರುವ ವಸಂತ ಶೆಟ್ಟಿ ತನ್ನ ಅಣ್ಣಂದಿರೊಟ್ಟಿಗೆ ಸೇರಿ ಊರಿನಲ್ಲಿ ಕಟ್ಟಿಸಿದ ಮನೆ ಈಗ ಅಳಿಯನ ಪಾಲಾಗಿದೆ. ಅಂಧೇರಿಯಲ್ಲಿ ವಾಸಿಸುವ ಸೀತಕ್ಕ ಹಾಗೂ ಮುಲುಂಡ್‌ನ ವೇದಕ್ಕ ಊರಿನಲ್ಲಿನ ತಮ್ಮ ಪಾಲಿನ ಆಸ್ತಿ ರೈಲ್ವೆಗೆ ಹೋದಾಗ, ಈ ಇಬ್ಬರು ಅಕ್ಕಂದಿರ ಸಹಿಯನ್ನು ಪೋರ್ಜರಿ ಮಾಡಿ ಅಲ್ಲಿಂದ ಹಣ ಪಡೆದು ತನ್ನ ಜೇಬು ತುಂಬಿಸಿಕೊಂಡಿದ್ದಾನೆ ಊರಿನಲ್ಲಿ ವಾಸಿಸುವ ತಮ್ಮ ಕರಿಯಣ್ಣ.
ಸಂಬಂಧಗಳು ಹಳಸಿವೆ.
*

2005 ಜುಲೈ ಇಪ್ಪತ್ತಾರರಂದು ದಿಢೀರನೆ ಸುರಿದ ಮಳೆಯಿಂದಾಗಿ ಮುಂಬೈ ಸ್ತಬ್ಧಗೊಂಡಾಗ ನಡು ರಸ್ತೆಯಲ್ಲಿದ್ದವರು ನಡು ರಸ್ತೆಯಲ್ಲೇ, ರೈಲಿನಲ್ಲಿದ್ದವರು ರೈಲಲ್ಲೇ, ಕಾರುಗಳಲ್ಲಿದ್ದವರು ಕಾರಲ್ಲೇ, ಕಚೇರಿಯಲ್ಲಿದ್ದವರು ಕಚೇರಿಯಲ್ಲೇ ತಮ್ಮ ಕೈಕಾಲು ಕಟ್ಟಿಸಿಕೊಂಡವರಂತೆ ಅಲ್ಲಲ್ಲಿ ಮರಗಟ್ಟಿ ನಿಂತುಬಿಟ್ಟರು, ಕುಳಿತವರು ಕಲ್ಲಾಗಿಬಿಟ್ಟರು. ಥಾಣೆಯಲ್ಲಿ ವಾಸಿಸುತ್ತಿದ್ದ ದೇವು ಬಂಗೇರ, ಅಂಧೇರಿಯ ಉಮೇಶ್ ಕೋಟ್ಯಾನ್, ವಸಾಯಿ ನಿವಾಸಿ ಗೋಪಾಲ್ ಶೆಟ್ಟಿ ಇವರೆಲ್ಲ ನರಿಮನ್ ಪಾಯಿಂಟ್‌ನ ಕಚೇರಿಯೊಂದರಲ್ಲಿ ಸಹೋದ್ಯೋಗಿಗಳು. ಅವರೆಲ್ಲ ಮತ್ತು ಅವರಂತಹವರೆಲ್ಲ ಆ ಮೂರು ದಿನಗಳಲ್ಲಿ ಕುಡಿದದ್ದು ಗಟಾರ ಮಿಶ್ರಿತ ನೀರನ್ನು.
ಉಪನಗರಗಳಲ್ಲಿ ಇದು ದಿನನಿತ್ಯದ ಕರ್ಮ. ಕುರ್ಲಾದ ಒಂದು ಹೈಕ್ಲಾಸ್ ಸೊಸೈಟಿಯಲ್ಲಿ ವಾಸಿಸುವ ದಿನೇಶ್ ಅನ್ನುವ ಕರಾವಳಿ ಕನ್ನಡಿಗನ ಮಾತುಗಳನ್ನು ಗಮನಿಸೋಣ: ‘‘ನಾನು ಆಫೀಸಿಗೆ ತಲುಪಿದ್ದೇನೆ ಅಷ್ಟೆ, ಅಷ್ಟರಲ್ಲಿ ಮನೆಯಿಂದ ಕಾಲ್ ‘ಈರ್ ಎಂಚ ಉಲ್ಲರ್?’ (ನೀವು ಹೇಗಿದ್ದೀರಿ?) ಏಕೆಂದರೆ ನಮ್ಮ ಸೊಸೈಟಿಗೆ ಸರಬರಾಜಾಗುವ ನೀರಿನ ಪೈಪ್ ಒಡೆದು ಅದು ಹೊಲಸು ಹೋಗುವ ಪೈಪ್‌ನೊಂದಿಗೆ ಬೆರೆತು ಹೋಗಿತ್ತಂತೆ. ಕಳೆದ ಒಂದು ವಾರದಿಂದ ನಮ್ಮ ಸೊಸೈಟಿಯಲ್ಲಿ ಅರ್ಧದಷ್ಟು ಜನ ಒಂದಲ್ಲ ಒಂದು ರೀತಿಯ ಕಾಯಿಲೆಗೆ ತುತ್ತಾಗಿದ್ದಾರೆ. ನಾನು ಊರಿನಲ್ಲಿ ಅಷ್ಟೊಂದು ಖರ್ಚು ಮಾಡಿ ಬಾವಿ ತೋಡಿಸಿದೆ. ಈ ಮುಂಬೈ ನರಕ ಯಾರಿಗೆ ಬೇಕು? ಆದರೆ ನಿರ್ವಾಹವಿಲ್ಲ’’
*
ನಿಜ. ಮುಂಬೈ ಹೊಲಸಿನ ಆಗರ, ಮುಟ್ಟಿದರೆ ಹೊಲಸು, ರೈಲು ಹತ್ತಿದರೆ ಹೊಲಸು, ರಾತ್ರಿ ನಿದ್ದೆಗೆ ಜಾರಿದರೆ ಹೊರಗಿನಿಂದ ಬರುವ ಗಾಳಿ ಹೊಲಸು...ಎಲ್ಲ ಹೊಲಸು. ಆದರೆ ಈ ಹೊಲಸು ಮುಂಬೈಗೆ ಹೃದಯ ಅನ್ನುವುದಿದೆ. ಆ ಹೊಲಸಿನಲ್ಲೂ ತಾವರೆಯಂತಹ ಮನಸ್ಸುಗಳು ಅರಳುತ್ತವೆ. ಎಷ್ಟೇ ಪೆಟ್ಟು ತಿಂದರೂ, ಒದೆ ತಿಂದರೂ ಅದನ್ನು ತಾಳುವ ಶಕ್ತಿಯನ್ನು ಕೊಡುತ್ತದೆ ಮುಂಬೈ. ಈ ಹೊಲಸು, ಒದೆತದ ನೋವು ಎಲ್ಲವನ್ನು ತಿಂದು ಬದುಕು ಸಹನೀಯಗೊಳಿಸುವಲ್ಲಿ ಸಾರ್ಥಕಗೊಳಿಸುವಲ್ಲಿ ಈ ನಗರಿ ಕೈಜೋಡಿಸುತ್ತದೆ.
ಇಲ್ಲಿ
ಫ್ಲಾಟ್‌ಫಾರ್ಮ್‌ನ ಮೇಲೆ
ಬದುಕು
ಚಿಗುರೊಡೆಯುತ್ತಿದ್ದಂತೆಯೇ
ಸಿಂಗಾರಗೊಳ್ಳುವುದು ಸಾವು
ಚಾದರವನ್ನು
ಮೈಮೇಲೆ ಹೊದ್ದು.

ಆದರೂ ಈ ಬದುಕು ಜೀವನ ಪ್ರೀತಿಯನ್ನು ಮೈಗೂಡಿಸಿ ಕೊಂಡಿರು ವಂತಹದ್ದು. ಆದ್ದರಿಂದಲೇ ‘‘ಈ ನರಕ ಯಾರಿಗೆ ಬೇಕು?’’ ಎಂದು ಹೇಳಿಕೊಳ್ಳುತ್ತಲೇ ಫೆವಿಕಾಲ್ ಅಂಟಿಸಿಕೊಂಡವರಂತೆ ಇಲ್ಲೇ ಇರಲು ಬಯಸುತ್ತಾರೆ ನಮ್ಮವರು.

(ಇಲ್ಲಿ ಬರುವ ಹೆಸರುಗಳನ್ನು ಬದಲಾಯಿಸಲಾಗಿದೆ)

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News