ಜಗತ್ತಿನ ಬಾಯಿ ಮುಚ್ಚಿಸಲು ಸಾಧ್ಯವೇ?

Update: 2021-03-14 19:30 GMT

ಭಾರತದಲ್ಲಿ ರೈತರ ಹೋರಾಟವನ್ನು ಹತ್ತಿಕ್ಕುತ್ತಿರುವ ಬಗ್ಗೆ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ದಮನ ಮಾಡುತ್ತಿರುವ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರ ಸಂಸ್ಥೆಯೂ ಧ್ವನಿಯೆತ್ತಿದೆ. ಬ್ರಿಟಿಷ್ ಸಂಸತ್ತಿನಲ್ಲೂ ಈ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.ವಿಶ್ವಗುರುವಾಗಲು ಹೊರಟವರ ಅಸಲಿ ಮುಖ ಬಯಲಾಗುತ್ತಿರುವಂತೆ ಭಾರತದಲ್ಲಿ ಇರುವ ಬ್ರಿಟಿಷ್ ಹೈ ಕಮಿಶನರ್‌ರನ್ನು ನಮ್ಮ ವಿದೇಶಾಂಗ ಕಾರ್ಯದರ್ಶಿಗಳು ಭೇಟಿ ಮಾಡಿ ಭಾರತದ ಆಂತರಿಕ ವಿಷಯದ ಬಗ್ಗೆ ಮಾತಾಡಬೇಡಿ ಎಂದು ಹೇಳಿದ್ದಾರೆ. ಆದರೆ ಜಗತ್ತೇ ಒಂದು ಗ್ರಾಮವಾದ ಈ ದಿನಗಳಲ್ಲಿ ಈ ರೀತಿ ಬಾಯಿ ಮುಚ್ಚಿಸುವ ಯತ್ನ ನಮ್ಮ ದೇಶವನ್ನು ಇನ್ನಷ್ಟು ಅಪಹಾಸ್ಯಕ್ಕೆ ಗುರಿ ಮಾಡುತ್ತದೆ.


ಭಾರತದ ರೈತಾಪಿ ಸಮುದಾಯಕ್ಕೆ ಕಂಟಕಕಾರಿಯಾಗಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ರಾಜಧಾನಿ ದಿಲ್ಲಿಯಲ್ಲಿ ನಡೆದಿರುವ ಚಾರಿತ್ರಿಕ ರೈತ ಹೋರಾಟ ನೂರನೇ ದಿನವನ್ನು ದಾಟಿದೆ. ಆರಂಭದಲ್ಲಿ ಏಳೆಂಟು ಸುತ್ತಿನ ಮಾತುಕತೆಗಳನ್ನು ನಡೆಸಿದ ಕೇಂದ್ರ ಸರಕಾರ ಇದೀಗ ನಿಗೂಢ ಮೌನ ತಾಳಿದೆ. ಈ ಮೌನದ ಒಳಗೆ ನಡೆದಿರುವ ಮಸಲತ್ತೇನು ಎಂದು ರೈತ ನಾಯಕ ಟಿಕಾಯತ್ ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಸರಕಾರ ಮುಂದೇನು ಮಾಡುತ್ತದೆ ಎಂಬುದು ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ನಂತರ ಗೊತ್ತಾಗಬಹುದು. ಆದರೆ ಸದ್ದು ಗದ್ದಲವಿಲ್ಲದೆ ರೈತರ ಧ್ವನಿಯನ್ನು ಅಡಗಿಸುವ ಕಾರ್ಯಕ್ಕೆ ಪ್ರಭುತ್ವ ಈಗಾಗಲೇ ಕೈ ಹಾಕಿದೆ.

ಉತ್ತರ ಭಾರತದ ಐದಾರು ರಾಜ್ಯಗಳಿಗೆ ಸದ್ಯಕ್ಕೆ ಸೀಮಿತವಾಗಿರುವ ರೈತ ಹೋರಾಟವನ್ನು ರಾಷ್ಟ್ರವ್ಯಾಪಿ ವಿಸ್ತರಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಾಯಕರು ಎಲ್ಲ ರಾಜ್ಯಗಳಲ್ಲಿ ಸಂಚಾರ ಆರಂಭಿಸಿದ್ದಾರೆ. ಮತ್ತೊಂದೆಡೆ ಜನ ಚಳವಳಿಗಳನ್ನೆಲ್ಲ ದೇಶದ್ರೋಹ ಎಂದು ಪರಿಗಣಿಸಿರುವ ಸರಕಾರ ಹೋರಾಟಗಾರರನ್ನು ಮಾತ್ರವಲ್ಲ ಹೋರಾಟದ ಪರವಾಗಿ ಧ್ವನಿ ಯೆತ್ತುವವರನ್ನೆಲ್ಲ ಬ್ರಿಟಿಷ್ ಕಾಲದ ದೇಶದ್ರೋಹದ ಕಾನೂನನ್ನು ಬಳಸಿ ಜೈಲಿಗೆ ತಳ್ಳಲು ಮುಂದಾಗಿದೆ.ಇದಿಷ್ಟೇ ಅಲ್ಲ ಎಪಿಎಂಸಿಗಳ ಸಮಾಧಿಯ ಮೇಲೆ ಕಾರ್ಪೊರೇಟ್ ಕಂಪೆನಿಗಳ ಹೊಸ ಖರೀದಿ ಕೇಂದ್ರ ಗಳಿಗೆ ಚಾಲನೆ ನೀಡಿದೆ.

ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮೊದಲು ಸರಕಾರದ ಬೆಂಬಲ ಬೆಲೆಯ ಪ್ರಯೋಜನ ಪಡೆದು ಎಪಿಎಂಸಿಗಳಲ್ಲಿ ಮಾರಾಟ ಮಾಡುತ್ತಿದ್ದರು. ಈಗ ರಿಲಯನ್ಸ್, ಬಿಗ್ ಬಾಸ್ಕೆಟ್, ಅಮೆಝಾನ್, ಪ್ಲಿಪ್ ಕಾರ್ಟ್‌ನಂತಹ ಬೃಹತ್ ಕಾರ್ಪೊರೇಟ್ ಕಂಪೆನಿಗಳು ನೇರವಾಗಿ ರೈತರ ಊರುಗಳಿಗೆ ಹೋಗಿ ಅವರು ಕೇಳಿದ ಮೊತ್ತ ನೀಡಿ ಕೃಷಿ ಉತ್ಪನ್ನಗಳನ್ನು ಖರೀದಿಸತೊಡಗಿವೆ. ಆರಂಭದಲ್ಲಿ ಮಧ್ಯವರ್ತಿಗಳಿಲ್ಲದೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಖುಷಿ ರೈತರಿಗಿದೆ. ಹಲವಾರು ಕಡೆ ರೈತ ಉತ್ಪಾದಕರ ಸಂಸ್ಥೆ (ಎಫ್.ಪಿ.ಒ.) ಗಳನ್ನು ಮಾಡಿಕೊಂಡಿರುವ ರೈತರು, ಬೆಳೆಗಾರರು ನೇರವಾಗಿ ಕಂಪೆನಿಗಳ ಏಜೆಂಟರೊಂದಿಗೆ ಮಾತಾಡಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಸೊಸೈಟಿ ಮಾದರಿಯಲ್ಲಿ ಲಾಭಾಂಶವನ್ನು ಹಂಚಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.ಇದು ರೈತರಿಗೆ ವರದಾನ ಎಂದು ಆಳುವ ವರ್ಗಗಳ ಪರ ಮಾಧ್ಯಮಗಳ ಮೂಲಕ ಪ್ರಚಾರವೂ ನಡೆದಿದೆ.

ಕಲಬುರಗಿ ಜಿಲ್ಲೆಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಪ್ರತಿ ವರ್ಷ ಆರಂಭವಾಗುತ್ತಿದ್ದ ತೊಗರಿ ಖರೀದಿ ಕೇಂದ್ರಗಳನ್ನು ಈ ಸಲ ಆರಂಭಿಸಿಲ್ಲ. ಕೆಲ ಗ್ರಾಮಗಳಲ್ಲಿ ರಿಲಯನ್ಸ್ ಕಂಪೆನಿಯವರು ನೇರವಾಗಿ ರೈತರಿಂದ ಖರೀದಿ ಮಾಡಲು ಆರಂಭಿಸಿದ್ದಾರೆ. ಪ್ರತಿ ಹಳ್ಳಿಯಲ್ಲಿ ಖರೀದಿಯಾದರೆ ಯಾವ ರೈತರೂ ಎಪಿಎಂಸಿಗೆ ಬರುವುದಿಲ್ಲ. ಹೀಗೆ ಕ್ರಮೇಣವಾಗಿ ಎಪಿಎಂಸಿಗಳನ್ನು ಸಾಯಿಸಲಾಗುತ್ತದೆ. ಇದರ ತಕ್ಷಣದ ಪರಿಣಾಮವೆಂದರೆ ರೈತರು ಮಾತ್ರವಲ್ಲದೆ ಕೂಲಿ ಕಾರ್ಮಿಕರು, ಹಮಾಲರು ಕೆಲಸ ಕಳೆದುಕೊಂಡು ಬೀದಿ ಪಾಲಾಗುತ್ತಾರೆ. ಹೀಗಾಗಿ ಕಲಬುರಗಿ ಮಾತ್ರವಲ್ಲ ಯಾವ ಜಿಲ್ಲೆಯಲ್ಲೂ ಎಪಿಎಂಸಿಗೆ ಮಾಲು (ಕೃಷಿ ಉತ್ಪನ್ನಗಳು) ಬರುತ್ತಿಲ್ಲ. ಒಮ್ಮೆ ಎಪಿಎಂಸಿ ಮುಚ್ಚಿದ ನಂತರ ಕಾರ್ಪೊರೇಟ್ ಕಂಪೆನಿಗಳೇ ರೈತರಿಗೆ ಅನಿವಾರ್ಯವಾಗುತ್ತವೆ.

ಈಗೇನೋ ರಿಲಯನ್ಸ್, ಅಮೆಝಾನ್ ನಂತರ ಭಾರೀ ಕಂಪೆನಿಗಳು ರೈತರು ಹೇಳಿದ ಬೆಲೆಗೆ ಅವರ ಆಹಾರ ಧಾನ್ಯ ಮತ್ತು ಬೇಳೆ ಕಾಳುಗಳನ್ನು ಖರೀದಿಸಬಹುದು. ಆದರೆ ಮುಂದೆ ಎಪಿಎಂಸಿ ಮುಚ್ಚಿದ ನಂತರ ಕಂಪೆನಿಗಳು ಹೇಳಿದ ಅಗ್ಗದ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಹೀನಾಯ ಸ್ಥಿತಿ ರೈತರಿಗೆ ಬರುತ್ತದೆ. ಇಷ್ಟೇ ಅಲ್ಲದೆ ಇಂತಹದ್ದೇ ಬೆಳೆಯನ್ನು ಬೆಳೆಯಬೇಕೆಂದು ಕಾರ್ಪೊರೇಟ್ ಕಂಪೆನಿಗಳು ಬೆಳೆಗಾರರಿಗೆ ಷರತ್ತು ವಿಧಿಸುವ ದಿನಗಳೂ ಬರಲಿವೆ. ಆಗ ನಮ್ಮ ಆಹಾರ ಪದ್ಧತಿಯನ್ನೂ ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪೆನಿಗಳು ತೀರ್ಮಾನಿಸಲು ಅವಕಾಶ ದೊರೆತಂತಾಗುತ್ತದೆ.

ಒಂದೆಡೆ ರೈತರ ಪರಿಸ್ಥಿತಿ ಹೀಗಾದರೆ ಇನ್ನೊಂದೆಡೆ ಗ್ರಾಹಕರ ಪರಿಸ್ಥಿತಿ ಇನ್ನೂ ಮೂರಾಬಟ್ಟೆಯಾಗುತ್ತದೆ.ಅಂಬಾನಿ, ಅದಾನಿಗಳು ಈಗಾಗಲೇ ರೈತರಿಂದ ಖರೀದಿಸುವ ಉತ್ಪನ್ನಗಳ ಸಂಗ್ರಹಕ್ಕಾಗಿ ಭಾರೀ ಗಾತ್ರದ ಗೋದಾಮುಗಳನ್ನು, ಶೈತ್ಯಾಗಾರಗಳನ್ನು ನಿರ್ಮಿಸಿಕೊಂಡಿದ್ದಾರೆ. ಹೀಗೆ ಕೋಟ್ಯಂತರ ಟನ್ ಆಹಾರ ಧಾನ್ಯ ಸಂಗ್ರಹಿಸಿ ಒಮ್ಮಿಂದೊಮ್ಮೆಲೇ ಕೃತಕ ಅಭಾವ ಉಂಟು ಮಾಡಿ ದುಬಾರಿ ಬೆಲೆಯಲ್ಲಿ ಮಾರಾಟಕ್ಕೆ ಬಿಡುತ್ತಾರೆ. ಆಗ ಎಷ್ಟೇ ತುಟ್ಟಿಯಾದರೂ ಹಸಿವು ನೀಗಿಸಿಕೊಳ್ಳಲು ಬೆಲೆ ತೆತ್ತು ಖರೀದಿಸಲೇಬೇಕಾಗುತ್ತದೆ. ಆಗ ಯಾವ ಸರಕಾರವೂ ರಕ್ಷಣೆಗೆ ಬರುವುದಿಲ್ಲ.

ಇಲ್ಲಿನವರೆಗೆ ಈ ರೀತಿ ಕೃತಕ ಅಭಾವವನ್ನುಂಟು ಮಾಡಲು ಅವಕಾಶವಿರಲಿಲ್ಲ. ಎಪ್ಪತ್ತು-ಎಂಭತ್ತರ ದಶಕದಲ್ಲಂತೂ ವ್ಯಾಪಾರಿಗಳು ಕಳ್ಳ ದಾಸ್ತಾನು ಮಾಡಿಟ್ಟರೆ ಅವರ ಗೋದಾಮು ಮತ್ತು ಅಂಗಡಿ ಗಳ ಮೇಲೆ ದಾಳಿ ಮಾಡಿ ಆ ಅಕ್ರಮ ದಾಸ್ತಾನನ್ನು ಹೊರಗೆಳೆದು ಬಡವರಿಗೆ, ಮಧ್ಯಮ ವರ್ಗದವರಿಗೆ ಹಂಚುವ ಚಳವಳಿಗಳು ನಡೆಯುತ್ತಿದ್ದವು. ಸ್ವತಃ ನಾನೇ ಅಂತಹ ಅನೇಕ ಚಳವಳಿಗಳಲ್ಲಿ ಭಾಗವಹಿಸಿದ್ದೇನೆ. ಬಿಜಾಪುರದಲ್ಲಿ ಕಮ್ಯುನಿಸ್ಟ್ ನಾಯಕರಾಗಿದ್ದ ಎನ್.ಕೆ. ಉಪಾಧ್ಯಾಯ, ಕಲಬುರಗಿಯಲ್ಲಿ ಕಮ್ಯುನಿಸ್ಟ್ಟ್ ಪಕ್ಷದ ಶಾಸಕರಾಗಿದ್ದ ಗಂಗಾಧರ ನಮೋಶಿ, ಹುಬ್ಬಳ್ಳಿಯ ಕಮ್ಯುನಿಸ್ಟ್ ಮುಖಂಡರಾದ ಎ.ಜೆ. ಮುಧೋಳ ಮುಂತಾದ ಘಟಾನುಘಟಿ ನಾಯಕರು ಆಗ ಇದ್ದರು. ಅವರು ವ್ಯಾಪಾರಿಗಳು ಕೃತಕ ಅಭಾವ ಉಂಟು ಮಾಡಿದಾಗ ಕಳ್ಳ ದಾಸ್ತಾನು ಹೊರಗೆಳೆದು ಜನರಿಗೆ ಹಂಚುವ ಚಳವಳಿ ಮಾಡುತ್ತಿದ್ದರು. ಈಗ ಅಂತಹ ಚಳವಳಿಗಳು ಇತಿಹಾಸದ ಪುಟಗಳನ್ನು ಸೇರಿವೆ.

ತೊಂಭತ್ತರ ದಶಕದಲ್ಲಿ ಯಾವಾಗ ಅಯೋಧ್ಯೆಯ ಚುನಾವಣಾ ಮಂದಿರದ ರಥಯಾತ್ರೆ ಆರಂಭವಾಯಿತೋ ಆಗಲೇ ಚಳವಳಿ ಮಾಡಬೇಕಾದ ಜನರ ಆದ್ಯತೆಗಳು ಬದಲಾದವು.ಜಾಗತೀಕರಣ ಮತ್ತು ನವ ಉದಾರೀಕರಣ ಪೂರ್ಣ ಪ್ರಮಾಣದಲ್ಲಿ ವಕ್ಕರಿಸಿದ ನಂತರವಂತೂ ಬೆಲೆ ಏರಿಕೆ, ನಿರುದ್ಯೋಗದ ವಿರುದ್ಧ ನಡೆಯಬೇಕಾದ ಚಳವಳಿಗಳ ದಿಕ್ಕು ಬದಲಾಯಿತು. ಮಂದಿರ ನಿರ್ಮಾಣ, ಗೋ ಹತ್ಯೆ ನಿಷೇಧ, ಮತಾಂತರ, ಲವ್ ಜಿಹಾದ್ ಇಂತಹ ಕೋಮುವಾದಿ ಶಕ್ತಿಗಳ ಲ್ಯಾಬೊರೇಟರಿಯಲ್ಲಿ ತಯಾರಾದ ಭಾವನಾತ್ಮಕ ವಿಷಯಗಳು ಒಂದು ವರ್ಗದ ಒಂದು ಸಮುದಾಯದ ಯುವಜನರನ್ನು ಆಕರ್ಷಿಸಿದವು. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಸಿಖ್, ಲಿಂಗಾಯತ ಹೀಗೆ ಎಲ್ಲ ಸಮುದಾಯಗಳ ಜನ ಒಂದಾಗಿ ಮಾಡಬೇಕಾದ ಹೋರಾಟಗಳು ತಬ್ಬಲಿಯಾದವು. ಹೀಗೆ ಹೋರಾಟಗಳು ತಬ್ಬಲಿಯಾಗುವುದನ್ನೇ ಕಾಯುತ್ತಿದ್ದ ದಗಾಕೋರರ ಗ್ಯಾಂಗು ದೇಶವನ್ನು ಲೂಟಿ ಮಾಡಲು ಮುಂದಾಗಿದೆ.

ಬಹಳ ವರ್ಷಗಳ ನಿರಾಸೆಯ ದಿನಗಳ ನಂತರ ಅಂಧಕಾರದಲ್ಲಿ ಆಶಾಕಿರಣ ಎಂಬಂತೆ ಪಂಜಾಬ್, ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮುಂತಾದ ರಾಜ್ಯಗಳ ರೈತರು ಲಕ್ಷಾಂತರ ಸಂಖ್ಯೆಯಲ್ಲಿ ದಿಲ್ಲಿಯನ್ನು ಸುತ್ತುವರಿದು ಪ್ರಭುತ್ವಕ್ಕೆ ಸವಾಲು ಹಾಕುತ್ತಿದ್ದಾರೆ. ಈ ಹೋರಾಟವನ್ನು ವಿಫಲಗೊಳಿಸಲು ಜಾತಿ, ಧರ್ಮ, ಆಮಿಷ ಮುಂತಾದ ಎಲ್ಲ ಅಸ್ತ್ರಗಳನ್ನು ಬಳಸಿ ವಿಫಲಗೊಂಡ ಪ್ರಭುತ್ವ ಈಗ ತನ್ನ ಬತ್ತಳಿಕೆಯಲ್ಲಿ ಇರುವ ಹಿಂದೆ ಬ್ರಿಟಿಷರು ಅಪರೂಪಕ್ಕೆ ಬಳಸಿದ ‘ದೇಶದ್ರೋಹ’ದ ಆರೋಪ ಹೊರಿಸಿ ಸೆರೆಮನೆಗೆ ತಳ್ಳುವ ಅಸ್ತ್ರವನ್ನು ಬಳಸತೊಡಗಿದೆ. ಇದು ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿ ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಭಾರತದಲ್ಲಿ ರೈತರ ಹೋರಾಟವನ್ನು ಹತ್ತಿಕ್ಕುತ್ತಿರುವ ಬಗ್ಗೆ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ದಮನ ಮಾಡುತ್ತಿರುವ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರ ಸಂಸ್ಥೆಯೂ ಧ್ವನಿಯೆತ್ತಿದೆ. ಬ್ರಿಟಿಷ್ ಸಂಸತ್ತಿನಲ್ಲೂ ಈ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.ವಿಶ್ವಗುರುವಾಗಲು ಹೊರಟವರ ಅಸಲಿ ಮುಖ ಬಯಲಾಗುತ್ತಿರುವಂತೆ ಭಾರತದಲ್ಲಿ ಇರುವ ಬ್ರಿಟಿಷ್ ಹೈ ಕಮಿಶನರ್‌ರನ್ನು ನಮ್ಮ ವಿದೇಶಾಂಗ ಕಾರ್ಯದರ್ಶಿಗಳು ಭೇಟಿ ಮಾಡಿ ಭಾರತದ ಆಂತರಿಕ ವಿಷಯದ ಬಗ್ಗೆ ಮಾತಾಡಬೇಡಿ ಎಂದು ಹೇಳಿದ್ದಾರೆ.ಆದರೆ ಜಗತ್ತೇ ಒಂದು ಗ್ರಾಮವಾದ ಈ ದಿನಗಳಲ್ಲಿ ಈ ರೀತಿ ಬಾಯಿ ಮುಚ್ಚಿಸುವ ಯತ್ನ ನಮ್ಮ ದೇಶವನ್ನು ಇನ್ನಷ್ಟು ಅಪಹಾಸ್ಯಕ್ಕೆ ಗುರಿ ಮಾಡುತ್ತದೆ.

 ಇದೀಗ ಸ್ವೀಡನ್‌ನ ಗೊಥೆನ್‌ಬರ್ಗ್ ವಿಶ್ವವಿದ್ಯಾನಿಲಯದ ಸ್ವತಂತ್ರ ಸಂಶೋಧನಾ ಸಂಸ್ಥೆ ಕೂಡ ತನ್ನ 2021ರ ಪ್ರಜಾಪ್ರಭುತ್ವ ಕುರಿತ ವರದಿಯಲ್ಲಿ ‘‘ಭಾರತದ ಪ್ರಜಾಪ್ರಭುತ್ವವು ಈಗ ಚುನಾಯಿತ ನಿರಂಕುಶಾಧಿಪತ್ಯದ ಸ್ಥಿತಿಗೆ ಇಳಿದಿದೆ’’ ಎಂದು ಹೇಳಿದೆ.
 
ಮಾನವ ಹಕ್ಕುಗಳ ದಮನ ಎಂದೂ ಒಂದು ದೇಶದ ಆಂತರಿಕ ವಿಷಯವಾಗಿ ಉಳಿಯುವುದಿಲ್ಲ. ಕಳೆದ ಶತಮಾನದಲ್ಲಿ ನಮ್ಮ ಮೋಹನದಾಸ ಕರಮಚಂದ ಗಾಂಧಿ ದಕ್ಷಿಣ ಆಫ್ರಿಕಾದ ಬಣ್ಣದ ಆಧಾರದಲ್ಲಿ ನಡೆಯುತ್ತಿರುವ ವರ್ಣಭೇದದ ಪಕ್ಷಪಾತದ ವಿರುದ್ಧ ಹೋರಾಟ ಮಾಡಿದ ಪರಂಪರೆ ನಮ್ಮದು. ವರ್ಣಭೇದ ಆ ದೇಶದ ಆಂತರಿಕ ವಿಷಯ ಎಂದು ಗಾಂಧಿ ಮೌನ ತಾಳಲಿಲ್ಲ. ದೇಶಕ್ಕೆ ಸ್ವಾತಂತ್ರ್ಯಬೇಕೆಂಬ ಪ್ರಶ್ನೆ ಎದುರಾದಾಗ ಲಂಡನ್‌ನ ದುಂಡುಮೇಜಿನ ಸಭೆಯಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಅವರು ‘‘ನನ್ನ ಜನರಿಗೆ ಸ್ವಾತಂತ್ರ್ಯ ಯಾವಾಗ?’’ ಎಂದು ಧ್ವನಿಯೆತ್ತಿದ ಇತಿಹಾಸ ನಮ್ಮದು. ಈಗ ಕೂಡ ಅನ್ಯಾಯ, ಅಸಮಾನತೆ ವಿರುದ್ಧ ಸಿಡಿದೇಳುತ್ತಿರುವ ಧ್ವನಿ ಜಾಗತಿಕವಾಗಿ ಪ್ರತಿಧ್ವನಿಸುತ್ತಿದೆ. ಭಾರತದ ಮಾನ ಮರ್ಯಾದೆ ಉಳಿಯಬೇಕೆಂದರೆ ನಮ್ಮ ಪ್ರಭುತ್ವ ಚಳವಳಿಗಳನ್ನು ಅಡಗಿಸುವ ಬದಲು ಸ್ನೇಹಪೂರ್ವಕವಾಗಿ ಸ್ಪಂದಿಸಬೇಕು. ಭಿನ್ನಾಭಿಪ್ರಾಯ ಹೊಂದಿದವರೆಲ್ಲ ಸರಕಾರದ ಶತ್ರುಗಳಲ್ಲ. ಜನರ ಬಾಯಿಯನ್ನು, ಜಗತ್ತಿನ ಬಾಯಿಯನ್ನು ಬಹಳ ದಿನ ಮುಚ್ಚಿಸಲಾಗುವುದಿಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ