ಭಗತ್ ಸಿಂಗ್ ಎಂಬ ನಿತ್ಯ ಸ್ಫೂರ್ತಿ

Update: 2021-03-22 06:54 GMT

ಭಗತ್ ಸಿಂಗ್ ಏನಾಗಿದ್ದರು, ಅವರ ಸೈದ್ಧಾಂತಿಕ ಒಲವು ನಿಲುವುಗಳು ಏನಾಗಿದ್ದವು ಎಂಬುದಕ್ಕೆ ಸ್ವತಃ ಅವರೇ ಬರೆದ ಲೇಖನ, ದಿನಚರಿಗಳು ಸಾಕ್ಷಿಯಾಗಿದ್ದರೂ ಮನುಷ್ಯ ದ್ವೇಷಿಗಳು ಅವರನ್ನು ಹೈಜಾಕ್ ಮಾಡಿ ತಮ್ಮ ದೇಶಕ್ಕೆ, ಸಮಾಜಕ್ಕೆ ಬೆಂಕಿ ಹಚ್ಚುವ ದುಷ್ಕಾರ್ಯಕ್ಕೆ ಬಳಸಿಕೊಳ್ಳುತ್ತಲೇ ಇರುವಾಗ ನಿಜವಾದ ಭಗತ್ ಮತ್ತೆ ಮತ್ತೆ ನೆನಪಾಗುತ್ತಾರೆ. ನಾನು ಅವರಿಗೆ ಸೇರಿದವನಲ್ಲ ಎಂದು ಹೇಳುತ್ತಲೇ ಇದ್ದಾರೆ.


ಶಹೀದ್ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿವೇದಿಕೆ ಏರಿ ಕೊನೆಯುಸಿರೆಳೆದು ತೊಂಭತ್ತು ವರ್ಷಗಳು ಗತಿಸಿದವು. ಅನೇಕರು ಹುಟ್ಟುತ್ತಾರೆ, ಸಾಯುತ್ತಾರೆ.ಇಂತಹವರಲ್ಲಿ ಕೆಲವೇ ಕೆಲವರು ಮಾತ್ರ ಸಾವಿನ ನಂತರವೂ ಜೀವಂತವಾಗಿರುತ್ತಾರೆ. ಅಂಥ ವಿರಳಾತಿ ವಿರಳರ ಸಾಲಿನಲ್ಲಿ ಭಗತ್ ಸಿಂಗ್ ಮೊದಲಿಗರಾಗಿ ನಿಲ್ಲುತ್ತಾರೆ. ನಾನು ಗೌರವಿಸುವ ಇನ್ನಿಬ್ಬರೆಂದರೆ ಕ್ಯೂಬಾದ ಕ್ರಾಂತಿಕಾರಿ ಚೇ ಗುವಾರಾ ಮತ್ತು ಬಾಬಾಸಾಹೇಬ ಅಂಬೇಡ್ಕರ್. ಇವರು ಇಂದಿಗೂ ತಲೆಮಾರಿನಿಂದ ತಲೆಮಾರಿಗೆ ಬೆಳಕು ನೀಡುತ್ತ ನಿತ್ಯ ಸ್ಫೂರ್ತಿಯಾಗುತ್ತ ನಮ್ಮ ನಡುವಿದ್ದಾರೆ.

ಅದರಲ್ಲೂ ಭಗತ್ ಸಿಂಗ್ 24ನೇ ವಯಸ್ಸಿನಲ್ಲೇ ನಗು ನಗುತ್ತಾ ನೇಣುಗಂಬಕ್ಕೇರಿದವರು. ಮಾರ್ಚ್ 23 ಭಗತ್ ಸಿಂಗ್ ಬಲಿದಾನದ ದಿನ. ಇದು ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಅವರ ಜನ್ಮದಿನವೂ ಹೌದು. ಆದರೆ ಭಗತ್ ಸಾವಿನ ಈ ದಿನವನ್ನು ಲೋಹಿಯಾ ಜನ್ಮದಿನವೆಂದು ಎಂದೂ ಆಚರಿಸಿಕೊಳ್ಳಲಿಲ್ಲ.

ಭಗತ್ ಸಿಂಗ್ ಬದುಕಿದ್ದು ಬರೀ 24 ವರ್ಷ.ಅಷ್ಟು ಚಿಕ್ಕ ವಯಸ್ಸಿನಲ್ಲೇ ಅವರು ಓದಿದ್ದು, ಬರೆದದ್ದು, ಅವರು ರಚಿಸಿದ ಸಾಹಿತ್ಯ, ಅವರ ಬೌದ್ಧಿಕ ಮಟ್ಟ, ಆಲೋಚನಾ ಕ್ರಮ, ಪ್ರಕಟವಾಗದೇ ಉಳಿದ ಜೈಲಿನ ದಿನಚರಿಗಳನ್ನು ನೋಡಿದರೆ ತುಂಬಾ ಅಚ್ಚರಿ ಉಂಟಾಗುತ್ತದೆ. ಭಗತ್ ಸಿಂಗ್ ಗಲ್ಲಿಗೇರಿದ ಆರೇಳು ದಶಕಗಳ ನಂತರ ಅವರು ಬರೆದ ಲೇಖನಗಳು, ಪತ್ರಗಳು, ದಿನಚರಿಯ ಪುಟಗಳು ಒಂದೊಂದಾಗಿ ಹೊರ ಬರುತ್ತಿವೆ. ಅಷ್ಟು ಎಳೆಯ ವಯಸ್ಸಿನಲ್ಲಿ ನಿತ್ಯವೂ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಇಷ್ಟೆಲ್ಲ ಅವರು ಹೇಗೆ ಬರೆದರು, ಓದಿದರು ಎಂಬ ಕುತೂಹಲ ಸಹಜವಾಗಿ ಉಂಟಾಗುತ್ತದೆ.

ಭಗತ್ ಸಿಂಗ್ ಏನಾಗಿದ್ದರು, ಅವರ ಸೈದ್ಧಾಂತಿಕ ಒಲವು ನಿಲುವುಗಳು ಏನಾಗಿದ್ದವು ಎಂಬುದಕ್ಕೆ ಸ್ವತಃ ಅವರೇ ಬರೆದ ಲೇಖನ, ದಿನಚರಿಗಳು ಸಾಕ್ಷಿಯಾಗಿದ್ದರೂ ಮನುಷ್ಯ ದ್ವೇಷಿಗಳು ಅವರನ್ನು ಹೈಜಾಕ್ ಮಾಡಿ ತಮ್ಮ ದೇಶಕ್ಕೆ, ಸಮಾಜಕ್ಕೆ ಬೆಂಕಿ ಹಚ್ಚುವ ದುಷ್ಕಾರ್ಯಕ್ಕೆ ಬಳಸಿಕೊಳ್ಳುತ್ತಲೇ ಇರುವಾಗ ನಿಜವಾದ ಭಗತ್ ಮತ್ತೆ ಮತ್ತೆ ನೆನಪಾಗುತ್ತಾರೆ. ನಾನು ಅವರಿಗೆ ಸೇರಿದವನಲ್ಲ ಎಂದು ಹೇಳುತ್ತಲೇ ಇದ್ದಾರೆ.

ಭಗತ್ ಸಿಂಗ್ ಕನಸು ಕೇವಲ ಸ್ವತಂತ್ರ ಭಾರತ ಮಾತ್ರವಲ್ಲ, ಸಮಾಜವಾದಿ ಭಾರತವನ್ನು ನಿರ್ಮಾಣ ಮಾಡಬೇಕೆಂದು ಅವರು ಹಂಬಲಿಸಿದ್ದರು. ಮಾರ್ಕ್ಸ್‌ವಾದದ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ಓದಿ ತಿಳಿದುಕೊಂಡಿದ್ದ ಭಗತ್ ಸಿಂಗ್ ಕೋಮುವಾದ ಮತ್ತು ಜಾತಿವಾದಗಳನ್ನು ಕಟುವಾಗಿ ವಿರೋಧಿಸುತ್ತಿದ್ದರು. ಆದರೆ ಆಗಿನ ಭಾರತದ ಕಮ್ಯುನಿಸ್ಟರು ಭಗತ್ ಸಿಂಗ್ ಅವರನ್ನು ಆರಂಭದಲ್ಲಿ ಅರ್ಥ ಮಾಡಿಕೊಳ್ಳಲಿಲ್ಲ. ಭಗತ್ ಸಿಂಗ್ ಒಡನಾಡಿಯಾಗಿದ್ದ ಅಜಯ ಘೋಷ್ 1953ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ನಂತರ ಭಗತ್ ಸಿಂಗ್ ಬಗ್ಗೆ ಕಮ್ಯುನಿಸ್ಟರು ತಮ್ಮ ಮುಂಚಿನ ನಿಲುವನ್ನು ಬದಲಿಸಿ ಕೊಂಡರು. ಭಗತ್ ಸಿಂಗ್ ಮಾರ್ಕ್ಸ್‌ವಾದಿ ಎಂದು ತುಂಬಾ ತಡವಾಗಿ 1970ರಲ್ಲಿ ಇಲ್ಲಿನ ಕಮ್ಯುನಿಸ್ಟರು ಒಪ್ಪಿಕೊಂಡರು. ಅಷ್ಟರಲ್ಲಿ ಕೋಮುವಾದಿ ಸಂಘಟನೆಗಳು ಭಗತ್ ಸಿಂಗ್ ಫೋಟೊ ದುರ್ಬಳಕೆ ಮಾಡಿಕೊಂಡು ಸಾಕಷ್ಟು ಹಾನಿ ಮಾಡಿದ್ದವು.

ಭಗತ್ ಸಿಂಗ್ ಅವರಿಗೆ ಸೋವಿಯತ್ ಕ್ರಾಂತಿ ನಾಯಕ ಲೆನಿನ್ ಅವರ ಬಗ್ಗೆ ಅಪಾರ ಗೌರವವಿತ್ತು.ಒಮ್ಮೆಯಾದರೂ ಅವರನ್ನು ಭೇಟಿ ಮಾಡಬೇಕೆಂದು ಹಂಬಲಿಸಿದ್ದರು. ಆದರೆ ಸಾಧ್ಯವಾಗಲಿಲ್ಲ. ಅವರು ಸಮಕಾಲೀನರಾಗಿರಲಿಲ್ಲ. ಆ ಕೊರತೆಯನ್ನು ಅವರು ಲೆನಿನ್ ಬರೆದ ಪುಸ್ತಕಗಳನ್ನು ಗೆಳೆಯರಿಂದ ತರಿಸಿ ಓದಿ ತುಂಬಿಕೊಂಡರು. ಅಷ್ಟು ಚಿಕ್ಕ ವಯಸ್ಸಿನಲ್ಲಿ ಭಗತ್ ಸಿಂಗ್ ಕಾರ್ಲ್‌ಮಾರ್ಕ್ಸ್ ರಚಿಸಿದ ‘ಸಿವಿಲ್ ವಾರ್ ಇನ್ ಫ್ರಾನ್ಸ್’, ‘ಕಮ್ಯುನಿಸ್ಟ್ ಮೆನಿಫೆಸ್ಟೊ’ ಎಂಗೆಲ್ಸರ ‘ರೆವಲ್ಯೂಷನ್ ಆ್ಯಂಡ್ ಕೌಂಟರ್ ರೆವಲ್ಯೂಷನ್ ಇನ್ ಜರ್ಮನಿ’ ಲೆನಿನ್‌ರ ‘ಸ್ಟೇಟ್ ಆ್ಯಂಡ್ ರೆವಲ್ಯೂಷನ್’ ಪುಸ್ತಕಗಳನ್ನು ಓದಿದ್ದರು.

ಭಗತ್ ಸಿಂಗ್ ಗಲ್ಲಿಗೇರುವ ದಿನವೂ ಅವರನ್ನು ಭೇಟಿಯಾಗಲು ಬಂದ ಜೈಲರ್ ಗಮನಕ್ಕೆ ಭಗತ್‌ಲೆನಿನ್‌ರ ಪುಸ್ತಕ ಓದುತ್ತಿರುವುದು ಕಂಡು ಬಂತು. ಗಲ್ಲಿಗೇರಿಸುವ ಸಮಯವಾಯಿತು ಎಂದು ಹೇಳಿದಾಗ ‘‘ಕೊಂಚ ತಡೆಯಿರಿ, ಒಬ್ಬ ಕ್ರಾಂತಿಕಾರಿ ಇನ್ನೊಬ್ಬ ಕ್ರಾಂತಿಕಾರಿಯನ್ನು ಭೇಟಿಯಾಗುತ್ತಿದ್ದಾನೆ’’ ಎಂದು ಲೆನಿನ್ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ಹೇಳಿದರು. ನಂತರ ನೇಣುಗಂಬದತ್ತ ಸಾಗಿದರು.

ಭಗತ್ ಸಿಂಗ್ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೋಮುವಾದಿಗಳು ಅವರ ವಿಚಾರಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಿಸುವುದಿಲ್ಲ.ಇಲ್ಲವೇ ಎಲ್ಲ ಗೊತ್ತಿದ್ದೂ ನಾಟಕ ಮಾಡುತ್ತಾರೆ. ಭಗತ್ ಸಿಂಗ್ ಜೈಲಿನಲ್ಲಿದ್ದಾಗ ಬರೆದ ‘ನಾನೇಕೆ ನಾಸ್ತಿಕ’ ಎಂಬ ಸುದೀರ್ಘ ಲೇಖನ ಅವರ ತಾತ್ವಿಕ ನಿಲುವಿಗೆ ಸಾಕ್ಷಿಯಾಗಿದೆ. 1930ರ ಅಕ್ಟೋಬರ್ 7ನೇ ತಾರೀಕು ಲಾಹೋರ್ ಪಿತೂರಿ ಮೊಕದ್ದಮೆ ತೀರ್ಪು ಹೊರಬೀಳುವುದಕ್ಕೆ ಕೆಲ ದಿನಗಳ ಮೊದಲು ಈ ಲೇಖನ ಬರೆದರು. ಅದೀಗ ಪುಸ್ತಕ ರೂಪದಲ್ಲಿ ಎಲ್ಲೆಡೆ ಲಭ್ಯವಿದೆ. ಮೂಢನಂಬಿಕೆ, ಕಂದಾಚಾರ, ಪುರೋಹಿತ ಶಾಹಿ ವಂಚನೆಗಳನ್ನು ಭಗತ್ ಸಿಂಗ್ ಈ ಪುಸ್ತಕದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಭಗತ್ ಸಿಂಗ್ ಮನೆತನ ಮೂಲತಃ ಪಂಜಾಬಿನ ಜಲಂಧರ್ ಜಿಲ್ಲೆಯ ಖಾತ್ಕರ್ ಕಲಾನ್ ಎಂಬ ಹಳ್ಳಿಗೆ ಸೇರಿದ್ದು. ಅವರು ಹುಟ್ಟಿ ಬೆಳೆದ ಮನೆ ಈಗ ಪಾಕಿಸ್ತಾನದಲ್ಲಿದೆ. ಆ ಮನೆಯನ್ನು ಸುರಕ್ಷಿತವಾಗಿ ಇರಿಸಿದ ಪಾಕಿಸ್ತಾನ ಸರಕಾರ ಅದನ್ನು ಹೆಮ್ಮೆಯ ಸ್ಮಾರಕ ಎಂದು ಸಾರಿದೆ. ವಾಸ್ತವವಾಗಿ ಭಾರತ, ಪಾಕಿಸ್ತಾನ, ಮತ್ತು ಬಾಂಗ್ಲಾದೇಶ ಪ್ರಜೆಗಳು ಈಗ ಬೇರೆ ಬೇರೆ ಯಾಗಿರಬಹುದು. ಆದರೆ ನಮಗೆ ಒಂದೇ ಇತಿಹಾಸ ಇದೆ. ನಾವೆಲ್ಲ ಒಂದೇ ಕುಟುಂಬಕ್ಕೆ ಸೇರಿದವರು ಎಂಬುದನ್ನು ಮರೆಯಬಾರದು.

ಕೋಮುವಾದ ಭಾರತಕ್ಕೆ ಅಪಾಯಕಾರಿ ಎಂದು ಭಗತ್ ಸಿಂಗ್ ಆ ಚಿಕ್ಕ ವಯಸ್ಸಿನಲ್ಲೇ ತಿಳಿದಿದ್ದರು. ಬ್ರಿಟಿಷ್ ಸಾಮ್ರಾಜ್ಯಶಾಹಿ ಎಷ್ಟು ಗಂಡಾಂತರಕಾರಿಯೋ ಕೋಮುವಾದ ಕೂಡ ಅದಕ್ಕಿಂತ ಹೆಚ್ಚಿಗೆ ಮಾರಕವಾಗಿದೆ. ಅದು ಅಮಾಯಕ ಜನರಲ್ಲಿ ದ್ವೇಷದ ವಿಷಬೀಜ ಬಿತ್ತುತ್ತದೆ ಎಂದು ಭಗತ್ ಸಿಂಗ್ ತನ್ನ ಸಂಗಾತಿಗಳಿಗೆ ಆಗಾಗ ಹೇಳುತ್ತಿದ್ದರು. ನೌಜವಾನ್ ಸಭಾದ ಸ್ಥಾಪಕ ಕಾರ್ಯದರ್ಶಿಯಾಗಿದ್ದ ಭಗತ್ ಸಿಂಗ್ ಅದರ ಸದಸ್ಯರಿಗೆ ಕೆಲವು ನಿಯಮಗಳನ್ನು ರೂಪಿಸಿದ್ದರು. ಅವುಗಳಲ್ಲಿ ಎರಡು ನಿಯಮಗಳು ಅತ್ಯಂತ ಕಟ್ಟುನಿಟ್ಟಿನಿಂದ ಕೂಡಿದ್ದವು. 1.ಕೋಮುವಾದಿ ಸಿದ್ಧಾಂತದತ್ತ ಒಲವನ್ನು ಹೊಂದಿರುವ ಸಂಘಟನೆಗಳ ಯಾವ ಸಂಪರ್ಕವನ್ನೂ ಇಟ್ಟು ಕೊಳ್ಳಕೂಡದು. 2. ಧರ್ಮ ಜನರ ವೈಯಕ್ತಿಕ ವಿಚಾರವಾಗಿದೆ. ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ ಪರಸ್ಪರ ಸೌಹಾರ್ದ ಭಾವನೆಯನ್ನು ಹೊಂದಿರತಕ್ಕದ್ದು. ಇದು ಕೋಮುವಾದದ ಬಗ್ಗೆ ಭಗತ್ ಸಿಂಗ್ ನಿಲುವಿಗೆ ಉದಾಹರಣೆಯಾಗಿದೆ.

ಭಗತ್ ಸಿಂಗ್ ರಾಜಕೀಯ, ಸೈದ್ಧಾಂತಿಕ ನಿಲುವು ಏನಾಗಿತ್ತು ಎಂಬುದಕ್ಕೆ ಅವರು ಕಟ್ಟಿಕೊಂಡ ಸಂಘಟನೆಯ ಹೆಸರೇ ಸಾಕ್ಷಿಯಾಗಿದೆ. ಅವರ ಸಂಘಟನೆಯ ಹೆಸರು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಪಾರ್ಟಿ. ಅದರ ಕಾರ್ಯಕ್ರಮ, ಧೋರಣೆಗಳು ಸ್ಪಷ್ಟವಾಗಿದ್ದವು. ಸಮಾನತೆಯ ಸಮಾಜ ನಿರ್ಮಾಣ ಅದರ ಸ್ಪಷ್ಟ ಗುರಿಯಾಗಿತ್ತು.ಆದರೆ ಆಗ ಅಸ್ತಿತ್ವದಲ್ಲಿದ್ದ ಭಾರತದ ಕಮ್ಯುನಿಸ್ಟ್ ಪಕ್ಷದ ಜೊತೆಗೆ ಭಗತ್ ಸಿಂಗ್ ಒಡನಾಟ ಅಷ್ಟೊಂದಾಗಿ ಇರಲಿಲ್ಲ.ಮಾರ್ಕ್ಸವಾದ ಒಪ್ಪಿಕೊಂಡವರೆಲ್ಲ ಯಾವುದೋ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಬಹುದು ಅಥವಾ ಬಿಡಬಹುದು ಅದು ಅವರ ಆಯ್ಕೆಯಾಗಿದೆ.

ಇನ್ನು ಭಗತ್ ಸಿಂಗ್ ಗಲ್ಲಿಗೇರುವುದನ್ನು ಗಾಂಧೀಜಿ ತಪ್ಪಿಸಬಹುದಿತ್ತು. ಆದರೆ ಅವರು ಬ್ರಿಟಿಷ್ ಸರಕಾರದ ಮೇಲೆ ಒತ್ತಡ ಹೇರಲಿಲ್ಲ ಎಂಬ ಅಭಿಪ್ರಾಯವಿದೆ.ಈಗ ಪರ, ವಿರೋಧ ವಾದಗಳೂ ಇವೆ. ಗಾಂಧೀಜಿ ಆಪ್ತ ಕಾರ್ಯದರ್ಶಿ ಮಹಾದೇವ ದೇಸಾಯಿ ಅವರ ಡೈರಿಯಲ್ಲಿ ಉಲ್ಲೇಖಿಸಿದ ಪ್ರಕಾರ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳಿಗೆ ಗಲ್ಲು ಶಿಕ್ಷೆಯನ್ನು ತಪ್ಪಿಸಲು ಗಾಂಧೀಜಿ ಬ್ರಿಟಿಷ್ ವೈಸ್‌ರಾಯ ಮೇಲೆ ಸಾಕಷ್ಟು ಒತ್ತಡ ತಂದರು. ಆದರೆ ವೈಸ್‌ರಾಯ ಇವರ ಮನವಿಗೆ ಮಣಿಯಲಿಲ್ಲ. ಆದರೆ ಇದು ನಿಜವಲ್ಲ ಎಂಬ ಅಭಿಪ್ರಾಯವೂ ಇದೆ. ಭಗತ್ ಸಿಂಗ್ ನೇಣುಗಂಬ ಏರಿದ ನಂತರ ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ಕಮ್ಯುನಿಸ್ಟರ ತೀವ್ರ ಪ್ರತಿರೋಧವನ್ನು ಎದುರಿಸಬೇಕಾಯಿತು. ಭಗತ್ ಸಿಂಗ್‌ರನ್ನು ಉಳಿಸಿಕೊಳ್ಳಲಾಗದ ಗಾಂಧಿಗೆ ಧಿಕ್ಕಾರ ಎಂದು ಅನೇಕ ಕಾರ್ಯಕರ್ತರು ಕೂಗಿದರು. ಪ್ರತಿಭಟನೆಯ ಸಂಕೇತವಾಗಿ ಕಮ್ಯುನಿಸ್ಟರು ಗಾಂಧೀಜಿಗೆ ಕಪ್ಪುಹೂಗಳನ್ನು ನೀಡಿದಾಗ ಗಾಂಧೀಜಿ ಸ್ವೀಕರಿಸಿದರು.

ಹೆಸರಾಂತ ಇತಿಹಾಸಕಾರ ಬಿಪಿನ್‌ಚಂದ್ರ ಅವರ ಪ್ರಕಾರ ಭಗತ್ ಸಿಂಗ್ ಅವರನ್ನು ಮೊದಲು ಉಗ್ರಗಾಮಿ ಎಂದು ಕರೆಯುತ್ತಿದ್ದ ಭಾರತೀಯ ಕಮ್ಯುನಿಸ್ಟರು ತುಂಬಾ ತಡವಾಗಿ ಅವರನ್ನು ಅರ್ಥ ಮಾಡಿಕೊಂಡರು. ಭಗತ್ ಸಿಂಗ್ ಭಾರತದ ಆರಂಭಿಕ ಮಾರ್ಕ್ಸ್‌ವಾದಿಗಳ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಭಗತ್ ಸಿಂಗ್ ಮಾರ್ಕ್ಸ್‌ವಾದಿ ಸಿದ್ಧಾಂತಕ್ಕೆ ಬದ್ಧವಾಗಿದ್ದರೂ ವಿಮರ್ಶಾತ್ಮಕ ನಿಲುವನ್ನು ಹೊಂದಿದ್ದರು. ಅವರು ಮಾರ್ಕ್ಸ್, ಲೆನಿನ್, ಎಂಗೆಲ್ಸ್ ರ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಬಿಪಿನ್‌ಚಂದ್ರ ಬರೆದಿದ್ದಾರೆ. ಭಗತ್ ಸಿಂಗ್ ನೇಣುಗಂಬಕ್ಕೇರಿದ ನಂತರ ಅವರ ಒಡನಾಡಿಗಳೆಲ್ಲ ಕಮ್ಯುನಿಸ್ಟ್ ಚಳವಳಿಗೆ ಸೇರಿದರೆಂದು ಅಜಯ ಘೋಷ್ ಒಂದೆಡೆ ಬರೆದಿದ್ದಾರೆ.

ಭಾರತದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ನೇರವಾಗಿ ಕಮ್ಯುನಿಸ್ಟ್ ಪಕ್ಷಕ್ಕೆ ಬಂದಿದ್ದರೆ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸಕ್ಕೆ ಹೊಸ ತಿರುವು ಸಿಗಬಹುದಾಗಿತ್ತು. ಭೂಮಿಯ ಮತ್ತು ಸಂಪತ್ತಿನ ರಾಷ್ಟ್ರೀಕರಣವನ್ನು ಪ್ರತಿಪಾದಿಸಿದ ಅಂಬೇಡ್ಕರ್ ಭಾರತದ ಶ್ರೇಣೀಕೃತ ಜಾತಿ ಪದ್ದತಿಯ ವಾಸ್ತವವನ್ನು ಕಮ್ಯುನಿಸ್ಟರು ಪರಿಗಣಿಸಲಿಲ್ಲ ಎಂದು ಕಮ್ಯುನಿಸ್ಟರ ಜೊತೆ ಅಂತರ ಕಾಪಾಡಿಕೊಂಡರು. ಇನ್ನು ಭಗತ್ ಸಿಂಗ್ ಪಾರ್ಲಿಮೆಂಟಿನಲ್ಲಿ ಬಾಂಬ್ ಎಸೆದು ಬಂಧನಕ್ಕೆ ಒಳಗಾದ ನಂತರ ಆತ ಉಗ್ರಗಾಮಿ ಎಂದು ಭಾರತದ ಕಮ್ಯುನಿಸ್ಟರು ತಾವಾಗಿ ಅಂತರ ಕಾಪಾಡಿಕೊಂಡರು.ಭಗತ್ ಸಿಂಗ್ ಅವರನ್ನು ತಪ್ಪಾಗಿ ಅರ್ಥೈಸಿಕೊಂಡ ತಪ್ಪನ್ನು ತಿದ್ದಿಕೊಳ್ಳಲು ಎಪ್ಪತ್ತರ ದಶಕದವರೆಗೆ ಕಾಯ್ದು ನಂತರ ನಿಜವಾದ ಕ್ರಾಂತಿಕಾರಿ ಎಂದು ಒಪ್ಪಿಕೊಂಡರು. ಆದರೆ ಅಂಬೇಡ್ಕರ್ ಬಗೆಗಿನ ತಪ್ಪನ್ನು ತಿದ್ದಿಕೊಂಡಿದ್ದು ತುಂಬಾ ತಡವಾಗಿ. ಸೋವಿಯತ್ ಸಮಾಜವಾದಿ ವ್ಯವಸ್ಥೆ ಕುಸಿದು ಬಿದ್ದ ನಂತರ ಭಾರತದಲ್ಲಿ ನವ ನಾಜಿವಾದಿಗಳು ಹುಟ್ಟಿಕೊಂಡ ನಂತರ ತೊಂಭತ್ತರ ದಶಕದಲ್ಲಿ ಕಮ್ಯುನಿಸ್ಟ್ ಪಕ್ಷದ ಸಭೆ, ಸಮಾರಂಭಗಳಲ್ಲಿ ಅಂಬೇಡ್ಕರ್ ಫೋಟೊಗಳು ಕಾಣತೊಡಗಿದವು. ಬಾಬಾಸಾಹೇಬರ ಕುರಿತು ಪುಸ್ತಕಗಳು ಬಂದವು.

ಎಲ್ಲ ಚಳವಳಿಗಳೂ ನಾಪತ್ತೆಯಾಗಿ ಒಂದು ವಿಧದ ಶೂನ್ಯ ವಾತಾವರಣ ನಿರ್ಮಾಣವಾದಾಗ ಎಲ್ಲೆಡೆ ಕತ್ತಲು ಕವಿಯುತ್ತಿರುವಾಗ ರೈತಾಂದೋಲನ ಹೊಸ ಬೆಳಕಾಗಿ ಬಂದಿದೆ. ಭಗತ್ ಸಿಂಗ್ ಬಂದ ನೆಲದಿಂದಲೇ ಹೊರ ಹೊಮ್ಮಿದೆ. ರಾಜಧಾನಿ ದಿಲ್ಲಿಯಲ್ಲಿ ನೂರು ದಿನಗಳನ್ನು ದಾಟಿ ಐತಿಹಾಸಿಕ ಪ್ರತಿಭಟನೆ ಮುಂದುವರಿದಿದೆ. ಎಲ್ಲ ಧ್ವನಿಗಳನ್ನು ಹತ್ತಿಕ್ಕಿದ್ದೇವೆಂದು ಹೂಂಕರಿಸುತ್ತಿದ್ದ ಕಾರ್ಪೊರೇಟ್ ಖದೀಮರ ದ್ವಾರಪಾಲಕರ ನಿದ್ದೆಗೆಡೆಸಿದೆ. ಈ ಹೋರಾಟದಲ್ಲಿ ಭಗತ್ ಸಿಂಗ್ ಬಂಧು ಬಳಗದವರು ಪಾಲ್ಗೊಂಡಿದ್ದಾರೆ. ಅವರೂರಿನ ನೂರಾರು ಜನ ಬಂದಿದ್ದಾರೆ. ಅಂತಲೇ ಭಗತ್‌ರಂತಹವರಿಗೆ ಎಂದೂ ಸಾವಿಲ್ಲ. ನಿತ್ಯವೂ ಬೆಳಕಾಗಿ ನಮ್ಮೊಂದಿಗೆ ನಮ್ಮ ಮುಂದಿನ ಪೀಳಿಗೆಯೊಂದಿಗೆ ಅವರಿರುತ್ತಾರೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ