ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವವರೆಗೂ ಹೋರಾಟ: ಡಾ.ದರ್ಶನ್ ಪಾಲ್

Update: 2021-03-23 07:48 GMT

ಬೆಂಗಳೂರು, ಮಾ.22: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರ ಜಾರಿಗೆ ತಂದಿರುವ ಮೂರು ರೈತರ ವಿರೋಧಿ ಕಾನೂನುಗಳು, ವಿದ್ಯುಚ್ಛಕ್ತಿ ಮಸೂದೆ 2020 ಹಿಂಪಡೆಯುವುದು ಹಾಗೂ ದೇಶಾದ್ಯಂತ ರೈತರು ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸುವವರೆಗೆ ರೈತರ ಹೋರಾಟ ಮುಂದುವರಿಯಲಿದೆ ಎಂದು 475 ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯ ಡಾ.ದರ್ಶನ್ ಪಾಲ್ ತಿಳಿಸಿದ್ದಾರೆ.

ನಗರದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿಯವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಕಳೆದ ಮೂರುವರೆ ತಿಂಗಳಿನಿಂದ ರೈತರು ರಾಷ್ಟ್ರರಾಜಧಾನಿ ದಿಲ್ಲಿಯನ್ನು ಸಂಪರ್ಕಿಸುವ ಆರು ಗಡಿ ಭಾಗಗಳಲ್ಲಿ ರಾಷ್ಟೀಯ ಹೆದ್ದಾರಿಗಳಲ್ಲಿ ಈ ರೈತ ವಿರೋಧಿ ಕಾನೂನುಗಳನ್ನು ಪ್ರತಿಭಟಿಸಿ ಆಂದೋಲನ ನಡೆಸುತ್ತಿದ್ದಾರೆ ಎಂದರು.

ಜ.26 ಹಾಗೂ 27ರಂದು ರೈತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್‍ಗಳನ್ನು ತೆಗೆದು, ಜಲಫಿರಂಗಿ, ಅಶ್ರುವಾಯುಗಳನ್ನು ಎದುರಿಸಿ ದಿಲ್ಲಿಯ ಗಡಿಯೊಳಗೆ ಪ್ರವೇಶ ಮಾಡಿದರು ಎಂದರು. ಇದೊಂದು ಹಠಮಾರಿ ಸರಕಾರ. ಯಾವ ರೈತರು ಇವರಿಗೆ ಇಂತಹ ಕಾನೂನುಗಳು ಬೇಕು ಎಂದು ಕೇಳಿರಲಿಲ್ಲ. ನೋಟುಗಳ ಅಮಾನ್ಯೀಕರಣ ಮಾಡಿ ಎಂದು ಯಾರಾದರೂ ಕೇಳಿದ್ರಾ? ವ್ಯಾಟ್ ಅನ್ನು ಹೆಚ್ಚಳ ಮಾಡಿ ಜಮ್ಮು ಕಾಶ್ಮೀರ ರಾಜ್ಯವನ್ನು ವಿಭಜನೆ ಮಾಡುವಂತೆ ಅಲ್ಲಿನ ಜನತೆ ಕೇಳಿದ್ರಾ? ಈ ಮೂರು ಕಾನೂನುಗಳು ಕೃಷಿ ಕ್ಷೇತ್ರ, ಕೃಷಿ ಉತ್ಪನ್ನಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ನಡೆಸುತ್ತಿರುವ ಪ್ರಯತ್ನ ಎಂದು ದರ್ಶನ್ ಪಾಲ್ ಆರೋಪಿಸಿದರು.

ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಆಂದೋಲನಕ್ಕೆ ದೇಶದೆಲ್ಲೆಡೆ ಒಂದೇ ರೀತಿಯ ಬೆಂಬಲ ಸಿಗುತ್ತಿಲ್ಲ ಎಂಬ ಆಪಾದನೆಯೂ ಇದೆ. ಈ ದೇಶ ತುಂಬಾ ದೊಡ್ಡದು. ಪ್ರತಿಯೊಬ್ಬರ ಆಲೋಚನೆಯೂ ಭಿನ್ನವಾಗಿರುತ್ತದೆ. ಎಂ.ಎಸ್.ಪಿ. ಬೇಡಿಕೆಯು ವಿಭಿನ್ನವಾಗಿರುತ್ತದೆ. ಪಂಜಾಬ್, ಹರಿಯಾಣ ಹಾಗೂ ಪಶ್ಚಿಮ ಉತ್ತರ ಪ್ರದೇಶದ ರೈತರು ಮಂಡಿ ಹಾಗೂ ಎಂಎಸ್‍ಪಿ ಬಗ್ಗೆ ಚಿಂತಿತರಾಗಿದ್ದಾರೆ. ಅಂತಹ ಆತಂಕ ಒಡಿಶಾ ಹಾಗೂ ಜಾರ್ಖಂಡ್ ರಾಜ್ಯದ ರೈತರಿಗೆ ಇರುವುದಿಲ್ಲ ಎಂದು ಅವರು ಹೇಳಿದರು.

ಮೊದಲ ಬಾರಿ ರೈತರು ರಾಷ್ಟ್ರಮಟ್ಟದಲ್ಲಿ ಆಂದೋಲನ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳ ಮೂಲಕ ಬೇರೆ ರಾಜ್ಯಗಳಲ್ಲಿ ಇರುವವರಿಗೆ ರೈತರ ಆಂದೋಲನದ ಬಗ್ಗೆ ಸ್ವಲ್ಪ ಮಾಹಿತಿಯಾದರೂ ಇರುತ್ತದೆ. ಆದರೆ, ಹರಿಯಾಣ, ಪಂಜಾಬ್, ರಾಜಸ್ತಾನ ಹಾಗೂ ಪಶ್ಚಿಮ ಉತ್ತರಪ್ರದೇಶದಲ್ಲಿ ಪ್ರತಿಯೊಂದು ಮನೆಯಲ್ಲೂ ಈ ಬಗ್ಗೆ ಮಾಹಿತಿ ಇದೆ. ಕೇವಲ ಮೂರುವರೆ ತಿಂಗಳಿನಿಂದ ನಡೆಯುತ್ತಿರುವ ಈ ಆಂದೋಲನ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ ಎಂದು ದರ್ಶನ್ ಪಾಲ್ ತಿಳಿಸಿದರು.

ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿನ ರೈತರು ಈ ಆಂದೋಲನದ ಭಾಗವಾಗಲಿದ್ದಾರೆ. ರಾಜ್ಯದ ಶಿವಮೊಗ್ಗದಲ್ಲಿ ನಡೆದ ರೈತರ ಪಂಚಾಯತ್ ಯಶಸ್ವಿಯಾಗಿದೆ. ರೈತರಲ್ಲಿ ಸಹನ ಶಕ್ತಿ ಹೆಚ್ಚಿದೆ. ಆದುದರಿಂದ, ದಿಲ್ಲಿಯ ಗಡಿಯಲ್ಲಿ ರೈತರು ತಮ್ಮ ಟ್ರ್ಯಾಕ್ಟರ್ ಗಳ ಟ್ರಾಲಿಗಳಲ್ಲಿ ಆರಾಮಾಗಿ ಕುಳಿತಿದ್ದಾರೆ. ನರೇಂದ್ರ ಮೋದಿ ಯಾವಾಗ ನಿದ್ದೆಯಿಂದ ಎಚ್ಚರಗೊಂಡು ತಮ್ಮ ಮಾತನ್ನು ಆಲಿಸುತ್ತಾರೆ, ಈ ಕಾನೂನುಗಳನ್ನು ಹಿಂಪಡೆಯುತ್ತಾರೆ ಎಂದು ಕಾಯುತ್ತಿದ್ದಾರೆ. ಅವರು ಕಾನೂನುಗಳನ್ನು ಹಿಂಪಡೆಯುವವರೆಗೆ ರೈತರು ದಿಲ್ಲಿಯ ಗಡಿ ಬಿಟ್ಟು ಹೋಗುವುದಿಲ್ಲ ಎಂದು ಅವರು ಹೇಳಿದರು.

ರೈತರ ಹೋರಾಟವನ್ನು ದುರ್ಬಲಗೊಳಿಸಲು ಮೊದಲ ದಿನದಿಂದಲೂ ಪ್ರಯತ್ನ ನಡೆಯುತ್ತಿದೆ. ಹೋರಾಟಗಾರರನ್ನು ಪಾಕಿಸ್ತಾನಿಯರು, ಮಾವೋವಾದಿಗಳು, ದೇಶವಿರೋಧಿಗಳು ಸೇರಿದಂತೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದಾರೆ. ಆದರೂ, ಇವರ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಲಕ್ಷಾಂತರ ಜನ ರೈತರು, ಸಾವಿರಾರು ಟ್ರ್ಯಾಕ್ಟರ್ ಗಳು ಅಲ್ಲಿವೆ. 475 ಸಂಘಟನೆಗಳು ಈ ಹೋರಾಟಕ್ಕೆ ಕೈ ಜೋಡಿಸಿವೆ. ಎಲ್ಲ ರೈತ ಸಂಘಟನೆಗಳು ಒಂದು ವೇದಿಕೆಗೆ ಬಂದಿವೆ. ಎಲ್ಲರೂ ವಿಷಯಗಳನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ದರ್ಶನ್ ಪಾಲ್ ತಿಳಿಸಿದರು.

ನರೇಂದ್ರ ಮೋದಿ ವಿರುದ್ಧ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡುತ್ತಿದ್ದೇವೆ. ಒಂದಲ್ಲ, ಒಂದು ದಿನ ಮೋದಿ ನಿದ್ದೆಯಿಂದ ಎಚ್ಚರಗೊಳ್ಳಬೇಕು. ಅವರ ಬೆದರಿಕೆಗಳಿಗೆಲ್ಲ ಜನ ಸೊಪ್ಪು ಹಾಕಲ್ಲ. ದಿಲ್ಲಿಯಲ್ಲಿ ಶಾಹೀನ್ ಭಾಗ್, ಜೆಎನ್‍ಯು, ಜಾಮಿಯಾ ಮಿಲ್ಲಿಯಾ ಪ್ರಕರಣಗಳು ನಮ್ಮ ಮುಂದಿವೆ. ಈ ಸರಕಾರ ಹೋರಾಟಗಾರರ ಧ್ವನಿ ಹತ್ತಿಕ್ಕಲು ಪ್ರಯತ್ನ ಮಾಡುತ್ತಲೆ ಇರುತ್ತದೆ. ಏಕೆಂದರೆ, ಇದು ಅವರ ನೀತಿಯಾಗಿದೆ ಎಂದು ಅವರು ದೂರಿದರು.

ದೇಶದಲ್ಲಿ ರೈತರ ಆಂದೋಲನದ ಜೊತೆ ಜನತೆಯೂ ದೊಡ್ಡ ಮೊಟ್ಟದಲ್ಲಿ ಕೈ ಜೋಡಿಸಿದರೆ ನನಗೆ ವಿಶ್ವಾಸವಿದೆ. ಈ ಮೋದಿ ಸರಕಾರ ಭಸ್ಮವಾಗುತ್ತದೆ. ಇಂದಿನ ಯುವಕರು, ಹೊಸ ತಂತ್ರಜ್ಞಾನ, ಹೊಸ ಬಗೆಯ ಜ್ಞಾನಾರ್ಜನೆಗೆ ಮಹತ್ವ ನೀಡುತ್ತಾರೆ. ವೈಜ್ಞಾನಿಕವಾಗಿ ಎಲ್ಲವನ್ನೂ ಆಲೋಚನೆ ಮಾಡಲು ಬಯಸುತ್ತಾರೆ. ಆದುದರಿಂದ, ಅವರಿಗೆ ದೇಶದ ಇಂದಿನ ಪರಿಸ್ಥಿತಿ ಬಗ್ಗೆ ಅರ್ಥ ಮಾಡಿಕೊಳ್ಳಲು ಮುಂದಾಗಬೇಕು. ಯಾರಿಗೆ ಈ ಸರಕಾರ ಅನ್ಯಾಯ ಮಾಡುತ್ತಿದೆ. ಯುವಕರು ಅವರ ಪರವಾಗಿ ಧ್ವನಿ ಎತ್ತಬೇಕು. ರೈತರ ಆಂದೋಲನದಲ್ಲಿಯೂ ಯುವಕರು ಕೈ ಜೋಡಿಸಿದರೆ ಹೋರಾಟಕ್ಕೆ ಹೊಸ ಚೈತನ್ಯ ಬರುತ್ತದೆ ಎಂದು ದರ್ಶನ್ ಪಾಲ್ ಮನವಿ ಮಾಡಿದರು.

ಆಂದೋಲನ ಮಾಡುವವರಿಗೆ ದೊರೆಸ್ವಾಮಿ ಪ್ರೇರಕ ಶಕ್ತಿ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರನ್ನು ಇದೇ ಮೊದಲ ಬಾರಿ ಭೇಟಿಯಾಗುವ ಅವಕಾಶ ಸಿಕ್ಕಿತು. 104 ವರ್ಷಗಳ ಈ ಹಿರಿಯ ಜೀವ ಆಂದೋಲನ ಮಾಡುವವರಿಗೆ ಪ್ರೇರಕ ಶಕ್ತಿ. ದೇಶದ ಬೆಳವಣಿಗೆಗಳ ಬಗ್ಗೆ ಎಲ್ಲ ಮಾಹಿತಿಯನ್ನು ಹೊಂದಿದ್ದಾರೆ. ರೈತರ ಹೋರಾಟಗಳ ಬಗ್ಗೆಯೂ ಅವರಿಗೆ ಮಾಹಿತಿ ಇದೆ. ಇವರ ಹೋರಾಟದ ಹಾದಿ ನಮಗೆಲ್ಲ ಮಾರ್ಗದರ್ಶಿಯಾಗಿದೆ.

-ಡಾ.ದರ್ಶನ್ ಪಾಲ್, ರೈತ ಹೋರಾಟಗಾರ

Writer - ಅಮ್ಜದ್ ಖಾನ್ ಎಂ

contributor

Editor - ಅಮ್ಜದ್ ಖಾನ್ ಎಂ

contributor

Similar News