ಲಾಕ್‍ಡೌನ್ ಬಳಿಕ ಚೇತರಿಕೆಯಾಗದ ಗಾರ್ಮೆಂಟ್ಸ್ ಉದ್ಯಮ: 32 ಸಾವಿರ ಕಾರ್ಮಿಕರ 'ಬಲವಂತದ ರಾಜೀನಾಮೆ'

Update: 2021-03-22 17:10 GMT

ಬೆಂಗಳೂರು, ಮಾ.22: ಕೋವಿಡ್ ಪರಿಣಾಮವಾಗಿ ಕೇಂದ್ರ ಸರಕಾರ ಜಾರಿಗೊಳಿಸಿದ್ದ ಲಾಕ್‍ಡೌನ್ ಬಳಿಕವೂ ರಾಜಧಾನಿ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಉದ್ಯಮ ಚೇತರಿಕೆ ಕಂಡಿಲ್ಲ. ಇದರ ನಡುವೆ ಕಳೆದ ಹನ್ನೊಂದು ತಿಂಗಳಿನಿಂದ ಸುಮಾರು 30ರಿಂದ 32 ಸಾವಿರ ಕಾರ್ಮಿಕರಿಂದ ಕಾರ್ಖಾನೆ ಮಾಲಕರು ‘ಬಲವಂತ ರಾಜೀನಾಮೆ’ ಪಡೆದಿದ್ದಾರೆ.

ಈ ಕುರಿತು ಪರ್ಯಾಯ ಕಾನೂನು ವೇದಿಕೆ(ಎಎಲ್‍ಎಫ್) ಹಾಗೂ ಗಾರ್ಮೆಂಟ್ಸ್ ಅಂಡ್ ಟೆಕ್ಸ್‍ಟೈಲ್ ವರ್ಕರ್ಸ್ ಯೂನಿಯನ್(ಜಿಎಟಿಡಬ್ಲ್ಯೂಯು) ನಡೆಸಿರುವ ಅಧ್ಯಯನದ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೋವಿಡ್ ಆರಂಭದ ದಿನಗಳಲ್ಲಿ ಬೆಂಗಳೂರಿನಲ್ಲಿ ಮೂರು ಸ್ಥಳಗಳಲ್ಲಿ ಸಮೀಕ್ಷೆ ನಡೆಸಿದ 25 ಕಾರ್ಖಾನೆಗಳ ಪೈಕಿ 9 ಕಾರ್ಖಾನೆಗಳನ್ನು ಸಂಪೂರ್ಣ ಬಾಗಿಲು ಹಾಕಲಾಗಿತ್ತು. ಇದರ ಪರಿಣಾಮ 7200 ಕಾರ್ಮಿಕರು ಬೀದಿಪಾಲಾಗಿದ್ದಾರೆ.

ಮತ್ತೊಂದೆಡೆ 16 ಕಾರ್ಖಾನೆಗಳಲ್ಲಿ ಕಾರ್ಮಿಕರ ಸಂಖ್ಯೆಯನ್ನು ಗಣನೀಯವಾಗಿ ಇಳಿಕೆ ಮಾಡಿದ ಪರಿಣಾಮ 11 ಸಾವಿರ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಒಟ್ಟಾರೆ 25 ಕಾರ್ಖಾನೆಗಳಲ್ಲಿ 42 ಸಾವಿರಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದು, ಇದರಲ್ಲಿ ಶೇಕಡ 62ರಷ್ಟು ಕಾರ್ಮಿಕರಿಂದ ಬಲವಂತ ರಾಜೀನಾಮೆ ಪಡೆದು, ಹೊರಹಾಕಲಾಗಿದೆ.

ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿಯೇ ಕಳೆದ ವಾರ್ಷಿಕ ಸಾಲಿನ ಏಪ್ರಿಲ್‍ನಲ್ಲಿಯೇ 65 ಕಂಪೆನಿಗಳು ಬಂದ್ ಆಗಿವೆ. ಇನ್ನು, ಈ ಅವಧಿಯಲ್ಲಿ 10 ಸಾವಿರ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದು, ಕಾರ್ಮಿಕ ವಲಯದಲ್ಲಿ ಆತಂಕ ಹೆಚ್ಚಾಗಿದೆ.

ಬಲವಂತದ ರಾಜೀನಾಮೆ: ಕಾರ್ಖಾನೆಗಳು ಭಾರೀ ನಷ್ಟ ಅನುಭವಿಸಿದ್ದು, ಸ್ವಯಂಪ್ರೇರಿತ ರಾಜೀನಾಮೆ ನೀಡಬೇಕೆಂದು ಹೇಳಿರುವುದಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಕಾರ್ಮಿಕರು ನುಡಿದಿದ್ದಾರೆ. ಇಲ್ಲಿ ಕಾರ್ಮಿಕ ವಿರೋಧಿ ನೀತಿಗಳೆಲ್ಲವೂ ಕೈಗಾರಿಕಾ ವ್ಯಾಜ್ಯ ಕಾಯ್ದೆ ಶಡ್ಯೂಲ್ ಸೆಕ್ಷನ್‍ಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ ಎನ್ನುತ್ತಾರೆ ಕಾರ್ಮಿಕ ಹೋರಾಟಗಾರರು.

ಇನ್ನು, ಕಾರ್ಖಾನೆಗಳ ಕಾನೂನು ಪ್ರಕಾರ ಅಧಿಕೃತವಾಗಿ ಮುಚ್ಚಿದರೆ ಕಾರ್ಮಿಕರಿಗೆ ಪರಿಹಾರ ಧನ ನೀಡಬೇಕಿತ್ತು. ಆದರೆ, ಇದು ಯಾವುದೂ ಅವರಿಗೆ ಸಿಕ್ಕಿಲ್ಲ. ದಿಢೀರ್ ರಾಜೀನಾಮೆಯಿಂದಾಗಿ ಸೇವಾವಧಿ ಕಡಿತಗೊಂಡಿದೆ. ಇದರ ಪರಿಣಾಮ ಪಿಎಫ್‍ನಲ್ಲಿ ಸಿಗುವ ಪಿಂಚಣಿಯಿಂದಲೂ ವಂಚಿತರಾಗಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.

ಶಿಫಾರಸು: ಗಾರ್ಮೆಂಟ್ಸ್ ಕಾರ್ಮಿಕರ ಸ್ಥಿತಿ-ಗತಿಗಳ ಮೇಲೆ ಬೆಳಕು ಚೆಲ್ಲಿರುವ ಈ ಅಧ್ಯಯನದಲ್ಲಿ, ಕಾರ್ಮಿಕ ಇಲಾಖೆಯು ಈ ಕೂಡಲೇ ಕಾರ್ಖಾನೆಗಳನ್ನು ತನಿಖೆಗೊಳಪಡಿಸಿ ಕಾರ್ಮಿಕರ ಸಾಮೂಹಿಕ ರಾಜೀನಾಮೆಯು ಸ್ವ ಇಚ್ಛೆಯಿಂದ ನೀಡಿದ್ದೋ, ಅಥವಾ ಬಲವಂತವಾಗಿ ಪಡೆದದ್ದೋ ಎಂದು ತನಿಖೆಗೊಳಪಡಿಸಿ ಸ್ವಯಂ ದೂರನ್ನು ದಾಖಲಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.

ಅದೇ ರೀತಿ, ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆ ಕಾರ್ಮಿಕ ಇಲಾಖೆಯು ಸಮರ್ಥ ಕಾರ್ಯಕ್ರಮಗಳನ್ನು ರೂಪಿಸಬೇಕು. ಗಾರ್ಮೆಂಟ್ಸ್ ಮಾಲಕರು ಕೇವಲ ಸರಕಾರ ನಿಗದಿ ಪಡಿಸಿದ ಕನಿಷ್ಠ ವೇತನವನ್ನು ಮಾತ್ರವೇ ನೀಡುತ್ತಾರೆ. ಆದ್ದರಿಂದ ಕಳೆದ ಬಾರಿ 2019 ರಲ್ಲಿ ಶೇ.9ರಷ್ಟು ಮಾತ್ರ ಹೆಚ್ಚಿಸಿ ಕನಿಷ್ಠ ವೇತನ ನಿಗದಿ ಮಾಡಲಾಗಿತ್ತು. ಆದ್ದರಿಂದ ತಕ್ಷಣವೇ ಗಾರ್ಮೆಂಟ್ಸ್ ಉದ್ಯಮಕ್ಕೆ ಕನಿಷ್ಠ ವೇತನವನ್ನು ಹೆಚ್ಚಿಸಬೇಕು. ಅತಿ ಶೀಘ್ರದಲ್ಲಿ ಕಾರ್ಮಿಕ ಸಂಹಿತೆಗಳು ಜಾರಿಯಾಗಬಹುದಾದ್ದರಿಂದ, ಆ ನೀತಿ ನಿಯಮಗಳು ರಾಜ್ಯದ ಗಾರ್ಮೆಂಟ್ಸ್ ಉದ್ಯಮದ ಕಾರ್ಮಿಕರ ಕೆಲಸದ ಪರಿಸ್ಥಿತಿ ಮತ್ತು ಬದುಕಿನ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುತ್ತದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಸರಕಾರಗಳು ಗಾರ್ಮೆಂಟ್ಸ್ ಕಾರ್ಮಿಕರಿಗೆ ಶೂನ್ಯ ಬಡ್ಡಿಯಲ್ಲಿ ಮನೆ ಸಾಲವನ್ನು ಒದಗಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

‘ಸರಕಾರಗಳ ಸಹಾಯವಿಲ್ಲ’

ಬ್ಯಾಂಕ್‍ಗಳಿಂದ ಸಾಲ ಪಡೆಯುವ ಮೂಲಕ ಗಾರ್ಮೆಂಟ್ಸ್ ಉದ್ಯಮ ನಡೆಸುತ್ತಿದ್ದೆವು. ಆದರೆ, ಏಕಾಏಕಿ ಲಾಕ್‍ಡೌನ್ ಘೋಷಣೆ ಮಾಡಿದ ಪರಿಣಾಮ ವಾಹನಗಳ ಸಾಗಾಟ ಇಲ್ಲದೆ, ಉದ್ಯಮವೇ ನಷ್ಟಕ್ಕೆ ಬಂದಿತು. ಈ ಸಂದರ್ಭದಲ್ಲಿ ಸರಕಾರಗಳು ಯಾವುದೇ ಸಹಾಯ ಮಾಡಿಲ್ಲ. ಹಾಗಾಗಿ, ಇದ್ದ ಕಾರ್ಖಾನೆಯನ್ನು ಮಾರಾಟ ಮಾಡಿ ಬ್ಯಾಂಕಿಗೆ ಸಾಲ ಮರುಪಾವತಿ ಮಾಡಿದೆ. ಪರಿಸ್ಥಿತಿ ಹೀಗಿರುವಾಗ, ಕಾರ್ಮಿಕರನ್ನು ಹೇಗೆ ರಕ್ಷಣೆ ಮಾಡಲಿ?

-ಮನೋಹನ್ ಕುಮಾರ್, ಚೈತ್ರಾ ಗಾರ್ಮೆಂಟ್ಸ್ ಮಾಲಕ

ಬದುಕು ಕಷ್ಟಕರ

ನಾನು, ಜತೆಗೆ ಪತ್ನಿಯೂ ಇಲ್ಲಿನ ಪೀಣ್ಯ ಭಾಗದ ಪ್ರತಿಷ್ಠಿತ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಏಳೆಂಟು ವರ್ಷಗಳಿಂದ ದುಡಿಯುತ್ತಿದ್ದವು. ಆದರೆ, ಏಕಾಏಕಿ ಲಾಕ್‍ಡೌನ್ ಘೋಷಿಸಿದ ಪರಿಣಾಮ ಸಾರಿಗೆ ವ್ಯವಸ್ಥೆಯಿಲ್ಲದೆ, ಕಾರ್ಖಾನೆ ಚಟುವಟಿಕೆಗಳು ಸ್ಥಗಿತಗೊಂಡವು. ಬಳಿಕ ಮಾಲಕರು ಕೆಲಸಕ್ಕೆ ಬರಬೇಡಿ ಎಂದು ಮೊಬೈಲ್ ಕರೆ ಮೂಲಕವೇ ಹೇಳಿದರು.

-ರವೀಶ್ ಗೌಡ, ಗಾರ್ಮೆಂಟ್ಸ್ ಕಾರ್ಮಿಕ

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News