ರಾಜ್ಯದಲ್ಲಿ ನಿಷೇಧವಿದ್ದರೂ ಮುಂದುವರಿದ ಮಲಹೊರುವ ಅನಿಷ್ಟ ಪದ್ಧತಿ

Update: 2021-03-25 18:38 GMT

ಬೆಂಗಳೂರು, ಮಾ.25: ರಾಜ್ಯದಲ್ಲಿ ಮಲ ಹೊರುವ ಪದ್ಧತಿ ನಿಷೇಧದ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದರೂ ಬೆಂಗಳೂರು ನಗರದ ಮಹಾಲಕ್ಷ್ಮಿ ಲೇಔಟ್‍ನ ಆಂಜನೇಯ ದೇವಸ್ಥಾನದ ಬಳಿ ಕಾರ್ಮಿಕರಿಬ್ಬರು ಬರೀ ಕೈಯಲ್ಲಿ ಮಲ ತೆಗೆಯುತ್ತಿದ್ದ ಘಟನೆ ನಡೆದಿದೆ.

ಇತ್ತೀಚೆಗಷ್ಟೆ ಜಲಮಂಡಳಿ ಕೈಯಲ್ಲಿ ಮಲವನ್ನು ತೆಗೆಯುವುದರ ಕುರಿತು ನಗರದ ವಿವಿಧೆಡೆ ನಾಟಕ ರೂಪದಲ್ಲಿ ಜಾಗೃತಿ ಮೂಡಿಸಿತ್ತು. ಹಾಗೂ ಯಾವುದೇ ಪ್ರದೇಶದಲ್ಲಿ ಮಲವನ್ನು ಕೈಯಿಂದ ಶುಚಿ ಮಾಡುವುದು ಕಂಡುಬಂದರೆ, ಆ ಪ್ರದೇಶಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ದಂಡ ಹಾಗೂ ಜೈಲು ಶಿಕ್ಷೆಯಂತಹ ಕಠಿಣ ಕಾನೂನು ಜಾರಿಯಲ್ಲಿದೆ. ಹಾಗಿದ್ದರೂ ಮಲ ಹೊರುವ ಪದ್ಧತಿ ಯಥಾಪ್ರಕಾರವಾಗಿ ಮುಂದುವರಿಯುತ್ತಿದೆ.

ಮಹಾಲಕ್ಷ್ಮಿ ಲೇಔಟ್‍ನಲ್ಲಿ ಮಲವನ್ನು ಸ್ವಚ್ಛ ಮಾಡುತ್ತಿದ್ದ ವ್ಯಕ್ತಿಗಳನ್ನು ಪೌರಕಾರ್ಮಿಕರ ಪರಿವರ್ತನಾ ಸಂಘದ ಆನಂದ್ ಎಂಬವರು ಮಾತನಾಡಿಸಿದಾಗ, 'ನಮ್ಮ ಕೆಲಸವೇ ಇದು. ಈ ಕೆಲಸ ಬಿಟ್ಟರೆ ಬೇರೆ ಕೆಲಸ ಮಾಡಲು ಬರುವುದಿಲ್ಲವೆಂದು' ಪ್ರತಿಕ್ರಿಯಿಸಿದ್ದಾರೆ. ಹೀಗೆ ರಾಜ್ಯಾದ್ಯಂತ ಸಾವಿರಾರು ಮಂದಿ ಈ ಕೆಲಸವನ್ನು ಪ್ರತಿದಿನ ಮುಂದುವರಿಸಿದ್ದಾರೆ. ಆದರೆ, ರಾಜ್ಯ ಸರಕಾರ ಮಾತ್ರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆನಂದ್ ಆರೋಪಿಸುತ್ತಾರೆ.

ಬಿಬಿಎಂಪಿ ಹಾಗೂ ಬಿಡಬ್ಲುಎಸ್‍ಎಸ್‍ಬಿ ಕೇವಲ ನಾಮಕಾವಾಸ್ತೆಗೆ ಮಲಹೊರುವ ಪದ್ಧತಿ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕೈಯಿಂದ ಮಲವನ್ನು ಸ್ವಚ್ಛ ಮಾಡುವ ಒಂದೆರಡು ಪ್ರಕರಣದಲ್ಲಾದರು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ದಂಡ ಹಾಗೂ ಶಿಕ್ಷೆಗೆ ಗುರಿಪಡಿಸಿದ್ದರೆ ಪ್ರಕರಣಗಳು ಕಡಿಮೆಯಾಗುತ್ತಿತ್ತು. ಆದರೆ, ಇಲ್ಲಿಯವರೆಗೆ ಯಾವೊಂದು ಪ್ರಕರಣದಲ್ಲೂ ಶಿಕ್ಷೆಯಾಗಿಲ್ಲ. ಹೀಗಾಗಿ ಮಲ ಹೊರುವ ಪದ್ಧತಿ ಮುಂದುವರಿದಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಇನ್ನೊಂದೆಡೆ ಮಲ ಹೊರುವ ಪದ್ಧತಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಪುನರ್ ವಸತಿ ಕಲ್ಪಿಸಿ, ಅವರನ್ನು ಬೇರೆ ಕೆಲಸಗಳಿಗೆ ನಿಯೋಜಿಸಿದರೆ ಹಂತ ಹಂತವಾಗಿ ಇದನ್ನು ನಿಯಂತ್ರಿಸಬಹುದು. ಆದರೆ, ಸರಕಾರದ ಬಳಿ ರಾಜ್ಯದಲ್ಲಿ ಮಲ ಹೊರುವ ಕೆಲಸದಲ್ಲಿ ಎಷ್ಟು ಮಂದಿ ತೊಡಗಿದ್ದಾರೆಂಬ ಸರಿಯಾದ ಅಂಕಿಅಂಶಗಳೇ ಇಲ್ಲ. ಹೀಗಾಗಿ ಮೊದಲು ಮಲ ಹೊರುವ ಕೆಲಸದಲ್ಲಿ ತೊಡಗಿರುವ ಕಾರ್ಮಿಕರ ಅಂಕಿ ಅಂಶಗಳನ್ನು ಸಂಗ್ರಹಿಸಿ, ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಚೇರಿ ಬೆಂಗಳೂರಿನಲ್ಲಿದೆ. ಅಲ್ಲಿಯೇ ಮಲವನ್ನು ಕೈಯಿಂದ ತೆಗೆಯುವಂತಹ ಘಟನೆಗಳು ನಡೆಯುತ್ತಿವೆ. ಈ ಸಂಬಂಧ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಆಯೋಗ ವಿಫಲವಾಗಿದೆ. ಅದರ ಪರಿಣಾಮ ರಾಜ್ಯಾದ್ಯಂತ ಮಲದ ಗುಂಡಿಗೆ ಇಳಿಯುವ ಕಾರ್ಮಿಕರು ಉಸಿರುಗಟ್ಟಿ ಅಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ಮುಂದಾದರು ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ.

-ಆನಂದ್, ಪೌರಕಾರ್ಮಿಕರ ಪರಿವರ್ತನಾ ಸಂಘ

Writer - ಮಂಜುನಾಥ ದಾಸನಪುರ

contributor

Editor - ಮಂಜುನಾಥ ದಾಸನಪುರ

contributor

Similar News