ಹುಣಸೋಡು ಸ್ಫೋಟ: ಅಕ್ರಮ ಕಲ್ಲು ಗಣಿಗಾರಿಕೆ ಭೂಮಿ ಮುಟ್ಟುಗೋಲಿಗೆ ವರ್ಷದಿಂದಲೂ ನಡೆದಿದೆ ಕಸರತ್ತು

Update: 2021-03-28 12:40 GMT

ಶಿವಮೊಗ್ಗ, ಮಾ.28: ನಗರದ ಹೊರವಲಯದಲ್ಲಿ ಅಕ್ರಮವಾಗಿ ಕಲ್ಲಿನ ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ನಡೆಯುತ್ತಿರುವ ಹಿಡುವಳಿ ಜಮೀನುಗಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಕಳೆದೆರೆಡು ವರ್ಷಗಳ ಹಿಂದೆಯೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಕಂದಾಯ ಇಲಾಖೆಗೆ ಪತ್ರ ಬರೆದಿರುವ ಅಂಶ ಬೆಳಕಿಗೆ ಬಂದಿದೆ.

ಆದರೆ ಈ ಶಿಫಾರಸ್ಸು ಜಾರಿಗೊಳಿಸುವಲ್ಲಿ ಕಂದಾಯ ಇಲಾಖೆಯು ರಾಜಕೀಯ ಒತ್ತಡದ ಕಾರಣ ವಿಳಂಬ ಧೋರಣೆ ಅನುಸರಿಸಿದ್ದು, ಜನವರಿ 21ರಂದು ಹುಣಸೋಡಿನಲ್ಲಿ ಸಂಭವಿಸಿದ ಭಾರೀ ಸ್ಫೋಟಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

2019ರ ಅಕ್ಟೋಬರ್ ನಲ್ಲಿ ಡಿಎಸ್ಎಸ್ ನ ಹಾಲೇಶಪ್ಪ ತಹಶೀಲ್ದಾರ್ ಗೆ ಮನವಿ ಸಲ್ಲಿಸಿ ಕಲ್ಲಗಂಗೂರು ಸ.ನಂ.1/1, 1/2 ಮತ್ತು 2ರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಲು ಕೋರಿದ್ದರು. ಆ ಮೇರೆಗೆ ರಾಜಸ್ವ ನಿರೀಕ್ಷಕರು ಸ್ಥಳ ಪರಿಶೀಲನೆ ಮಾಡಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತದ್ದುದನ್ನು ಖಚಿತ ಪಡಿಸಿದ್ದರು. ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳು 9.01.2020 ರಂದು ತಹಶೀಲ್ದಾರ್ ಅವರಿಗೆ ಬರೆದ ಪತ್ರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಹಲವು ಬಾರಿ ದಂಡ ವಿಧಿಸಿದ್ದರೂ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಿಲ್ಲ. ಇದರಿಂದ ಅಕ್ಕಪಕ್ಕದ ಕೃಷಿ ಭೂಮಿಯ ನೀರಾವರಿ ಸೌಕರ್ಯ ಕಡಿತಗೊಂಡಿದೆ. ವಾಯು, ಶಬ್ಧ ಮತ್ತು ಪರಿಸರ ಮಾಲಿನ್ಯ ಕೂಡ ಆಗುತ್ತಿದೆ.

ಕೃಷಿ ಭೂಮಿಯಲ್ಲಿ ಕೃಷಿಯೇತರ ಚಟುವಟಿಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರನ್ವಯ ಸದರಿ ಜಮೀನುಗಳನ್ನು ಸರ್ಕಾರಿ ಫಡಾ ಮಾಡಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದ್ದರು. ಇದರನ್ವಯ ತಹಶೀಲ್ದಾರ್ ಅವರು ಕಲ್ಲಗಂಗೂರು ಸ.ನಂ.11/1, 2, 1/2 13/32, 5/1,5/6,9/3, 44,11.3/10/6,13,3.2.1/2.1/ ರ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದು ಸರ್ಕಾರಿ ಫಡಾ ಎಂದು ದಾಖಲಿಸಲು ಅನುಮತಿ ಕೋರಿ ಉಪ ವಿಭಾಗಾಧಿಕಾರಿಗಳಿಗೆ 30.01.2020 ರಂದು ಪತ್ರ ಬರೆದಿದ್ದರು.

ಇದಕ್ಕೆ 20.02.2020 ರಂದು ಉಪ ವಿಭಾಗಾಧಿಕಾರಿಗಳು ತಹಶೀಲ್ದಾರ್ ಅವರಿಗೆ ಮರು ಪತ್ರ ಬರೆದು ಕೇವಲ ಈ ರೀತಿ ಪತ್ರ ವ್ಯವಹಾರ ನಡೆಸದೇ ಪಹಣಿಯಲ್ಲಿರುವ ಹೆಸರು ತೆಗೆದುಹಾಕುವ ಮುನ್ನ ಸಂಬಂಧಿಸಿದವರಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ನಡೆಸಿ ಅಗತ್ಯ ನಿಯಮ ಪಾಲಿಸುವಂತೆ ಸೂಚಿಸಿದ್ದರು.

ನಿಯಮ ಪಾಲನೆ ಅನ್ವಯ ತಹಶೀಲ್ದಾರ್ ಅವರು ಸದರಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಭೂ ಮಾಲಕರಿಗೆ 05.02.2020, 27.05.2020  30.07.2020 ಮತ್ತು 02.01.2021 ರಂದು ನೋಟಿಸ್ ನೀಡಿದ್ದರು. ಇದಕ್ಕೆ ಕೇವಲ ಇಬ್ಬರು ಮಾತ್ರ ಉತ್ತರ ನೀಡಿದ್ದರು. ಹೀಗಾಗಿ ಇದೀಗ 27.01.2021 ರಂದು ತಹಶೀಲ್ದಾರ್ ಮತ್ತೊಮ್ಮೆ ಮೇಲ್ಕಂಡ ಸ.ನಂ. ಭೂಮಿಯನ್ನು ಸರ್ಕಾರಿ ಫಡಾಕ್ಕೆ ದಾಖಲಿಸುವ ಬಗ್ಗೆ ಆದೇಶ ಕೋರಿ ಉಪ ವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಈ ಎಲ್ಲಾ ಪತ್ರ ವ್ಯವಹಾರಗಳನ್ನು ಗಮನಿಸಿದರೆ ಕಲ್ಲಗಂಗೂರು ಭಾಗದಲ್ಲಿ ವ್ಯಾಪಕವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿತ್ತು ಎಂದು ಹೇಳಲಾಗುತ್ತಿದೆ. ಆದರೂ ಇದನ್ನು ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಹಾಗೂ ಈ ಎಲ್ಲಾ ಪತ್ರ ವ್ಯವಹಾರದ ಬಗ್ಗೆ ಜಿಲ್ಲಾಡಳಿತಕ್ಕೂ ಮಾಹಿತಿ ಇತ್ತು. ಅವರೂ ಯಾವುದೇ ಕ್ರಮ ವಹಿಸಿಲ್ಲ. ಸದರಿ ಅಕ್ರಮಕ್ಕೆ ಸಾಥ್ ನೀಡುತ್ತಿರುವ ರಾಜಕೀಯ ನಾಯಕರ ಒತ್ತಡ ಇದಕ್ಕೆ ಕಾರಣವಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Writer - ಶರತ್ ಪುರದಾಳ್

contributor

Editor - ಶರತ್ ಪುರದಾಳ್

contributor

Similar News