ಮುಂಬೈ ಪ್ರತಿಭೆಗಳನ್ನು ಬೆಳಕಿಗೆ ತಂದ ಸ್ಥಳೀಯ ಪ್ರಕಾಶನ ಸಂಸ್ಥೆಗಳು

Update: 2021-04-01 19:30 GMT

ಮುಖ್ಯವಾಗಿ ಇಲ್ಲಿ ಗಮನಿಸಲೇಬೇಕಾದ ಅಂಶವೆಂದರೆ; ಇಲ್ಲಿನ ಪ್ರಕಾಶನ ಸಂಸ್ಥೆಗಳು ಎಂದೂ ಲಾಭದ ದೃಷ್ಟಿಯಿಂದ ಕೃತಿಗಳನ್ನು ಪ್ರಕಟಿಸಿದ ಸಂಸ್ಥೆಗಳಲ್ಲ; ಕರ್ನಾಟಕದ ಗ್ರಂಥಾಲಯ ತಮ್ಮ ಕೃತಿಗಳನ್ನು ಖರೀದಿಸುತ್ತದೆ ಎಂಬ ಆಶೆಯನ್ನು ಹೊತ್ತ ಸಂಸ್ಥೆಗಳೂ ಅಲ್ಲ. ಕೆಲವರ ಕೃತಿಗಳು ಪ್ರಕಟಗೊಳ್ಳುವ ಸಂದರ್ಭದಲ್ಲಿ ಅವರ ಕೃತಿಗಳನ್ನು ದೊಡ್ಡ ಮೊತ್ತದಲ್ಲಿ ಖರೀದಿಸುವ ಅಥವಾ ಧನ ಸಹಾಯ ಮಾಡುವ ಬಿ. ಎಸ್. ಕುರ್ಕಾಲ್, ಎಂ. ಬಿ. ಕುಕ್ಯಾನ್, ಬಾಬು ಶಿವ ಪೂಜಾರಿ, ಶೇಖರ್ ಆರ್. ಶೆಟ್ಟಿ ಮುಂತಾದ ವಿಶಾಲ ಮನಸ್ಸುಗಳು ಇಲ್ಲಿದ್ದವು; ಇನ್ನೂ ಇವೆ.


ಕನ್ನಡ ಸಾಹಿತ್ಯ ರಂಗದ ಹಲವು ಮಜಲುಗಳನ್ನು ದಾಟಿ ಈಗಲೂ ತನ್ನದೇ ಆದ ಅನನ್ಯತೆಯನ್ನು ಮುಂಬೈ ಕನ್ನಡ ಸಾಹಿತ್ಯರಂಗ ಉಳಿಸಿಕೊಂಡಿದೆ. ಸುಮಾರು ನೂರೈವತ್ತು ವರ್ಷಗಳ ಇತಿಹಾಸವನ್ನು ಹೊಂದಿರುವ ಮುಂಬೈ ಕನ್ನಡ ಸಾಹಿತ್ಯ ರಂಗಕ್ಕೆ ಪ್ರಥಮ ಕೊಡುಗೆಯಾಗಿ ‘ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ’ವನ್ನು ಕೃತಿರೂಪದಲ್ಲಿ 1887ರಲ್ಲಿ ಹವ್ಯಕ ಹಿತೇಚ್ಛು (ಹವ್ಯಕ ಹಿತೈಷಿ) ಎಂಬ ಪ್ರಕಾಶನ ಸಂಸ್ಥೆ ನೀಡುತ್ತದೆ. ವಿದ್ವಾಂಸರೊಬ್ಬರು ಮನೆಮಾತಿನಲ್ಲಿ ಬರೆದ ‘ಸಾಮಾಜಿಕ ದೃಶ್ಯ’ ಎಂದು ಉಲ್ಲೇಖಿಸಲ್ಪಟ್ಟಿರುವ ಆ ಕೃತಿಯಲ್ಲಿ ನಿಜವಾದ ಲೇಖಕರ ಹೆಸರನ್ನು ನಮೂದಿಸಿರಲಿಲ್ಲ. ಮುಂದೆ ಇಲ್ಲಿಯ ಕನ್ನಡದ ಪ್ರಥಮ ಸಾಮಾಜಿಕ ಸ್ವತಂತ್ರ

ಕೃತಿಯೆಂದು ಗುರುತಿಸಲ್ಪಟ್ಟು ಗೌರವಕ್ಕೆ ಪಾತ್ರವಾದ ಆ ಕೃತಿಯ ಕರ್ತೃ ಕರ್ಕಿ ವೆಂಕಟರಮಣಶಾಸ್ತ್ರಿ ಸೂರಿಯವರು ಎಂಬುದು ಇಂದು ಇತಿಹಾಸ.
‘ಹವ್ಯಕ ಹಿತೇಚ್ಛು’ವಿನ ನಂತರ ನಮೂದಿಸಲೇಬೇಕಾದ ಹೆಸರು ‘ಶ್ರೀಮದ್ಭಾರತ ಮಂಡಳಿ’. ಸುಮಾರು ನೂರ ನಲ್ವತ್ತ ಮೂರು ವರ್ಷಗಳ ಇತಿಹಾಸವನ್ನು ಹೊಂದಿರುವ ಮುಂಬೈ ಕನ್ನಡಿಗರ ಹಿರಿಯ ಸಂಸ್ಥೆ ‘ಶ್ರೀ ಮದ್ಭಾರತ ಮಂಡಳಿ’. ಗಮಕ ವಾಚನದ ಮೂಲಕ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸೇವೆಯನ್ನು ನಿರಂತರ ಮಾಡುತ್ತಾ ಬಂದಿರುವ ಮಂಡಳಿಯ ಸಾಹಿತ್ಯ ಸಾಧನೆಯನ್ನು ಎಂದೂ ಅವಗಣಿಸುವಂತಿಲ್ಲ. ಮಂಡಳಿಯು ರಾಮಪಂಜಿ ಹಾಗೂ ಕರ್ಕಿ ವೆಂಕಟರಮಣ ಶಾಸ್ತ್ರೀ ಸೂರಿ ಇವರಿಬ್ಬರಿಂದ ಪರಿಷ್ಕರಿಸಲ್ಪಟ್ಟ ಅನಾಮಧೇಯ ಕವಿಯ ಬೃಹದ್ಗಂಥ ‘ಶ್ರೀ ಶಂಕರ ಸಂಹಿತೆ’ಯನ್ನು 1888ರಲ್ಲಿ ಪ್ರಕಟಿಸಿತ್ತು. ಮುಂದೆ ಅದೇ ಸಂಸ್ಥೆಯು 1889ರಲ್ಲಿ ‘ತುರಂಗ ಭಾರತ’ ಎಂಬ ಗ್ರಂಥವನ್ನೂ ಪ್ರಕಟಿಸಿತ್ತು.

‘ಕೆನರಾ ಡ್ರಮಾಟಿಕ್ ಅಮೆಚೂರ್ ಸಂಘ’ವು 1912ರಲ್ಲಿ ಎಂ. ಎನ್. ಕಾಮತ್ ಅವರ ‘ಸಂಗೀತ ಸುವಾದ’ ಎಂಬ ಸಂಗೀತ ನಾಟಕವನ್ನು ಪ್ರಕಟಿಸಿತ್ತು. ಮುಂಬೈ ಸಾಹಿತ್ಯ ರಂಗದಲ್ಲಿ ಈ ಮೂರೂ ಸಂಸ್ಥೆಗಳು ಪ್ರಕಾಶನಕ್ಕೆ ಒಂದು ಗಟ್ಟಿ ಅಡಿಗಲ್ಲನ್ನು ಹಾಕಿದವು. ಅವುಗಳನ್ನು ಅನುಸರಿಸಿ ನೂರಾರು ಸಂಸ್ಥೆಗಳು, ವ್ಯಕ್ತಿಗಳು ಹಲವಾರು ಕೃತಿಗಳ ಪ್ರಕಾಶನ ಕಾರ್ಯದಲ್ಲಿ ತೊಡಗಿಕೊಂಡದ್ದು ಮುಂಬೈಯ ಹಿರಿಮೆ.

ಮುಂಬೈ ವಿಶ್ವವಿದ್ಯಾನಿಲಯದ ಬೇರೆ ವಿಭಾಗಗಳಿಗಿಂತ ಭಿನ್ನವಾಗಿ ಸದಾ ಕ್ರಿಯಾಶೀಲವಾಗಿರುವ ‘ಕನ್ನಡ ವಿಭಾಗ’ ತನ್ನ ಪ್ರಕಾಶನ ಯೋಜನೆಯ ಮೂಲಕ ಗಮನಾರ್ಹ ಮೌಲಿಕ ಕೃತಿಗಳನ್ನು ಪ್ರಕಟಿಸಿದೆ. ‘ಪದವೀಧರ ಯಕ್ಷಗಾನ ಸಮಿತಿ’ಯು (1973) ಹಸ್ತಪ್ರತಿ ರೂಪದಲ್ಲಿದ್ದ ಸುಮಾರು ನೂರ ಅರುವತ್ತು ಅತ್ಯಮೂಲ್ಯ ಯಕ್ಷಗಾನ ಪ್ರಸಂಗಗಳನ್ನು ಮುದ್ರಿಸಿ ಪ್ರಕಟಿಸಿವೆ. ಯಕ್ಷಗಾನ ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳಲ್ಲಿ ಸಾದರಪಡಿಸಿದ ಸುಮಾರು ಹದಿನಾಲ್ಕು ಪ್ರಬಂಧಗಳನ್ನು ಕೃತಿರೂಪದಲ್ಲಿ ತಂದಿದೆ. ‘ಯಕ್ಷಗಾನ ಮುಖವರ್ಣಿಕೆ’ಯಂತಹ ಮಹತ್ವದ ಕೃತಿಯನ್ನು ತಂದ ಹೆಗ್ಗಳಿಕೆ ‘ಪದವೀಧರ ಯಕ್ಷಗಾನ ಸಮಿತಿ’ಗೆ ಸಲ್ಲುತ್ತದೆ.

ಮುಂಬೈ ಸಾಹಿತಿಗಳ, ಮುಖ್ಯವಾಗಿ ಯುವ ಬರಹಗಾರರ ಕೃತಿಗಳು ಬೆಳಕಿಗೆ ಬರಬೇಕೆಂಬ ಉದ್ದೇಶದಿಂದ 1984ರಲ್ಲಿ ಹುಟ್ಟಿಕೊಂಡ ಸಂಸ್ಥೆ ‘ಕನ್ನಡ ಸಾಹಿತ್ಯ ಸಂಗಮ’. ಬರಹಗಾರರ ಬಗ್ಗೆ ಕಳಕಳಿ ಇರುವ ಅದರ ಆಶಯ ನುಡಿಯನ್ನು ಗಮನಿಸೋಣ: ‘‘ಮುಂಬೈಯಲ್ಲಿದ್ದುಕೊಂಡು ಕನ್ನಡವನ್ನು ನೆಚ್ಚಿಕೊಂಡು ಹಲವು ಸಾಹಿತ್ಯ ಪ್ರೇಮಿ ಬರಹಗಾರರು ತಮ್ಮ ಸಂವೇದನೆಗಳನ್ನು ಕೃತಿರೂಪಕ್ಕಿಳಿಸುವರು. ಬಿಡಿಯಾಗಿ ಅಲ್ಲಲ್ಲಿ ಪತ್ರಿಕೆಗಳಲ್ಲಿ ಅವು ಪ್ರಕಟವಾಗಿವೆ. ತಮ್ಮ ಬರಹಗಳನ್ನು ಗ್ರಂಥರೂಪವಾಗಿ ಅಚ್ಚು ಹಾಕುವ ಸ್ವಾಭಾವಿಕ ಇಚ್ಛೆ ಅವರಿಗಿದೆ. ಆದರೆ ಈ ನಿಟ್ಟಿನಲ್ಲಿ ಮಾತ್ರ ಧೈರ್ಯ ಮಾಡಲಾರರು. ತಮ್ಮ ಕೃತಿಗಳನ್ನು ಓದುಗರಿಗೆ ತಲುಪಿಸುವ ಬಗೆಯಲ್ಲಿ ಅನಿಶ್ಚಿತ ವ್ಯವಸ್ಥೆಗಳಿಂದಾಗಿ ಅವರಿಗೆ ದಾರಿ ಕಾಣದಿರುವ ಪ್ರಸಂಗ, ನಾಮವಂತ ಪ್ರಕಾಶಕರು ದೊರೆಯಲಾರರು. ಪುಸ್ತಕ ವ್ಯಾಪಾರಿಗಳಿಗೆ ಹೊಸಬರಾದ ಇವರು ಅಸ್ಪೃಶ್ಯರು. ಹೀಗಿರುವಾಗ ಅವರು ಏನು ಮಾಡಬೇಕು? ಅವರ ಸಂವೇದನೆಗಳು ಕೇವಲ ಅಪ್ರಕಟಿತ ವೇದನೆಗಳಾಗಿ ಉಳಿದುಕೊಂಡಿರಬೇಕೇ ಅಥವಾ ಬರೆಯುವುದನ್ನು ಬಿಟ್ಟು ಕೈ ತೊಳೆದುಕೊಳ್ಳಬೇಕೇ?’’ ಎಂಬ ಪ್ರಸ್ತಾವನೆಯಲ್ಲಿ ಆ ಸಂಸ್ಥೆಯ ಧ್ಯೇಯೋದ್ದೇಶ ಸ್ಪಷ್ಟವಾಗಿತ್ತು. ಕೇರಳದ ‘ಕೋಆಪರೇಟಿವ್ ಮೂಮೆಂಟ್’ ರೀತಿಯಲ್ಲಿ ಈ ಪ್ರಕಾಶನ ಸಂಸ್ಥೆಯನ್ನು ಕಟ್ಟಬೇಕೆಂಬುದು ಸಂಸ್ಥೆ ಕಟ್ಟಿದವರ ಆಶಯ. ಆ ನಿಟ್ಟಿನಲ್ಲಿ ‘ಸಂಗಮ’ವು ಸುಮಾರು ಇಪ್ಪತ್ತೊಂದು ವೈವಿಧ್ಯಮಯ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದೆ. 1992ರಲ್ಲಿ ಅಸ್ತಿತ್ವಕ್ಕೆ ಬಂದ ‘ಸಾಹಿತ್ಯ ಬಳಗ’ವು ‘ಅಣಿ ಅರದಾಲ ಸಿರಿ ಸಿಂಗಾರ’ ಎಂಬ ಮಹತ್ವದ ಕೃತಿಯನ್ನಲ್ಲದೆ ಇತರ ಸುಮಾರು ಅರವತ್ತೈದಕ್ಕೂ ಮೇಲ್ಪಟ್ಟು ಅಮೂಲ್ಯವಾದ ಪ್ರತಿಗಳನ್ನು ಸಾರಸ್ವತ ಲೋಕಕ್ಕೆ ತನ್ನ ಪ್ರಕಾಶನದ ಮೂಲಕ ನೀಡಿದೆ. ಆ ಮೂಲಕ ಎಷ್ಟೋ ಹೊಸ ಪ್ರತಿಭೆಗಳಿಗೆ ಪ್ರಕಾಶನವು ಉತ್ತಮ ವೇದಿಕೆಯನ್ನು ಒದಗಿಸಿದೆ. ಓರ್ವ ಸಾಹಿತಿ ಅನ್ನಿಸಿಕೊಳ್ಳಲು ಕೆಲವೊಂದು ಸಾಹಿತ್ಯ ಸಮ್ಮೇಳನಗಳಲ್ಲಿ ವೇದಿಕೆ ಏರಲು ಕನಿಷ್ಠಪಕ್ಷ ಒಂದಾದರೂ ಕವನ ಸಂಕಲನ ಪ್ರಕಟಗೊಂಡಿರಬೇಕು ಎಂಬ ಅಲಿಖಿತ ನಿಯಮಗಳಿವೆ ಎಂಬುದನ್ನು ಮನಗಂಡು, ಅವಕಾಶವಂಚಿತ ಪ್ರತಿಭಾನ್ವಿತ ಕವಿಗಳ ಕೃತಿಗಳನ್ನು ಹೊರತಂದ ಹಿರಿಮೆ ‘ಸಾಹಿತ್ಯ ಬಳಗ’ಕ್ಕೆ ಸಲ್ಲುತ್ತದೆ.

ಉಲ್ಲೇಖಿಸಲೇಬೇಕಾದ ಮಹತ್ವದ ಪ್ರಕಾಶನ ಸಂಸ್ಥೆಗಳಲ್ಲಿ ‘ಅಭಿಜಿತ್ ಪ್ರಕಾಶನ’ವೂ ಒಂದು. ತಮ್ಮ ವಿದ್ಯಾರ್ಥಿ, ಬಹುಮುಖ ಪ್ರತಿಭೆಯ ಕವಿ ಮರಿಯಪ್ಪನಾಟೇಕರ್ ಅವರ ಪ್ರಥಮ ಕವನ ಸಂಕಲನ ‘ಇತಿಹಾಸ ಮರೆತವರು’ ಕೃತಿಯನ್ನು ಹೊರತರಲು ಪರದಾಡುತ್ತಿದ್ದ ಸಂದರ್ಭ ಡಾ. ಜಿ. ಎನ್. ಉಪಾಧ್ಯ ತಮ್ಮ ವಿದ್ಯಾರ್ಥಿಯ ಕೃತಿಯನ್ನು ಹೊರತರಲು ‘ಅಭಿಜಿತ್ ಪ್ರಕಾಶನ’ (2005) ಸಂಸ್ಥೆಯನ್ನು ಹುಟ್ಟು ಹಾಕಿದರು. ಆನಂತರ ಆ ಪ್ರಕಾಶನದದಿಂದ ನಿರಂತರವಾಗಿ ಕೃತಿಗಳು ಬೆಳಕು ಕಾಣತೊಡಗಿದವು. ಪ್ರಕಾಶಕರಿಲ್ಲ ಎಂದು ಹತಾಶರಾದವರಿಗೆ ಒಂದು ಹೊಸ ಆಶಾಕಿರಣದ ರೂಪದಲ್ಲಿ ‘ಅಭಿಜಿತ್ ಪ್ರಕಾಶನ’ ಬೆಳೆಯಿತು. ಈಗಾಗಲೇ ಹಲವಾರು ಮಹತ್ವದ ಕೃತಿಗಳು ಆ ಪ್ರಕಾಶನದ ಮೂಲಕ ಸಾರಸ್ವತ ಲೋಕಕ್ಕೆ ಬಂದಿರುವುದನ್ನು ನಾವು ಗಮನಿಸಬಹುದು. ‘ಇತಿಹಾಸ ಮರೆತವರು’ ಕೃತಿಯಿಂದ ಮೊದಲ್ಗೊಂಡು ಇತ್ತೀಚಿನ ಪಾಂಗಾಳ ವಿಶ್ವನಾಥ ಶೆಟ್ಟಿಯವರ ‘ಅರ್ಥಸಹಿತ ಕಬೀರದಾಸರ ದೋಹಗಳು’ ವರೆಗಿನ ನೂರ ಹದಿನೈದು ಕೃತಿಗಳು ಕೇವಲ ಹದಿನಾರು ವರ್ಷಗಳಲ್ಲಿ ಬೆಳಕು ಕಂಡಿರುವುದು ಹೊರನಾಡಿನಲ್ಲಿರುವ ‘ಅಭಿಜಿತ್ ಪ್ರಕಾಶನ’ದ ಹೆಗ್ಗಳಿಕೆಯೂ ಹೌದು. ಈ ನಡುವೆ ಗೋರೆಗಾಂವ್ ಕರ್ನಾಟಕ ಸಂಘ, ಕರ್ನಾಟಕ ಸಂಘ, ಮಾಟುಂಗ ಮೊದಲಾದ ಸಂಘ, ಸಂಸ್ಥೆಗಳು, ಮೊಗವೀರ ವ್ಯವಸ್ಥಾಪಕ ಮಂಡಳಿ, ಬಂಟರ ಸಂಘ ಮುಂಬೈ ಮೊದಲಾದ ಜಾತೀಯ ಸಂಘಟನೆಗಳು ಸಾಹಿತ್ಯ ಪರಿಚಾರಿಕೆಯ ಜತೆಜತೆಗೆ ಕೆಲವೊಂದು ಕೃತಿಗಳನ್ನು ಪ್ರಕಟಿಸುತ್ತಾ ಬಂದಿವೆ.

ಲೇಖಕರು ತಾವೇ ಕೈಯಿಂದ ಹಣ ಹಾಕಿ, ತಮ್ಮ ಪ್ರಕಾಶನಗಳ ಮೂಲಕವೇ ಕೃತಿಗಳನ್ನು ಪ್ರಕಟಿಸಿ ಕೈ ಸುಟ್ಟುಕೊಂಡಿರುವ ನೂರಾರು ದೃಷ್ಟಾಂತಗಳೂ ಇವೆ. ಅಂತಹ ಪ್ರಕಾಶಕರಲ್ಲಿ ರಮಾನಂದ ಅಮೀನ್ ಮುಂಚೂಣಿಯಲ್ಲಿದ್ದವರು. ತಮ್ಮ ಸುಮಾರು ಇಪ್ಪತ್ತಾರು ಕಾದಂಬರಿಗಳನ್ನು ತಮ್ಮದೇ ‘ಚಂದ್ರ ಸಾಗರ’ ಎಂಬ ಪ್ರಕಾಶನದ ಮೂಲಕ ಪ್ರಕಟಿಸಿ ಕೊನೆಗೆ ತನ್ನವರಿಗೇ ಭಾರವಾದಂತಹ ವ್ಯಥೆಯ ಕಥೆಗಳು ಈ ಮಹಾನಗರದುದ್ದಕ್ಕೂ ಹುದುಗಿಕೊಂಡಿವೆ. ತಮ್ಮದೇ ಪ್ರಕಾಶನಗಳ ಮೂಲಕ ತಮ್ಮ ಕೃತಿಗಳನ್ನು ಪ್ರಕಟಿಸಿದ್ದ ‘ಸಾಹಿತ್ಯ ಲಹರಿ ಪ್ರಕಾಶನ’, ‘ಅಕ್ಷಯ ಪ್ರಕಾಶನ’, ‘ಕವಿತಾ ಪ್ರಕಾಶನ’ ಮೊದಲಾದವುಗಳು ಮುಂಚೂಣಿಯ ಹೆಸರುಗಳು. ತಮ್ಮ ಕೃತಿಗಳನ್ನು ಪ್ರಕಟಿಸಲೆಂದು ಹುಟ್ಟಿದ ಕೆಲವು ಪ್ರಕಾಶನಗಳು ಇತರ ಲೇಖಕರ ಕೃತಿಗಳನ್ನೂ ಪ್ರಕಟಿಸಿವೆ. ಅದರಲ್ಲಿ ದಾಖಲಿಸಲೇಬೇಕಾದ ಹೆಸರುಗಳು ‘ಅಭಿಜ್ಞಾ ಪ್ರಕಾಶನ’, ‘ಗುರುಕುಲ ಪ್ರಕಾಶನ’, ‘ಪೂಜಾ ಪ್ರಕಾಶನ’, ‘ಸನ್ನಿಧಿ ಪ್ರಕಾಶನ’ ಮೊದಲಾದುವುಗಳು, ಜಿ. ಡಿ. ಜೋಶಿ ಪ್ರತಿಷ್ಠಾನ, ಮನುಕುಲ ಪ್ರಕಾಶನ, ಗುರುಭಾರತಿ ಅಧ್ಯಯನ ಕೇಂದ್ರ, ಮುಂಬೈ ಚುಕ್ಕಿ ಸಂಕುಲ (ಲೇಖಕ, ಕಲಾವಿದರ ಬಳಗ) ಸೃಜನಾ ಮೊದಲಾದ ಸಂಸ್ಥೆಗಳೂ ಪ್ರಕಾಶನ ಕಾರ್ಯದಲ್ಲಿ ಸಕ್ರಿಯವಾಗಿರುವುದನ್ನು ನಾವು ಗಮನಿಸಬಹುದು. ಕೆಲವೊಂದು ವಿದ್ಯಾ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಿವೆ. ಅವುಗಳಲ್ಲಿ ಯಂಗ್ ಮೆನ್ಸ್ ಎಜುಕೇಶನ್ ಸೊಸೈಟಿ, ಕನ್ನಡ ಭವನ, ಮದರ್ ಇಂಡಿಯಾ ಮೊದಲಾದವುಗಳನ್ನು ಗಮನಿಸಬಹುದು. ಮುಖ್ಯವಾಗಿ ಇಲ್ಲಿ ಗಮನಿಸಲೇಬೇಕಾದ ಅಂಶವೆಂದರೆ; ಇವು ಎಂದೂ ಲಾಭದ ದೃಷ್ಟಿಯಿಂದ ಕೃತಿಗಳನ್ನು ಪ್ರಕಟಿಸಿದ ಪ್ರಕಾಶನ ಸಂಸ್ಥೆಗಳಲ್ಲ; ಕರ್ನಾಟಕದ ಗ್ರಂಥಾಲಯ ತಮ್ಮ ಕೃತಿಗಳನ್ನು ಖರೀದಿಸುತ್ತದೆ ಎಂಬ ಆಶೆಯನ್ನು ಹೊತ್ತ ಸಂಸ್ಥೆಗಳೂ ಅಲ್ಲ.

 ಕೆಲವರ ಕೃತಿಗಳು ಪ್ರಕಟಗೊಳ್ಳುವ ಸಂದರ್ಭದಲ್ಲಿ ಅವರ ಕೃತಿಗಳನ್ನು ದೊಡ್ಡ ಮೊತ್ತದಲ್ಲಿ ಖರೀದಿಸುವ ಅಥವಾ ಧನ ಸಹಾಯ ಮಾಡುವ ಬಿ. ಎಸ್. ಕುರ್ಕಾಲ್, ಎಂ. ಬಿ. ಕುಕ್ಯಾನ್, ಬಾಬು ಶಿವ ಪೂಜಾರಿ, ಶೇಖರ್ ಆರ್. ಶೆಟ್ಟಿ ಮುಂತಾದ ವಿಶಾಲ ಮನಸ್ಸುಗಳು ಇಲ್ಲಿದ್ದವು; ಇನ್ನೂ ಇವೆ. ಬೆಂಗಳೂರಿನ ಕೆಲವೊಂದು ಪ್ರಕಾಶನ ಸಂಸ್ಥೆಗಳು ವಾಟ್ಸ್‌ಆ್ಯಪ್, ಫೇಸ್‌ಬುಕ್ ಮೂಲಕ ತಾವು ಪ್ರಕಾಶಕರೆಂದೂ, ಕವಿ, ಸಾಹಿತಿಗಳ ಕೃತಿಗಳಿದ್ದರೆ ನಾವು ಪ್ರಕಟಿಸುತ್ತೇವೆ ಎನ್ನುತ್ತಾ ‘‘ಕೃತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಣ ಮಾಡುವಂತಿದ್ದ್ದರೆ ಅಂತಹ ಕೃತಿಯನ್ನು ನಾವು ಪ್ರಕಾಶನಕ್ಕೆ ಸ್ವೀಕರಿಸುತ್ತೇವೆ’’ ಎಂದೂ, ಶೀಘ್ರ ತಮ್ಮ ಹಸ್ತಪ್ರತಿ ಕಳುಹಿಸಬೇಕೆಂದು ಅಪ್ಪಣೆ ಮಾಡುತ್ತವೆ. ಆ ಪ್ರಕಾಶನ ಸಂಸ್ಥೆಗಳು ಲೇಖಕರಿಗೆ ಕೇವಲ ಇಪ್ಪತ್ತೈದು ಮುದ್ರಿತ ಕೃತಿಗಳನ್ನು ನೀಡುತ್ತವೆ. ಜೊತೆಗೆ ನೂರು ಮುದ್ರಿತ ಕೃತಿಗಳನ್ನು ನಮೂದಿಸಿದ ಮುಖಬೆಲೆಯಲ್ಲಿ ಲೇಖಕ/ಕಿ ಖರೀದಿಸಬೇಕು!.

ಇವು ಗ್ರಂಥಾಲಯಕ್ಕಾಗಿ ಕೃತಿಗಳನ್ನು ರವಾನಿಸುವ ‘ದಂಧೆ’ ಮಾಡುವ ಒಳನಾಡಿನ ಪ್ರಕಾಶನ ಸಂಸ್ಥೆಗಳು. ಇವುಗಳ ಬಲೆಗೆ ಬಿದ್ದ ಮುಂಬೈ ಬಡಪಾಯಿಗಳು ಬಹಳಷ್ಟು ಮಂದಿ. ಗ್ರಂಥಾಲಯ ಪುಸ್ತಕ ಖರೀದಿ ಸಂಬಂಧಿಸಿ ಮುಂಬೈಯ ಹೆಚ್ಚಿನ ಲೇಖಕರಿಗೆ/ಪ್ರಕಾಶಕರಿಗೆ ಮಾಹಿತಿ ದೊರೆಯುವುದು ಅದರ ಅಂತಿಮ ದಿನ ಮುಗಿದ ನಂತರ. ಎಲ್ಲಾ ಭರವಸೆಗಳನ್ನು ನೀಡಿ ಇಲ್ಲಿಂದ ಬೆಂಗಳೂರಿಗೆ ಮುಖ ಮಾಡುವ ಅಧಿಕಾರಿಗಳಿಗೆ ಅದರ ಪರಿವೇ ಇರುವುದಿಲ್ಲ. ಇಲ್ಲಿನ ಲೇಖಕರೋರ್ವರ ಕೃತಿ ಗ್ರಂಥಾಲಯಕ್ಕೆ ಕಳುಹಿಸಲ್ಪಟ್ಟು ಅಲ್ಲಿಂದ ಹಣ ಬರುವ ಯಾವುದೇ ಸೂಚನೆ ಇಲ್ಲದಾಗ, ಆ ವ್ಯಕ್ತಿ ಹಲವಾರು ಅಧಿಕಾರಿಗಳಿಗೆ ನೂರಾರು ಪತ್ರವ್ಯವಹಾರ ಮಾಡಿ ಸೋತು ಕೊನೆಗೆ ‘‘ನನಗೆ ಸಲ್ಲಬೇಕಾದ ನನ್ನ ಕೃತಿಯ ಹಣ ಯಾರಿಗೆ ನೀಡಲಾಗಿದೆ? ಅದರ ವಿವರಗಳನ್ನು ನಾನು ಆರ್‌ಟಿಐ ಮೂಲಕ ಕಂಡು ಹಿಡಿಯುವೆ’’ ಎಂದು ಸಂಬಂಧಪಟ್ಟ ಎಲ್ಲಾ ವಿಭಾಗಕ್ಕೂ, ಮುಖ್ಯಮಂತ್ರಿಯವರಿಗೂ ಪತ್ರ ಕಳುಹಿಸಿದ ನಂತರ ಅಂದರೆ ಕೃತಿಗಳನ್ನು ಕಳುಹಿಸಿ ಒಂದೂವರೆ ವರ್ಷಗಳ ನಂತರ ಮೂರು ಸಾವಿರ ರೂಪಾಯಿಯನ್ನು ತಮ್ಮ ಪ್ರಕಾಶನದ ಹೆಸರಲ್ಲಿ ಚೆಕ್ಕು ಕಳುಹಿಸಿದ ದೃಷ್ಟಾಂತವೂ ಇದೆ. ಇಂತಹ ಸಂದಿಗ್ಧತೆಯಲ್ಲೂ ಮುಂಬೈ ಕನ್ನಡ ಸಾಹಿತಿಗಳು ತಮ್ಮಷ್ಟಕ್ಕೆ ತಾವು ಕೃತಿ ರಚಿಸುತ್ತಾ ಪ್ರಕಟನಾ ಕ್ಷೇತ್ರದಲ್ಲೂ ದಿಟ್ಟ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ.

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News