‘ಸರ್ವರಿಗೂ ಸಂವಿಧಾನ’: ಅದ್ಭುತ ರಂಗ ಪ್ರಯೋಗ

Update: 2021-04-11 19:30 GMT

ಸುಮಾರು ಎರಡೂವರೆ ತಾಸಿನ ‘ಸರ್ವರಿಗೂ ಸಂವಿಧಾನ’ ನಾಟಕ ನೋಡುವಾಗ ಕಲಬುರಗಿಯ ಕೆಂಡದಂತಹ ಬಿಸಿಲು ಮರೆತೆವು. ಇಡೀ ಪ್ರೇಕ್ಷಕರನ್ನು ಈ ನಾಟಕ ಸಂವಿಧಾನದ ಅರಿವಿನ ಲೋಕಕ್ಕೆ ಕೊಂಡೊಯ್ದು ವಿಸ್ಮಿತರನ್ನಾಗಿ ಮಾಡಿತು. ಕೋವಿಡ್ ಕಾರಣದಿಂದ ಹೆಚ್ಚು ಪ್ರೇಕ್ಷಕರಿಗೆ ಅವಕಾಶವಿರಲಿಲ್ಲ. ನಾಟಕ ನೋಡಿದವರೆಲ್ಲ (ನಮ್ಮಂತಹ ಕೆಲವರನ್ನು ಬಿಟ್ಟು) ವಿದ್ಯಾರ್ಥಿಗಳು. ನಾಟಕವು ಎಲ್ಲಿಯೂ ಬೇಸರ ಉಂಟು ಮಾಡಲಿಲ್ಲ. ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸಿತು.
ಕನ್ನಡ ರಂಗಭೂಮಿಯ ವೈಭವದ ದಿನಗಳು ಮಾಯವಾದವೇನೋ ಎಂಬ ಸ್ಥಿತಿ ಇರುವ ಸಂದರ್ಭದಲ್ಲಿ ಇಂತಹ ಅಪರೂಪದ ಪ್ರಯೋಗಗಳು ನಡೆದಿರುವುದು ಸಂತಸದ ಸಂಗತಿ.



ಸಂವಿಧಾನದ ಆಶಯಗಳನ್ನು ರಂಗಭೂಮಿಯ ಮೇಲೆ ಕಲಾತ್ಮಕವಾಗಿ ಕಟ್ಟಿಕೊಡುವ ‘ಸರ್ವರಿಗೂ ಸಂವಿಧಾನ’ ಎಂಬ ಅದ್ಭುತ ನಾಟಕವನ್ನು ಇತ್ತೀಚೆಗೆ ಕಲಬುರಗಿಯಲ್ಲಿ ನೋಡಿ ಅಚ್ಚರಿಗೊಂಡೆ. ಸಂವಿಧಾನದ ಬಗ್ಗೆ ಭಾಷಣ ಮಾಡಬಹುದು ಮತ್ತು ಲೇಖನ ಬರೆಯಬಹುದು. ಸಂವಾದವೂ ನಡೆಸಬಹುದು. ಆದರೆ, ಸಂವಿಧಾನವನ್ನು ಒಂದು ವಸ್ತುವನ್ನಾಗಿ ಇಟ್ಟುಕೊಂಡು ಒಂದು ನಾಟಕ ಮಾಡಲು ಸಾಧ್ಯವೇ?

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಅಪ್ಪಗೆರೆ ಸೋಮಶೇಖರ್ ಅವರು ಇದನ್ನು ಸಾಧ್ಯವಾಗಿಸಿದ್ದಾರೆ. ಅಪ್ಪಗೆರೆ ಸೋಮಶೇಖರ್ ಅವರ ಅಪಾರ ಪರಿಶ್ರಮದಿಂದ ಸಿದ್ಧಗೊಂಡ ಈ ನಾಟಕ ಕಲಬುರ್ಗಿ ರಂಗಾಯಣ ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಹಯೋಗದಿಂದ ರಂಗಕ್ಕೆ ಬಂದು ಮೊದಲ ಪ್ರಯೋಗ ನಡೆಯಿತು. ಈ ನಾಟಕವನ್ನು ನಿರ್ದೇಶಿಸಿರುವ ಕಲಬುರಗಿಯ ಅನಿಲ ರೇವೂರ ಅವರ ನಿರ್ದೇಶನ ಪರಿಣಾಮಕಾರಿಯಾಗಿದೆ. ಈವರೆಗೆ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಇಂತಹ ನಾಟಕ ಬಂದಿರಲಿಕ್ಕಿಲ್ಲ. ಕರ್ನಾಟಕದ ನಾನಾ ಭಾಗಗಳ ಕಲಾವಿದರ ಅದ್ಭುತ ಅಭಿನಯ, ಪಿಚ್ಚಳ್ಳಿ ಶ್ರೀನಿವಾಸ ಅವರ ಸಂಗೀತ ಸಂಯೋಜನೆ ಪ್ರೇಕ್ಷಕರ ಮನ ಸೆಳೆಯಿತು. ‘ಸರ್ವರಿಗೂ ಸಂವಿಧಾನ’ ಎಂಬ ಈ ನಾಟಕ ನಾಡಿನ ಪ್ರತಿ ಊರು, ಶಾಲೆ ಮತ್ತು ಕಾಲೇಜುಗಳಲ್ಲಿ ಪ್ರದರ್ಶನ ಕಾಣಬೇಕಿದೆ. ಸಂವಿಧಾನದ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಬೇಕಿದೆ.

ಇದೆಲ್ಲವೂ ಒಂದೆಡೆಯಾದರೆ, ಮತ್ತೊಂದೆಡೆ ನಮಗೆ ಸಂವಿಧಾನ ನೆನಪಾಗಿದ್ದಾದರೂ ಯಾವಾಗ ಎಂಬುದರ ಬಗ್ಗೆ ಆಲೋಚಿಸಬೇಕಿದೆ. ಸರ್ವರಿಗೂ ಸಮಾನಾವಕಾಶ ನೀಡಿರುವ ಸಂವಿಧಾನವು ಇದೇ ಮೊದಲ ಬಾರಿಗೆ ಸಂಕಷ್ಟ ಎದುರಿಸುವಂತಾಗಿದೆ. ಸ್ವಾತಂತ್ರ್ಯ ಎಂಬುದು ಅಪಾಯದ ವಿಷಸರ್ಪದಡಿ ಉಸಿರಾಡುತ್ತಿರುವ ಸಂದರ್ಭದಲ್ಲಿ ದಿಗಿಲುಗೊಂಡಿರುವ ನಾವು ಸಂವಿಧಾನದ ಸಂರಕ್ಷಣೆಗೆ ಇತ್ತೀಚೆಗೆ ಸಭೆ, ಸಮಾರಂಭ, ಸಂವಾದಗಳನ್ನು ಮಾಡುತ್ತಿದ್ದೇವೆ. ಅಭಿಯಾನ ನಡೆಸುತ್ತಿದ್ದೇವೆ.

ನಮ್ಮ ಕರ್ನಾಟಕದಲ್ಲಿ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು ಐದಾರು ವರ್ಷಗಳಿಂದ ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ನಾಡಿನ ತುಂಬಾ ಸಂಚರಿಸುತ್ತಿದ್ದಾರೆ. ‘ಸಂವಿಧಾನ ಓದು’ ಎಂಬ ಕೈಪಿಡಿ ರಚಿಸಿ ನಾಡಿನ ಶಾಲೆ, ಕಾಲೇಜುಗಳಿಗೆ ತಲುಪಿಸುತ್ತಿದ್ದಾರೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಯುವಜನರಿಗಾಗಿ ಸಿದ್ಧಪಡಿಸಿದ ಈ ಕೈಪಿಡಿ ಅತ್ಯಂತ ಪರಿಣಾಮಕಾರಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ವಿಠಲ ಭಂಡಾರಿ ಸೇರಿದಂತೆ ಹಲವಾರು ಮಿತ್ರರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುಂಚೆ ರಾಷ್ಟ್ರೀಯ ಕಾನೂನು ಶಾಲೆಯ ಸಹಯೋಗದಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಅಭಿಯಾನ ಜನಶಕ್ತಿಯ ಗೆಳೆಯರು ಹಮ್ಮಿಕೊಂಡಿದ್ದರು.

ಸಂವಿಧಾನ ಒದಗಿಸಿದ ಸಮಾನ ಅವಕಾಶಗಳ ಜೊತೆಜೊತೆಗೆ ಈ ಸಂವಿಧಾನ ಬರುವ ಮೊದಲಿನ ಭಾರತ ಹೇಗಿತ್ತು? ಎಂಬುದನ್ನು ಅಪ್ಪಗೆರೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಸಂವಿಧಾನವು ದಲಿತರಿಗೆ ಮೀಸಲಾತಿ ಮಾತ್ರ ನೀಡಿತು ಎಂಬ ಕುಚೋದ್ಯತನದಿಂದ ಮೂಡಿಸಿದ ತಪ್ಪುಕಲ್ಪನೆ ವ್ಯಾಪಕವಾಗಿದೆ. ಆದರೆ, ಅಂಬೇಡ್ಕರ್ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನದಲ್ಲಿ ದಲಿತರಿಗಿಂತ ಭಾರತದ ಎಲ್ಲ ಸಮುದಾಯಗಳ ಜನರ ಬದುಕನ್ನು ಹಸನುಗೊಳಿಸುವ ಹಲವಾರು ಅಂಶಗಳನ್ನು ಒಳಗೊಂಡಿದೆ ಎಂಬುದನ್ನು ನಾಟಕ ಸಾರಿ ಹೇಳುತ್ತದೆ. ಸಂವಿಧಾನ ಅಸ್ತಿತ್ವಕ್ಕೆ ಬರುವ ಮುನ್ನ ಮಹಿಳೆಯರ ಪರಿಸ್ಥಿತಿ ಅತ್ಯಂತ ಹೀನಾಯವಾಗಿತ್ತು. ಅದನ್ನು ನಿವಾರಿಸಿ ಲಿಂಗಭೇದವಿಲ್ಲದೆ ಸಮಾನಾವಕಾಶ ನೀಡಿದ್ದು ಸಂವಿಧಾನ ಎಂಬುದನ್ನು ಈ ನಾಟಕ ಪರಿಣಾಮಕಾರಿಯಾಗಿ ತೋರಿಸಿದೆ.

ನಾನಾ ಜಾತಿ, ಧರ್ಮ, ಸಂಸ್ಕೃತಿ, ಭಾಷೆ, ಜನಾಂಗ, ಆಹಾರ ಪದ್ಧತಿಗಳ ಸಂಗಮವಾದ ಈ ನೆಲಕ್ಕೆ ಭಾರತ ಎಂಬ ಅಸ್ಮಿತೆ ತಂದುಕೊಟ್ಟಿದ್ದು ನಮ್ಮ ಸಂವಿಧಾನ. ನಾವು ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಜೈನರು, ಸಿಖ್ಖರು, ಕನ್ನಡಿಗರು, ಮರಾಠರು, ಮಲೆಯಾಳಿಗಳು ಆಗಿರಬಹುದು. ಯಾವುದೇ ಭಾಷಿಕರೂ ಆಗಿರಬಹುದು. ಮಹಿಳೆ ಅಥವಾ ಪುರುಷರಾಗಿರಬಹುದು. ಆದರೆ, ನಾವೆಲ್ಲ ಭಾರತೀಯರು. ಹೀಗೆ ನಾವೆಲ್ಲರೂ ಸಮಾನರು ಎಂದು ನಮಗೊಂದು ಹೆಮ್ಮೆಯ ಅಸ್ಮಿತೆ ತಂದುಕೊಟ್ಟಿದ್ದು ಬಾಬಾಸಾಹೇಬರ ಸಂವಿಧಾನ. ಈ ಸಂವಿಧಾನ ಇರದಿದ್ದರೆ, ಈ ಭಾರತ ಆಗುತ್ತಿರಲಿಲ್ಲ. ನಾವೆಲ್ಲ ಕುಲ ಮದದ ಉನ್ಮಾದದಿಂದ ಹೊಡೆದಾಡಿ ಸಾಯುತ್ತಿದ್ದೆವು. ಹಾಗಾಗದಂತೆ ಮಾಡಿದ್ದು ಈ ಸಂವಿಧಾನ. ಬಹುತ್ವ ಭಾರತದ ಆಧಾರಭೂಮಿ ಈ ಸಂವಿಧಾನ. ಉಸಿರಿನ ಉಸಿರು ಈ ಸಂವಿಧಾನ.
ಸುಮಾರು ಎರಡೂವರೆ ತಾಸಿನ ‘ಸರ್ವರಿಗೂ ಸಂವಿಧಾನ’ ನಾಟಕ ನೋಡುವಾಗ ಕಲಬುರಗಿಯ ಕೆಂಡದಂತಹ ಬಿಸಿಲು ಮರೆತೆವು. ಇಡೀ ಪ್ರೇಕ್ಷಕರನ್ನು ಈ ನಾಟಕ ಸಂವಿಧಾನದ ಅರಿವಿನ ಲೋಕಕ್ಕೆ ಕೊಂಡೊಯ್ದು ವಿಸ್ಮಿತರನ್ನಾಗಿ ಮಾಡಿತು. ಕೋವಿಡ್ ಕಾರಣದಿಂದ ಹೆಚ್ಚು ಪ್ರೇಕ್ಷಕರಿಗೆ ಅವಕಾಶವಿರಲಿಲ್ಲ. ನಾಟಕ ನೋಡಿದವರೆಲ್ಲ (ನಮ್ಮಂತಹ ಕೆಲವರನ್ನು ಬಿಟ್ಟು) ವಿದ್ಯಾರ್ಥಿಗಳು. ನಾಟಕವು ಎಲ್ಲಿಯೂ ಬೇಸರ ಉಂಟು ಮಾಡಲಿಲ್ಲ. ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸಿತು.
ಕನ್ನಡ ರಂಗಭೂಮಿಯ ವೈಭವದ ದಿನಗಳು ಮಾಯವಾದವೇನೋ ಎಂಬ ಸ್ಥಿತಿ ಇರುವ ಸಂದರ್ಭದಲ್ಲಿ ಇಂತಹ ಅಪರೂಪದ ಪ್ರಯೋಗಗಳು ನಡೆದಿರುವುದು ಸಂತಸದ ಸಂಗತಿ.

70ರ ದಶಕದ ಆ ದಿನಗಳು ನನ್ನ ನೆನಪಿನಲ್ಲಿ ಇನ್ನೂ ಹಸಿರಾಗಿವೆ. ಅದು 1974ನೇ ಇಸವಿ ಜೂನ್ ತಿಂಗಳು. ‘ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಲೆಂದು ದೂರದ ಬಿಜಾಪುರದಿಂದ ಬೆಂಗಳೂರಿಗೆ ಬಂದೆ. ಆಗ ಬಿ.ವಿ.ಕಾರಂತರು ಉತ್ತರ ಭಾರತದಿಂದ ಬೆಂಗಳೂರಿಗೆ ವಾಪಸು ಬಂದಿದ್ದರು. ಪ್ರಸನ್ನ ಸಮುದಾಯ ತಂಡವನ್ನು ಕಟ್ಟಿಕೊಂಡು ಓಡಾಡುತ್ತಿದ್ದರು. ಲಂಕೇಶ್, ಸಿಜಿಕೆ, ಗಿರೀಶ್ ಕಾರ್ನಾಡ್, ತೇಜಸ್ವಿ ಹೀಗೆ ಘಟಾನುಘಟಿಗಳು ಸಕ್ರಿಯರಾಗಿದ್ದ ಕಾಲವದು.
ಆಗ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ನಾಟಕಗಳನ್ನು ನೋಡುವುದು, ರಿಹರ್ಸಲ್‌ಗಳನ್ನು ಕಣ್ಣಿನಲ್ಲಿ ತುಂಬಿಕೊಳ್ಳುವುದು ನಮಗೊಂದು ಹಬ್ಬ. ‘ಗೆಲಿಲಿಯೋ’ ನಾಟಕದ ರಿಹರ್ಸಲ್ ನೋಡಲು ಪ್ರತಿದಿನ ಸಂಜೆ ಕಲಾಕ್ಷೇತ್ರಕ್ಕೆ ಹೋಗುತ್ತಿದ್ದೆವು. ಲೋಕನಾಥ್ ಗೆಲಿಲಿಯೊ ಪಾತ್ರ ವಹಿಸಿದ್ದರು. ನಿರ್ದೇಶನ ಕಾರಂತ ಅಥವಾ ಪ್ರಸನ್ನರದೋ ನೆನಪಾಗುತ್ತಿಲ್ಲ. ಆಗ ಲಂಕೇಶ್, ಟಿ.ಎನ್.ಸೀತಾರಾಂ ಅವರ ನಾಟಕಗಳನ್ನು ನೋಡಿದ ನೆನಪು.

ಇಂತಹ ಕನ್ನಡ ಹವ್ಯಾಸಿ ರಂಗಭೂಮಿ ಇತ್ತೀಚೆಗೆ ಯಾಕೋ ನಿಧಾನಗತಿಯಲ್ಲಿ ಸಾಗಿದೆ ಎನ್ನುತ್ತಿರುವಾಗಲೇ ಸಮಕಾಲೀನ ವಸ್ತುವನ್ನಿಟ್ಟುಕೊಂಡು ‘ಸರ್ವರಿಗೂ ಸಂವಿಧಾನ’ ನಾಟಕ ರಂಗಕ್ಕೆ ಬಂದಿದೆ. ಅಪ್ಪಗೆರೆ ಸೋಮಶೇಖರ್ 45 ದಿನಗಳ ಅಪಾರ ಪರಿಶ್ರಮದಿಂದ ಇಂತಹದ್ದೊಂದು ನಾಟಕ ಸಿದ್ಧಪಡಿಸಿದ್ದಾರೆ. ಇದಕ್ಕೆ ಅನಿಲ ರೇವೂರ ನಿರ್ದೇಶನದ ಸ್ಪರ್ಶ ನೀಡಿದ್ದಾರೆ. ಇದನ್ನು ಸಿದ್ಧಪಡಿಸಲು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಮತ್ತು ರಿಜಿಸ್ಟ್ರಾರ್ ಸಕಲ ಸಹಕಾರ ನೀಡಿದ್ದಾರೆ.

ಸಂವಿಧಾನ ಅಸ್ತಿತ್ವಕ್ಕೆ ಬರುವ ಮುನ್ನ ದಲಿತರು ತಲೆಯ ಮೇಲೆ ಮಲ ಹೊರುವ ಪದ್ಧ್ದತಿ ಇತ್ತು. ಸಂವಿಧಾನ ಅದನ್ನು ನಿರ್ಬಂಧಿಸಿದ್ದರೂ ಸ್ವಾತಂತ್ರಾ ನಂತರ ಉಳಿದುಕೊಂಡು ಬಂದಿತ್ತು. ಕರ್ನಾಟಕದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಪೌರಾಡಳಿತ ಸಚಿವರಾಗಿದ್ದ ಬಿ. ಬಸವಲಿಂಗಪ್ಪನವರು ಇದನ್ನು ರದ್ದುಪಡಿಸಿದರು.

ಇದಕ್ಕಿಂತ ಹೇಯವಾಗಿದ್ದುದು ಕೇರಳದಲ್ಲಿದ್ದ ಸ್ತನ ಕಂದಾಯ ಪದ್ಧತಿ. ಅಲ್ಲಿ ತಳ ಸಮುದಾಯಗಳ ಹೆಣ್ಣು ಮಕ್ಕಳು ತಮ್ಮ ಎದೆ ಮುಚ್ಚಿಕೊಳ್ಳುವ ಅವಕಾಶ ಇರಲಿಲ್ಲ. ಮೊಲೆ ಮುಚ್ಚಿಕೊಳ್ಳಬೇಕೆಂದರೆ ನಂಬೂದರಿ ಬ್ರಾಹ್ಮಣ ಭೂಮಾಲಕರಿಗೆ ತೆರಿಗೆ ಕಟ್ಟಬೇಕಾಗಿತ್ತು. ಇದನ್ನು ಧಿಕ್ಕರಿಸಿ ನಂಗೇಲಿ ಎಂಬ ಯುವತಿ ತನ್ನ ಸ್ತನಗಳನ್ನೇ ಕತ್ತರಿಸಿ ಭೂಮಾಲಕರಿಗೆ ನೀಡಿದ ಹೃದಯ ವಿದ್ರಾವಕ ಘಟನೆ ಕೇರಳದಲ್ಲಿ ಎಲ್ಲರಿಗೂ ಗೊತ್ತಿದೆ.(ಈ ಸ್ತನ ಕಂದಾಯ ನಿಷೇಧಿಸಿದ ಟಿಪ್ಪುಸುಲ್ತಾನ್ ಇಂದಿಗೂ ಕ್ರೂರ ಮನುವಾದಿ ಮನಸ್ಸುಗಳ ತಾತ್ಸಾರಕ್ಕೆ ಗುರಿಯಾಗಿದ್ದಾರೆ) ಇದನ್ನು ಈ ನಾಟಕ ಅಂತರಾಳ ಕಲಕುವಂತೆ ಅಭಿವ್ಯಕ್ತಿಸಿದೆ.

ಭಾರತ ಇಂದು ಸಂಕ್ರಮಣ ಕಾಲಘಟ್ಟದಲ್ಲಿದೆ. ಶತಮಾನಗಳ ಕಾಲ ಶ್ರೇಣೀಕೃತ ಜಾತಿ ವ್ಯವಸ್ಥೆ, ಅಸಮಾನತೆಯಿಂದ ನಲುಗಿದ ದೇಶ ನಂತರದ 600 ವರ್ಷಗಳ ಕಾಲ ವಿದೇಶಿ ದಾಳಿ ಮತ್ತು ಆಡಳಿತದ ಹೊಡೆತದಿಂದ ನಲುಗಿ ಹೋಯಿತು. ಹಳೆಯದೆಲ್ಲ ಹೋಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಈಗ ಪ್ರಜಾಪ್ರಭುತ್ವವೇ ನಮ್ಮ ಧರ್ಮ, ಸಂವಿಧಾನವೇ ಧರ್ಮ ಗ್ರಂಥವಾಗಬೇಕಾಗಿದೆ.

ಪ್ರಜಾಪ್ರಭುತ್ವ ಪದ್ಧ್ದತಿಯಲ್ಲೂ ಹಲವಾರು ಲೋಪದೋಷಗಳಿದ್ದರೂ ಇದ್ದುದರಲ್ಲಿ ಇದು ಕೊಂಚ ವಾಸಿ. ಈ ಜನತಂತ್ರದ ದಾರಿಯಲ್ಲಿ ಸಾಗಿದ ನಂತರ ಭಾರತ ಸಾಕಷ್ಟು ಸಾಧಿಸಿದೆ. ಬಡತನ, ಅಸಮಾನತೆ ಸಂಪೂರ್ಣ ತೊಲಗದಿದ್ದರೂ ಜನಾಂಗೀಯ ತಾರತಮ್ಯ, ಲೈಂಗಿಕ ಅಸಮಾನತೆ, ಅಸ್ಪೃಶ್ಯತೆ ಇಂತಹ ಹಲವಾರು ಅನಿಷ್ಟಗಳು ಮೊದಲಿನಷ್ಟು ಭಯಾನಕವಾಗಿಲ್ಲ. ಆದರೆ, ಕಳೆದ ಎರಡು ದಶಕಗಳಲ್ಲಿ ಅದರಲ್ಲೂ ಇತ್ತೀಚಿನ ಏಳೆಂಟು ವರ್ಷಗಳಲ್ಲಿ ಜಾಗತೀಕರಣದ ಪರಿಣಾಮವಾಗಿ ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರ ಹೆಚ್ಚುತ್ತಿದೆ. ಅವಕಾಶ ವಂಚಿತರಿಗೆ ಒಂದಿಷ್ಟು ಭರವಸೆಯನ್ನು ಮೂಡಿಸಿದ ಸಂವಿಧಾನವನ್ನೇ ಬುಡಮೇಲು ಮಾಡುವ ಯತ್ನಗಳು ನಡೆದಿವೆ. ಇಂತಹ ಹುನ್ನಾರಗಳನ್ನು ವಿಫಲಗೊಳಿಸಲು ಸಂವಿಧಾನ ಸಂರಕ್ಷಣೆಗಾಗಿ ಬಹುದೊಡ್ಡ ಜನಜಾಗೃತಿ ಅಭಿಯಾನ ಕೈಗೊಳ್ಳಬೇಕಿದೆ. ಇಂತಹ ಅಭಿಯಾನದಲ್ಲಿ ‘ಸರ್ವರಿಗೂ ಸಂವಿಧಾನ’ದಂತಹ ನಾಟಕಗಳು ಪ್ರಮುಖ ಪಾತ್ರವನ್ನು ವಹಿಸಲಿವೆ. ಎಸ್. ಎಲ್. ಭೈರಪ್ಪನವರ ‘ಪರ್ವ’ ನಾಟಕಕ್ಕೆ ರಾಜ್ಯ ಸರಕಾರ 1 ಕೋಟಿ ರೂಪಾಯಿ ಮೈಸೂರು ರಂಗಾಯಣಕ್ಕೆ ಬಿಡುಗಡೆ ಮಾಡಿದೆ. ಅದೇ ರೀತಿ ‘ಸರ್ವರಿಗೂ ಸಂವಿಧಾನ’ ನಾಟಕ ಪ್ರದರ್ಶನಕ್ಕೂ ಸರಕಾರ ವಿಶೇಷ ಅನುದಾನ ನೀಡಲಿ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ವಾರ್ತಾ ಇಲಾಖೆಯ ನಿರ್ದೇಶಕರಾಗಿದ್ದ ವಿಶುಕುಮಾರ್ ಅವರು ಆಸಕ್ತಿ ವಹಿಸಿ ಅಂಬೇಡ್ಕರ್ ಜೀವನ ಕಥನ ಆಧರಿಸಿದ ‘ಭಾರತ ಭಾಗ್ಯವಿದಾತ’ ನಾಟಕವನ್ನು ರಾಜ್ಯದ ಪ್ರಮುಖ ಊರುಗಳಲ್ಲಿ ಜನಸಾಮಾನ್ಯರು ನೋಡುವ ಅವಕಾಶ ಒದಗಿಸಿದರು. ಅದೇ ರೀತಿ ‘ಸರ್ವರಿಗೂ ಸಂವಿಧಾನ’ ನಾಟಕ ರಾಜ್ಯದ ಕೋಟ್ಯಂತರ ಜನ ನೋಡುವಂತಾಗಲಿ. ಅಷ್ಟೇ ಅಲ್ಲ ಬೇರೆ ಭಾಷೆಗಳಲ್ಲಿ ಕೂಡ ಪ್ರದರ್ಶನವಾಗಲಿ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ