ಕೋವಿಡ್ ಮೇಳವಾದ ಕುಂಭಮೇಳ

Update: 2021-04-19 04:06 GMT


ಜನರ ಸಾವಿಗೆ ಕಾರಣವಾಗಬಹುದಾದ ಕುಂಭಮೇಳದಲ್ಲಿ ಭಾಗವಹಿಸಲು ಉತ್ತರಾಖಂಡದ ಬಿಜೆಪಿ ಸರಕಾರ ಜಾಹೀರಾತು ಮೂಲಕ ಜನರನ್ನು ಆಹ್ವಾನಿಸಿತು. ಇದರ ಪರಿಣಾಮ ಇನ್ನೂ ಭೀಕರವಾಗಲಿದೆ. ಮುಂದಿನ 15 ದಿನಗಳಲ್ಲಿ ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು. ದಕ್ಷಿಣ ಭಾರತದಂತೆ ಅಲ್ಲಿ ವೈದ್ಯಕೀಯ ಸೌಕರ್ಯಗಳಿಲ್ಲ. ಜನ ಸಾಂಧ್ರತೆಯೂ ಹೆಚ್ಚು. ಹೀಗಾಗಿ ಪರಿಸ್ಥಿತಿ ಬಿಗಡಾಯಿಸುವ ಎಲ್ಲ ಲಕ್ಷಣಗಳು ಇವೆ. ಇದಕ್ಕೆ ಯಾರು ಹೊಣೆ?

ಕೊ ರೋನ ಎರಡನೇ ಅಲೆಯ ಹೊಡೆತಕ್ಕೆ ಇಡೀ ಭಾರತವೇ ತತ್ತರಿಸಿದೆ. ಕೇವಲ ಎರಡೇ ವಾರದಲ್ಲಿ ಒಂದು ಲಕ್ಷದಿಂದ ಎರಡು ಲಕ್ಷ ಜನರಿಗೆ ಕೊರೋನ ಸೋಂಕು ಅಂಟಿಕೊಂಡಿದೆ. ಒಂದೂವರೆ ಸಾವಿರಕ್ಕಿಂತ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಜಾಗತಿಕವಾಗಿ ಮೊದಲ ಸ್ಥಾನದಲ್ಲಿರುವ ಅಮೆರಿಕದ ಜೊತೆ ಪೈಪೋಟಿ ನಡೆಸಿರುವ ನಮ್ಮ ದೇಶ ಈಗ ಎರಡನೇ ಸ್ಥಾನಕ್ಕೆ ಬಂದು ತಲುಪಿರುವುದು ಆತಂಕದ ಸಂಗತಿಯಾಗಿದೆ.

ಕಳೆದ ವರ್ಷ ಚೀನಾದಿಂದ ಕೊರೋನ ಭಾರತ ಪ್ರವೇಶಿಸಿತು ಎಂದು ಹೇಳಲಾಯಿತಾದರೂ ಅದು ವ್ಯಾಪಕವಾಗಿ ಹರಡಿದ್ದು ಅಮೆರಿಕದ ಆಗಿನ ಅಧ್ಯಕ್ಷ ಟ್ರಂಪ್ ಬಂದು ಹೋದ ನಂತರ. ಅದನ್ನು ಮರೆ ಮಾಚಿದ ಮಾಧ್ಯಮಗಳು ದಿಲ್ಲಿಯಲ್ಲಿ ನಡೆದ ತಬ್ಲೀಗಿ ಜಮಾಅತ್ ಸಮಾವೇಶದಿಂದ ದೇಶವ್ಯಾಪಿ ಹಬ್ಬಿತೆಂದು ಹುಯಿಲೆಬ್ಬಿಸಿದವು. ಇದನ್ನೇ ಕಾಯುತ್ತಿದ್ದ ಸಂಘ ಪರಿವಾರದ ಸಂಘಟನೆಗಳು ‘‘ಇದು ಕೊರೋನ ಜಿಹಾದ್’’ ಎಂದು ಅಪಪ್ರಚಾರ ಆರಂಭಿಸಿದವು. ಕೇಂದ್ರ ಸರಕಾರವನ್ನು ನಿಯಂತ್ರಿಸುವ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಇಸ್ಲಾಂಫೋಬಿಕ್ ಎಂಬ ಸಿದ್ಧಾಂತವನ್ನೇ ಹುಟ್ಟು ಹಾಕಿತು. ಇದರ ಪರಿಣಾಮ ಎಷ್ಟು ಭೀಕರ ಮತ್ತು ಭಯಾನಕವಾಗಿತ್ತೆಂದರೆ ನಮ್ಮ ದೇಶ, ರಾಜ್ಯದ ಮಹಾನಗರಗಳು ಮಾತ್ರವಲ್ಲ ಸಣ್ಣ, ದೊಡ್ಡ ಊರುಗಳಲ್ಲಿ ತರಕಾರಿ, ಹಣ್ಣು ಹಂಪಲು ಮಾರಾಟ ಮಾಡುವ ಮುಸಲ್ಮಾನರ ಬಳಿ ತರಕಾರಿ ಕೊಳ್ಳಬಾರದು, ಅದರಲ್ಲಿ ಅವರು ಬೇಕಂತಲೇ ಉಗುಳು ಸಿಡಿಸಿರುತ್ತಾರೆ ಎಂದು ವ್ಯಾಪಕವಾಗಿ ಕುಪ್ರಚಾರ ನಡೆಯಿತು. ವಿಷಾದದ ಸಂಗತಿಯೆಂದರೆ ದಶಕಗಳಿಂದ ಅವರಲ್ಲಿ ತರಕಾರಿ, ಹಣ್ಣು ಕೊಳ್ಳುತ್ತಿದ್ದವರು ತಮ್ಮ ಜಾತಿಯ ತರಕಾರಿ ಮಾರಾಟಗಾರರನ್ನು ಹುಡುಕಿಕೊಂಡು ಹೊರಟರು. ಇದು ಬಹಳ ದಿನ ನಡೆಯಲಿಲ್ಲ. ನಂತರ ಸರಿ ಹೋಯಿತು ಎಂಬುದು ಬೇರೆ ಮಾತು. ಆದರೆ, ಈ ವರ್ಷ ಆಗಿದ್ದೇನು?

ಕಳೆದ ವರ್ಷದ ಜೂನ್ ನಂತರ ಕೋವಿಡ್ ಹಾವಳಿ ಕೊಂಚ ಕಡಿಮೆಯಾದ ನಂತರ ಸರಕಾರ ಮಾಡಿದ್ದೇನು? ಆಸ್ಪತ್ರೆಗಳನ್ನು ಸಜ್ಜುಗೊಳಿಸುವುದಕ್ಕಿಂತ ಅದಕ್ಕೆ ಅಯೋಧ್ಯೆಯ ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡುವ ಅವಸರವಿತ್ತು. ಅದನ್ನು ಮಾಡಿತು. ಪ್ರತಿಪಕ್ಷಗಳ ಸರಕಾರಗಳನ್ನು ಅಸ್ಥಿರಗೊಳಿಸುವುದು, ಸಾರ್ವಜನಿಕ ಉದ್ಯಮಗಳನ್ನು ಮಾರುವುದು, ಭಾರತದ ಕೃಷಿಯನ್ನು ಕಾರ್ಪೊರೇಟ್ ಕಂಪೆನಿಗಳ ಮಡಿಲಿಗೆ ಹಾಕುವುದು, ರೈತರ ಬದುಕನ್ನು ಚಿಂದಿ ಮಾಡುವುದು ಅದರ ಆದ್ಯತೆ ಆಗಿತ್ತು. ಅದನ್ನು ಮಾಡಿತು. ಆದರೆ, ಮಾಡಬೇಕಾದ ಕೆಲಸ ಮಾಡಲಿಲ್ಲ.

ಕಳೆದ ವರ್ಷ ಕೊರೋನ ಅಪ್ಪಳಿಸಿದಾಗ, ಅದನ್ನು ಎದುರಿಸಲು ಮೂರು ತಿಂಗಳು ಲಾಕ್‌ಡೌನ್ ಘೋಷಿಸಲಾಯಿತು. ಜನ ಮನೆಯಿಂದ ಹೊರಬರದಂತೆ ನಿರ್ಬಂಧಿಸಲಾಯಿತು. ಗಂಟೆ, ಜಾಗಟೆ ಬಾರಿಸಿ ಚಪ್ಪಾಳೆ ತಟ್ಟಿ ಕೊರೋನ ವೈರಾಣು ಓಡಿಸುವ ಯತ್ನವೂ ನಡೆಯಿತು. ಜನ ಸೇರಬಾರದೆಂದು ಎಲ್ಲ ದೇವಾಲಯಗಳಿಗೆ ಚರ್ಚ್, ಮಸೀದಿಗಳಿಗೆ ಬೀಗ ಜಡಿಯಲಾಯಿತು. ಕೊರೋನದಂತಹ ಸೋಂಕಿನಿಂದ ದೇವರೂ ನಮ್ಮನ್ನು ಕಾಪಾಡಲಾರ ಎಂದು ಸರಕಾರ ತಾನೇ ಒಪ್ಪಿಕೊಂಡಿತು. ಲಾಕ್‌ಡೌನ್ ಪರಿಣಾಮವಾಗಿ ಮೊದಲೇ ಹಾಳಾಗಿ ಹೋಗಿದ್ದ ದೇಶದ ಆರ್ಥಿಕತೆ ಇನ್ನಷ್ಟು ಕುಸಿಯಿತು. ಇರಲಿ, ಮನುಷ್ಯನ ಜೀವ ಮುಖ್ಯ ಎಂದು ಅದನ್ನೂ ಸಹಿಸಿದೆವು. ಆದರೆ, ಈ ವರ್ಷ ಎರಡನೇ ಅಲೆ ಅಪ್ಪಳಿಸುವುದು ಗೊತ್ತಿದ್ದರೂ ಸರಕಾರ ಮಾಡಿದ್ದೇನು?

ಕೊರೋನ ಎರಡನೇ ಅಲೆ ರಾತ್ರೋರಾತ್ರಿ ದಾಳಿಯಿಡಲಿಲ್ಲ. ಇದು ಬರುತ್ತದೆ ಎಂದು ವೈದ್ಯಕೀಯ ಪರಿಣಿತರು ಸಾಕಷ್ಟು ಮೊದಲೇ ಮುನ್ನೆಚ್ಚರಿಕೆ ನೀಡಿದ್ದರು. ಮೊದಲ ಅಲೆಯಲ್ಲೇ ಏಟು ತಿಂದಿದ್ದ ನಮ್ಮ ದೇಶ ಅಂದರೆ ಇದನ್ನಾಳುವ ಸರಕಾರ ಎರಡನೇ ಅಲೆ ಎದುರಿಸಲು ಅಗತ್ಯದ ತಯಾರಿ ಮಾಡಿಕೊಳ್ಳಬೇಕಿತ್ತು. ಇದನ್ನು ಎದುರಿಸಲು ಸರಕಾರಿ ಆಸ್ಪತ್ರೆಗಳನ್ನು ಸಜ್ಜುಗೊಳಿಸಬೇಕಿತ್ತು.

 ಖಾಸಗಿ ದವಾಖಾನೆಗಳಿಗೆ ಸೂಚನೆ ನೀಡಬೇಕಿತ್ತು. ತುರ್ತು ಸನ್ನಿವೇಶ ನಿಭಾಯಿಸಲು ಐಸಿಯು, ವೆಂಟಿಲೇಟರ್, ಹಾಸಿಗೆಗಳನ್ನು ಸಿದ್ಧಪಡಿಸಬೇಕಿತ್ತು. ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಿತ್ತು. ಇದಕ್ಕಾಗಿಯೇ ಸಂಗ್ರಹಿಸಲಾಗಿರುವ ಪ್ರಧಾನಮಂತ್ರಿಯವರ ಪಿ.ಎಂ.ಕೇರ್ ನಿಧಿಯನ್ನು ಬಳಸಿಕೊಳ್ಳಬಹುದಾಗಿತ್ತು. ಇದನ್ನೆಲ್ಲ ಮಾಡಿದ್ದರೆ, ಎರಡನೇ ಅಲೆ ಈ ಪರಿ ದಾಳಿಯಿಡಲು ಆಗುತ್ತಿರಲಿಲ್ಲ.

ಕೊರೋನ ಸೋಂಕು ನಿಯಂತ್ರಿಸಲು ದೈಹಿಕ ಅಂತರ ಕಾಪಾಡಿಕೊಳ್ಳಬೇಕು, ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು, ಸ್ಯಾನಿಟೈಸರ್‌ನಿಂದ ಆಗಾಗ ಕೈ ತೊಳೆಯಬೇಕು ಎಂಬುದರ ಜೊತೆ ಜನ ಗುಂಪುಗೂಡಲು ಅವಕಾಶ ನೀಡಬಾರದು ಎಂಬ ನಿಯಮಗಳಿದ್ದರೂ ಅದನ್ನು ಬಿಜೆಪಿ ಸರಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡಿತು.

ಹರಿದ್ವಾರದಲ್ಲಿ ಕುಂಭಮೇಳ ನಡೆಸಲು ಅವಕಾಶ ನೀಡಿತು. ಕುಂಭಮೇಳದ ಒಂದೇ ದಿನ 30 ಲಕ್ಷ ಮಂದಿ ಒಂದೇ ಕಡೆ ಗಂಗಾಸ್ನಾನ ಮಾಡಿದರು. ಇದರ ಪರಿಣಾಮವಾಗಿ ಒಂದೇ ದಿನ ಎರಡು ಸಾವಿರ ಕೊರೋನ ಸೋಂಕು ಪ್ರಕರಣಗಳು ಪತ್ತೆಯಾದವು. ಇಂತಹ ಜನರ ಸಾವಿಗೆ ಕಾರಣವಾಗಬಹುದಾದ ಕುಂಭಮೇಳದಲ್ಲಿ ಭಾಗವಹಿಸಲು ಉತ್ತರಾಖಂಡದ ಬಿಜೆಪಿ ಸರಕಾರ ಜಾಹೀರಾತು ಮೂಲಕ ಜನರನ್ನು ಆಹ್ವಾನಿಸಿತು. ಇದರ ಪರಿಣಾಮ ಇನ್ನೂ ಭೀಕರವಾಗಲಿದೆ. ಮುಂದಿನ 15 ದಿನಗಳಲ್ಲಿ ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು. ದಕ್ಷಿಣ ಭಾರತದಂತೆ ಅಲ್ಲಿ ವೈದ್ಯಕೀಯ ಸೌಕರ್ಯಗಳಿಲ್ಲ. ಜನ ಸಾಂಧ್ರತೆಯೂ ಹೆಚ್ಚು. ಹೀಗಾಗಿ ಪರಿಸ್ಥಿತಿ ಬಿಗಡಾಯಿ ಸುವ ಎಲ್ಲ ಲಕ್ಷಣಗಳು ಇವೆ. ಇದಕ್ಕೆ ಯಾರು ಹೊಣೆ?

ಉತ್ತರಾಖಂಡದ ಬಿಜೆಪಿ ಮುಖ್ಯಮಂತ್ರಿ ತೀರಥ್‌ಸಿಂಗ್ ರಾವತ್ ಇದಕ್ಕೆ ನೇರ ಹೊಣೆಗಾರರಾಗಿದ್ದಾರೆ. ದೇಶದಲ್ಲಿ ಕೊರೋನ ವ್ಯಾಪಿಸುತ್ತಿರುವುದು ಗೊತ್ತಿದ್ದರೂ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ 30 ಲಕ್ಷ ಜನರು ಗಂಗಾಸ್ನಾನ ಮಾಡಲು ಒಂದೆಡೆ ಸೇರಲು ಅನುಮತಿ ನೀಡಿದ್ದು ಮಾತ್ರವಲ್ಲ, ಅದಕ್ಕೆ ಪ್ರೋತ್ಸಾಹ ನೀಡಿದ್ದು ಅಕ್ಷಮ್ಯ ಅಪರಾಧ. ಇದರ ಪರಿಣಾಮವಾಗಿ ಸಂಭವಿಸುವ ಸಾವು, ನೋವುಗಳ ಹೊಣೆಯನ್ನು ಅವರೇ ಹೊರಬೇಕು.

ಕುಂಭಮೇಳ ಮಾತ್ರವಲ್ಲದೆ ಅಲ್ಲಲ್ಲಿ ನಡೆಯುವ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಿಗೂ ಅವಕಾಶ ನೀಡಿದ ಪರಿಣಾಮವಾಗಿ ಕೊರೋನ ಒಮ್ಮಿಂದೊಮ್ಮೆಲೇ ಉಲ್ಬಣಿಸಿತು. ಅದರಲ್ಲೂ ಪಂಚ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಕೋವಿಡ್ ಮಾರ್ಗಸೂಚಿ ಯನ್ನು ಗಾಳಿಗೆ ತೂರಲಾಯಿತು. ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್‌ಶಾ ಮುಂತಾದವರ ಪ್ರಚಾರ ಸಭೆಗಳಲ್ಲಿ ಯಾವುದೇ ಶಿಷ್ಟಾಚಾರ ಪಾಲಿಸಲಿಲ್ಲ. ಮಾಸ್ಕ್ ಧರಿಸದೆ ಹತ್ತಾರು ಸಾವಿರ ಜನ ಸೇರಿದ ಪರಿಣಾಮವಾಗಿ ಪರಿಸ್ಥಿತಿ ಹದಗೆಟ್ಟಿತು.

ಕುಂಭಮೇಳಕ್ಕೆ ಅವಕಾಶ ನೀಡಿದ ಉತ್ತರಾಖಂಡದ ಬಿಜೆಪಿ ಮುಖ್ಯಮಂತ್ರಿ ತೀರಥ್‌ಸಿಂಗ್ ಇತ್ತೀಚೆಗೆ ನೀಡುತ್ತಿದ್ದ ಹೇಳಿಕೆಗಳು ವಿವಾದದ ಅಲೆಯನ್ನೆಬ್ಬಿಸಿದ್ದವು. ಕೋವಿಡ್ ಸಂದರ್ಭದಲ್ಲಿ ಹೆಚ್ಚು ಪಡಿತರ ಪಡೆಯುವ ಸಲುವಾಗಿ ಜನರು ಹೆಚ್ಚು ಮಕ್ಕಳನ್ನು ಹಡೆಯಬೇಕೆಂದು ಹೇಳಿದ್ದರು. ಅದೇ ರೀತಿ ಮಹಿಳೆಯರು ಜೀನ್ಸ್ ತೊಡುವ ಬಗ್ಗೆಯೂ ಮಾತನಾಡಿದ್ದ್ದರು.

ದೇಶದಲ್ಲಿ ನಿರಂತರವಾಗಿ ಕೊರೋನ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗ ಅದು ಎರಡು ಲಕ್ಷವನ್ನು ದಾಟಿದೆ. ಆದರೆ, ನಮ್ಮ ರಾಜಕಾರಣಿಗಳಿಗೆ ಜನಸಾಮಾನ್ಯರ ಆರೋಗ್ಯಕ್ಕಿಂತ ತಮ್ಮ ರಾಜಕೀಯ ಹಿತಾಸಕ್ತಿ ಹಾಗೂ ಅವುಗಳ ಈಡೇರಿಕೆಗಾಗಿ ಚುನಾವಣೆಗಳು ಹಾಗೂ ಕುಂಭಮೇಳಗಳು ಮುಖ್ಯವಾಗಿವೆ. ಬೇಲಿಯೇ ಹೊಲ ಮೇಯ್ದರೆ ಕಾಯುವವರು ಯಾರು? ಹೀಗಾಗಿದೆ ನಮ್ಮ ಭಾರತದ ಪರಿಸ್ಥಿತಿ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News