ಮತ್ತೆ ಬಂದ ಮೇ ದಿನ: ಮುಂದೇನು?

Update: 2021-04-25 19:30 GMT

ಒಂದೇ ದೇಶ, ಒಂದೇ ಧರ್ಮ, ಒಂದೇ ಭಾಷೆ, ಒಂದೇ ರೇಷನ್ ಕಾರ್ಡ್ ಎಂದು ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರನ್ನು ನಿಯಂತ್ರಣ ಮಾಡುತ್ತಿರುವ ನಾಗಪುರದ ಅಘೋಷಿತ ಅಧಿಕಾರ ಕೇಂದ್ರ ಹೇಳುತ್ತಿದ್ದರೂ ಭಾರತ ವಾಸ್ತವವಾಗಿ ಒಂದಾಗಿಲ್ಲ. ಇಲ್ಲಿ ಎರಡು ಭಾರತಗಳಿವೆ. ಒಂದು ಉಳ್ಳವರ ಭಾರತ,ಇನ್ನೊಂದು ಇಲ್ಲದವರ ಭಾರತ. ಒಂದು ತಿಂದು, ತಿಂದು ಹೊಟ್ಟೆ ಬಿರಿದವರ ಭಾರತ, ಇನ್ನೊಂದು ಹಸಿದು,ಹಸಿದು ಕಂಗಾಲಾದವರ ಭಾರತ.


ಮೇ ಒಂದನೇ ತಾರೀಕು ಬಂದಾಗೆಲ್ಲ 45 ವರ್ಷಗಳ ಹಿಂದಿನ ಆ ದಿನಗಳು ನೆನಪಿಗೆ ಬರುತ್ತವೆ. ಆಗಿನ್ನು ನನಗೆ 20ರ ಹರೆಯ. ಕಣ್ಣ ತುಂಬ ಕ್ರಾಂತಿಯ ಕನಸುಗಳನ್ನು ತುಂಬಿಕೊಂಡು ಓಡಾಡುವ ದಿನಗಳು.ನಾಳೆಯೇ ಕ್ರಾಂತಿಯಾಗಿ ಸಮತಾವಾದಿ ರಾಜ್ಯ ಸ್ಥಾಪನೆಯಾಗುತ್ತದೆ ಎಂಬ ಗಟ್ಟಿ ನಂಬಿಕೆ. 70ರ ದಶಕದ ಆ ದಿನಗಳಲ್ಲಿ ಜನಿಸಿದ ಬಿಜಾಪುರ ಜಿಲ್ಲೆಯಲ್ಲಿ, ನಂತರ ಹುಬ್ಬಳ್ಳಿಯಲ್ಲಿ ಕಾರ್ಮಿಕರು ಆಚರಿಸುತ್ತಿದ್ದ ಮೇ ದಿನದ ಮೆರವಣಿಗೆಯಲ್ಲಿ ಕೆಂಬಾವುಟ ಹಿಡಿದು ಆವೇಶದಿಂದ ಘೋಷಣೆ ಹಾಕುತ್ತಿದ್ದ ಕ್ಷಣಗಳು ನೆನಪಿನಂಗಳದಲ್ಲಿ ಇಂದಿಗೂ ಹಸಿರಾಗಿವೆ. ಬಿಜಾಪುರದ ಮೇ ದಿನಾಚರಣೆಯಲ್ಲಿ ಆಗ ವ್ಯಾಸಂಗ ಮಾಡುತ್ತಿದ್ದ ಸುಧೀಂದ್ರ ಕುಲಕರ್ಣಿ (ನಂತರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವಿಶೇಷ ಸಲಹೆಗಾರರಾಗಿದ್ದವರು) ಅಥಣಿಯಿಂದ ಬಂದು ಪಾಲ್ಗೊಂಡಿದ್ದರು.

ನಂತರ ‘ಸಂಯುಕ್ತ ಕರ್ನಾಟಕ’ ಸೇರಿ ಹುಬ್ಬಳ್ಳಿಗೆ ವಲಸೆ ಬಂದ ನಂತರವೂ ಪ್ರತಿ ವರ್ಷ ನಾನು ಮೇ ದಿನಾಚರಣೆಯಲ್ಲಿ ತಪ್ಪದೇ ಪಾಲ್ಗೊಳ್ಳುತ್ತಿದ್ದೆ. ಹಳೆಹುಬ್ಬಳ್ಳಿಯ ಕಮ್ಯುನಿಸ್ಟ್ ಪಕ್ಷದ ಕಚೇರಿಯಿಂದ ಮುಂಜಾನೆ 9 ಗಂಟೆಗೆ ಮೆರವಣಿಗೆ ಹೊರಟು ಮಧ್ಯಾಹ್ನ ಉರಿವ ಬಿಸಿಲಲ್ಲಿ ನೆಹರೂ ಮೈದಾನಕ್ಕೆ ಬಂದು ಅಲ್ಲಿ ಕಾರ್ಮಿಕರ ಬಹಿರಂಗ ಸಭೆ ನಡೆಯುತ್ತಿತ್ತು. ಒಬ್ಬ ಪತ್ರಕರ್ತನಾಗಿ ನಾನು ಕೆಂಬಾವುಟ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಕಂಡು ಆ ಕಾಲದ ಅನೇಕ ಪತ್ರಿಕಾ ಸಹೋದ್ಯೋಗಿಗಳಿಗೆ ಅಚ್ಚರಿಯಾಗುತ್ತಿತ್ತು. ಆದರೆ ಪಾಟೀಲ ಪುಟ್ಟಪ್ಪನವರು ಮಾತ್ರ ಖುಷಿ ಮತ್ತು ಹೆಮ್ಮೆಯಿಂದ ಮಾತಾಡಿಸುತ್ತಿದ್ದರು. ಆಗ ಹುಬ್ಬಳ್ಳಿಯ ಕಮ್ಯುನಿಸ್ಟ್ ನಾಯಕ ಎ.ಜೆ.ಮುಧೋಳ. ಅಲ್ಪಸಂಖ್ಯಾತ ಸಮುದಾಯದಿಂದ ಬಂದ ಅವರು ಎಲ್ಲ ಸಮುದಾಯಗಳ ಅಚ್ಚುಮೆಚ್ಚಿನ ನಾಯಕರಾಗಿದ್ದರು. ಮೇ ದಿನದಂದು ಅವರ ಭಾಷಣ ಕೇಳಲು ಜನಸಾಮಾನ್ಯರು ಉತ್ಸಾಹದಿಂದ ಸೇರುತ್ತಿದ್ದರು. ಕೆಲವು ಸಲ ಹಿರಿಯ ಸಾಹಿತಿ ಬಸವರಾಜ ಕಟ್ಟೀಮನಿ ಅವರೂ ಹುಬ್ಬಳ್ಳಿಯ ಮೇ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ನೆನಪು.

ಈಗ ಕಾಲ ಬದಲಾಗಿದೆ. ಕಾರ್ಮಿಕ ವರ್ಗ ತನ್ನ ಮೊದಲಿನ ಶಕ್ತಿಯನ್ನು ಕಳೆದುಕೊಂಡಿದೆ. ‘ಜಗತ್ತಿನ ಕಾರ್ಮಿಕರೇ ಒಂದಾಗಿರಿ’ ಎಂದು ಘೋಷಣೆ ಕೂಗುತ್ತಲೇ ಕಾರ್ಮಿಕರ ಪ್ರತ್ಯೇಕ ಮೇ ದಿನಾಚರಣೆಗಳು ನಡೆಯುತ್ತವೆ. ಒಂದು ದೇಶದ, ರಾಜ್ಯದ, ಊರಿನ ಕಾರ್ಮಿಕರು ಒಂದಾಗಿ ಮೇ ದಿನ ಆಚರಿಸುವ ಸ್ಥಿತಿಯಲ್ಲಿ ಇಲ್ಲ. ಕಾರ್ಮಿಕ ಸಂಘಟನೆಗಳು ಒಂದಾಗಿ ಹೋರಾಟ ಮಾಡುತ್ತಿದ್ದರು. ಅದು ಕೇವಲ ಆರ್ಥಿಕ ಬೇಡಿಕೆಗಳ ಹೋರಾಟ ಮಾತ್ರ. ಸೈದ್ಧಾಂತಿಕ, ರಾಜಕೀಯ ಪ್ರಜ್ಞೆ ಸಂಘಟಿತ ಕಾರ್ಮಿಕ ನೌಕರ ವರ್ಗದಿಂದ ಮಾಯವಾಗಿದೆ. ಅದರ ವಿಮರ್ಶೆ ಈಗ ಬೇಡ. ಮೇ ದಿನ ಶತಮಾನದ ಹಿಂದಿನಿಂದ ನಡೆದು ಬಂದ ದಾರಿ ನಿಜಕ್ಕೂ ರೋಮಾಂಚಕವಾಗಿದೆ.

ಮೇ 1 ಜಗತ್ತಿನ ಶ್ರಮಜೀವಿಗಳ ಹೆಮ್ಮೆಯ ದಿನ. ಕಾರ್ಮಿಕರು ಯಾವುದೇ ದೇಶದವ ರಾಗಿರಲಿ, ಯಾವುದೇ ಬಣ್ಣದವರಾಗಿರಲಿ, ಯಾವುದೇ ಭಾಷೆಯನ್ನಾಡಲಿ, ಯಾವುದೇ ಜಾತಿ, ಮತಕ್ಕೆ ಸೇರಿರಲಿ ಅವರೆಲ್ಲ ‘ನಾವು ಒಂದೆ’ ಎಂದು ಅಭಿಮಾನದಿಂದ ಹೇಳಿಕೊಳ್ಳುವ ದಿನ ಮೇ ಒಂದು. ಜಗತ್ತಿನ ಕಾರ್ಮಿಕರೆಲ್ಲ ಒಂದಾಗಿ ಈ ದಿನವನ್ನು 125 ವರ್ಷಗಳಿಂದ ಆಚರಿಸುತ್ತಾ ಬಂದಿದ್ದಾರೆ.

ಅಂದಿನ ಮೇ ದಿನಾಚರಣೆಯ ನಂತರ ಸೋವಿಯತ್ ರಶ್ಯ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಸಮಾಜವಾದಿ ಸರಕಾರಗಳು ಅಸ್ತಿತ್ವಕ್ಕೆ ಬಂದವು. ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಕಾಯ್ದೆಗಳು ಜಾರಿಗೆ ಬಂದವು. ಎಂಟು ತಾಸಿನ ಕೆಲಸದ ಬೇಡಿಕೆ ಈಡೇರಿತು. ಆದರೆ ಇದೆಲ್ಲ ಈಗ ಮತ್ತೆ ಇತಿಹಾಸದ ಪುಟ ಸೇರಿದೆ. ಸಮಾಜವಾದಿ ಸೋವಿಯತ್ ರಶ್ಯದ ಹಾಗೂ ಪೂರ್ವ ಯುರೋಪಿನ ಕಮ್ಯುನಿಸ್ಟ್ ಸರಕಾರಗಳು ಪತನಗೊಂಡು ಜಗತ್ತಿನ ದುಡಿಯುವ ವರ್ಗವನ್ನು ಶೋಷಣೆಯ ಬಂಧನದ ಬೇಡಿಗಳು ಮತ್ತೆ ಬಿಗಿಯುತ್ತಿವೆ. ಜಾಗತೀಕರಣ, ನವ ಉದಾರೀಕರಣದ ಅಟ್ಟಹಾಸದಲ್ಲಿ ಹಸಿದವರ ಆಕ್ರಂದನ ಅರಣ್ಯ ರೋದನವಾಗುತ್ತಿದೆ. ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಕಾರ್ಮಿಕ ಹಿತರಕ್ಷಣಾ ಕಾಯ್ದೆಗಳು ಗಾಳಿ ಪಾಲಾಗಿವೆ. ಶಾಸನಕ್ಕೆ ತಿದ್ದುಪಡಿ ತಂದು ಎಂಟು ತಾಸಿನ ಕೆಲಸದ ಅವಧಿಯನ್ನು ಮತ್ತೆ ಒಂಭತ್ತು, ಹತ್ತು ತಾಸಿಗೆ ಹೆಚ್ಚಿಸಲಾಗಿದೆ. ಬಂಡವಾಳಶಾಹಿಗಳ ಆಣತಿಯಂತೆ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಕಾರ್ಮಿಕ ಸಂಘಟನೆಗಳು ಆಕ್ಷೇಪಿಸುತ್ತಿವೆ.

ಇದನ್ನು ಪ್ರತಿಭಟಿಸಿ ಕಾರ್ಮಿಕ ಸಂಘಟನೆಗಳೇನೋ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದವು. ಆದರೆ ಆ ಪ್ರತಿಭಟನೆ ಕೇವಲ ಸಾಂಕೇತಿಕವಾಗಿತ್ತು. ಹೀಗಾಗಿ ಸರಕಾರ ಪ್ರತಿಭಟನೆಗೆ ಸೊಪ್ಪು ಹಾಕಲಿಲ್ಲ.ಕಾರ್ಮಿಕ ವರ್ಗದಲ್ಲೂ ಹಿಂದಿನ ಏಕತೆ ಈಗ ಉಳಿದಿಲ್ಲ. 70ರ ದಶಕಕ್ಕಿಂತ ಮುಂಚೆ ‘ಜಗತ್ತಿನ ಕಾರ್ಮಿಕರೇ ಒಂದಾಗಿರಿ ನೀವು ಗೆಲ್ಲಲು ಇಡೀ ವಿಶ್ವವೇ ಇದೆ’ ಎಂಬ ಘೋಷಣೆ ಸಾಮಾನ್ಯವಾಗಿತ್ತು . ಆದರೆ, ಈಗ ಶ್ರಮಜೀವಿಗಳ ಏಕತೆಯ ಬದಲಾಗಿ ‘ಹಿಂದೂಗಳೇ ಒಂದಾಗಿ’, ‘ವೀರಶೈವರೇ ಒಂದಾಗಿ’, ‘ಬ್ರಾಹ್ಮಣರೇ ಒಂದಾಗಿ’....ಹೀಗೆ ಜಾತಿ, ಮತದ ಘೋ ಷಣೆಗಳು ಕೇಳಿ ಬರುತ್ತಿವೆ. ಶ್ರಮಜೀವಿಗಳನ್ನು ಜಾತಿ, ಮತ, ಭಾಷೆಯ ಹೆಸರಿನಲ್ಲಿ ಒಡೆಯುವಲ್ಲಿ ಶೋಷಕ ವರ್ಗ ಯಶಸ್ವಿಯಾಗಿದೆ.

ದೇಶದಲ್ಲಿ ಬಡವರು ಮತ್ತು ಸಿರಿವಂತರ ನಡುವಿನ ಅಂತರ ಹೆಚ್ಚುತ್ತಿದೆ. ಅಂಬಾನಿ, ಅದಾನಿಯಂಥ ಕಾರ್ಪೊರೇಟ್ ಬಂಡವಾಳಶಾಹಿಗಳ ಸಂಪತ್ತು ನೂರು ಕೋಟಿಯಿಂದ ಸಾವಿರಾರು ಕೋಟಿಗೆ ತಲುಪಿ ಈಗ ಲಕ್ಷಾಂತರ ಕೋಟಿಯ ಗುರಿ ಸಾಧಿಸಲು ದಾಪುಗಾಲಿಡುತ್ತಿವೆೆ. ಬಡವರ, ದಲಿತರ, ಹಿಂದುಳಿದವರ, ರೈತರ ದೈನಂದಿನ ಬದುಕು ದಾರುಣವಾಗುತ್ತಿದೆ.

ಮೇ ದಿನದ ಇತಿಹಾಸ ರೋಮಾಂ ಚಕವಾಗಿದೆ. ಅಮೆರಿಕದ ಚಿಕಾಗೊ ನಗರದ ಕಾರ್ಮಿಕರು 1886 ಮೇ 1 ನೇ ತಾರೀಕಿನಂದು ಎಂಟು ಗಂಟೆಗಳ ಕೆಲಸಕ್ಕಾಗಿ ಹೋರಾಟಕ್ಕಿಳಿದರು. ಇದಕ್ಕಿಂತ ಮುಂಚೆ ಮಾಲಕ ವರ್ಗ ಕಾರ್ಮಿಕರನ್ನು 18 ತಾಸುಗಳ ಕಾಲ ಅತ್ಯಂತ ಚಿತ್ರಹಿಂಸೆ ನೀಡಿ ದುಡಿಸಿಕೊಳ್ಳುತ್ತಿತ್ತು. ಇದನ್ನು ಪ್ರತಿಭಟಿಸಿ ಚಿಕಾಗೊ ಕಾರ್ಮಿಕರು 1886 ಮೇ 1 ರಂದು ಹೋರಾಟಕ್ಕಿಳಿದರು. ಎಂಟು ತಾಸುಗಳ ಕೆಲಸ, ಎಂಟು ತಾಸುಗಳ ವಿಶ್ರಾಂತಿ ಮತ್ತು ಎಂಟು ತಾಸುಗಳ ಮನರಂಜನೆಗೆ ಸಮಯ ಅವರ ಬೇಡಿಕೆಯಾಗಿತ್ತು. ಆ ದಿನ ಚಿಕಾಗೊದ ಹೇ ಮಾರ್ಕೆಟ್ ಚೌಕದಲ್ಲಿ ತಮ್ಮ ಬೇಡಿಕೆಗಳಿಗಾಗಿ ಸಾವಿರಾರು ಕಾರ್ಮಿಕರು ಸೇರಿದರು. ತಮ್ಮ ಬೇಡಿಕೆಗಳಿಗಾಗಿ ಶಾಂತಿಯುತ ಸಭೆ ನಡೆಸುತ್ತಿದ್ದ ಶ್ರಮಜೀವಿಗಳ ಮೇಲೆ ಅಪ್ರಚೋದಿತವಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದರು. ಇದರ ಪರಿಣಾಮವಾಗಿ ಅನೇಕ ಮಂದಿ ಅಸುನೀಗಿದರು. ಅಂದು ಅಲ್ಲಿ ನೆತ್ತರಿನ ಹೊಳೆ ಹರಿಯಿತು. ಹರಿದ ನೆತ್ತರಿನಲ್ಲಿ ಕಾರ್ಮಿಕರು ತಮ್ಮ ಅಂಗಿಗಳನ್ನು ಅದ್ದಿ ಅದನ್ನೇ ಕೆಂಬಾವುಟ ಮಾಡಿದರು. ಅಂದಿನಿಂದ ಕೆಂಬಣ್ಣದ ಬಾವುಟ ಜಗತ್ತಿನ ದುಡಿಯುವ ವರ್ಗದ ಹೆಮ್ಮೆಯ ಹೋರಾಟದ ಬಾವುಟವಾಯಿತು.

ಸಂಘಟಿತ ವಲಯದ ಕಾರ್ಮಿಕರ ಬದುಕೇ ಅತಂತ್ರವಾಗುತ್ತಿರುವಾಗ ಇನ್ನು ಗ್ರಾಮೀಣ ಮತ್ತು ನಗರ ಪ್ರದೇಶದ ಅಸಂಘಟಿತ ವಲಯದ ಕಾರ್ಮಿಕರ ಬದುಕು ಇನ್ನೂ ದಾರುಣವಾಗಿದೆ.ಕೃಷಿಕಾರ್ಮಿಕರು ಅತ್ಯಂತ ಕಡಿಮೆ ಕೂಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷಿ ಕೆಲಸಕ್ಕೆ ಕಾರ್ಮಿಕರೇ ಸಿಗುತ್ತಿಲ್ಲ ಎಂದು ಸಿರಿವಂತ ರೈತರು ಗೊಣಗಾಡುತ್ತಿದ್ದಾರೆ. ರೈತರ ಒಕ್ಕಲುತನ ಕೂಡ ಈಗ ಲಾಭದಾಯಕವಾಗಿಲ್ಲ. ಅವರ ಬೆಳೆಗೆ ನ್ಯಾಯ ಬೆಲೆ ಸಿಗುತ್ತಿಲ್ಲ. ಅದರಲ್ಲೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ರೈತರ,ಕೃಷಿ ಕಾರ್ಮಿಕರ ಪರಿಸ್ಥಿತಿ ಹದಗೆಟ್ಟಿದೆ. ಇತ್ತೀಚೆಗೆ ಕೃಷಿ ಕಾಯ್ದೆಗೆ ತಂದ ಮೂರು ತಿದ್ದುಪಡಿಗಳು ಭಾರತದ ರೈತಾಪಿ ವರ್ಗದ ಪಾಲಿಗೆ ಮರಣ ಶಾಸನಗಳಾಗಿವೆ.

ಒಂದೇ ದೇಶ, ಒಂದೇ ಧರ್ಮ, ಒಂದೇ ಭಾಷೆ, ಒಂದೇ ರೇಷನ್ ಕಾರ್ಡ್ ಎಂದು ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರನ್ನು ನಿಯಂತ್ರಣ ಮಾಡುತ್ತಿರುವ ನಾಗಪುರದ ಅಘೋಷಿತ ಅಧಿಕಾರ ಕೇಂದ್ರ ಹೇಳುತ್ತಿದ್ದರೂ ಭಾರತ ವಾಸ್ತವವಾಗಿ ಒಂದಾಗಿಲ್ಲ. ಇಲ್ಲಿ ಎರಡು ಭಾರತಗಳಿವೆ. ಒಂದು ಉಳ್ಳವರ ಭಾರತ,ಇನ್ನೊಂದು ಇಲ್ಲದವರ ಭಾರತ. ಒಂದು ತಿಂದು ,ತಿಂದು ಹೊಟ್ಟೆ ಬಿರಿದವರ ಭಾರತ, ಇನ್ನೊಂದು ಹಸಿದು,ಹಸಿದು ಕಂಗಾಲಾದವರ ಭಾರತ.

ಈ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಪ್ರಕಾರ 300ಕ್ಕಿಂತ ಕಡಿಮೆ ಕಾರ್ಮಿಕರು ಕೆಲಸ ಮಾಡುವ ಕೈಗಾರಿಕೆಗಳಲ್ಲಿ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲು ಸರಕಾರದ ಅನುಮತಿ ಪಡೆಯಬೇಕಾಗಿಲ್ಲ.ಇದರಿಂದ ಕಾರ್ಮಿಕರನ್ನು ಬೇಕಾದಾಗ ಕೆಲಸಕ್ಕೆ ಸೇರಿಸಿಕೊಳ್ಳಲು ಮತ್ತು ತೆಗೆದು ಹಾಕಲು ಮಾಲೀಕರಿಗೆ ಸಂಪೂರ್ಣ ಅಧಿಕಾರ ನೀಡಿದಂತಾಗಿದೆ.ಮುಷ್ಕರ ಮತ್ತು ಪ್ರತಿಭಟನೆ ನಡೆಸುವ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ.ಮುಷ್ಕರ ನಿರತ ಕಾರ್ಮಿಕರ ನ್ನು ಮತ್ತು ಕಾರ್ಮಿಕ ನಾಯಕರನ್ನು ಸುಲಭವಾಗಿ ಜೈಲಿಗೆ ಕಳಿಸಲು ನೂತನ ಕಾನೂನು ಅವಕಾಶ ನೀಡುತ್ತದೆ. ಹೀಗೆ ಸುಮಾರು ನಲವತ್ತಕ್ಕೂ ಹೆಚ್ಚು ತಿದ್ದುಪಡಿಗಳನ್ನು ಕಾರ್ಮಿಕ ಕಾಯ್ದೆಗೆ ತರಲಾಗಿದೆ.
ಇಂಥ ವಿಷಯಗಳ ಬಗ್ಗೆ ಚರ್ಚೆಯಾಗಬಾರದು ಎಂದು ಅಮಾಯಕ ಜನಸಾಮಾನ್ಯರನ್ನು ಮಂದಿರ, ಮಸೀದಿ, ಚರ್ಚ್ ಕಲಹದಲ್ಲಿ ಮುಳುಗಿಸಿ ಸುಲಿಗೆಕೋರ ವರ್ಗ ಭಾರತವನ್ನು ಕೊಳ್ಳೆ ಹೊಡೆಯುತ್ತಿರುವ ಈ ದಿನಗಳಲ್ಲಿ ಮತ್ತೆ ಕಾರ್ಮಿಕರ ಮೇ ದಿನ ಬಂದಿದೆ.ಈ ಜಗತ್ತಿನ, ದೇಶದ ಸಕಲ ಸಂಪತ್ತಿನ ನಿರ್ಮಾಪಕರಾದ ದುಡಿಯುವ ಜನ ಜಾತಿ, ಮತದ ಪೊರೆ ಕಳಚಿ ಮತ್ತೆ ಒಂದಾಗಿ ನಿಂತರೆ ಭಾರತ ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲಬಹುದು.

ಆದರೆ ಕೊರೋನ ಹೊಡೆತದಿಂದ ತತ್ತರಿಸಿದ ಮನುಕುಲದ ಸಂಕಟಗಳಿಗೆ ಬಂಡವಾಳಶಾಹಿ ಆರ್ಥಿಕತೆ ಪರ್ಯಾ ಯವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ಈ ಮಾರಕ ವೈರಾಣು ದುಡಿಯುವ ಜನತೆಯ ಬದುಕನ್ನೇ ಚಿಂದಿ ಚಿಂದಿ ಮಾಡಿದೆ.

 ಭಾರತದಲ್ಲಂತೂ ಕಳೆದ ವರ್ಷ ಮತ್ತು ಈ ವರ್ಷ ಇದು ಅಪ್ಪಳಿಸಿದ ಪರಿಣಾಮವಾಗಿ ವಲಸೆ ಕಾರ್ಮಿಕರ ತೊಳಲಾಟ ಅಸಹನೀಯವಾಗಿದೆ. ಪಂಚೇಂದ್ರಿಯಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಅಡವಿಟ್ಟ ಪ್ರಭುತ್ವ ಇರುವವರೆಗೆ ಶ್ರಮಿಕರ ಮಾತ್ರವಲ್ಲ ಎಲ್ಲರ ಸಂಕಟಗಳಿಗೆ ಪರಿಹಾರವಿಲ್ಲ. ಆದರೆ, ಆರ್ಥಿಕ ಹೋರಾಟದ ಅಂಗಳದಿಂದ ಪ್ರಭುತ್ವ ಬದಲಾವಣೆಯ ಸಂಘರ್ಷಕ್ಕೆ ದುಡಿಯುವ ಜನ ಧುಮುಕುವುದು ಯಾವಾಗ ಎಂಬುದು ನಮ್ಮ ಮುಂದಿನ ಯಕ್ಷ ಪ್ರಶ್ನೆಯಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News