ಈಗ ಹನುಮಂತನ ಸುತ್ತ ವಿವಾದದ ಹುತ್ತ

Update: 2021-05-02 19:30 GMT

 ಹನುಮಂತನ ಜನ್ಮಸ್ಥಳ ಹುಡುಕಲು ಹೊರಟರೆ ಅದಕ್ಕೆ ಕೊನೆಯಿಲ್ಲ. ಮಹಾರಾಷ್ಟ್ರದ ನಾಸಿಕ ಬಳಿ ಇರುವ ಅಂಜನೇರಿ ಹನುಮಂತನ ಜನ್ಮಸ್ಥಳ ಎಂಬ ನಂಬಿಕೆ ಇದೆ. ಅದೇ ರೀತಿ ಜಾರ್ಖಂಡ್‌ನ ಗುಮ್ಲಾ ಜಿಲ್ಲಾ ಕೇಂದ್ರದ ಹತ್ತಿರ ಇರುವ ಅಂಜನಹಳ್ಳಿ ಆಂಜನೇಯನ ಜನ್ಮಸ್ಥಳ ಎಂಬ ಪ್ರತೀತಿ ಇದೆ. ಪುರಾಣಗಳ ಪ್ರಕಾರ, ಮಹಾಭಾರತ ಕಾಲದಲ್ಲಿ ಯುದಿಷ್ಠರ ರಾಜನು ಕೈಥಾಲ ಎಂಬ ಊರನ್ನು ನಿರ್ಮಿಸಿದ ಕಪಿಸ್ಥಳ ಎಂಬ ಪದದಿಂದ ಕೈಥಾಲ ಪದ ಹುಟ್ಟಿದೆ ಎಂದು ಇತಿಹಾಸಕಾರರ ಅಭಿಪ್ರಾಯವಾಗಿದೆ. ಪುರಾಣಗಳ ಪ್ರಕಾರ, ರಾಮಾಯಣದ ಹನುಮಂತ ಇಲ್ಲಿ ಜನಿಸಿದ್ದನಂತೆ. ಅಲ್ಲಿ ಹನುಮಂತನ ದೇವಾಲಯವೂ ಇದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಗುಜರಾತ್‌ನ ಡಾಂಗ್ ಜಿಲ್ಲೆಯ ಅಂಜನಾ ಬೆಟ್ಟದಲ್ಲಿ ಇರುವ ಅಂಜನಿ ಗುಹೆಯಲ್ಲಿ ಆಂಜನೇಯ ಜನಿಸಿದ ಎಂದು ಬುಡಕಟ್ಟು ಜನರ ಮಾತ್ರವಲ್ಲ ಗುಜರಾತ್‌ನ ಎಲ್ಲ ಜನರ ವಾದವಾಗಿದೆ.


ಇಡೀ ದೇಶ ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿದೆ. ನಿತ್ಯ ಸಾವಿನ ಸುದ್ದಿಗಳು ಬರುತ್ತಿವೆ.ನಿಮಿಷ ನಿಮಿಷಕ್ಕೂ ವೈರಾಣು ನಮ್ಮ ನಡುವೆ ಹಬ್ಬುತ್ತಿದೆ. ದೇಶವನ್ನಾಳುವ ಸರಕಾರ ಅಸಹಾಯಕವಾಗಿ ನಿಂತಿದೆ. ಪ್ರಾಣವಾಯು ಇಲ್ಲದೆ ಜನ ಪ್ರಾಣ ಬಿಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲದೆ ಜನ ಬೀದಿ ಹೆಣವಾಗುತ್ತಿದ್ದಾರೆ. ಮನೆಗಳು ಸೂತಕದ ಮನೆಗಳಾಗುತ್ತಿವೆ. ಸ್ಮಶಾನದಲ್ಲಿ ಅಂತ್ಯಕ್ರಿಯೆಗೂ ಪಾಳಿ ಹಚ್ಚಿ ಕೂಪನ್ ಪಡೆದು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

 ಬೇರೆ ಕಾಯಿಲೆಗಳಾದರೆ ಬಂಧು ಬಳಗದವರು ಅಕ್ಕಪಕ್ಕದವರು ಬಂದು ಸಂತೈಸುತ್ತಿದ್ದರು. ಮುಟ್ಟಿ, ಮಾತನಾಡಿ ಧೈರ್ಯ ತುಂಬುತ್ತಿದ್ದರು. ಆದರೆ, ಇದೊಂದು ವಿಚಿತ್ರ ಸನ್ನಿವೇಶ. ಕೊರೋನ ಬಂದವರ ಮನೆಗೆ ಯಾರೂ ಹೋಗುವುದಿಲ್ಲ. ಮಾತಾಡಿಸುವುದಿಲ್ಲ. ಆಜೂಬಾಜು ಮನೆಯವರು ಬಹಿಷ್ಕಾರ ಹಾಕಿದಂತೆ ದೂರವಾಗುತ್ತಾರೆ. ಶವ ಎತ್ತಲೂ ಯಾರೂ ಬರುವುದಿಲ್ಲ. ಸಂಬಂಧಿಕರೂ ದೂರ ಸರಿಯುತ್ತಾರೆ. ಇಂತಹ ಕೆಲ ಮೃತದೇಹಗಳಿಗೆ ಮುಸ್ಲಿಮ್ ಸಂಘಟನೆಗಳ ಸದಸ್ಯರು ಅಂತ್ಯಕ್ರಿಯೆ ಮಾಡಿದ ಘಟನೆಗಳು ಕೊಪ್ಪಳ, ಆಳಂದ ಸೇರಿದಂತೆ ನಾಡಿನ ವಿವಿಧೆಡೆಯಿಂದ ವರದಿಗಳು ಬಂದಿವೆ.

ಆದರೆ, ‘ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗನಿಗೆ ಉಡುದಾರದ ಚಿಂತೆ’ ಎಂಬಂತೆ ಕೆಲವರು ಹನುಮಂತನ ಜನ್ಮಸ್ಥಳದ ವಿವಾದದಲ್ಲಿ ಮುಳುಗಿ ಹೋಗಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ ಯಾವುದಕ್ಕೂ ಉಪಯೋಗವಿಲ್ಲದ ಇಂತಹ ವಿವಾದಗಳು ಭಾರತವೆಂಬ ದೇಶಕ್ಕೆ ಅಪಚಾರ ತರುತ್ತಿವೆ. ಇಂತಹ ಅರ್ಥಹೀನ ವಿವಾದಗಳಿಂದ ರೋಸಿ ಹೋಗಿದ್ದ ಸ್ವಾಮಿ ವಿವೇಕಾನಂದರು, ‘ಮುಟ್ಟಬೇಡ, ಮುಟ್ಟಬೇಡ ಎಂಬ ಪುರೋಹಿತಶಾಹಿಗಳ ಗೊಂದಲದಲ್ಲೇ ಈ ದೇಶ ನೂರಾರು ವರ್ಷಗಳಿಂದ ಮುಳುಗಿ ಹೋಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ರಾಮನ ಜನ್ಮಭೂಮಿಯ ವಿವಾದದಲ್ಲಿ ಎರಡು ಸಮುದಾಯಗಳ ಸೌಹಾರ್ದ ಸಂಬಂಧಕ್ಕೆ ಹುಳಿ ಹಿಂಡಿದ್ದಾಯಿತು. ಈಗ ಹನುಮನ ಜನ್ಮಸ್ಥಳದ ಹೆಸರಿನಲ್ಲಿ ಎರಡೂ ರಾಜ್ಯಗಳ ನಡುವೆ ವಿವಾದ ಉಂಟಾಗುವ ಸನ್ನಿವೇಶ ಎದುರಾಗಿದೆ.

ಹನುಮಂತ ಹುಟ್ಟಿದ್ದು ತಿರುಪತಿಯಲ್ಲಿ ಎಂದು ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಇತ್ತೀಚೆಗೆ ಹೇಳಿಕೆ ನೀಡಿದ ನಂತರ ವಿವಾದದ ಅಲೆ ಎದ್ದಿದೆ. ಹನುಮಂತ ಹುಟ್ಟಿದ್ದು ತಿರುಪತಿಯಲ್ಲಿ ಅಲ್ಲ, ಹಂಪಿಯ ಅಂಜನಾದ್ರಿಯಲ್ಲಿ ಎಂದು ವಾದಿಸುತ್ತಿರುವ ಅಲ್ಲಿನ ಕೆಲ ಇತಿಹಾಸಕಾರರು, ‘ಆಂಜನೇಯನ ಜನ್ಮಸ್ಥಳದ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಸಮಿತಿ ವಿವಾದ ಎಬ್ಬಿಸಿರುವ ಹಿಂದೆ ಲಾಭಕೋರತನ ಮತ್ತು ವಾಣಿಜ್ಯ ಹಿತಾಸಕ್ತಿ ಅಡಗಿದೆ’ ಎಂದು ಆರೋಪಿಸಿದ್ದಾರೆ. ತಮ್ಮ ವಾದಕ್ಕೆ ಪೂರಕವಾದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ವಿವಾದ ಇಲ್ಲಿಗೆ ಮುಗಿದಿಲ್ಲ.’ ಆಂಜನೇಯ ಜನಿಸಿದ್ದು ಕರ್ನಾಟಕದಲ್ಲಾದರೂ ಜನಿಸಿದ ಸ್ಥಳ ಅಂಜನಾದ್ರಿ ಅಲ್ಲ, ಗೋಕರ್ಣ’ ಎಂಬುದು ಅಲ್ಲಿನ ಜನರ ವಾದವಾಗಿದೆ.

 ಹೀಗೆ ಹನುಮಂತನ ಜನ್ಮಸ್ಥಳ ಹುಡುಕಲು ಹೊರಟರೆ ಅದಕ್ಕೆ ಕೊನೆಯಿಲ್ಲ. ಮಹಾರಾಷ್ಟ್ರದ ನಾಸಿಕ ಬಳಿ ಇರುವ ಅಂಜನೇರಿ ಹನುಮಂತನ ಜನ್ಮಸ್ಥಳ ಎಂಬ ನಂಬಿಕೆ ಇದೆ. ಅದೇ ರೀತಿ ಜಾರ್ಖಂಡ್‌ನ ಗುಮ್ಲಾ ಜಿಲ್ಲಾ ಕೇಂದ್ರದ ಹತ್ತಿರ ಇರುವ ಅಂಜನಹಳ್ಳಿ ಆಂಜನೇಯನ ಜನ್ಮಸ್ಥಳ ಎಂಬ ಪ್ರತೀತಿ ಇದೆ. ಪುರಾಣಗಳ ಪ್ರಕಾರ, ಮಹಾಭಾರತ ಕಾಲದಲ್ಲಿ ಯುದಿಷ್ಠರ ರಾಜನು ಕೈಥಾಲ ಎಂಬ ಊರನ್ನು ನಿರ್ಮಿಸಿದ ಕಪಿಸ್ಥಳ ಎಂಬ ಪದದಿಂದ ಕೈಥಾಲ ಪದ ಹುಟ್ಟಿದೆ ಎಂದು ಇತಿಹಾಸಕಾರರ ಅಭಿಪ್ರಾಯವಾಗಿದೆ. ಪುರಾಣಗಳ ಪ್ರಕಾರ, ರಾಮಾಯಣದ ಹನುಮಂತ ಇಲ್ಲಿ ಜನಿಸಿದ್ದನಂತೆ. ಅಲ್ಲಿ ಹನುಮಂತನ ದೇವಾಲಯವೂ ಇದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಗುಜರಾತ್‌ನ ಡಾಂಗ್ ಜಿಲ್ಲೆಯ ಅಂಜನಾ ಬೆಟ್ಟದಲ್ಲಿ ಇರುವ ಅಂಜನಿ ಗುಹೆಯಲ್ಲಿ ಆಂಜನೇಯ ಜನಿಸಿದ ಎಂದು ಬುಡಕಟ್ಟು ಜನರ ಮಾತ್ರವಲ್ಲ ಗುಜರಾತ್‌ನ ಎಲ್ಲ ಜನರ ವಾದವಾಗಿದೆ.

ಈ ದೇಶದ ಯಾವುದೇ ಊರಿಗೆ ಹೋದರೂ ಅಲ್ಲೊಂದು ಹನುಮಂತನ ದೇವಾಲಯ ಇದ್ದೇ ಇರುತ್ತದೆ. ಹೀಗೆ ಪುರಾಣದಲ್ಲಿ ಬರುವ ಹನುಮಂತನನ್ನು ಇತಿಹಾಸ ಪುರುಷನನ್ನಾಗಿ ಮಾಡಿ,ಅನಗತ್ಯವಾಗಿ ಇನ್ನೊಂದು ವಿವಾದವನ್ನು ಹುಟ್ಟು ಹಾಕುವ ಮಸಲತ್ತು ನಡೆದಿದೆ.

ರಾಮ, ಕೃಷ್ಣ, ಆಂಜನೇಯ ಇವರೆಲ್ಲ ಅಯೋಧ್ಯೆ, ಮಥುರಾ ಇಲ್ಲವೇ ಅಂಜನಾದ್ರಿ, ತಿರುಪತಿ, ಗೋಕರ್ಣಗಳಿಗೆ ಸೀಮಿತವಾಗಿಲ್ಲ. ಈ ದೇಶದಲ್ಲಿ ಇವರನ್ನು ಆರಾಧ್ಯ ದೈವ ಎಂದು ನಂಬುವ ಕೋಟ್ಯಂತರ ಜನರ ಅಂತರಾಳದಲ್ಲಿ ಇವರು ನೆಲೆಸಿದ್ದಾರೆ. ಇವರನ್ನು ಒಂದು ಭೂಪ್ರದೇಶಕ್ಕೆ ಕಟ್ಟಿ ಹಾಕುವ ಪ್ರಯತ್ನದ ಹಿಂದೆ ಏನೋ ಹಿಡನ್ ಅಜೆಂಡಾ’ ಇದೆ ಎಂಬ ಸಂದೇಹ ಸಹಜವಾಗಿ ಮೂಡುತ್ತದೆ.

ಹಂಪೆಯ ಬಳಿ ಇರುವ ಅಂಜನಾದ್ರಿ ಆಂಜನೇಯ, ತಿರುಪತಿ ಹನುಮಂತ, ಗೋಕರ್ಣದ ಹನುಮಂತ, ನಾಸಿಕದ ಹನುಮಂತ, ಜಾರ್ಖಂಡ್‌ನ ಮಾರುತಿ ಅಲ್ಲಲ್ಲಿನ ಜನ ತಮ್ಮ ನಂಬಿಕೆಯಂತೆ ಆರಾಧಿಸುತ್ತಾ ಬಂದಿದ್ದಾರೆ. ಈ ಆಂಜನೇಯರೆಲ್ಲ ಪರಸ್ಪರ ಶತ್ರುಗಳಲ್ಲ. ಇವರ ಹೆಸರಿನಲ್ಲಿ ವಿವಾದಗಳನ್ನು ಹುಟ್ಟು ಹಾಕುವುದು. ನಂತರ ನ್ಯಾಯಾಲಯಗಳಲ್ಲಿ ಇರುವ ನರ ಮಾನವ ನ್ಯಾಯಾಧೀಶರು ಅದನ್ನು ಇತ್ಯರ್ಥಪಡಿಸುವುದು. ಅದು ಮತ್ತೊಂದು ವಿವಾದಕ್ಕೆ ನಾಂದಿಯಾಗುವುದು ಹೀಗೆ ಇಂತಹದಕ್ಕೆ ಕೊನೆಯೆಂಬುದು ಇರುವುದಿಲ್ಲ. ಪುರಾಣ ಪುರುಷರ ಹೆಸರಿನಲ್ಲಿ ವರ್ತಮಾನದ ಬದುಕಿನಲ್ಲಿ ಸೌಹಾರ್ದ ಮತ್ತು ಪ್ರೀತಿಯಿಂದ ಬದುಕಬೇಕಾದ ನಾವು ನಮ್ಮ ನಡುವೆ ದ್ವೇಷದ ಗೋಡೆಯನ್ನು ಕಟ್ಟಿಕೊಂಡು ವ್ಯರ್ಥ ಕಾಲಹರಣದಲ್ಲಿ ಮುಳುಗುತ್ತೇವೆ.

ತಿರುಪತಿ, ಅಂಜನಾದ್ರಿ, ಗೋಕರ್ಣ, ನಾಸಿಕ, ಜಾರ್ಖಂಡ್ ಹೀಗೆ ದೇಶದ ಎಲ್ಲ ಕಡೆ ಇರುವ ಆಂಜನೇಯ ದೇವರು ತನ್ನ ಭಕ್ತರನ್ನು ಉಪವಾಸ ಹಾಕಿಲ್ಲ. ಈತನನ್ನು ನಂಬಿ ಪೂಜಿಸುವವರಿಗೆ ಅಂದರೆ ಪೂಜೆ ಮಾಡುವ ಪುರೋಹಿತರಿಗೆ ಯಥೇಚ್ಛವಾಗಿ ದಕ್ಷಿಣೆ ಮತ್ತಿತರ ಕಾಣಿಕಗಳು ಬರುತ್ತವೆ. ಈಗ ವಿವಾದ ಉಂಟಾಗಿರುವುದು ಬರುವ ಆದಾಯ ಒಂದೇ ಕಡೆ ಬರಲಿ ಎಂಬ ಹಿತಾಸಕ್ತಿಯ ಸುತ್ತ ಅಲ್ಲದೆ ಬೇರೇನೂ ಅಲ್ಲ. ಹಿಂದೂ ದೇವಳಗಳ ಕುರಿತು ಹಿಂದೂಗಳಲ್ಲೇ ವಿವಾದ ಉಂಟಾದಾಗ ಮಠಾಧೀಶರು ಮತ್ತು ವಿಶ್ವ ಹಿಂದೂ ಪರಿಷತ್‌ನಂತಹ ಸಂಘಟನೆಗಳು ಮಧ್ಯಪ್ರವೇಶ ಮಾಡಿ ಇತ್ಯರ್ಥ ಮಾಡಬಹುದು. ಆದರೆ, ಆಂಜನೇಯನ ವಿವಾದ ಅವರ ಕೈ ಮೀರಿ ಹೋದಂತೆ ಕಾಣುತ್ತದೆ.

ದೇವರು ಕೇವಲ ಕಲ್ಲು ಮಣ್ಣಿನಲ್ಲಿ ಇಲ್ಲ. ಅಣು ರೇಣು ತೃಣಕಾಷ್ಟಗಳಲ್ಲಿ ಇದ್ದಾನೆ. ಅವನಿಲ್ಲದ ಜಾಗವೇ ಇಲ್ಲ ಎಂಬುದು ಆಸ್ತಿಕರ ನಂಬಿಕೆ. ಹಾಗಿದ್ದರೆ, ಅಂತಹ ದೇವರನ್ನು ಯಾವುದೋ ಒಂದು ಭೌಗೋಳಿಕ ಪ್ರದೇಶಕ್ಕೆ ಕಟ್ಟಿ ಹಾಕುವ ವ್ಯರ್ಥ ಸಾಹಸವೇಕೆ!

ಯಾಕೆಂದರೆ ಭಯವೇ ಭಕ್ತಿಯ ಮೂಲವಾದಾಗ ಆ ಭಯವನ್ನೇ ಬಂಡವಾಳ ಮಾಡಿಕೊಂಡು ದಂಧೆ ಆರಂಭಿಸಿದಾಗ ಸರ್ವಾಂತರ್‌ಯಾಮಿ ಎಂದು ತಾವೇ ಹೇಳುವ ದೇವರನ್ನು ಒಂದು ಜಾಗಕ್ಕೆ ಕಟ್ಟಿ ಹಾಕುವ ಮಸಲತ್ತು ಆರಂಭವಾಗುತ್ತದೆ. ನಮ್ಮ ದೇಶದಲ್ಲಿ ಇವತ್ತು ಆಗಿರುವುದು ಅದೇ. ದೇವರ ವ್ಯಾಪಾರೀಕರಣ. ಊರೂರಲ್ಲಿ, ಬಡಾವಣೆಗಳಲ್ಲಿ, ಉದ್ಯಾನಗಳಲ್ಲಿ, ಫುಟ್ಪಾತ್‌ಗಳಲ್ಲಿ ದಿಢೀರನೆ ಉದ್ಭವವಾಗುವ ದೇವರ ಮೂಲ ಲಾಭಕೋರತನವಲ್ಲದೆ ಬೇರೇನೂ ಅಲ್ಲ.

ಈಗಂತೂ ದೇವಾಲಯ ಕಟ್ಟಿ ಅದಕ್ಕೊಬ್ಬ ಪುರೋಹಿತನ ನೇಮಕ ಮಾಡಿ ಓಟಿನ ಬೆಳೆ ತೆಗೆಯುವ ಪಕ್ಷವೇ ದೇಶದಲ್ಲಿ ಅಧಿಕಾರದಲ್ಲಿ ಇರುವುದರಿಂದ ಶಿಕ್ಷಣ, ಆರೋಗ್ಯ, ಶಾಲೆ, ಪರಿಸರದಂಥ ಜೀವಪರ ಕಾರ್ಯಕ್ರಮಗಳಿಗೆ ಅವಕಾಶವೇ ಇಲ್ಲ. ಇದ್ದಿದ್ದರೆ ಕೊರೋನ ಮೊದಲನೇ ಅಲೆಯ ಹೊಡೆತ ತಿಂದ ನಂತರವೂ ಎರಡನೇ ಅಲೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಅಯೋಧ್ಯೆಯ ಮಂದಿರ ಕಟ್ಟಲು ದೇಶದ ಮನೆ ಮನೆಗೆ ರಸೀದಿ ಪುಸ್ತಕ ಹಿಡಿದುಕೊಂಡು ಓಡಾಡುವ ಬದಲು ಕೊರೋನ ಎರಡನೇ ಅಲೆ ಎದುರಿಸಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಜ್ಜುಗೊಳಿಸಬೇಕಿತ್ತು.

ಇಂತಹ ಸ್ಥಾವರ ಮಂದಿರಗಳನ್ನು ಒಪ್ಪದ ಬಸವಣ್ಣನವರು ‘ದೇಹವೇ ದೇವಾಲಯ’ ಎಂದರು. ಬಾಬಾಸಾಹೇಬ ಅಂಬೇಡ್ಕರ್ ಅವರು ‘ಗುಡಿ ಗುಂಡಾರಗಳಿಂದ ದೇಶದ ಏಳಿಗೆ ಆಗುವುದಿಲ್ಲ. ಶಾಲೆ, ಕಾಲೇಜು, ಆಸ್ಪತ್ರೆಗಳ ನಿರ್ಮಾಣ ಆಗಬೇಕು’ ಎಂದರು. ಅವರ ಮಾತನ್ನು ಯಾರು ಕೇಳುತ್ತಾರೆ. ಇಂತಹ ಮಹಾತ್ಮರ ಮೂರ್ತಿ ಮಾಡಿ ನಿಲ್ಲಿಸಿ ಮತ್ತೆ ಇವರು ದೇಶದ ಮೇಲೆ ಸ್ಥಾವರ ಸಂಸ್ಕೃತಿ ಹೇರಲು ಹೊರಟಿದ್ದಾರೆ. ಈಗ ಆಂಜನೇಯನ ಜನ್ಮಸ್ಥಳದ ಬಗ್ಗೆ ಅವರವರಲ್ಲೇ ಕಾದಾಟ ನಡೆದಿದೆ. ಮನುಷ್ಯನಲ್ಲಿ ಮೆದುಳು ನಿಷ್ಕ್ರಿಯಗೊಂಡಾಗ, ದೇವರನ್ನು ಮಾರಾಟಕ್ಕೆ ಇಟ್ಟು ಕಾಸು ಮಾಡಿಕೊಳ್ಳುವ ದುರ್ಬುದ್ಧ್ದಿ ಹುಟ್ಟಿದಾಗ ಹೀಗಾಗುತ್ತದೆ. ಇದು ಈ ದೇಶದ ದುರಂತ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ